ಜಪಾನಿನಲ್ಲೊಂದು ಹಸಿರು ಗೋಡೆ
ಈ ಹಿಂದೆ ಒಮ್ಮೆ ‘ಆಪ್ರಿಕಾದ ಮರಳುಗಾಡಿನಲ್ಲೊಂದು ಹಸಿರು ಗೋಡೆ’ ಬಗ್ಗೆ ಓದಿದ್ದೆವು. ಈಗ ಜಪಾನಿನಲ್ಲೂ ಒಂದು ಹಸಿರು ಗೋಡೆಯನ್ನು ಬೆಳೆಸಲಾಗುತ್ತಿದೆ. ಯಾಕಾಗಿ ಬೆಳೆಸುತ್ತಿದ್ದಾರೆ? ಹೇಗೆ ಬೆಳೆಸುತ್ತಿದ್ದಾರೆ ಎಂಬೆಲ್ಲದರ ಬಗ್ಗೆ ತಿಳಿಯೋಣ.
ಸುನಾಮಿಗೆ ಕೊಚ್ಚಿ ಹೋದ ಪೈನ್ ಮರದ ಕಾಡುಗಳು!
ಜಪಾನ್ ನಮಗೆಲ್ಲ ತಿಳಿದಿರುವ ಹಾಗೆ ಅಗ್ಗಾಗ್ಗೆ ಬೂಕಂಪ ಹಾಗು ಸುನಾಮಿಗಳಿಂದ ತತ್ತರಿಸುವ ಜಾಗ. ಅಲ್ಲಿನ ಕಡಲತೀರದ ನಗರಗಳಲ್ಲಿ ಎಂದಿಗೂ ಸುನಾಮಿಯ ಬಯ ಇದ್ದಿದ್ದೆ. ಜಪಾನಿನ ಕಡಲತೀರದಲ್ಲಿ ಸಾಮಾನ್ಯವಾಗಿ ಕಾಣಿಸುವುದು ಬಿಳಿ ಮರಳಿನ ತೀರ, ಅದಕ್ಕೆ ಅಂಟಿಕೊಂಡ ಪೈನ್ ಮರದ ಕಾಡುಗಳು. ಈ ಪೈನ್ ಮರದ ಕಾಡುಗಳನ್ನು ಕಡಲಿನಿಂದ ಬೀಸುವ ಗಾಳಿ ಮತ್ತು ಅಲೆಗಳಿಂದ ಕಾಪಾಡಿಕೊಳ್ಳಲು ಬೆಳೆಸಲಾಗಿತ್ತು. ಆದರೆ ಮಾರ‍್ಚ್ 2011ರಲ್ಲಿ ಬಂದ ಸುನಾಮಿಗೆ ಈ ಪೈನ್ ಕಾಡುಗಳು ಯಾವುದೇ ಉಪಯೋಗಕ್ಕೆ ಬರಲಿಲ್ಲ. ಬಹಳಶ್ಟು ಮರಗಳು ಸುನಾಮಿಯ ರಬಸಕ್ಕೆ ಯಾವುದೇ ತಡೆಯೊಡ್ಡದೆ ಬುಡಮೇಲುಗೊಂಡು ಸುನಾಮಿಯ ನೀರಿನೊಟ್ಟಿಗೆ ಕೊಚ್ಚಿ ಹೋದವು. ಹೀಗೆ ಕೊಚ್ಚಿಕೊಂಡು ಬಂದ ಮರಗಳು ಊರೊಳಗೆ ನುಗ್ಗಿ ಮತ್ತಶ್ಟು ಹಾನಿ ಮಾಡಿದ್ದವು.
ಆದರೆ ಅಲ್ಲಿನ ಕೆಲವು ಸ್ತಳೀಯ ಜಾತಿಯ ಮರಗಳು ಮಾತ್ರ ಸುನಾಮಿಯ ರಬಸದ ಹೊರತಾಗಿಯೂ ಗಟ್ಟಿಯಾಗಿ ನೆಲೆನಿಂತಿದ್ದವು. ಸುನಾಮಿ ಬಡಿದ ಜಾಗಗಳನ್ನು ಪರಿಶೀಲಿಸಿದ ಕ್ಯಾತ ಗಿಡದರಿಗ ಅಕಿರ ಮಿಯಾವಾಕಿಯವರು ಈ ಅಂಶವನ್ನು ಗಮನಿಸಿದರು. ಮಿಯಾವಾಕಿಯವರ ಪ್ರಕಾರ ನೈಸರ‍್ಗಿಕ ಕಾಡುಗಳು, ಅಂದರೆ ಮನುಶ್ಯನ ಕೈವಾಡವಿಲ್ಲದೆ ಬೆಳೆದಂತಹ ಕಾಡುಗಳು ನೈಸರ‍್ಗಿಕ ವಿಪತ್ತುಗಳಿಂದ ಕಾಪಾಡಿಕೊಳ್ಳ ಬಲ್ಲವು. ಜಪಾನಿನ ಸ್ತಳೀಯ ನೈಸರ‍್ಗಿಕ ಕಾಡುಗಳು ಸಾವಿರಾರು ವರ‍್ಶಗಳಿಂದ ಬೂಕಂಪ, ಸುನಾಮಿ, ಕಾಡ್ಗಿಚ್ಚು, ಕಡಲ್ಗಾಳಿಗಳನ್ನು ಎದುರಿಸಿ ಬೆಳೆದು ನಿಂತಿವೆ. ಇಂತಹ ಕಾಡುಗಳೇ ಕೇಡುಗಾಲದಲ್ಲಿ ಉಪಯೋಗಕ್ಕೆ ಬರುವಂತವು. ಆದರೆ ಜಪಾನಿನಲ್ಲಿ ಅಂತಹ ಕಾಡುಗಳು ಕಡಿಮೆಯಾಗುತ್ತಿವೆ ಎನ್ನುತ್ತಾರೆ ಮಿಯಾವಾಕಿ.
ಸುನಾಮಿಯನ್ನು ತಡೆಯಲು ಬೆಳೆಸುವ ಕಾಡು ಹೇಗಿರಬೇಕು?
2011 ರ ಸುನಾಮಿ ಬಂದೊರಗಿದ ಹೊತ್ತಿನಲ್ಲಿ ಮಿಯಾವಾಕಿಯವರು ಜಪಾನಿನಲ್ಲಿರಲಿಲ್ಲ. ಆದರೆ ಸುದ್ದಿಯನ್ನು ತಿಳಿದ ಕೂಡಲೆ ಜಪಾನಿಗೆ ಹಿಂದಿರುಗಿದರು. ಅಲ್ಲಿ ಆದ ಹಾನಿಯನ್ನು ನೋಡಿದರೆ ಅವು ಸುದ್ದಿ ಮಾದ್ಯಮಗಳಲ್ಲಿ ಕಾಣಿಸುತ್ತಿದ್ದಕ್ಕಿಂತ ಹೆಚ್ಚಿತ್ತು ಎಂದರಿತರು. ಹೀಗೆ ಮರಳಿ ಬಂದವರೇ ರಿನ್ನೋಜಿ ಗುಡಿಯ ಪುರೋಹಿತರ ಜೊತೆಗೂಡಿ ಹಲವಾರು ಊರುಗಳಲ್ಲಿ ಒರೆತ(survey) ಮಾಡಿದರು. ಇಲ್ಲೆಲ್ಲ ಜಪಾನಿನ ಬಹಳಶ್ಟು ಸ್ತಳೀಯ ಮರಗಳಿದ್ದ ಕಾಡುಗಳು ಉಳಿದುಕೊಂಡಿದ್ದವು. ವಿಶೇಶವಾಗಿ ‘ಟಬುನೋಕಿ’ ಮರಗಳ ಕಾಡುಗಳು ಸುನಾಮಿಯಿಂದ ಹಾನಿಯಾಗದೆ ಉಳಿದಿದ್ದವು. ಅವುಗಳ ಗಟ್ಟಿಯಾದ ರೆಂಬೆ-ಕೊಂಬೆಗಳು, ಆಳಕ್ಕೆ ಇಳಿದಿದ್ದ ಬೇರುಗಳು ಅವನ್ನು ಸುನಾಮಿಯ ಹೊಡೆತವನ್ನು ತಾಳಿಕೊಳ್ಳಲು ನೆರವಾಗಿತ್ತು. ಮೂವತ್ತು- ನಲವತ್ತು ಅಡಿಗಳಶ್ಟು ಎತ್ತರಕ್ಕೆ ನೀರು ಹರಿದಿದ್ದರೂ ಟಬುನೋಕಿ ಮರಗಳು ಉಳಿದುಕೊಂಡಿದ್ದವು.
ಹಾಗಾಗಿ ಕಡಲತೀರದಲ್ಲಿ ಸ್ತಳೀಯ ಜಾತಿಯ ಮರಗಳನ್ನು, ಅದರಲ್ಲೂ ವಿಶೇಶವಾಗಿ ಟಬುನೋಕಿ ಮರದ ಕಾಡನ್ನು ಬೆಳೆಸಬೇಕು ಎಂದು ಯೋಚಿಸಲಾಯಿತು. ಈ ಕಾಡಿನಲ್ಲಿ ಬೆಳೆಸಲು ಟಬುನೋಕಿ, ಶಿನೋಕಿ, ಶಿರಕಾಶಿ, ಅರಕಾಶಿ, ಉರಜಿರೊಗಾಸಿ ಮುಂತಾದ ಎತ್ತೆತ್ತರದ ಮರಗಳನ್ನೂ, ಶಿರೊಡಾಮೋ, ಯಬುತ್ಸುಬಾಕಿ, ಮೋಚಿಮಾಕಿ, ಯುಜಿರಿಹಾ, ಕಾಕುಮರಿನೋ ಮುಂತಾದ ಸಾಮಾನ್ಯದೆತ್ತರದ ಮರಗಳನ್ನೂ, ಟೋಬೇರ, ಶರಿನ್ಬಾಯ್, ಹಿಸಕಾಕಿ, ಮಸಾಕಿ, ಯಾಟುಡೆ ಮುಂತಾದ ಸಣ್ಣ ಮರಗಳನ್ನ ಆಯ್ದುಕೊಳ್ಳಲಾಯಿತು.
ಈ ಮರಗಳು ಜಪಾನಿನ ಸ್ತಳೀಯ ಮರಗಳಾದ್ದರಿಂದ ಅವುಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಸಾಮಾನ್ಯವಾಗಿ ಯಾವುದೇ ರೋಗಕ್ಕೆ ಒಳಗಾಗುವುದಿಲ್ಲ. ಇವುಗಳು ಒಂದಕ್ಕೊಂದು ಹೊಂದಿಕೊಳ್ಳುತ್ತವೆ ಮತ್ತು ನೆಲದಾಳಕ್ಕೆ ಬೇರು ಬಿಡುವುದರಿಂದ ಬಹಳ ಗಟ್ಟಿಯಾಗಿ ನೆಲೆಗೊಳ್ಳುತ್ತವೆ. ನೆಟ್ಟ ಒಂದೆರಡು ವರ‍್ಶಗಳ ಕಾಲ ಕಳೆ ಕೀಳಬೇಕಾಗುತ್ತದೆ. ಆನಂತರ ಯಾವುದೇ ಆರೈಕೆ ಬೇಕಾಗುವುದಿಲ್ಲ. 15-20 ವರ‍್ಶಗಳಲ್ಲಿ ಸೊಂಪಾದ ಕಾಡು ಬೆಳೆದಿರುತ್ತದೆ. ಈ ಕಾಡು ಮುಂದೆ ಸಾವಿರಾರು ವರ‍್ಶಗಳ ಕಾಲ ಬಾಳುತ್ತದೆ. ಇಂತಹ ಕಾಡನ್ನು ಕಡಲತೀರದ ಉದ್ದಕ್ಕೂ ಹಸಿರು ಗೋಡೆಯಂತೆ ಬೆಳೆಸಿದಲ್ಲಿ ಇವು ಸುನಾಮಿ ಅಲೆಯ ರಬಸವನ್ನು ತಡೆದು ಕಡಿಮೆ ಮಾಡುತ್ತದೆ. ಮಾತ್ರವಲ್ಲ, ಸುನಾಮಿ ಇಳಿತದ ಹೊತ್ತಿನಲ್ಲಿ ಮನೆಗಳು, ಗಾಡಿಗಳು, ಜನರನ್ನು ಮರಳಿ ಕಡಲಿಗೆ ಕೊಚ್ಚಿಕೊಂಡು ಹೋಗುವುದನ್ನು ತಡೆಯಲಿದೆ.
ಈ ಹಸಿರು ಗೋಡೆ ಸಾವಿರಾರು ವರುಶ ಬಾಳಿಕೆ ಬರಲಿದೆ
ಸುನಾಮಿ ಹೊಡೆತಕ್ಕೆ 22.6 ಮಿಲಿಯನ್ ಟನ್ನಿನಶ್ಟು ಕಟ್ಟಡಕಸ(debris) ಉಂಟಾಗಿತ್ತು. ಅದರಲ್ಲಿ ಹೆಚ್ಚಿನದು ಮರದ ಕಸವೇ ಇದ್ದುದ್ದರಿಂದ ಅದನ್ನು ಬೇರ‍್ಪಡಿಸಿ, ಮಣ್ಣಿನೊಂದಿಗೆ ಬೆರಸಿ, ಕಾಡು ಬೆಳೆಸುವ ಜಾಗದಲ್ಲಿ ದಿಬ್ಬ ಮಾಡಿ, ಅದರ ಮೇಲೆ ಈ ಹಸಿರು ಗೋಡೆ ಬೆಳೆಸಿದಲ್ಲಿ ಸುನಾಮಿಯನ್ನು ತಡೆಯುವಲ್ಲಿ ಮತ್ತಶ್ಟು ಪರಿಣಾಮಕಾರಿ ಆಗುತ್ತದೆ ಎಂದು ಮಿಯಾವಾಕಿಯವರು ಪ್ರಸ್ತಾಪ ಮಾಡಿದ್ದರು. ಸದ್ಯಕ್ಕೆ ಮರದ ಕಸವನ್ನು ನೆಲದಡಿ ಹೂಳುವುದರಿಂದ ಮೀತೇನ್ ಗಾಳಿ ಹೊರಸೂಸುತ್ತದೆಯಾದ್ದರಿಂದ ಮರದ ಕಸವನ್ನು ದಿಬ್ಬ ಮಾಡಲು ಬಳಸಿಕೊಂಡಿಲ್ಲ. ಆದರೆ ಕೆಲವು ಮಣ್ಣಾಗದ, ಪರಿಸರಕ್ಕೆ ವಿಶಕಾರಿಯೂ ಅಲ್ಲದ ಕಸಗಳಾದ ಟೈಲ್ಸ್ ತುಂಡುಗಳನ್ನು, ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ.
ಈ ಹಮ್ಮುಗೆಯನ್ನು ‘ಇವಾಮಾ’ ನಗರದಲ್ಲಿ ಸದ್ಯಕ್ಕೆ ಕೈಗೊಂಡಿದ್ದಾರೆ. ಮೊದಲಿಗೆ ಕಾಂಕ್ರೀಟಿನ ಗೋಡೆಯನ್ನು ಕಟ್ಟಲಿದ್ದಾರೆ. ಅದರ ಹಿಂದೆಯೇ ಈ ಹಸಿರು ಕಾಡಿನ ಗೋಡೆಯನ್ನು ಬೆಳೆಸಲಿದ್ದಾರೆ. ಕಾಂಕ್ರೀಟ್ ಗೋಡೆ 50-100 ವರ‍್ಶ ಬಾಳಿಕೆ ಬಂದರೆ, ಈ ಹಸಿರು ಗೋಡೆ ಸಾವಿರಾರು ವರ‍್ಶ ಬಾಳಿಕೆ ಬರಲಿದೆ. ಇದನ್ನು ಬೆಳೆಸುವ ಜಾಗ ಸುನಾಮಿಯಲ್ಲಿ ಮಡಿದವರ ನೆನೆಕಟ್ಟಡ(memorial) ಆಗಲಿದೆ. ನಗರದ ಜನರಿಗೆ ತಿರುಗಾಟದ ತಾಣವೂ ಆಗಲಿದೆ.
(ಮಾಹಿತಿ ಸೆಲೆ: youtube.com, miamiherald.com )
(ಚಿತ್ರ ಸೆಲೆ: pixabay, miamiherald.com )
ಇತ್ತೀಚಿನ ಅನಿಸಿಕೆಗಳು