ಗ್ರಹಣ ಸ್ಮಾರಕದ ರಾಜದಾನಿ ಉಗಾಂಡಾ

– ಕೆ.ವಿ.ಶಶಿದರ.

eclipse monument, ಗ್ರಹಣ ಸ್ಮಾರಕ

ಇದೇ ಜುಲೈ 27, 2018ರಂದು ಕಗ್ರಾಸ ಕೇತುಗ್ರಸ್ತ ಚಂದ್ರ ಗ್ರಹಣಕ್ಕೆ ನಾವೆಲ್ಲಾ ಸಾಕ್ಶಿಯಾಗಿದ್ದೆವು. 21ನೇ ಶತಮಾನದಲ್ಲೇ ಇದು ಅತ್ಯಂತ ದೀರ‍್ಗ ಚಂದ್ರ ಗ್ರಹಣ ಎಂಬ ಹಣೆಪಟ್ಟಿ ಹೊತ್ತು ಬಂದಿತ್ತು. ಸೂರ‍್ಯ ಅತವಾ ಚಂದ್ರ ಗ್ರಹಣವಾಗಲಿ ಸಾಮಾನ್ಯವಾಗಿ ಕಗೋಳದಲ್ಲಿ ಸಂಬವಿಸುತ್ತಲೇ ಇರುತ್ತದೆ. ಎಲ್ಲಾ ದೇಶಗಳಲ್ಲೂ ಇದು ಕಾಣಲೇಬೇಕೆಂಬ ನಿಯಮವಿಲ್ಲ. ಸೂರ‍್ಯನ ಸುತ್ತ ಬೂಮಿ, ಬೂಮಿಯ ಸುತ್ತಾ ಚಂದ್ರ ಸತತವಾಗಿ ಸುತ್ತುವುದರಿಂದ ಗ್ರಹಣಗಳು ಸಂಬವಿಸುವುದು ಸ್ವಾಬಾವಿಕ. ಇದು ಕಾಣುವುದು ಮಾತ್ರ ವಿಶ್ವದ ಯಾವುದಾದರೂ ಒಂದು ಬಾಗದಲ್ಲಿ ಕಾತರಿ.

ಗ್ರಹಣಗಳು ಪ್ರಾಕ್ರುತಿಕವಾಗಿ ಅಸ್ತಿರ. ಒಂದು ವರ‍್ಶದಲ್ಲಿ ಕನಿಶ್ಟ ಎರಡು ಸೂರ‍್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ ಸಂಬವಿಸುವುದು ಶತಸಿದ್ದ. ಕೆಲವೊಮ್ಮೆ ವರ‍್ಶದಲ್ಲಿ ಐದು, ಆರು, ಏಳು ಗ್ರಹಣಗಳು ಸಂಬವಿಸಿರುವ ಉದಾಹರಣೆಗಳೂ ಸಾಕಶ್ಟಿವೆ. ಇವೆಲ್ಲಾ ಯಾಕೆ ಹೇಳ ಹೊರಟೆ ಎಂದರೆ, ಇಂತಹ ಸಾಮಾನ್ಯ ಕಗೋಳ ಗಟನೆಗೆ ಶಾಶ್ವತ ಸ್ಮಾರಕದ ಅವಶ್ಯಕತೆಯಿದೆಯೇ? ಇಲ್ಲ. ಆದರೂ ಇದಕ್ಕಾಗಿಯೇ ಸ್ಮಾರಕವನ್ನು ಕಟ್ಟಿದ್ದಾರೆ!

ಹೌದು. ಆಪ್ರಿಕಾ ಕಂಡದ ಉಗಾಂಡಾದಲ್ಲಿ ಗ್ರಹಣ ಸ್ಮಾರಕಗಳಿವೆ. ಅದೂ ಒಂದಲ್ಲಾ ಎರಡು ಸ್ಮಾರಕಗಳು. ಇತ್ತೀಚಿನ ದಿನಗಳಲ್ಲಿ ಅಂದರೆ 2013ರಲ್ಲಿ ಸಂಬವಿಸಿದ ಸೂರ‍್ಯ ಗ್ರಹಣಕ್ಕಾಗಿ ಒಂದು ಸ್ಮಾರಕವಾದರೆ ಶತಮಾನಗಳಶ್ಟು ಹಿಂದೆ ಸಂಬವಿಸಿದ ಗ್ರಹಣಕ್ಕಾಗಿ ಮತ್ತೊಂದು.

2013ರಲ್ಲಿ ಸಂಬವಿಸಿದ ಸೂರ‍್ಯ ಗ್ರಹಣದ ನೆನಪಿಗಾಗಿ ಒಂದು ಸ್ಮಾರಕ!

2013ರಲ್ಲಿ ಸಂಬವಿಸಿದ ಸೂರ‍್ಯ ಗ್ರಹಣವನ್ನು ನೋಡಲು ಇಡೀ ಜಗತ್ತಿನಲ್ಲಿ ಉಗಾಂಡಾದ ವಾಯುವ್ಯ ದಿಕ್ಕಿನಲ್ಲಿರುವ ಪುಟ್ಟ ಪಟ್ಟಣ ಪಾಕ್ವಾಚ್ ಅತ್ಯುತ್ತಮ ಸ್ತಳವೆಂದು ಕಗೋಳ ಶಾಸ್ತ್ರಜ್ನರಿಂದ ಗುರುತಿಸಲ್ಪಟ್ಟಿತ್ತು. ಅದರಲ್ಲೂ ನಿರ‍್ದಿಶ್ಟವಾಗಿ ಪಾಕ್ವಾಚ್‍ನ ಓವಿನಿ ಪ್ರೈಮರಿ ಸ್ಕೂಲ್ ಪ್ರಶಸ್ತ ಸ್ತಳವೆಂದು ಗುರುತಿಸಿದ್ದರು.

ಗ್ರಹಣ ನೋಡಲು ಮತ್ತು ಅದರ ಬಗ್ಗೆ ಅದ್ಯಯನಕ್ಕೆ ಪ್ರಶಸ್ತ ಸ್ತಳವೆಂದು ಗುರುತಿಸಲ್ಪಟ್ಟ ಪಾಕ್ವಾಚ್‍ಗೆ ನೂರಾರು ಕಗೋಳ ಶಾಸ್ತ್ರಜ್ನರು ಹೋಗಲು ಸಿದ್ದರಾದಾಗ, ಉಗಾಂಡಾದ ಪ್ರವಾಸೋದ್ಯಮ ಸಚಿವಾಲಯವು ಶಾಲೆಯ ಆವರಣದಲ್ಲಿ ಈ ಗಟನೆಗೆ ಸಾಕ್ಶಿಯಾಗಿ ಸ್ಮಾರಕವನ್ನು ನಿರ‍್ಮಿಸುವುದಾಗಿ ಗೋಶಿಸಿತು. ದೇಶ ವಿದೇಶಗಳಿಂದ ಬರುವ ವಿಜ್ನಾನಿಗಳ ಅನುಕೂಲಕ್ಕಾಗಿ ಸ್ಮಾರಕದೊಂದಿಗೆ ಅನೇಕ ಮೂಲಸೌಕರ‍್ಯಗಳಾದ ರಸ್ತೆ, ಕುಡಿಯುವ ನೀರು ಸರಬರಾಜು ಮತ್ತು ಪ್ರವಾಸಿಗರ ತಂಗುದಾಣಗಳನ್ನು ಅಬಿವ್ರುದ್ದಿ ಪಡಿಸಲಾಯಿತು.

ಸ್ಮಾರಕದ ವಿನ್ಯಾಸದಲ್ಲಿ ಚಪ್ಪಟೆ ಕಲ್ಲಿನ ಪಿರಮಿಡ್ ತಳಹದಿಯನ್ನು ಕಟ್ಟಿ ಅದರ ಮೇಲೆ ದೊಡ್ಡ ಲೋಹದ ಗ್ರಹಣವನ್ನು ಸೂಚ್ಯವಾಗಿ ಬಿಂಬಿಸುವ ಪದಕವನ್ನು ಜೋಡಿಸಿದ್ದು ಕಣ್ಸೆಳೆಯುತ್ತದೆ. ಈ ಪದಕದ ವಿಶೇಶತೆಯಂದರೆ ಗ್ರಹಣವನ್ನು ಸೂಚಿಸುವ ಇದರಲ್ಲಿ ಎರಡು ವ್ಯತಿರಿಕ್ತ ಬಣ್ಣಗಳಿವೆ. ಮುಸ್ಸಂಜೆಯ ಕೆಂಪು ಮತ್ತು ಕಪ್ಪು.

ನವೆಂಬರ್ 3, 2013ರಂದು ಸಂಬವಿಸಿದ ಸೂರ‍್ಯ ಗ್ರಹಣ ಇಲ್ಲಿ ಕಂಡಿತ್ತು. ಇದಕ್ಕೆ ನೂರಾರು ಜನಸಮೂಹದೊಡನೆ ಉಗಾಂಡಾದ ಅದ್ಯಕ್ಶ ಯೊವರಿ ಮುಸ್ಸೆವೆನಿ ಸಹ ಸಾಕ್ಶಿಯಾಗಿದ್ದರು. ಗ್ರಹಣ ಅನೇಕ ತೊಂದರೆಗಳಿಗೆ ಆಹ್ವಾನ ಎನ್ನುವುದು ನಂಬಿಕೆಯಾದರೂ, 2013ರ ಗ್ರಹಣವು ಉಗಾಂಡದ ಈ ಪ್ರದೇಶಕ್ಕೆ ಕ್ಶಣಿಕ ಆರ‍್ತಿಕ ವರವಾಗಿ ಪರಿಣಮಿಸಿತು. ಈ ಸಂಬಂದ ನಿರ‍್ಮಾಣವಾದ ಗ್ರಹಣ ಸ್ಮಾರಕ ಮಾತ್ರ ಶಾಶ್ವತ ಆಸ್ತಿಯಾಗಿದೆ.

1520ರಲ್ಲಿ ಸಂಬವಿಸಿದ ಗ್ರಹಣದ ನೆನಪಿಗಾಗಿ ಇನ್ನೊಂದು ಸ್ಮಾರಕ!

ಗ್ರಹಣ ಸ್ಮಾರಕ, Eclipse monument

ಮೇಲೆ ಹೇಳಿದಂತೆ ಉಗಾಂಡದಲ್ಲಿರುವುದು ಇದೊಂದೇ ಗ್ರಹಣ ಸ್ಮಾರಕವಲ್ಲ. ಇಲ್ಲಿಂದ ದಕ್ಶಿಣಕ್ಕೆ ಸುಮಾರು 300 ಮೈಲಿಗಳಶ್ಟು ದೂರದಲ್ಲಿ ಕೊಂಚ ಪಶ್ಚಿಮಕ್ಕಿರುವ ಮಬರಾರಾದಲ್ಲಿ ಬವ್ಯವಾದ ಹಾಗೂ ಹೆಚ್ಚು ಮಹತ್ವಪೂರ‍್ಣವಾದ ಮತ್ತೊಂದು ಗ್ರಹಣ ಸ್ಮಾರಕವಿದೆ. 2014ರಲ್ಲಿ ಕಟ್ಟಲಾದ ಇದು ಶತಮಾನಗಳಶ್ಟು ಹಿಂದೆ ಸಂಬವಿಸಿದ ಗ್ರಹಣದ ಗೌರವಾರ‍್ತವಾಗಿದೆ.

1520ರಲ್ಲಿ ಸಂಬವಿಸಿದ ಗ್ರಹಣಕ್ಕೆ ಸ್ಮಾರಕವಾದ ಇದನ್ನು ಮಬರಾರಾದ ಇಗೊಂಗೊ ಕಲ್ಚರಲ್ ಸೆಂಟರ್ ಮತ್ತು ಕಂಟ್ರಿ ಹೋಟೆಲ್ ಬಳಿ ಸ್ತಾಪಿಸಲಾಗಿದೆ. ಪ್ರವಾಸೋದ್ಯಮವನ್ನು ಹೆಚ್ಚಿಸಲು ಇಗೊಂಗೊ ಕಲ್ಚರಲ್ ಸೆಂಟರ್ ಅನ್ನು ಹೊಸದಾಗಿಸಿ ಇದರಲ್ಲಿ ಐತಿಹಾಸಿಕ ಹಾಗೂ ಸಾಂಸ್ಕ್ರುತಿಕ ಪ್ರದರ‍್ಶನಗಳನ್ನು ಸೇರಿಸಲಾಯಿತು. ಆದರೂ ಅವುಗಳೆಲ್ಲದ್ದಕ್ಕಿಂತಾ ಗ್ರಹಣ ಸ್ಮಾರಕವೇ ಅತ್ಯಂತ ಸುಂದರವಾಗಿದೆ.

ಈ ಗ್ರಹಣ ಸ್ಮಾರಕವು ಕಂಟ್ರಿ ಹೋಟೆಲ್ ಬಳಿಯ ಸಣ್ಣ ಗುಡ್ಡದ ಮೇಲೆ ಸ್ತಾಪಿಸಲಾಗಿದೆ. ಕಲಾ ವಿದ್ಯಾರ‍್ತಿಯೊಬ್ಬ ಇದನ್ನು ವಿನ್ಯಾಸಗೊಳಿಸಿದ್ದು ಸ್ಮಾರಕದ ಪ್ರತಿಯೊಂದು ಮುಕಬಾಗವನ್ನೂ ಅರ‍್ತಪೂರ‍್ಣವಾಗಿರುವಂತೆ ಸಂಯೋಜಿಸಿದ್ದಾನೆ. ಮೂರು ಕಾಲುಗಳ ಮೇಲೆ ಗೋಳವಿರುವ ಸ್ಮಾರಕ ಇದು. ಮೂರು ಕಾಲುಗಳು ಉಗಾಂಡಾ ಬ್ಯುನಿಯೊರೊ, ಬುಗಾಂಡಾ, ಮತ್ತು ನಕೊರೆ ಸಾಮ್ರಾಜ್ಯವನ್ನು ಸಂಕೇತಿಸುತ್ತದೆ. ಈ ಸ್ಮಾರಕದ ಮೇಲ್ಮೈ ಈಜಿಪ್ಶಿಯನ್ ಬರವಣಿಗೆಗಳು, ಡೋಲು ಮತ್ತು ಬರ‍್ಜಿಗಳ ಚಿತ್ರಣದಿಂದ ಅಲಂಕ್ರುತಗೊಂಡಿದೆ. ಈ ಸ್ಮಾರಕ ಅತ್ಯಂತ ಅದ್ಬುತ ವಿನ್ಯಾಸ ಹಾಗೂ ನೈಜ ಪ್ರಪಂಚದ ಸೂಕ್ತ ಮಿಶ್ರಣವೆಂಬುದಂತೂ ಕೆಲವರ ಅಂಬೋಣ.

ಜಾನಪದ ಕತೆಯಲ್ಲಿ ಬರುವ 1520ರ ಗ್ರಹಣ

ಈ ಪ್ರದೇಶದಲ್ಲಿನ ಹಲವಾರು ಸಣ್ಣ ಸಣ್ಣ ಸಾಮ್ರಾಜ್ಯಗಳು ಒಂದಕ್ಕೊಂದು ಯುದ್ದದಲ್ಲಿ ತೊಡಗಿದ್ದಾಗ ಕಿಂಗ್ ಒಲಿಮಿ ಬಿಹಾರ‍್ವೆ ಗುಡ್ಡದಲ್ಲಿ ತಾನು ಕೊಳ್ಳೆ ಹೊಡೆದಿದ್ದ ಲೂಟಿಯನ್ನು ಹೊತ್ತು ಸಾಗುತ್ತಿದ್ದಾಗ ವಿಚಿತ್ರ ಗಟನೆಯೊಂದು ಸಂಬವಿಸಿತು. ಇದ್ದಕ್ಕಿದ್ದಂತೆ ಅಸ್ವಾಬಾವಿಕವಾಗಿ ಕತ್ತಲು ಆವರಿಸತೊಡಗಿತು. ಯುದ್ದದಲ್ಲಿ ಸತ್ತವರ ಪ್ರೇತಾತ್ಮಗಳು ತಮ್ಮ ಮೇಲಿನ ಪ್ರತೀಕಾರಕ್ಕೆ ಹಿಂದಿರುಗುತ್ತಿರುವ ಸೂಚನೆ ಇದು ಎಂದು ಬಾವಿಸಿದ ಕಿಂಗ್ ಒಲಿಮಿ ಮತ್ತು ಆತನ ಸೈನಿಕರು ತಾವು ಲೂಟಿ ಮಾಡಿ ಹೊತ್ತೊಯ್ಯುತ್ತಿದ್ದ ಎಲ್ಲವನ್ನೂ, ಜಾನವಾರುಗಳು, ದವಸ ದಾನ್ಯಗಳು, ನಗ ನಾಣ್ಯಗಳು ಮತ್ತು ಉಪಪತ್ನಿಯರನ್ನು ಅಲ್ಲೇ ಬಿಟ್ಟು ಸ್ವಯಂ ರಕ್ಶಣೆಗಾಗಿ ಅಲ್ಲಿಂದ ದೌಡಾಯಿಸಿದರು. ಅವರು ಬಿಟ್ಟು ಹೋದ ವಸ್ತುಗಳನ್ನು ಸಂಗ್ರಹಿಸಿದ ಸ್ತಳೀಯರು ‘ಸ್ವರ‍್ಗದಿಂದ ಕಳುಹಿಸಲ್ಪಟ್ಟ ದನಕರುಗಳು’ ಎಂದು ಜೋಪಾನ ಮಾಡಿ ತಮ್ಮಲ್ಲೇ ಹಂಚಿಕೊಂಡರು.

ಈ ಕತೆ ಸುಳ್ಳೇ ಇರಬಹುದು. ಆದರೆ ಅಂದು ಕತ್ತಲಾಗಲಿಕ್ಕೆ ಕಾರಣ ಗ್ರಹಣ ಎನ್ನುವುದಂತೂ ಸುಳ್ಳಲ್ಲ. ಕೇವಲ ಎರಡು ಸ್ಮಾರಕಗಳು ಹೆಚ್ಚೇನಲ್ಲಾ. ಆದರೂ ಜಗತ್ತಿನಲ್ಲಿ ಗ್ರಹಣಕ್ಕಾಗಿ ಮೀಸಲಾದ ಸ್ಮಾರಕಗಳನ್ನು ಪಟ್ಟಿ ಮಾಡಲು ಪ್ರಯತ್ನಿಸಿದಲ್ಲಿ ಸ್ಮಾರಕಗಳು ಸಿಗುವುದಿಲ್ಲ. ಹಾಗಾಗಿ ಉಗಾಂಡ ವಿಶ್ವದ ಗ್ರಹಣ ಸ್ಮಾರಕಗಳ ರಾಜದಾನಿಯಾಗಿರುವುದಲ್ಲಿ ಸಂಶಯವೇ ಇಲ್ಲ ಅಲ್ಲವೆ?

(ಮಾಹಿತಿ ಸೆಲೆ: atlasobscura, ucota.wordpress.com, ugandatrips.blogspot )
(ಚಿತ್ರ ಸೆಲೆ: voanews, ugandatrips)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: