ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ.

ಜೇನು, ಹೂವು, flower, bee, bees

ಕಲ್ಪನೆ ಮೋಡ ಗರಿ ಗರಿ ಬಿಚ್ಚಿ
ತೇಲುತ ತೇಲುತ ಬಾನಲ್ಲಿ
ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು
ಸುರಿವುದು ಅಕ್ಶರ ಸಾಲಲ್ಲಿ

ರಪರಪ ಮಳೆಹನಿ ಪದಗಳು ಕರಗುತ
ಹೊಂದಿ ನಿಲುವವು ಪ್ರಾಸದಲಿ
ಆಣೇಕಲ್ಲಿನ ಗೊಂಚಲು ಹೊಳೆವುದು
ಅಲಂಕಾರದ ಚಂದದಲಿ

ಕವಿತೆಯ ಒಳದನಿ ಲುಟುಪುಟು ಲುಟುಪುಟು
ಹರಿವುದು ಜುಳುಜುಳು ಲಯದಲ್ಲಿ
ಇಳೆಯ ಓದುಗ ರುಚಿಯನು ಸವಿವನು
ಅರ‍್ತ ಬಾವದಿ ಮುಳುಗುತಲಿ

ಗಿಳಿಮರಿ ಕೋಗಿಲೆ ಮಾತ್ರೆ ಗಣಗಳು
ನಲಿವವು ಸೊಬಗಿನ ಮೇಳದಲಿ
ಹಸಿರೆಲೆ ಗಿಡಮರ ಚರಣ ಪಲ್ಲವಿ
ಒಲಿವವು ತಾಳ ಹಾಕುತಲಿ

ಮರಿದುಂಬಿಗಳು ಜೇಂಕರಿಸುವವು
ಹೂ ಹೂ ಪರಿಮಳ ಹೀರುತಲಿ
ರುಚಿರುಚಿ ಮದುವನು ಕೂಡಿಸಿ ಇಡುವವು
ಚಿತ್ತ ಚಿತ್ತಾರದ ಗೂಡಲ್ಲಿ

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: