ಮರುಬೂಮಿಯ ಮಳೆ ಕಪ್ಪೆ!

– ಕೆ.ವಿ.ಶಶಿದರ.

ಮಳೆ ಕಪ್ಪೆ Desert Rain Frog

ಮರುಬೂಮಿಯ ಮಳೆ ಕಪ್ಪೆ, ಕಪ್ಪೆ ಜಾತಿಯಲ್ಲಿ ಒಂದು ಬಗೆ. ಇದು ಮರುಬೂಮಿಯಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ದಕ್ಶಿಣ ಆಪ್ರಿಕಾ ಮಳೆ ಕಪ್ಪೆ ಅತವಾ ಕೇಪ್ ಮಳೆ ಕಪ್ಪೆ ಎಂದೂ ಗುರುತಿಸುತ್ತಾರೆ. ಇದರ ಹೆಸರನ್ನು ಗಮನಿಸಿ. ಮರುಬೂಮಿಯ ಮಳೆ ಕಪ್ಪೆ! ಮರುಬೂಮಿ ಮತ್ತು ಮಳೆ ಎರಡೂ ಬಹುಮಟ್ಟಿಗಿನ ವಿರೋದಾಬಾಸ ಪದಗಳು.

ಈ ಪುಟ್ಟ ಕಪ್ಪೆ ಕಂಡುಬರುವ ಜಾಗದಲ್ಲಿ ಮಳೆ ಅತಿ ಕಡಿಮೆ!

ವಿಪರ‍್ಯಾಸವೆಂದರೆ ಈ ಪುಟ್ಟ ಕಪ್ಪೆ ಕಂಡುಬರುವ ಜಾಗದಲ್ಲಿ ಮಳೆ ಅತಿ ಕಡಿಮೆ. ದಕ್ಶಿಣ ಆಪ್ರಿಕಾ ಮತ್ತು ನಮೀಬಿಯಾದ ಕರಾವಳಿಯ ಒಣ ಮರುಬೂಮಿ ಪ್ರದೇಶದಲ್ಲಿ ಇದು ಕಂಡು ಬರುತ್ತದೆ. 10 ಕಿ.ಮೀ ಅಗಲವಿರುವ ಸಮುದ್ರ ತೀರ ಮತ್ತು ಮರಳು ದಿಬ್ಬಗಳ ನಡುವಿನ ಮರುಬೂಮಿ ಇದರ ಆವಾಸ ಸ್ತಾನ. ಸಮುದ್ರದ ಮೇಲಿಂದ ಬೀಸುವ ತೇವ ಮಿಶ್ರಿತ ಗಾಳಿ ಮರಳಿನ ದಿಬ್ಬಕ್ಕೆ ಬಡಿದು ತೇವಾಂಶ ಹರಿದು ಮರುಬೂಮಿಯನ್ನು ಸೇರುತ್ತದೆ. ಇದೇ ರೀತಿಯಲ್ಲಿ ಮಂಜಿನ ದಿನಗಳಲ್ಲೂ ಮರಳಿನ ದಿಬ್ಬಗಳಲ್ಲಿ ಸಂಗ್ರಹವಾದ ನೀರು ಕೆಳಗೆ ಹರಿದು ಬರುತ್ತದೆ. ಈ ಸುಂದರ ಪುಟ್ಟ ಕಪ್ಪೆಗೆ ಈ ನೀರೇ ಜೀವಾಳ.

ಮಳೆ ಕಪ್ಪೆ ಬ್ರೆವಿಸಿಪಿಟಿಡೆ ಕುಟುಂಬಕ್ಕೆ ಸೇರಿದೆ. ಬ್ರೆವಿಸೆಪ್ಸ್ ಮಾಕ್ರೋಪ್ಸ್ ಎಂಬ ವೈಜ್ನಾನಿಕ ಹೆಸರನ್ನು ಹೊಂದಿರುವ ಈ ಪುಟ್ಟ ಕಪ್ಪೆ ದುಂಡುದುಂಡಾಗಿ ಊದಿಕೊಂಡಂತೆ ಕಾಣುತ್ತದೆ. ತೇಪೆ ಹಾಕಿದಂತೆ ಕಂಡುಬರುವ ಹಳದಿ ಮಿಶ್ರಿತ ಕಂದು ಬಣ್ಣದ ಚರ‍್ಮ, ಪುಟ್ಟ ಮೂಗು, ಸಣ್ಣ ಕಾಲುಗಳನ್ನು ಹೊಂದಿರುವ ಇದು ಹಾರಲಾಗದು. ಇತರೆ ಉಬಯಚರಗಳಂತೆ ಇದರ ಚರ‍್ಮವೂ ದಪ್ಪಗೆ ಉಬ್ಬಿದ್ದು ವಿಬಿನ್ನ ಮಾದರಿಯಾಗಿದೆ. ಇದರ ಹೊಟ್ಟೆಯ ತಳಬಾಗದ ಚರ‍್ಮದಲ್ಲಿ ಒಂದು ಸಣ್ಣ ಬಾಗವು ಪಾರದರ‍್ಶಕವಾಗಿದ್ದು, ದೇಹದಲ್ಲಿನ ಅಂಗಾಂಗಳು ಕಾಣುವಂತಿದೆ.

ಮರಳಿನಡಿಯ ಬಿಲವೇ ಇದರ ಮನೆ

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮಳೆ ಕಪ್ಪೆ ದಿನದ ಬಹಳ ಸಮಯ ಮರಳಿನಡಿಯ ಬಿಲದಲ್ಲಿ ಕಳೆಯುತ್ತದೆ. ಬಿಲದಲ್ಲಿನ ತೇವಾಂಶ ಮತ್ತು ತಂಪಾದ ವಾತಾವರಣ ಇದಕ್ಕೆ ಮೂಲ ಕಾರಣ. ಪುಟ್ಟ ಪುಟ್ಟ ದೋಣಿಗಳ ಹುಟ್ಟಿನಂತೆ ವಿಶೇಶ ವಿನ್ಯಾಸ ಹೊಂದಿರುವ ಕಾಲುಗಳಿಂದ ತನ್ನ ಇರುವಿಕೆಗಾಗಿ 10 ರಿಂದ 20 ಸೆಂಟಿಮೀಟರ್ ಆಳದಲ್ಲಿ ಬಿಲವನ್ನು ತಾನೇ ತೋಡಿಕೊಳ್ಳುತ್ತದೆ. ಈ ಪುಟ್ಟ ಕಪ್ಪೆ ರಾತ್ರಿಯಾದೊಡನೆ ಊಟಕ್ಕಾಗಿ ಸಂಚಾರ ಪ್ರಾರಂಬಿಸುತ್ತದೆ.

ಇದರ ಪಾದ ಹಕ್ಕಿಗಳ ಪಾದದಂತೆ ಅಗಲವಾಗಿದ್ದು ಬೆರಳುಗಳ ನಡುವೆ ಚರ‍್ಮ ಬೆಸೆದುಕೊಂಡಿದೆ. ಇದರಿಂದಾಗಿ ಮಳೆ ಕಪ್ಪೆಗೆ ಸಡಿಲವಾದ ಮರಳಿನಲ್ಲಿ ಸಲೀಸಾದ ನಡಿಗೆ ಸಾದ್ಯ. ಇದು ಊಟಕ್ಕಾಗಿ ಕೀಟಗಳನ್ನು ಅವಲಂಬಿಸಿದೆ. ಕೀಟಗಳ ಜೊತೆ ಲಾರ‍್ವಾಗಳನ್ನೂ ತಿನ್ನುತ್ತದೆ. ತನ್ನ ಮೊಟ್ಟೆಗಳನ್ನು ಬಿಲಗಳಲ್ಲಿ ಇಟ್ಟು ಅದನ್ನು ದಪ್ಪವಾದ ಜೆಲ್ಲಿಯಂತಹ ವಸ್ತುವಿನಿಂದ ಮುಚ್ಚುತ್ತದೆ. ಒಮ್ಮೆಗೆ 40-45 ಮೊಟ್ಟೆಗಳನ್ನು ಇಡುವುದು ಸಾಮಾನ್ಯ. ಈ ಮೊಟ್ಟೆಗಳಿಂದ ಟ್ಯಾಡ್‍ಪೋಲ್ಗಳು ಹೊರಹೊಮ್ಮಿದಾಗ ಜೆಲ್ಲಿ ತೆಳುವಾಗಿ ನೀರಾಗುತ್ತದೆ. ಟ್ಯಾಡ್‍ಪೋಲ್ಗಳು ಕಪ್ಪೆಯಾಗಿ ಮಾರ‍್ಪಾಡಾಗುವ ತನಕ ಅದರಲ್ಲೇ ಆಶ್ರಯ ಪಡೆಯುತ್ತವೆ. ಇದರಿಂದ ಅದು ಒಣ ಪರಿಸರಕ್ಕೆ ಹೊಂದಿಕೊಳ್ಳಲು ಪೂರಕ ವಾತಾವರಣ ಸ್ರುಶ್ಟಿಯಾಗುತ್ತದೆ.

ದೇಹ ಪುಟ್ಟದಾದರೂ ಗಂಟಲಿನಿಂದ ಬರುವ ಸದ್ದು ದೊಡ್ಡದು!

ಕುತೂಹಲದ ಸಂಗತಿಯಿರುವುದು ಇದರ ದೈಹಿಕ ಗುಣಲಕ್ಶಣದಲ್ಲಲ್ಲ. ಬದಲಿಗೆ ಜೀವಕ್ಕೆ ಅಪಾಯ ಒದಗಿದಾಗ ಅದು ಹೊರಡಿಸುವ ಅತ್ಯಂತ ವಿಶಿಶ್ಟವಾದ ದ್ವನಿಯಲ್ಲಿ. ವಿಶೇಶವಾದ ಕೀರಲು ಮಿಶ್ರಿತ ತೀವ್ರವಾದ ದನಿಯಲ್ಲಿ ಶಬ್ದ ಮಾಡುತ್ತದೆ. ಈ ಶಬ್ದ ಬಯಂಕರ ರಣಗರ‍್ಜನೆಯನ್ನು ಮೀರಿಸುತ್ತದೆ. ಪುಟ್ಟ ದೇಹದಿಂದ ಇಂತಹ ಬಯಂಕರ ಶಬ್ದ ಹೊರಹೊಮ್ಮುವುದಾದರೂ ಹೇಗೆ ಎಂಬ ಆಶ್ಚರ‍್ಯ ಮೂಡುತ್ತದೆ.

ಮರುಬೂಮಿಯ ಮಳೆ ಕಪ್ಪೆಯನ್ನು ಬೆದರಿಕೆಯಿರುವ ಪ್ರಬೇದಗಳ ಪಟ್ಟಿಯಲ್ಲಿ ‘ದುರ‍್ಬಲ’ ಎಂದು ಪಟ್ಟಿ ಮಾಡಲಾಗಿದೆ. ಮರಬೂಮಿ ಪ್ರದೇಶದಲ್ಲಿನ ಡೈಮಂಡ್ ಗಣಿಗಾರಿಕೆ, ಪೂರಕ ರಸ್ತೆಗಳ ರಚನೆ, ಮಾನವನ ವಸಾಹತುಗಳ ಹೆಚ್ಚಳ, ಆದುನೀಕರಣ, ಪ್ರವಾಸೋದ್ಯಮ ಎಲ್ಲಾ ಮಳೆ ಕಪ್ಪೆಯ ಬೆಳವಣಿಗೆಯನ್ನು ಕುಂಟಿತಗೊಳಿಸಿ ಅವಸಾನದ ಅಂಚಿಗೆ ತಳ್ಳಿದೆ.

(ಮಾಹಿತಿ ಸೆಲೆ: freedawn.co.uk, wikipedia.org, iucnredlist.org)
(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications