ಯಶಸ್ವಿಯಾಗಿ ನಡೆದ ಹೊನಲು 5ನೇ ಹುಟ್ಟುಹಬ್ಬದ ಕಾರ‍್ಯಕ್ರಮ

– ಹೊನಲು ತಂಡ.
5ವರುಶ, 5years

ಹತ್ತು ಹಲವಾರು ವಿಶಯಗಳ ಕುರಿತು ಬರಹಗಳನ್ನು ಮೂಡಿಸುತ್ತಾ ಮುನ್ನಡೆಯುತ್ತಿರುವ ಕನ್ನಡಿಗರ ಮೆಚ್ಚಿನ ಆನ್ಲೈನ್ ಮ್ಯಾಗಜೀನ್ ‘ಹೊನಲು’ವಿನ 5ನೇ ವರುಶದ ಕಾರ‍್ಯಕ್ರಮವು ಮೇ 26, 2018 ರಂದು, ಬೆಂಗಳೂರಿನ ಬನಶಂಕರಿಯಲ್ಲಿರುವ  ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ಯಶಸ್ವಿಯಾಗಿ ನಡೆಯಿತು. ಹೆಸರಾಂತ ನಿಗಂಟು ತಗ್ನ ದಿವಂಗತ ಪ್ರೊ|| ಎಂ ಮರಿಯಪ್ಪ ಬಟ್ ರ ಮಗಳಾದ ಶ್ರೀಮತಿ ಶಾರದಾ ಜಯಗೋವಿಂದ್ ಹಾಗೂ ನಿವ್ರುತ್ತ ಕನ್ನಡ ಪ್ರಾದ್ಯಾಪಕರು ಮತ್ತು ಹಿರಿಯ ಬರಹಗಾರರದ ಶ್ರೀ ಸಿ.ಪಿ ನಾಗರಾಜ್  ಅವರು ವೇದಿಕೆಯನ್ನು ಅಲಂಕರಿಸಿದ್ದ ಗಣ್ಯರಾಗಿದ್ದರು. ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಬೇರೆ ಬೇರೆ ಬಾಗಗಳಿಂದ ಬರಹಗಾರರು ಮತ್ತು ಓದುಗರು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದುದು ಕಾರ‍್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು.

ಹೊನಲು ನಡೆಸುಗರಲ್ಲಿ ಒಬ್ಬರಾದ ಅನ್ನದಾನೇಶ ಸಂಕದಾಳ ಅವರು ಕಾರ‍್ಯಕ್ರಮದ ಪ್ರಾಸ್ತಾವಿಕ ಮಾತುಗಳಾಡುತ್ತಾ, ಹೊನಲುವಿನ ಉದ್ದೇಶ ಮತ್ತು ಹೊನಲು ನಡೆದು ಬಂದ ಹಾದಿಯನ್ನು ವಿವರಿಸಿದರು.  ಬಳಿಕ ಮಾತಾಡಿದ ನಿವ್ರುತ್ತ ಇಂಗ್ಲೀಶ್ ಪ್ರಾದ್ಯಾಪಕಿ ಶ್ರೀಮತಿ ಶಾರದಾ ಜಯಗೋವಿಂದ್ ಅವರು, ‘2000 ಸಾವಿರ ವರುಶದ ಕನ್ನಡವೆಂಬ ಅಜ್ಜಿಗೆ 5 ವರುಶದ ಚೆಂದದ ಮೊಮ್ಮಗು ಈ ಹೊನಲು ತಾಣ’ ಎಂದು ಹೇಳುತ್ತಾ ತಮ್ಮ ಮಾತನಾರಂಬಿಸಿದರು. ಸರಳ ರೀತಿಯಲ್ಲಿ ನೂರಾರು ವಿಶಯಗಳ ಸುತ್ತ ಅನೇಕ ಸಂಕ್ಯೆಯಲ್ಲಿ ಬರಹಗಾರರು ಹೊನಲಿಗಾಗಿ ಬರೆಯುತ್ತಿರುವುದು ನಿಜಕ್ಕೂ ಒಂದು ಮಹತ್ತರವಾದ ಸಾದನೆ ಎಂದು ಮೆಚ್ಚುಗೆಯ ಮಾತುಗಳಾಡಿದರು. ಈಗಿರುವ ವಿಶಯಗಳ ಬಗ್ಗೆ ಬರಹಗಳು ಮಾತ್ರವಲ್ಲದೇ, ಕನ್ನಡದ ಒಳನುಡಿಗಳಾದ ಹವ್ಯಕ ಕನ್ನಡ, ಕುಂದಗನ್ನಡದಲ್ಲೂ ಹೆಚ್ಚು ಹೆಚ್ಚು ಬರಹಗಳು ಮೂಡಿಬರಲಿ ಎಂದು ಸಲಹೆ ನೀಡಿದರು.

ಅನಂತರ ಮಾತಾಡಿದ ಶ್ರೀ ಸಿ ಪಿ ನಾಗರಾಜ್ ಅವರು ಕನ್ನಡದ ಬರಹದಲ್ಲಿನ ಗೊಂದಲದಿಂದಾಗಿ ಸಾಕಶ್ಟು ಜನರು ಬರವಣಿಗೆಯಿಂದ ಹಿಂಜರಿಯುವಂತಹ ಸ್ತಿತಿ ಇಂದಿದೆ. ಆದ್ದರಿಂದ ಹೆಚ್ಚು ಹೆಚ್ಚು ಕನ್ನಡಿಗರು ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಕನ್ನಡ ಬರಹದ ಸುದಾರಣೆಯ ಕುರಿತ ಚರ‍್ಚೆ ಪ್ರಾಮುಕ್ಯತೆ ಪಡೆದುಕೊಳ್ಳುತ್ತದೆ.  ಹೊನಲು ಮ್ಯಾಗಜೀನ್ ನಲ್ಲಿ  ಸರ‍್ವಜ್ನ, ಅಲ್ಲಮ, ಅಕ್ಕ ಮಹಾದೇವಿ ಮತ್ತು ಇತರ ಶಿವಶರಣ-ಶರಣೆಯರ ವಚನಗಳ ಬಗ್ಗೆ 90ಕ್ಕೂ ಹೆಚ್ಚು ಬರಹ ಮಾಡಿರುವ ಸಿ.ಪಿ. ನಾಗರಾಜ್ ಅವರು ಹೊನಲಿನ ಯುವ ತಂಡದವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.

ಹೊನಲಿನಲ್ಲಿ 100 ಕ್ಕೂ ಹೆಚ್ಚು ಬರಹಗಳನ್ನು ಮಾಡಿರುವ ಜಯತೀರ‍್ತ ನಾಡಗೌಡ ಮತ್ತು 50 ಕ್ಕೂ ಹೆಚ್ಚು ಬರಹ ಮಾಡಿರುವ ಬಸವರಾಜ್ ಕಂಟಿಯವರು ಹೊನಲುವಿನ ಬಗ್ಗೆ, ತಮ್ಮ ಬರಹಗಳ ಬಗ್ಗೆ ಮಾತಾಡುತ್ತಾ ತಮ್ಮ ಅನುಬವಗಳನ್ನು ಹಂಚಿಕೊಂಡರು. ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ಹೊನಲುವಿನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಾ, ಓದುಗರಾಗಿ ತಾವು ಯಾವ ವಿಶಯಗಳ ಕುರಿತಾದ ಬರಹಗಳನ್ನು ಹೊನಲಿನಲ್ಲಿ ಎದುರು ನೋಡುತ್ತಿರುವುದರ ಬಗ್ಗೆ ಮಾತನಾಡಿದರು.

ಹೊನಲು 5 ವರುಶ ಪೂರೈಸಿದರ ಸಲುವಾಗಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಗೆ, ತಮ್ಮ ಬರಹಗಳನ್ನು ಕಳಿಸುವ ಮೂಲಕ ಬಹಳಶ್ಟು ಬರಹಗಾರರು ಈ ಸ್ಪರ‍್ದೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತೀರ‍್ಪುಗಾರರು 5 ಕವಿತೆ ಮತ್ತು 3 ಕತೆಗಳನ್ನು ಆಯ್ಕೆ ಮಾಡಿದ್ದರು. ತೀರ‍್ಪುಗಾರರು ಆಯ್ಕೆ ಮಾಡಿದ ಕವಿತೆ ಮತ್ತು ಕತೆಗಳ ಬರಹಗಾರರಿಗೆ ಈ ಕಾರ‍್ಯಕ್ರಮದಲ್ಲಿ ಬಹುಮಾನ ನೀಡಲಾಯಿತು.

ತೀರ‍್ಪುಗಾರರು ಆಯ್ಕೆ ಮಾಡಿದ ಬರಹಗಳು:

ಕವಿತೆಗಳು ಮತ್ತು ಬರಹಗಾರರು:

  • ‘ಬೇಸಿಗೆ’ — ಪ್ರಬು ರಾಜ
  • ‘ಬೂತ’ — ಪವಮಾನಪ್ರಸಾದ್ ಅತಣಿ
  • ‘ತೆರೆದ ಬಾಗಿಲು’ — ಕೆ ಜನಾರ‍್ದನ
  • ‘ನನ್ನ ಗೆಳೆಯ ಸೂರಿ’ — ದೀಪು
  • ‘ವಿದಾಯ(ಸದ್ಯ ಈಗಲಾದರೂ ಬಂದೆಯಲ್ಲಾ)’ — ಸಂದೀಪ ಔದಿ

ಕತೆಗಳು ಮತ್ತು ಬರಹಗಾರರು:

  • ‘ಆಳ’ — ಪ್ರಕಾಶ್ ಎಸ್ ವಿ
  • ‘ಕುಳವಾಡಿಕೆ ಕೋಳಿ’ — ಮಾದು ಪ್ರಸಾದ
  • ‘ಬದುಕು ಚದುರಂಗ’ — ಈಶ್ವರ ಹಡಪದ

ಹೊನಲು ಬಳಕ, Honalu App

ಹೊನಲು ನಡೆಸುಗರಾದ ವಿಜಯಮಹಾಂತೇಶ ಮುಜಗೊಂಡ ಅವರು, ಹೊಸತನ ಮೈಗೂಡಿಸಿಕೊಂಡು ಹೊಸ ರೂಪದಲ್ಲಿ ಹೊರ ಬಂದಿರುವ ಹೊನಲು ಬಳಕದ(App) ಎರಡನೇ ವರಸೆಯ(v2.0) ಪರಿಚೆಗಳನ್ನು ತಿಳಿಸಿಕೊಟ್ಟರು. ಬಳಿಕ ತೆರೆಯ ಮೇಲೆ ತೋರಿಸಲಾದ ಹೊನಲುವಿನ 5 ವರುಶದ ಹಾದಿಯ ವಿಡಿಯೋಗೆ, ಕಿಕ್ಕಿರಿದ್ದು ಸೇರಿದ್ದ ಜನರು ಚಪ್ಪಾಳೆಯ ಮೂಲಕ ಮೆಚ್ಚುಗೆ ತೋರಿಸಿದರು. ನಂತರ ನಡೆಸುಗರಾದ ರತೀಶ್ ರತ್ನಾಕರ್ ಹೊನಲುವಿನ ಹಲವಾರು ಕವಲುಗಳ ಬಗ್ಗೆ ವಿವರಿಸುತ್ತಾ, ಸಬೆಯಲ್ಲಿದ್ದವರ ಜೊತೆ ಸಂವಾದವನ್ನು ನಡೆಸಿದರು. ದೂರದ ಊರುಗಳಿಂದ ಬಂದ ಹೊನಲುವಿನ ಓದುಗರು ಮತ್ತು ಬರಹಗಾರರು ಹೊನಲು ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಹೊನಲು ಬರಹಗಾರರು ಮತ್ತು ಓದುಗರ ದೊಡ್ಡ ಬಳಗ ಒಂದೆಡೆ ಸೇರಿದ್ದನ್ನು ನೋಡಿದ ನಲಿವು ನಮ್ಮದಾಗಿತ್ತು. ಇಂದು ಹೊನಲು ವರುಶಗಳನ್ನು ದಾಟಿ ಮುನ್ನಡೆಯುತ್ತಿದ್ದರೆ, ಅದರ  ಪೂರ‍್ತಿ ಶ್ರೇಯಸ್ಸು, ಕೀರ‍್ತಿ ಬರಹಗಾರರಿಗೆ ಮತ್ತು ಓದುಗರಿಗೇ ಸಲ್ಲಬೇಕು. ಅವರೇ ಹೊನಲುವಿನ ಬೆನ್ನೆಲುಬು ಮತ್ತು ಮುಂದಿನ ದಿನಗಳಲ್ಲಿ ಹೊನಲು ಮತ್ತಶ್ಟು ಮೈಲುಗಲ್ಲುಗಳನ್ನು ಅವರಿಂದಾಗಿ ದಾಟುವುದು ಎಂಬ ನಂಬಿಕೆ ನಮ್ಮದಾಗಿದೆ.

ಮತ್ತೊಮ್ಮೆ ನಿಮ್ಮ ಬೆಂಬಲಕ್ಕೆ ನಮ್ಮ ಮನದಾಳದ ನನ್ನಿ. ನಿಮ್ಮ ಬೆಂಬಲ ಹೊನಲಿಗೆ ಹೀಗೇ ಮುಂದುವರೆಯುತ್ತಿರಲಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Chakra Bhadravathi says:

    ಕಾರ್ಯಕ್ರಮಕ್ಕೆ ನಾನು ಭಾಗವಹಿಸಿದ್ದೆ ಚೆನ್ನಾಗಿ ನಡೆಯಿತು ಧನ್ಯವಾದಗಳು .

  2. padmanabha d says:

    ಯಶೋಗಾಥೆ ಹೀಗೆಯೆ ಮುಂದುವರೆಯಲಿ

  3. Sandeep A says:

    ಹೊನಲು ತಂಡಕ್ಕೆ ಹಾರೈಕೆಗಳು….. ಎಲ್ಲರೂ ಒಂದೇ ಕಡೆ ಸೇರಿ ಸಂತಸ ಹಂಚಿಕೊಂಡದ್ದು ಮುದ ನೀಡಿತು

padmanabha d ಗೆ ಅನಿಸಿಕೆ ನೀಡಿ Cancel reply

%d bloggers like this: