ಗೂಗಲ್ ಕುರಿತ ಈ ಮಾಹಿತಿ ನಿಮ್ಮನ್ನು ಬೆರಗಾಗಿಸುತ್ತೆ!

– ರತೀಶ ರತ್ನಾಕರ.

ಗೂಗಲ್ ಕಚೇರಿ Google Office

ಮಿಂದಾಣದ ಬಳಕೆದಾರರು ಗೂಗಲ್ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಒಂದು ನಿಮಿಶಕ್ಕೆ 20 ಲಕ್ಶ ಹುಡುಕಾಟಗಳು ಗೂಗಲ್ ಮೂಲಕ ಆಗುತ್ತಿವೆ ಎಂದರೆ ಅದರ ಬಳಕೆ ಹಾಗೂ ಮಂದಿಮೆಚ್ಚುಗೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಮೇರಿಕಾದ ಸ್ಟಾನ್ಪೋರ‍್ಡ್ ಕಲಿಕೆವೀಡಿನಲ್ಲಿ ಪಿ.ಎಚ್‍ಡಿ ಮಾಡುವಾಗ ಗೆಳೆಯರಾದ ಲ್ಯಾರಿ ಪೇಜ್(Larry Page) ಹಾಗೂ ಸರ‍್ಗೆ ಬ್ರಿನ್ (Sergey Brin) ಜೊತೆಯಾಗಿ, ಸೆಪ್ಟೆಂಬರ್ 4, 1998 ರಲ್ಲಿ ಹುಟ್ಟುಹಾಕಿದ ಗೂಗಲ್ ಇಂದು ಜಗತ್ತಿನ ಹೆಸರುವಾಸಿ ಕಂಪನಿ.

ಗೂಗಲ್ಲಿನ ಹಳೆಯ ಹೆಸರು ಬ್ಯಾಕ್‍ರಬ್ (BackRub) ಎಂದಿತ್ತು

ಮಿಂದಾಣದಲ್ಲಿ ಏನಾನ್ನಾದರು ಹುಡುಕಲು ನೆರವಾಗುವಂತೆ ಒಂದು ಪುಟವನ್ನು ಲ್ಯಾರಿ ಹಾಗೂ ಸರ‍್ಗೆ ಜೊತೆಗೂಡಿ ಮಾಡಿದ್ದರು. ಅದಕ್ಕೆ ಬ್ಯಾಕ್‍ರಬ್ ಎಂಬ ಹೆಸರಿಟ್ಟಿದ್ದರು. ಬಳಕೆದಾರರಿಗೆ ಬೇಕಾದ ಪುಟಗಳನ್ನು ಹೆಕ್ಕಿ ತೋರಿಸಲು ಕೆಲವಾರು ಹೊಲಬುಗಳನ್ನು (algorithms) ಬರೆಯಲಾಗಿತ್ತು. ಮೊದಲಿಗೆ ಲ್ಯಾರಿ ಹಾಗೂ ಸರ‍್ಗೆ ಅವರಿಗೆ ಒಂದೊಳ್ಳೆ ಮಿಂದಾಣದ ಪುಟವನ್ನು ಮಾಡಲು ಬೇಕಿರುವ ಎಚ್‍ಟಿಎಮ್‍ಎಲ್(HTML) ಚಳಕಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಹಾಗಾಗಿ ಬೇಕಾದ ಎರಡು ಆಯ್ಕೆಗಳನ್ನು ಕೊಟ್ಟು ಒಂದು ಪುಟವನ್ನು ಮಾಡಿದ್ದರು. ಈಗಲೂ ಗೂಗಲ್ ಪುಟವನ್ನು ನೋಡಿದರೆ ಬರೆಯಲು ಒಂದು ಸಣ್ಣ ಜಾಗ ಹಾಗೂ ಒಂದು ಬಟನ್ ಇರುತ್ತದೆ. ಬೇರಾವುದೇ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ಆದರೆ ಪುಟದ ಹಿನ್ನಲೆಯ ಕೆಲಸಕ್ಕೆ ಬೇಕಾದ ಸಾವಿರಾರು ಹೊಲಬುಗಳನ್ನು ಅವರು ಬರೆದಿದ್ದರು. ಇವುಗಳಲ್ಲಿ ಹಲವು ಹೊಲಬುಗಳ ಹಕ್ಕುಗಳು ಈಗಲೂ ‘ಪೇಜ್‍ರ‍್ಯಾಂಕ್’ ಎಂಬ ಹೆಸರಿನಲ್ಲಿ ಸ್ಟಾನ್ಪೋರ‍್ಡ್ ಕಲಿಕೆವೀಡಿನ ಕೈಯಲ್ಲಿದೆ.

ಲ್ಯಾರಿ ಪೇಜ್(Larry Page) ಹಾಗೂ ಸರ‍್ಗೆ ಬ್ರಿನ್ (Sergey Brin)

ಸರ‍್ಗೆ ಬ್ರಿನ್ ಹಾಗೂ ಲ್ಯಾರಿ ಪೇಜ್

4 ಜಿಬಿಯ 10 ಗಟ್ಟಿನೆಪ್ಪುಗಳನ್ನು (hard drive) ಬಳಸಿಕೊಂಡು ಮೊದಲ ಗೂಗಲ್ ಹೊರಬಂದಿತ್ತು. ಈ 4 ಜಿಬಿಯ ಗಟ್ಟಿನೆಪ್ಪುಗಳನ್ನು ಲೆಗೋ ಕೇಸ್‍ನಲ್ಲಿ (ಆಟ ಆಡಲು ಬಳಸುವ ಬಣ್ಣದ ಇಟ್ಟಿಗೆಗಳು) ಕೂರಿಸಿದ್ದರು. ಈಗ 100 ಮಿಲಿಯನ್ ಜಿಬಿಗಿಂತಲೂ ಹೆಚ್ಚಿನ ಗಟ್ಟಿನೆಪ್ಪುಗಳನ್ನು ಬಳಸಿಕೊಳ್ಳುವ ಮಟ್ಟಕ್ಕೆ ಇದು ಬೆಳೆದು ನಿಂತಿದೆ. ಆಗ ಗೂಗಲ್ ತನಗೆ ಬೇಕಾದ ಪುಟಗಳನ್ನು ಆಯ್ದುಕೊಳ್ಳಲು ಒಂದು ಸೆಕೆಂಡಿಗೆ ಸುಮಾರು 30 ರಿಂದ 50 ಮಿಂದಾಣದ ಪುಟಗಳನ್ನು ಕೆದಕುತ್ತಿತ್ತು, ಈಗ ಅದೇ ಒಂದು ಸಕೆಂಡಿನಲ್ಲಿ 10 ಲಕ್ಶಕ್ಕೂ ಹೆಚ್ಚಿನ ಪುಟಗಳನ್ನು ಕೆದಕುತ್ತದೆ!

ಗೂಗಲ್ ಎಂಬ ಹೆಸರು ಹೇಗೆ ಬಂದಿತು?

ಬ್ಯಾಕ್‍ರಬ್ ಕೆಲವೇ ತಿಂಗಳುಗಳಲ್ಲಿ ಗೂಗಲ್ ಎಂದು ಮರುಹೆಸರು ಪಡೆಯಿತು. ಗೂಗಲ್(google) ಪದವು ಗೂಗಾಲ್(googol) ಎಂಬ ಪದದಿಂದ ಬಂದಿದೆ ಎನ್ನಲಾಗುತ್ತದೆ. 1 ರ ಪಕ್ಕ 100 ಸೊನ್ನೆಗಳನ್ನು ಹಾಕಿದರೆ ಬರುವ ಅಂಕಿಯನ್ನು ಗೂಗಾಲ್ ಎಂದು ಕರೆಯುತ್ತಾರೆ. ಮೊದಲಿಗೆ ‘ಗೂಗಾಲ್’ ಎಂಬ ಹೆಸರನ್ನೇ ಲ್ಯಾರಿ ಹಾಗೂ ಸರ‍್ಗೆ ಇಟ್ಟಿದ್ದರು, ಆದರೆ ಅದಕ್ಕೆ ಹಣಹೂಡುವವರೊಬ್ಬರು ಚೆಕ್ ಬರೆದುಕೊಡುವಾಗ ಚೆಕ್ ಹಾಳೆಯ ಮೇಲೆ ‘ಗೂಗಾಲ್’ ಬರೆಯುವ ಬದಲು ತಪ್ಪಾಗಿ ‘ಗೂಗಲ್’ ಎಂದು ಬರೆದರು. ಕೊನೆಗೆ ಅದೇ ಹೆಸರು ಉಳಿಯಿತು ಎಂಬ ಕತೆಯಿದೆ.

2006ರಲ್ಲಿ ಆಕ್ಸ್ ಪರ‍್ಡ್ ಹಾಗೂ ಮೆರಿಯಮ್-ವೆಬಸ್ಟರ್ ಡಿಕ್ಶನರಿಗಳಲ್ಲಿ ‘ಗೂಗಲ್ (google)’ ಪದವನ್ನು ಸೇರಿಸಿ, ‘ಗೂಗಲನ್ನು ಬಳಸಿ ಮಿಂದಾಣದಲ್ಲಿ ಮಾಹಿತಿಯನ್ನು ಹುಡುಕು’ ಎಂಬ ಹುರುಳನ್ನು ನೀಡಲಾಗಿದೆ!

ಒಂದು ಕಾಲದಲ್ಲಿ 1 ಮಿಲಿಯನ್ ಡಾಲರಿಗೆ ಮಾರಾಟ ಆಗಿಬಿಡಲಿದ್ದ ಗೂಗಲ್ ಇಂದು 780 ಬಿಲಿಯನ್ ಡಾಲರ್ ಬೆಲೆಬಾಳುವ ಕಂಪನಿ!

ಹೌದು, 1998ರಲ್ಲಿ ಲ್ಯಾರಿ ಹಾಗೂ ಸರ‍್ಗೆ ಅವರು 1 ಮಿಲಿಯನ್ ಡಾಲರಿಗೆ ‘ಎಕ್ಸೈಟ್’ ಎಂಬ ಕಂಪನಿಗೆ ಗೂಗಲನ್ನು ಮಾರುವವರಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಎಕ್ಸೈಟ್ ಕಂಪನಿಯ ಸಿಇಒ ಗೂಗಲನ್ನು ಕೊಳ್ಳುವುದರಿಂದ ಹಿಂದೆಸರಿದರು. ಬಳಿಕ 2002ರಲ್ಲಿ ಯಾಹೂ ಕಂಪನಿಯು 3 ಬಿಲಿಯನ್ ಡಾಲರ್ ಬೆಲೆ ತೆತ್ತು ಇದನ್ನು ಕೊಳ್ಳಲು ಮುಂದೆಬಂದಿತು. ಆ ಹೊತ್ತಿಗೆ ಕಂಪನಿಯನ್ನು ಮಾರುವ ಯೋಚನೆ ಲ್ಯಾರಿ ಹಾಗೂ ಸರ‍್ಗೆಯ ತಲೆಯಿಂದ ಮಾಯವಾಗಿತ್ತು. ಈಗ ಗೂಗಲ್ಲಿನ ಬೆಲೆ ಬರೋಬ್ಬರಿ 780 ಬಿಲಿಯನ್ ಡಾಲರ‍್!

2010 ರಿಂದ ಏನಿಲ್ಲವೆಂದರೂ ತಿಂಗಳಿಗೆ ಎರಡು ಕಂಪನಿಗಳನ್ನು ಗೂಗಲ್ ಕೊಂಡುಕೊಳ್ಳುತ್ತಿದೆ. ಆಂಡ್ರಾಯ್ಡ್, ಯೂಟ್ಯೂಬ್, ವೇಜ್(waze), ಪಿಕಾಸ(Picasa) ಇವೆಲ್ಲಾ ಗೂಗಲ್ ಕೊಂಡುಕೊಂಡ ಕೆಲವು ಹೆಸರುವಾಸಿ ಕಂಪನಿಗಳು. ಇಂತಹ ನೂರಾರು ಕಂಪನಿಗಳನ್ನು ಗೂಗಲ್ ಕೊಂಡುಕೊಂಡಿದೆ, ಈಗಲೂ ಬೇರೆ ಬೇರೆ ಕಂಪನಿಗಳನ್ನು ಕೊಂಡು ತನ್ನ ಬಳಗ ಹಾಗೂ ಸಾದ್ಯತೆಗಳನ್ನು ಹಿಗ್ಗಿಸಿಕೊಳ್ಳುತ್ತಿದೆ.

ಇಲ್ಲಿ ಕೆಲಸಮಾಡಲು ಡಿಗ್ರಿ ಬೇಕಾಗಿಲ್ಲ!

ಗೂಗಲ್‍ನಲ್ಲಿ ಕೆಲಸ ಗಿಟ್ಟಿಸಲು 90%, 100% ಅಂಕಗಳನ್ನು ತೆಗೆಯಬೇಕೆಂದಿಲ್ಲ. ಅಂಕಗಳು ಹಾಗೂ ಸರ‍್ಟಿಪಿಕೇಟುಗಳ ಮೇಲೆ ಗೂಗಲ್ಲಿಗೆ ಅಶ್ಟಾಗಿ ನಂಬಿಕೆಯಿಲ್ಲ. ಇಲ್ಲಿರುವ ಕೆಲಸಗಾರರಲ್ಲಿ ಸುಮಾರು 14% ಮಂದಿ ಡಿಗ್ರಿಯನ್ನು ಕೂಡ ಓದಿಲ್ಲ! ಹುಟ್ಟುಜಾಣ್ಮೆಯಿರುವ, ಚೂಟಿಯಿಂದ ಕೆಲಸಮಾಡುವ, ಹೊಸ ಹೊಸ ಹೊಳಹುಗಳನ್ನು ಹುಟ್ಟುಹಾಕುವ, ಕಲಿಯುವ ತುಡಿತವಿರುವ ಎಲ್ಲರಿಗೂ ಗೂಗಲ್ಲಿನ ಬಾಗಿಲು ಯಾವಾಗಲೂ ತೆರೆದಿರುತ್ತದೆ.

ಗೂಗಲ್ Google Search

ವರುಶಕ್ಕೆ ಜಗತ್ತಿನ ಬೇರೆ ಬೇರೆ ಕಡೆಯಿಂದ 20 ಲಕ್ಶಕ್ಕೂ ಹೆಚ್ಚಿನ ಮಂದಿ ಇಲ್ಲಿ ಕೆಲಸಮಾಡಲು ಅರ‍್ಜಿ ಹಾಕುತ್ತಾರೆ. ಸುಮಾರು 80 ಸಾವಿರ ಮಂದಿ ಈಗ ಕೆಲಸಮಾಡುತ್ತಿದ್ದಾರೆ. ಕೆಲಸಗಾರರಿಗೆ ಕೊಡುವ ಕೆಲವು ಸವಲತ್ತುಗಳು ಗೂಗಲ್ಲಿನಲ್ಲಿ ಕೆಲಸಮಾಡುವಂತೆ ಹುರಿದಂಬಿಸುವುದಂತೂ ದಿಟ.

  • ಇಲ್ಲಿನ ಕೆಲಸಗಾರರನ್ನು ‘ಗೂಗಲರ‍್ಸ್’ ಎಂದು ಕರೆದರೆ, ಹೊಸದಾಗಿ ಸೇರಿಕೊಂಡ ಕೆಲಸಗಾರರನ್ನು ‘ನೂಗಲರ‍್ಸ್'(Nooglers) ಎನ್ನುತ್ತಾರೆ.
  • ಕೆಲಸಕ್ಕೆ ತಮ್ಮ ಮುದ್ದಿನ ಸಾಕುನಾಯಿಯನ್ನೂ ಕರೆದುಕೊಂಡು ಹೋಗಬಹುದು! ಕೆಲಸಗಾರರ ಸಾಕುಪ್ರಾಣಿಗಳಿಗೆ ಗೂಗಲ್ ಒಳಗೆ ಸಾಕಶ್ಟು ಸವಲತ್ತುಗಳಿವೆ.
  • ಕೆಲಸಗಾರರಿಗೆ ಹೊಟ್ಟೆತುಂಬಾ ಊಟ ಕೊಡುವುದರಲ್ಲಿ ಗೂಗಲ್ ಮುಂದು. ಒಬ್ಬೊಬ್ಬ ಕೆಲಸಗಾರ ಕುಳಿತುಕೊಳ್ಳುವ ಜಾಗದಿಂದ 150 ಅಡಿಯ ಒಳಗೆ ಏನಾದರೊಂದು ತಿನ್ನಲು ಸಿಗುತ್ತದೆ.
  • ಅಮೇರಿಕಾದ ಗೂಗಲ್ ಕೆಲಸಗಾರರು ತೀರಿಕೊಂಡರೆ ಅವರ ಹೆಂಡತಿ ಇಲ್ಲವೇ ಗಂಡನಿಗೆ, ತೀರಿಕೊಂಡವರ ಅರ‍್ದದಶ್ಟು ಸಂಬಳ ಮುಂದಿನ ಹತ್ತು ವರುಶಗಳ ಕಾಲ ಸಿಗುವುದು.

ಈ ಎಲ್ಲಾ ಸವಲತ್ತುಗಳು ಕೆಲಸಗಾರರನ್ನು ಹುರಿದುಂಬಿಸಲು ಹಾಗೂ ಅವರಿಂದ ಒಳ್ಳೆಯ ಕೆಲಸವನ್ನು ತೆಗೆಸಲು ಕೊಡಲಾಗುತ್ತಿದೆ.

ಹೊಸ ಹೊಸ ಹೊಳಹುಗಳ ಮೂಲಕ ಗೂಗಲ್ ಮತ್ತಶ್ಟು ಬೆಳೆಯುತ್ತಿದೆ. ಸದ್ಯಕ್ಕಂತು ಮಿಂದಾಣದ ಲೋಕದಲ್ಲಿ ಇವರಿಗೆ ಇವರೇ ಸಾಟಿ.

(ಮಾಹಿತಿ ಸೆಲೆ: scoopwhoop.comfactslides.comwhoishostingthis.com)

(ಚಿತ್ರ ಸೆಲೆ: wiki/BrinPage, wiki/googleoffice, pixabay)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *