ತಾಯ್ತನದ ಅವ್ಯಾಜ ಪ್ರೀತಿ
– ವಿನು ರವಿ.
ಅಂದು ಗೆಳತಿಯ ಮನೆಗೆ ಕಾಲಿಟ್ಟಾಗ ಇಳಿಸಂಜೆ
ಹಗಲ ಜೀವದ ತ್ರಾಣ ಕಳೆದು
ಬೆಳಕ ಬ್ರಮೆ ಮರೆಯಾಗಿತ್ತು
ಇರುಳ ಚಾಯೆ ಆವರಿಸಿತ್ತು
ಗೆಳತಿಯ ಆತ್ಮೀಯತೆಯಲ್ಲಿ
ಒಳಮನೆಯೊಳಗೆ ಎದುರುಗೊಂಡದ್ದು ಆ ಹಿರಿಜೀವ
ವಾರ ಒಪ್ಪತ್ತಿನಲ್ಲಿ ಬಸವಳಿದಿದ್ದರೂ
ಉಪವಾಸದಿಂದ ಆಯಾಸವಾಗಿದ್ದರೂ
ದೈವೀಕ ಕಳೆಯಲ್ಲಿ ಹೊಳೆಯುತ್ತಿದ್ದ ಕಂಗಳಲ್ಲಿ
ಅದೇನು ಶಾಂತತೆ
ಚಂದ್ರನ ಕಿರಣದ ತಂಪಿನಂತೆ
ಹಿತವಾದ ಸ್ವಾಗತ
‘ಬಾ ಮಗ ಕೂತ್ಕೋ…’
ಪಕ್ಕದಲ್ಲೇ ಕುಳ್ಳಿರಿಸಿಕೊಂಡು
ಬೆನ್ನು ಸವರಿ ನಕ್ಕಾಗ
ಜಗದ ಅನುಬವದ ತೊಟ್ಟಿಲು ತೂಗಿ
ಜೋಗುಳ ಹಾಡಿದಂತಿತ್ತು
ತುರುಬು ಕಟ್ಟದೇ ಸೊಂಪಾದ
ಕೂದಲು ಶಾಂತಿ ಬಾವುಟದಂತೆ ಹಾರಾಡುತಿತ್ತು
ಉಟ್ಟ ಬಿಳಿಯ ಸೀರೆ
ಸಡಿಲವಾದ ಕುಪ್ಪಸ
ನಿರಿಗೆ ಹಿಡಿದ ಕೈಗಳಲ್ಲಿ
ಮನೆಯ ನೊಗದ ಬಾರದ ಮುದ್ರೆ
ಊಟ ಮಾಡಿಕೊಂಡೇ ಹೋಗಬೇಕೆಂಬ ಗೆಳತಿಯ
ಒತ್ತಾಯಕ್ಕೆ ಮಣಿದಾಗ
ಹಿರಿಯ ಜೀವ ಮಾತಿನ ಮಾಲೆ
ಕಟ್ಟತೊಡಗಿತು, ಮಗನ ಗುಣಗಾನ ಮಾಡುತ್ತಲೇ
“ಈ ಜೀವದ ಜಾತ್ರಿ ಮಗಿದೈತಿ
ಕಾಗೆ ಗೂಬೆಗಳಿಗೆಲ್ಲಾ ಸುಕವಾದ ನಿದ್ರೆ
ಈ ವಯಸ್ಸಾದ ಜೀವಕ್ಕೆನಿದಿರೆಯ ಸುಕವಿಲ್ಲ
ಬೇರೇನು ಆಸೆಯಿಲ್ಲ
ದರ್ಮರಾಯನಂತ ಮಗ
ನನಗಿಟ್ಟ ಆಯಸ್ಸೆಲ್ಲಾ
ನನ್ನ ಮಗನಿಗೇ ಕೊಡಲವ್ವ”
ಎಂದು ನುಡಿವಾಗ
ತಾಯ್ತನದ ಅವ್ಯಾಜ ಪ್ರೀತಿಗೆ
ಬೆರಗಾಗಿ ನನ್ನೊಳಗಿನ ವಾತ್ಸಲ್ಯ ಇಮ್ಮಡಿಯಾಗಿತ್ತು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು