ಗೋಟ್ಮಾರ್ ಮೇಳ – ಇದು ಕಲ್ಲೆಸೆಯುವ ಕಾಳಗ!

– ಕೆ.ವಿ.ಶಶಿದರ.

gotmar ಗೋಟ್ಮಾರ್

ಮದ್ಯಪ್ರದೇಶದ ಪಂದುರ‍್ನಾ ಮತ್ತು ಸಾವರ‍್ಗೌನ್ ಎಂಬೆರಡು ಹಳ್ಳಿಯ ನಿವಾಸಿಗಳು ಜಾಮ್ ನದಿಯ ಆಚೀಚೆ ದಡದಲ್ಲಿ ಸೇರಿ, ‘ಗೋಟ್ಮಾರ್ ಮೇಳ’ ಎಂಬ ಕಲ್ಲು ಎಸೆಯುವ ಆಚರಣೆಯಲ್ಲಿ
ಪ್ರತಿವರುಶ ತೊಡಗುತ್ತಾರೆ. ಈ ವಿಚಿತ್ರ ಆಚರಣೆ ಕಳೆದ ಮೂರು ನೂರು ವರುಶಗಳಿಂದ ನಡೆದುಕೊಂಡು ಬಂದಿದೆ. ಈ ಮೇಳ ಕೊನೆಗೊಳ್ಳುವ ವೇಳೆಗೆ ಬಲವಾದ ಕಲ್ಲಿನ ಏಟಿನಿಂದ ರಕ್ತಸ್ರಾವವಾಗಿ ಹಲವರು ಪ್ರಾಣ ಕಳೆದುಕೊಂಡರೆ ಮತ್ತೆ ನೂರಾರು ಜನ ಗಾಯಾಳುಗಳಾಗಿ ಆಸ್ಪತ್ರೆ ಸೇರುತ್ತಾರೆ!

ಮದ್ಯ ಪ್ರದೇಶದ ಚಿಂದ್ವಾರ ಜಿಲ್ಲೆಯ ಚಿಂದ್ವಾರದಿಂದ ಅಂದಾಜು 72 ಕಿಲೋಮೀಟರ್ ದೂರದಲ್ಲಿರುವ ಪಂದುರ‍್ನಾ ಮತ್ತು ಜಾಮ್ ನದಿಯ ಆಚೆ ದಡದಲ್ಲಿರುವ ಸಾವರ‍್ಗೌನ್ ಈ ಬಯಾನಕ, ಕ್ರೂರ, ಅಮಾನವೀಯ ಆಚರಣೆಯ ಕೇಂದ್ರ ಬಿಂದುಗಳು.

ಶತಮಾನಗಳಶ್ಟು ಹಳೆಯದಾದ ಗೋಟ್ಮಾರ್ ಮೇಳದ ಕಲ್ಲಿನ ಯುದ್ದ ಪ್ರತಿ ವರ‍್ಶ ಬಾದ್ರಪದ ಮಾಸದ ಎರಡನೇ ದಿನ ನಡೆಯುತ್ತದೆ. ಗೋಟ್ಮಾರ್ ಮೇಳ ನಡೆಯುವ ದಿನಕ್ಕಿಂತ ಮುಂಚಿತವಾಗಿ ಜಾಮ್ ನದಿಯ ಮದ್ಯಬಾಗದಲ್ಲಿ ದೊಡ್ಡ ಮರದ ಕಾಂಡವನ್ನು ನೇರವಾಗಿ ದ್ವಜ ಸ್ತಂಬದಂತೆ ಹೂಳಲಾಗುತ್ತದೆ. ಅದರ ತುತ್ತ ತುದಿಯಲ್ಲಿ ದ್ವಜ ಹಾರಿಸಲಾಗುತ್ತದೆ. ಗೋಟ್ಮಾರ್ ಮೇಳದ ದಿನ ಪಂದುರ‍್ನಾ ಮತ್ತು ಸಾವರ‍್ಗೌನ್ ನಿವಾಸಿಗಳು, ಎಸೆಯಲು ಸಾದ್ಯವಾಗುವಂತಹ ಕಲ್ಲುಗಳನ್ನು ಆಯ್ದು, ಹೊತ್ತು ತಂದು ತಮ್ಮ ತಮ್ಮ ದಡಗಳಲ್ಲಿ ಸೇರುತ್ತಾರೆ.

ಅವರಲ್ಲಿ ಅತಿ ದೈರ‍್ಯವಂತನೊಬ್ಬ ನೀರಿನಲ್ಲಿ ದುಮುಕಿ ದ್ವಜವನ್ನು ಹಾರಿಸಿರುವ ಮರದ ಕಾಂಡದತ್ತ ದಾವಿಸುತ್ತಾನೆ. ಮರದ ಕಾಂಡದ ಮೇಲೆ ರಾರಾಜಿಸುತ್ತಿರುವ ದ್ವಜದ ಮೇಲೆ ಅವನ ಗುರಿ ಇರುತ್ತದೆ. ಆ ಕಾಂಡದ ಮೇಲಿರುವ ದ್ವಜವನ್ನು ಯಾವ ಹಳ್ಳಿಯವರು ಮೊದಲು ಪಡೆಯುವರೋ ಅವರು ವಿಜಯಶಾಲಿಗಳು.

ಸಾವು ನೋವಿನ ಈ ಆಚರಣೆ ಇನ್ನೂ ಜೀವಂತವಾಗಿದೆ!

ಮರದ ಕಾಂಡದತ್ತ ನುಗ್ಗುವವರತ್ತ ಆಚೆ ದಡದಲ್ಲಿರುವ ಹಳ್ಳಿಯ ಜನ ತಾವು ಕೂಡಿಟ್ಟುಕೊಂಡಿರುವ ಕಲ್ಲುಗಳನ್ನು ಬೀಸಿ ಒಗೆದು ಅವನು ಕಾಂಡದ ಬಳಿ ಸುಳಿಯದಂತೆ ಎಚ್ಚರವಹಿಸುತ್ತಾರೆ. ಇದೇ ರೀತಿ ಎದರು ಹಳ್ಳಿಯವರೂ ಸಹ ಕ್ರಮ ಜರುಗಿಸುವುದರಿಂದ ಕಲ್ಲಿನ ಸುರಿಮಳೆ ಎಡೆಬಿಡದೆ ನಡೆಯುತ್ತದೆ. ಕಲ್ಲಿನ ಸುರಿಮಳೆಯಿಂದ ಕಾಪಾಡಿಕೊಳ್ಳಲು ನೆರೆದಿದ್ದ ಜನ ಆಚೀಚೆ ದಾವಿಸುವಾಗ ಆಗಬಹುದಾದ ಕಾಲ್ತುಳಿತ, ಕಲ್ಲಿನ ಹೊಡೆತ ಇವುಗಳಿಂದ ಪ್ರಾಣ ಕಳೆದು ಕೊಳ್ಳುವವರು ಬೆರಳೆಣಿಕೆಯಶ್ಟಾದರೆ ಗಾಯಗೊಳ್ಳುವವರು ನೂರಾರು ಮಂದಿ.

ಗೋಟ್ಮಾರ್ ಮೇಳದ ನಿಯಮ ಬಹಳ ಸರಳ. ಇದರಲ್ಲಿ ಬಾಗವಹಿಸುವವರು ಅಂದರೆ ದ್ವಜವನ್ನು ತರಲು ಪ್ರಯತ್ನಿಸುವವರು ಇದೇ ತಮ್ಮ ಜೀವನದ ಅಂತಿಮ ದಿನ ಎಂದು ತಿಳಿದಿರಬೇಕು ಅಶ್ಟೆ. ಪಂದುರ‍್ನಾ ಮತ್ತು ಸಾವರ‍್ಗೌನ್‍ನ ನಿವಾಸಿಗಳ ಈ ಕಲ್ಲು ಎಸೆಯುವ ಆಚರಣೆ ವಿಶ್ವದಲ್ಲೇ ಅತಿ ಬಯಾನಕ, ಕ್ರೂರ ಹಾಗೂ ರಕ್ತಮಯ ಸಂಪ್ರದಾಯಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಇಂತಹ ಕ್ರೂರ ಅಮಾನವೀಯ ಸಂಪ್ರದಾಯ ಇನ್ನೂ ಜೀವಂತವಾಗಿರುವುದು ಆಶ್ಚರ‍್ಯದ ಸಂಗತಿ.

ಸ್ತಳೀಯ ಆಡಳಿತ ಈ ಹಿಂಸಾತ್ಮಕ ಆಚರಣೆ ಕೈಬಿಡುವಂತೆ ಎರಡೂ ಗ್ರಾಮಸ್ತರ ಮನವೊಲಿಸಲು ಹಾಗೂ ಈ ಆಚರಣೆಗೆ ನಿಶೇದ ಹೇರಲು ಪಟ್ಟ ಪ್ರಯತ್ನ ವಿಪಲವಾಗಿದೆ. ಆಚರಣೆಯ ತೀವ್ರತೆಯನ್ನು ಕಡಿಮೆ ಮಾಡಲು ಸ್ತಳೀಯ ಆಡಳಿತವು 2001 ಮತ್ತು 2002ರಲ್ಲಿ ಕಲ್ಲುಗಳ ಬದಲಾಗಿ ರಬ್ಬರ್ ಚೆಂಡು ಬಳಸುವಂತೆ ಗ್ರಾಮಸ್ತರನ್ನು ಮನವೊಲಿಸಲು ಪಟ್ಟ ಪ್ರಯತ್ನ ಸಹ ಪಲ ಕೊಡಲಿಲ್ಲ.

ವರ‍್ಶ ವರ‍್ಶವೂ ಈ ಮೇಳವನ್ನು ತಡೆಯಲು ನಡೆಸಿದ ಪ್ರಯತ್ನಗಳು ನಿಶ್ಪಲವಾದ ಹಿನ್ನೆಲೆಯಲ್ಲಿ ಸ್ತಳೀಯ ಆಡಳಿತವು ಜನರ ಹಿತರಕ್ಶಣೆಗಾಗಿ ಗಾಯಗೊಂಡವರಿಗೆ ತ್ವರಿತ ವೈದ್ಯಕೀಯ ಸಹಾಯವನ್ನು ನೀಡುವ ಕಾರ‍್ಯವನ್ನು ಚಾಚೂ ತಪ್ಪದಂತೆ ನಿರ‍್ವಹಿಸುತ್ತಿದೆ. ಇಲ್ಲಿಯವರೆಗೆ ಸಿಕ್ಕಿರುವ ದಾಕಲೆಗಳಂತೆ, 2008ರಲ್ಲಿನ ಮೇಳದಲ್ಲಿ 800 ಮಂದಿ ಗಾಯಗೊಂಡಿದ್ದು, ಒಬ್ಬ ಮಾತ್ರ ಪ್ರಾಣ ಕಳೆದುಕೊಂಡ. 2012 ಸ್ತಳೀಯ ಆಡಳಿತದ ಪಾಲಿಗೆ ಉತ್ತಮ ವರ‍್ಶವಾಗಿತ್ತು. ಆ ವರ‍್ಶ ಕೇವಲ 329 ಮಂದಿ ಮಾತ್ರ ಗಾಯಗೊಂಡರು. ಏಳು ಮಂದಿಯ ಸ್ತಿತಿ ಗಂಬೀರವಾಗಿತ್ತು.

ಈ ಆಚರಣೆಯ ಹಿಂದಿರುವ ಕತೆಯೇನು?

ಸ್ತಳೀಯ ದಂತ ಕತೆಯ ಪ್ರಕಾರ, ಗೋಟ್ಮಾರ್ ಮೇಳದ ಆಚರಣೆ ಪಂದುರ‍್ನಾ ರಾಜನ ಕತೆಯಿಂದ ಪ್ರೇರಿತವಾಗಿದೆ. ಈ ರಾಜ ಸಾವರ‍್ಗೌನ್ ರಾಜನ ಮಗಳ ಸೌಂದರ‍್ಯದ ಬಗ್ಗೆ ಕೇಳಿದ ಮೇಲೆ ಆಕೆಯನ್ನು ಹೇಗಾದರೂ ಮಾಡಿ ಪಡೆಯುವ ಹಂಬಲ ಹೆಚ್ಚಾಯಿತು. ದೈರ‍್ಯ ಸಾಹಸಗಳಿಗೆ ಹೆಸರಾದ ಆತ ನದಿ ದಾಟಿ ಹೋಗಿ ಆಕೆಯನ್ನು ಅಪಹರಿಸಿದ. ಸಾವರ‍್ಗೌನ್‍ನ ಪ್ರಜೆಗಳಿಗೆ ಈ ವಿಶಯ ತಿಳಿಯುತ್ತಿದ್ದಂತೆ ಆವರು ಅಪಹರಣಕಾರನನ್ನು ಹಿಡಿಯಲು ದೌಡಾಯಿಸಿದರು. ಅವರು ಬರುವ ವೇಳೆಗೆ ಪಂದುರ‍್ನಾದ ರಾಜ ನದಿ ದಾಟಿದ್ದ. ಆದರೂ ದ್ರುತಿಗೆಡದ, ಚಲ ಬಿಡದ ಸಾವರ‍್ಗೌನ್ ಪ್ರಜೆಗಳು ಕಲ್ಲುಗಳನ್ನು ಆಯ್ದು ಬೀಸಿ ಆತನತ್ತ ಒಗೆದರು.

ಇದನ್ನರಿತ ಪಂದುರ‍್ನಾ ರಾಜ್ಯದ ಪ್ರಜೆಗಳು ತಮ್ಮ ರಾಜನನ್ನು ಕಾಪಾಡಲು ದಾವಿಸಿದರು. ಅವರು ಕೂಡ ತಮ್ಮ ಕಡೆಯ ನದಿಯ ದಡದಲ್ಲಿದ್ದ ಕಲ್ಲುಗಳಿಂದ ಸಾವರ‍್ಗೌನ್ ಪ್ರಜೆಗಳತ್ತ ಬೀಸಿ ಒಗೆದು ಸೇಡು ತೀರಿಸಿಕೊಂಡರು. ತಮ್ಮ ರಾಜ ಸುರಕ್ಶಿತವಾಗಿ ಅರಮನೆಯನ್ನು ತಲುಪಲು ಅವಕಾಶ ಕಲ್ಪಿಸಿಕೊಟ್ಟರು.

ಈ ದಿನಕ್ಕೂ ಗಾಟ್ಮಾರ ಮೇಳ ಎಂಬ ಎದುರಾಳಿಯ ಮೇಲೆ ಕಲ್ಲು ಬೀಸುವ ಆಚರಣೆ ಒಂದು ರೀತಿಯ ಸಂಪ್ರಾದಾಯವಾಗಿ ಉಳಿದಿದೆ.

(ಮಾಹಿತಿ ಸೆಲೆ: odditycentral.comindiatoday.in, jansatta.com)
(ಚಿತ್ರ ಸೆಲೆ: hindustantimes)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *