ಮಂದಿ ಮೆಚ್ಚಿದ ಹೋಂಡಾ ವಾವ್ ಆರ್‌ವಿ

– ಜಯತೀರ‍್ತ ನಾಡಗವ್ಡ.

ಸುಮಾರು ಒಂದು ವರುಶದ ಹಿಂದೆ ಅಂದರೆ ಕಳೆದ ವರುಶ ಮಾರ‍್ಚ್ ತಿಂಗಳಲ್ಲಿ ಹೋಂಡಾದವರು ಬಂಡಿಯೊಂದನ್ನು ಹೊರತಂದಿದ್ದರು. ಇದೀಗ ಆ ಬಂಡಿ ಎಲ್ಲ ಕಡೆಯಿಂದ ವಾವ್ ಎನ್ನಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಒಂದೇ ವರುಶದಲ್ಲಿ 50 ಸಾವಿರಕ್ಕೂ ಹೆಚ್ಚು ಬಂಡಿಗಳು ಮಾರಲ್ಪಟ್ಟು, ಗೆಲುವು ಸಾದಿಸಿದೆ. ನೀವು ಊಹಿಸಿದ್ದು ಸರಿ, ನಾನು ಮಾತನಾಡುತ್ತಿರುವುದು ಹೋಂಡಾ ಡಬ್ಲ್ಯೂಆರ್‌ವಿ(WRV) ಬಂಡಿಯ ಬಗ್ಗೆ. ಬನ್ನಿ, ಡಬ್ಲ್ಯೂಆರ‍್‌ವಿ ಇತರೆ ಬಂಡಿಗಳಿಗಿಂತ ಯಾವ ರೀತಿ ಬೇರೆಯಾಗಿದೆ ಎನ್ನುವ ಬಗ್ಗೆ ತಿಳಿಯೋಣ.

ಬಂಡಿಯ ಬಗೆ

ಡಬ್ಲ್ಯೂಆರ್‌ವಿ ಬಂಡಿ ಕಿರುಹಿಂಗದ(Hatchback) ಸಾಲಿಗಂತೂ ಸೇರುವ ಬಂಡಿಯಲ್ಲ. ಇದನ್ನು ಹೋಂಡಾ ಜಾಜ್(Jazz) ಅನ್ನೇ ನೆಲೆಯಾಗಿಸಿಕೊಂಡು ಮಾಡಿದ್ದರೂ, ಜಾಜ್ ನಂತಹ ಮೇಲ್ಮಟ್ಟದ (Premium) ಕಿರುಹಿಂಗದ ಕಾರುಗಳಿಗಿಂತ ಇದು ಬೇರೆಯಾಗಿದೆ. ಇಂದು, ಹೆಚ್ಚಿನ ಮಂದಿಗೆ ಮೆಚ್ಚುಗೆಯಾಗುತ್ತಿರುವ ಕ್ರಾಸೋವರ್ ಬಂಡಿ ಎನ್ನಬಹುದು. ಇನ್ನೂ ಬಿಡಿಸಿ ಹೇಳಬೇಕೆಂದರೆ, ಮೇಲ್ಮಟ್ಟದ ಕಿರುಹಿಂಗದ ಕಾರು(Premium Hatchback) ಮತ್ತು ಕಿರು ಆಟೋಟದ ಬಳಕೆಯ ಬಂಡಿಗಳ(Compact SUV) ನಡುವಿನ ಗುಂಪಿಗೆ ಸೇರಿದೆ ಡಬ್ಲ್ಯೂಆರ್‌ವಿ, ವೋಕ್ಸ್‌ವ್ಯಾಗನ್ ಪೋಲೊ ಕ್ರಾಸ್, ಪಿಯಟ್ ಅರ‍್ಬನ್ ಕ್ರಾಸ್(Urban Cross), ಅವೆಂಚುರಾ(Aventura), ಹ್ಯುಂಡಾಯ್ ಐ-20 ಆಕ್ಟೀವ್(i-20 Active) ಬಂಡಿಗಳನ್ನು ಇದೇ ಸಾಲಿಗೆ ಸೇರಿಸಬಹುದು.

ಬಿಣಿಗೆ ಮತ್ತು ಸಾಗಣಿ(Engine and Transmission)

ಬಿಣಿಗೆ ಮತ್ತು ಸಾಗಣಿ ವಿಶಯದಲ್ಲಿ ಹೊಸತೇನು ಕಂಡು ಬರುವುದಿಲ್ಲ. ಹೋಂಡಾ ಜಾಜ್‌ನಲ್ಲಿ(Honda Jazz) ಅಳವಡಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ಬಿಣಿಗೆಗಳನ್ನೇ ಜಾಜ್‌ನ ಹಿರಿಯಣ್ಣ ಡಬ್ಲ್ಯೂಆರ್‌ವಿಯಲ್ಲಿ ಜೋಡಿಸಲಾಗಿದೆ. ಪೆಟ್ರೋಲ್ ಬಂಡಿಗಳಿಗೆ ಐ-ವಿಟೆಕ್(i-Vtec) ಹೆಸರಿನ 1.2ಲೀಟರ್ ಅಳತೆಯ ಬಿಣಿಗೆ 89 ಕುದುರೆಬಲಗಳ ಕಸುವು ತುಂಬಿ,110 ನ್ಯೂಟನ್ ಮೀಟರ್‌ಗಳ ತಿರುಗುಬಲ ಹುಟ್ಟುಹಾಕಲಿದೆ. ಐ-ಡಿಟೆಕ್(i-Dtec) ಹೆಸರಿನ 1.5ಲೀಟರ್ ಅಳತೆಯ ಡೀಸೆಲ್ ಬಿಣಿಗೆ 100 ಕುದುರೆಬಲಗಳ ಕಸುವು ನೀಡಿ, ಸುಮಾರು 200 ನ್ಯೂಟನ್ ಮೀಟರ್‌ಗಳ ತಿರುಗುಬಲ ಉಂಟು ಮಾಡಲಿದೆ.

ಡೀಸೆಲ್ ಬಿಣಿಗೆಯ ಕಸುವು ಪಡೆದು ಬಂಡಿ ಮುನ್ನುಗ್ಗಿಸಲು 6-ವೇಗದ ಓಡಿಸುಗನ ಹಿಡಿತದ ಸಾಗಣಿ(6-Speed Manual Transmission) ನೀಡಿದ್ದರೆ, ಪೆಟ್ರೋಲ್ ಬಂಡಿಯಲ್ಲಿ 5-ವೇಗದ ಓಡಿಸುಗನ ಹಿಡಿತದ ಸಾಗಣಿ ಇರಲಿದೆ. ಜಾಜ್ ಪೆಟ್ರೋಲ್ ಬಂಡಿಗಳಲ್ಲಿ ನೀಡಲಾಗಿರುವ ಸಿವಿಟಿ ಚಳಕದ ಸಾಗಣಿಯ ಆಯ್ಕೆ ಡಬ್ಲ್ಯೂಆರ್‌ವಿಗೆ ನೀಡಲಾಗಿಲ್ಲ.

ಮೈಮಾಟ

ಡಬ್ಲ್ಯೂಆರ್‌ವಿಯ ಹೊರನೋಟ ಎಸ್‌ಯುವಿ ಬಂಡಿಗಳ ಮಟ್ಟಕ್ಕಿದೆ. ಹೊರನೋಟ, ಆಯಗಳು ಮತ್ತು ದೀಪಗಳ ಜೋಡಣೆ – ಹೀಗೆ ಮೈಮಾಟದ ಯಾವುದೇ ವಿಶಯದಲ್ಲೂ ಡಬ್ಲ್ಯೂಆರ್‌ವಿ, ಜಾಜ್‌ ಅನ್ನೇ ನೆಲೆಯಾಗಿಸಿಕೊಂಡು ಮಾಡಿದ್ದು ಎನ್ನಿಸದು. ಉದ್ದ 3999 ಮಿಲಿ ಮೀಟರ್, ಅಗಲ 1734 ಮಿಲಿ ಮೀಟರ್ ಮತ್ತು ಎತ್ತರ 1601 ಮಿಲಿ ಮೀಟರ್ ಇವು ಡಬ್ಲ್ಯೂಆರ್‌ವಿ ಬಂಡಿಯ ಆಯಗಳು.  2555 ಮಿಲಿಮೀಟರ್ ಗಾಲಿಗಳ ನಡುವಿನ ದೂರ ಮತ್ತು 188 ಮಿಲಿಮೀಟರ್ ನೆಲತೆರವು, ಇತರೆ ಆಯಗಳ ಅಳತೆ. ಇಂಗ್ಲಿಶ್‌ನ “L” ಆಕಾರದ ಹಿಂದೀಪಗಳ ಜೋಡಣೆ, ಬೆಳಗಿನ ಹೊತ್ತಿನಲ್ಲೂ ಉರಿಯುವ ಹಗಲುದೀಪಗಳು(DRL-Day Time Running Lamps), 16 ಇಂಚಿನ ಗಾಲಿಗಳು, ಕೊಂಚ ಎತ್ತರದಲ್ಲಿರುವ ಬಿಣಿಗವಸು(Bonnet) ಮತ್ತು ಕ್ರೋಮ್‌ ಬಳಿದ(Chrome Plated) ಮುನ್ಕಂಬಿ ತೆರೆ(Front Grill) ಎಲ್ಲವೂ ಇಂದಿನ ಕೊಳ್ಳುಗರಿಗೆ ಹೇಳಿ ಮಾಡಿಸಿದಂತೆ ಇವೆ. ಇವುಗಳು ಡಬ್ಲ್ಯೂಆರ್‌ವಿ ಬಂಡಿಯ ಎಸ್‌ಯುವಿಯ ನೋಟಕ್ಕೆ ಮೆರುಗು ನೀಡುತ್ತವೆ.

ಡಬ್ಲ್ಯೂಆರ್‌ವಿ ಒಳಗಡೆಯಿಂದಲೂ ಸಾಕಶ್ಟು ಮೆಚ್ಚಬಲ್ಲ ವಿಶೇಶತೆಗಳನ್ನು ಪಡೆದಿದೆ. ಹಿಂಬದಿಯ ಸರಕು ಚಾಚಿಕೆ(Boot Space) 363 ಲೀಟರ್ ಅಳತೆಯದ್ದು, ನಾಲ್ವರು ಪಯಣಿಗರ ಸರಕು ಸಾಗಣೆಗೆ ಇದು ತಕ್ಕುದಾಗಿದೆ. ಬಂಡಿಯ ನಡುವಿನ ಸಾಲು ಕೂಡ ದೊಡ್ಡದಿದೆ, ಇಲ್ಲಿ 3 ಮಂದಿ ಹಾಯಾಗಿ ಕುಳಿತುಕೊಳ್ಳಬಹುದಾಗಿದೆ. ಬೆನ್ನು ಊರಿ ಹಾಯಾಗಿ ಮಲಗುವ ಪಯಣಿಗರಿಗೆ, ಕೂರುಮಣೆ(Seat) ತುಸು ಹಿಂದೆ ಬರುವಂತೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಕೆಲವರ ಅನಿಸಿಕೆ.

ಓಡಿಸುಗನೆಡೆಗೆ(Driver Cabin) ಬಂದರೆ ಇಲ್ಲಿ ಓಡಿಸುಗನಿಗೆ ಬೇಕಾದ ಎಲ್ಲ ವಿಶೇಶತೆಗಳು ಕಾಣ ಸಿಗುತ್ತವೆ. ಅಗಲವಾದ ತೋರುಮಣೆ(Dash Board) ಬಲು ಅಚ್ಚುಕಟ್ಟಾಗಿ ಮಾಡಲಾಗಿದ್ದು, ಓಟದಳಕ(Odometer), ವೇಗದಳಕ(Speedometer),  ಎಲ್ಲವೂ ಓಡಿಸುಗನಿಗೆ ಸುಳುವಾಗಿ ಕಾಣುವ ಮಟ್ಟದಲ್ಲಿ ಜೋಡಿಸಲಾಗಿದೆ. ತೋರುಮಣೆಯ ಪಕ್ಕದಲ್ಲಿ ತಿಳಿನಲಿ ಏರ‍್ಪಾಟು(Infotainment system) ಹೊಂದಿರುವ ಸೋಕು ತೆರೆ(Touch Screen) ನೋಡಲೆಶ್ಟು ಸೊಗಸಾಗಿದೆಯೋ ಬಳಸಲು ಕೂಡ ಅಶ್ಟು ಸುಳುವಾಗಿದೆ. 7 ಇಂಚಿನ ಸೋಕು ತೆರೆಯ ತಿಳಿನಲಿ ಏರ‍್ಪಾಟಿನಲ್ಲಿ ತಲುಪು ದಾರಿ, ರೇಡಿಯೋ ಮುಂತಾದವುಗಳನ್ನು ಯಾವುದೇ ತೊಡಕಿಲ್ಲದೇ ಬಳಸಬಹುದು. ಆಪಲ್ ಕಾರ್‌ಪ್ಲೇ, ಅಂಡ್ರಾಯ್ಡ್ ಆಟೋ ಇದರಲ್ಲಿ ಇಲ್ಲದಿದ್ದರೂ, ನಿಮ್ಮ ಅಲೆಯುಲಿಯ ಮೂಲಕ ತಿಳಿನಲಿ ಸೋಕು ತೆರೆಯ ಮೇಲೆ ಮಿಂಬಲೆಯನ್ನು ಬ್ರೌಸ್ ಮಾಡುವ ಅವಕಾಶ ನೀಡಿದ್ದು ಹಲವರ ಮೆಚ್ಚುಗೆ ಪಡೆದಿದೆ.  ಮಿಂಬಲೆ ಬ್ರೌಸ್ ಮಾಡಲು ಬಂಡಿಯ ಕೈ ತಡೆತ(Hand Brake/Parking Brake) ಬಳಸಿ ಬಂಡಿಯನ್ನು ನಿಲ್ಲಿಸಿರಲೇಬೇಕು. ಬಂಡಿಯ ಕುಳಿರ‍್ಗಾಳಿ ಏರ‍್ಪಾಟನ್ನು ಸೋಕು ತೆರೆಯ ಮೂಲಕವೇ ಬದಲಾಯಿಸಬಹುದಾಗಿದೆ.

ಡಬ್ಲ್ಯೂಆರ‍್‌ವಿಯ ಇನ್ನೊಂದು ವಿಶೇಶವೆಂದರೆ, ಬೆಳಕಿಂಡಿ(Sunroof). ಈ ಗುಂಪಿಗೆ ಸೇರಿದ ಯಾವುದೇ ಬಂಡಿಗಳಲ್ಲಿ ಸಿಗದ, ಬೆಳಕಿಂಡಿ ಡಬ್ಲ್ಯೂಆರ್‌ವಿ ಬಂಡಿಯಲ್ಲಿ ಕೊಡಮಾಡಲಾಗಿದೆ. ಓಡಿಸುಗನೆಡೆಯಲ್ಲಿ ತೋಳು-ಊರುಕ(Arm Rest) ನೀಡಿದ್ದು , ಒಳಗಡೆ ಅಲೆಯುಲಿಗೆ(Mobile) ಹುರುಪು ತುಂಬುವ ಕಿಂಡಿಯಿದೆ ಮತ್ತು ಅದರಲ್ಲಿ ಚಿಕ್ಕ ಪುಟ್ಟ ಸರಕು ತುಂಬಬಹುದಾಗಿದೆ. ಬಂಡಿಯಲ್ಲಿ, ಬಾಟಲಿ/ಕಪ್ ಸೇರುವೆಗಳು(Bottle/Cup Holders) ಮತ್ತು ಸರಕು ಗೂಡುಗಳನ್ನು ಸಾಕಶ್ಟು ನೀಡಿ ಯಾವುದೇ ಕೊರತೆಯಿರದಂತೆ ನೋಡಿಕೊಂಡಿದ್ದು ಹೋಂಡಾ ಬಿಣಿಯರಿಗರ(Engineers) ಜಾಣ್ಮೆ ತೋರಿಸುತ್ತದೆ. ಬಂಡಿಯ ಕೂರಿರ‍್ಕೆ ಜವಳಿ(Seat Upholstery) ಒಳ್ಳೆಯ ಗುಣಮಟ್ಟದ್ದಾಗಿದೆ. ಅದರಂತೆ ಸ್ಪೋರ‍್ಟಿಯಾಗಿರುವ ಹಲ್ಲುಗಾಲಿಯ ಗುಣಿ(Gear Lever) ಬಿಗಿ ಹಿಡಿತ ನೀಡುತ್ತದೆ. USB ಕಿಂಡಿ, ಬ್ಲೂಟೂತ್ ಕಿಂಡಿಗಳ ಜೊತೆ HDMI ಕಿಂಡಿಯನ್ನು ನೀಡಿದ್ದು ಮಗದೊಂದು ವಿಶೇಶ. HDMI ಮೂಲಕ ನಿಮ್ಮ ಎಣ್ಣುಕವನ್ನು ಸೇರಿಸಿ ಹಾಡು, ಸಿನೆಮಾ, ಓಡುತಿಟ್ಟಗಳನ್ನು ನೋಡಬಹುದು.

ಈ ಬಂಡಿಯಲ್ಲಿ ಹಲವಾರು ಕಾಪಿನ ವಿಶೇಶತೆಗಳನ್ನು(Safety Features) ಅಳವಡಿಸಿದ್ದಾರೆ. ಸಿಲುಕದ ತಡೆತದ ಏರ‍್ಪಾಟು(ABS) ಪ್ರಮುಕ ಕಾಪಿನ ಏರ‍್ಪಾಟುಗಳಲ್ಲೊಂದು. ಬಂಡಿಯ ಎಲ್ಲ ಮಾದರಿಗಳಲ್ಲಿ 2 ಗಾಳಿ ಚೀಲಗಳು(Air Bag) ಜೋಡಣೆಗೊಂಡಿವೆ. ಬೆಲೆ ಹೆಚ್ಚಿರುವ ಮೇಲ್ಮಟ್ಟದ ಮಾದರಿಗಳಲ್ಲಿ ಎಲ್ಲ ಪಯಣಿಗರ ಕಾಪಿಗೆ 6 ಗಾಳಿಚೀಲಗಳನ್ನು ಅಳವಡಿಸಿರುತ್ತಾರೆ. 3 ನೋಟಗಳುಳ್ಳ ನಿಲುಗಡೆಯ ತಿಟ್ಟಕ(Parking Camera), ತಿರುವು ಹಾಗೂ ಇಕ್ಕಟ್ಟಿನ ಜಾಗಗಳಲ್ಲಿ ಬಂಡಿಯ ನೆರವಿಗೆ ಬರಲಿದೆ. ಕದಲ್ಗಾಪು ಏರ‍್ಪಾಟು(Immobilizer), ಓಡಿಸುಗನ ಕಿಂಡಿಗೆ ಚಿವುಟು ಗಾಪು(Pinch Guard), ತಡೆತ ಮೀರುವ ಏರ‍್ಪಾಟುಗಳು(Brake Override System) ಡಬ್ಲ್ಯೂಆರ್‌ವಿಯಲ್ಲಿ ಅಳವಡಿಸಲ್ಪಟ್ಟ ಇತರೆ ಕಾಪಿನ ಏರ‍್ಪಾಟುಗಳಾಗಿರುತ್ತವೆ.

ಪೈಪೋಟಿ

ಕ್ರಾಸೋವರ್ ಬಂಡಿಗಳಂತಿರುವ ವೋಕ್ಸ್‌ವ್ಯಾಗನ್ ಪೋಲೊ ಕ್ರಾಸ್, ಹ್ಯುಂಡಾಯ್ ಐ-20 ಆಕ್ಟೀವ್, ಟೋಯೋಟಾ ಇಟಿಯೋಸ್ ಕ್ರಾಸ್ ಬಂಡಿಗಳೊಂದಿಗೆ ಡಬ್ಲ್ಯೂಆರ್‌ವಿ ಹೋಲಿಕೆ ಮಾಡಬಹುದು. ಈ ಮೂರು ಬಂಡಿಗಳ ಆಯಗಳನ್ನೊಮ್ಮೆ ನೋಡಿದಾಗ, ಐ-20 ಆಕ್ಟೀವ್ ಗಿಂತ ಅಗಲದಲ್ಲಿ ತುಸು ಕಿರಿದಾದರೂ, ಡಬ್ಲ್ಯೂಆರ್‌ವಿ ಇತರೆ ಆಯಗಳಲ್ಲಿ ತಾನೇ ದೊರೆ ಎನ್ನುವುದನ್ನು ದಿಟವಾಗಿಸಿದೆ. ಡಬ್ಲ್ಯೂಆರ್‌ವಿ ಸಾಕಶ್ಟು ಅಗಲ, ಉದ್ದವಾಗಿರುವುದರಿಂದ ಹೆಚ್ಚಿನ ಜಾಗ ಇದರಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ಬಿಣಿಗೆ, ಸಾಗಣಿಗಳ ವಿಶಯದಲ್ಲೂ ತಮ್ಮದೇ ಮೇಲುಗೈ ಎಂದು ಹೋಂಡಾದವರು ತೋರಿಸಿದ್ದಾರೆ. ಮೊದಲಿಗೆ ಪೆಟ್ರೋಲ್: ಇಟಿಯೋಸ್ ಕ್ರಾಸ್ 1.5 ಲೀಟರ್ ಅಳತೆಯ ಬಿಣಿಗೆ ಪಡೆದಿದ್ದರೆ, ಮಿಕ್ಕಿದ್ದೆಲ್ಲ 1.2 ಲೀಟರ್ ಅಳತೆಯ ಬಿಣಿಗೆ ಪಡೆದಿವೆ. ಬಿಣಿಗೆ ಚಿಕ್ಕದಾದರೂ ಹೆಚ್ಚಿನ ಕಸುವಿನ ಬಲಬೀಮ ತಾನೇ ಎಂದು ಡಬ್ಲ್ಯೂಆರ್‌ವಿ ಸಾಬೀತು ಮಾಡಿದೆ. ತಿರುಗುಬಲ ಉಂಟು ಮಾಡುವುದರಲ್ಲಿ ಇಟಿಯೋಸ್ ಕ್ರಾಸ್ ತನ್ನ ಮುಂದಾಳತ್ವ ತೋರಿದೆ, ಮಿಕ್ಕ ಮಾದರಿಗಳೆಲ್ಲ ಹೆಚ್ಚು ಕಡಿಮೆ ಒಂದೇ ಸಮನಾಗಿವೆ. ಮಯ್ಲಿಯೋಟದ ವಿಶಯದಲ್ಲಿ  ಡಬ್ಲ್ಯೂಆರ್‌ವಿಗೆ ಎರಡನೇ ಸ್ತಾನ. ಎಲ್ಲ ನಾಲ್ಕು ಬಂಡಿಗಳಿಗೆ 5-ವೇಗದ ಓಡಿಸುಗನಿಡಿತದ ಸಾಗಣಿ.

ಡೀಸೆಲ್ ಬಿಣಿಗೆ ಮತ್ತು ಸಾಗಣಿ ಹೋಲಿಕೆ

ಪೋಲೊ ಕ್ರಾಸ್ ಮತ್ತು ಡಬ್ಲ್ಯೂಆರ್‌ವಿ 1.5 ಲೀಟರ್ ಅಳತೆಯ ಬಿಣಿಗೆ ಪಡೆದರೆ, ಇಟಿಯೋಸ್ ಕ್ರಾಸ್ ಮತ್ತು ಆಕ್ಟೀವ್ ಐ-20 1.4 ಲೀಟರ್ ಅಳತೆಯ ಬಿಣಿಗೆ ಹೊಂದಿವೆ. ಇಲ್ಲಿಯೂ ಕಸುವಿನಲ್ಲಿ ಡಬ್ಲ್ಯೂಆರ್‌ವಿಯೇ ಬಲಶಾಲಿ. ಪೋಲೊ ಕ್ರಾಸ್ ಬಂಡಿಯ ಬಿಣಿಗೆ ಹೆಚ್ಚಿನ ತಿರುಗುಬಲ ಉಂಟು ಮಾಡುತ್ತದೆ.  ಡಬ್ಲ್ಯೂಆರ್‌ವಿ ಮತ್ತು ಐ-20 ಬಂಡಿಗಳಿಗೆ 6-ವೇಗದ ಓಡಿಸುಗನಿಡಿತದ ಸಾಗಣಿ ಇದ್ದರೆ, ಉಳಿದೆರಡು ಬಂಡಿಗಳಿಗೆ 5-ವೇಗದ ಸಾಗಣಿಗಳಿವೆ. ಮಯ್ಲಿಯೋಟದಲ್ಲೂ ಡಬ್ಲ್ಯೂಆರ್‌‌ವಿ ಇತರೆ ಬಂಡಿಗಳಿಗಿಂತ ಮುಂದಿದೆ.

ಬೆಲೆ

6 ಬಗೆಯ ಬಣ್ಣಗಳಲ್ಲಿ ಮಾರಾಟವಾಗುತ್ತಿರುವ ಡಬ್ಲ್ಯೂಆರ್‌ವಿ ಬಂಡಿಯ ಪೆಟ್ರೋಲ್ ಮಾದರಿಗಳು ಸುಮಾರು 7.88 ಲಕ್ಶ ರೂಪಾಯಿಗಳಿಂದ 9.10 ಲಕ್ಶ ರೂಪಾಯಿಗಳಲ್ಲಿ ದೊರೆಯಲಿವೆ. ಇದೇರೀತಿ ಡೀಸೆಲ್ ಮಾದರಿಗಳು 8.92 ಲಕ್ಶರೂಪಾಯಿಗಳಿಂದ 10 ಲಕ್ಶಗಳವರೆಗೆ ದೊರೆಯಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆ: hondacarindia.comauto.economictimes.indiatimes.comautocarindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: