ಕರಿ ಪಾಟಿ
ತಪ್ಪದೆ ನನ್ನನು ಪ್ರೀತಿಸುತಿದ್ದರು
ಇರಿಸಿ ಶಾಲೆಯ ಚೀಲದಲಿ
ಅಕ್ಶರ ತೀಡಿ ನಲಿಯುತಲಿದ್ದರು
ವಿದ್ಯೆ ಕಲಿಯುತ ಹರುಶದಲಿ!
ಹೇಳದಂತಹ ಮುದವಿರುತಿತ್ತು
ಹೂವು ಬೆರಳಿನ ಸ್ಪರ್ಶದಲಿ
ಹದವಿರುತಿತ್ತು ಅ ಆ ಇ ಈ
ಬರೆಯುವ ಚಂದದ ಬಳಪದಲಿ!
ಮಗ್ಗಿ ಬರಹ ಲೆಕ್ಕಗಳೆಲ್ಲವು
ಅಚ್ಚೊತ್ತಿರುವವು ಎದೆಯಲ್ಲಿ
ಅಂಕು ಡೊಂಕಿನ ಚಿತ್ರದ ಗೆರೆಗಳು
ಬಳುಕುತಲಿರುವವು ಉದರದಲಿ!
ಕರಿಮೈಯಿದ್ದರು ಗೆಲ್ಲುತಲಿದ್ದೆ
ತುಂಟ ಮಕ್ಕಳ ಮನಸನ್ನು
ತಪ್ಪದೆ ನನಸು ಮಾಡುತಲಿದ್ದೆ
ಅವರು ಕಂಡ ಕನಸನ್ನು!
ಈಗ ಮಾತ್ರ ಜೋಲುತಲಿರುವೆ
ಈರುಳ್ಳಿ ಟೊಮೆಟೊ ಗಾಡಿಯಲಿ
ನೂರಕೆ ನಾಲ್ಕು ಕೇಜಿ ಎಂಬ
ದಪ್ಪಕ್ಶರದ ಬರಹದಲಿ!
ಇಂತಹ ದುಸ್ತಿತಿ ಬಂದುದರಿಂದ
ದಿನವೂ ಮರಗುವೆ ಮನದಲ್ಲಿ
ಮತ್ತೆ ಎಂದು ನಲಿವೆನು ಏನೊ
ಮುಗ್ದ ಮಕ್ಕಳ ಕೈಯಲ್ಲಿ!
( ಚಿತ್ರ ಸೆಲೆ: keywordsuggest.org )
ಕವನ ಸೊಗಸಾಗಿದೆ