ಹಸಿವು ತಣಿಸಿದ ಜೀವಗಳು

– ರುದ್ರಸ್ವಾಮಿ ಹರ‍್ತಿಕೋಟೆ.

ಸರಕಾರಿ ಸ್ಕೂಲು, Govt School

ಅದು ನನ್ನೂರಿನ ಶತಮಾನದ ಶಾಲೆ. ನಾನು ಪ್ರಾತಮಿಕ ಶಿಕ್ಶಣ ಮುಗಿಸಿದ ನನ್ನ ಹೆಮ್ಮೆಯ ಶಾಲೆ. ಅದರಿಂದ ಹೊರಬಂದ ಪ್ರತಿಬೆಗಳು ಇಂದು ಸಾಗರದಾಚೆಗೂ ಹಬ್ಬಿವೆ. ಇಂತಹ ಶಾಲೆಯಲ್ಲಿ ಕಲಿಯುವಂತಹ ಸಂದರ‍್ಬದ ನೋವು-ನಲಿವುಗಳು, ಸ್ನೇಹ-ಸೋದರತೆ, ಗುರು-ಶಿಶ್ಯರ ಒಡನಾಟ, ಕಲಿತಪಾಟ ಎಲ್ಲವೂ ಈಗ ಸವಿಸವಿನೆನಪು. ಆ ನೆನಪುಗಳು ಮೊಗೆದಶ್ಟು ಹೊರ ಚಿಮ್ಮುವ ಚಿಲುಮೆಗಳು. ಅಂತಹ ನೆನಪುಗಳ ಒಳಹೊಕ್ಕರೆ ಅಲ್ಲಿ ಎಲ್ಲವೂ ವರ‍್ಣರಂಜಿತ. ಆ ನೆನಪುಗಳ ಬುಗ್ಗೆಯಲ್ಲಿನ ಒಡಲಾಳದ ವಾತ್ಸಲ್ಯದ ಕನಿಗಳೇ ಈ ಹಸಿವು ತಣಿಸಿದ ಜೀವಗಳು.

ನಾನು ಮತ್ತು ಗೆಳೆಯರು ತುಸು ಉತ್ಸಾಹದಿಂದಲೇ ಶಾಲೆಗೆ ಹೋಗುತ್ತಿದ್ದೆವು. ಮಕ್ಕಳಾದ ನಮಗೆ ಕಲಿಕೆಗಿಂತಲೂ ತಿನ್ನುವುದರಲ್ಲೇ ಆಸಕ್ತಿ ಹೆಚ್ಚು. ಸುತ್ತ ಎಂಟು ಹಳ್ಳಿಗಳ ಮದ್ಯೆ ಇದ್ದ ಏಕೈಕ ಮಾದರಿ ಹಿರಿಯ ಪ್ರಾತಮಿಕ ಶಾಲೆ ನಮ್ಮದು. ಹಾಗಾಗಿ ಹಿರಿಯ ಪ್ರಾತಮಿಕ ಶಿಕ್ಶಣಕ್ಕೆ ಎಲ್ಲರೂ ಇಲ್ಲಿಗೆ ಬರುತ್ತಿದ್ದರಿಂದ ವಿದ್ಯಾರ‍್ತಿಗಳ ಸಂಕ್ಯೆಯೂ ಹೆಚ್ಚಿತ್ತು. ನಮ್ಮ ಆಟ-ಪಾಟಗಳ ಜೊತೆಗೆ ಚೇಶ್ಟೆ-ಕುಚೇಶ್ಟೆಗಳಿಗೆ ಬರವಿರಲಿಲ್ಲ. ವಿವಿದ ಸಂಸ್ಕ್ರುತಿಯ ವಿವಿದ ಮನಸುಗಳ ವೈವಿದ್ಯತೆಯೊಳಗಿನ ಏಕತೆಯ ಒಡನಾಟ ನಮ್ಮದು.

ಮೊದಲ ಅವದಿ ಮುಗಿದು ಎರಡನೇ ಅವದಿ ಬಂತೆಂದರೆ ನಮ್ಮ ಮನಸುಗಳು ಶಾಲೆಯಿಂದ ಹೊರಬೀಳುತ್ತಿದ್ದವು. ಗುರುಗಳ ಬೋದನೆಗಿಂತ ಆ ಜೀವಗಳು ತರುತ್ತಿದ್ದ ತರ ತರ ಹಣ್ಣುಗಳು, ಕುರುಕಲು ತಿಂಡಿಗಳು ನಮ್ಮ ಮರ‍್ಕಟಮನದೊಳಗೆ ಲಗ್ಗೆಯಿಟ್ಟು ಬಾಯಲ್ಲಿ ನೀರೂರಿಸುತ್ತಿದ್ದವು. ನಾನಂತು ನನ್ನ ಚಡ್ಡಿ ಜೇಬನ್ನು ಪದೇ ಪದೇ ಮುಟ್ಟಿನೋಡಿಕೊಳ್ಳುತ್ತಿದ್ದೆ. ಮನೆಯಲ್ಲಿ ಕೊಟ್ಟ ನಾಲ್ಕಾಣೆ, ಎಂಟಾಣೆಗಳೆ ನಮ್ಮ ಆ ದಿನದ ಪಾಕೆಟ್ ಮನಿ. ಯಾರಾದರೂ ಸಂಬಂದಿಕರು ಮನೆಗೆ ಬಂದ್ಹೋದರಶ್ಟೆ ರೂಪಾಯಿಗಳ ಮುಕ ನೋಡುತ್ತಿದ್ದ ಕಾಲ. ಹಾಗಾಗಿ ಆ ನಾಲ್ಕಾಣೆ ಎಂಟಾಣೆಗಳೇ ನಮ್ಮ ವಿರಾಮಕಾಲದ ಒಡಲೊರೆವ ಬಂದು.

ನಮ್ಮ ಶಾಲೆಯ ಮುಂಬಾಗದ ಊರಿನ ರಸ್ತೆಗೆ, ನಾಲ್ಕಡಿ ಎತ್ತರದ ದುಂಡಾಕಾರದ ಕಟ್ಟೆಯಿತ್ತು. ಪಕ್ಕದ ಹಳ್ಳಿಗಳಿಂದ ಬರುತ್ತಿದ್ದ ಮೂವರು ಮದ್ಯವಯಸ್ಸಿನ ಮಹಿಳೆಯರು ಬಯಲುಸೀಮೆಯ ಬಿಸಿಲನ್ನೂ ಲೆಕ್ಕಿಸದೆ ತಮ್ಮ ಸೀರೆಯ ಸೆರಗನ್ನು ತಲೆಗೆ ಹೊದ್ದು, ತಾವು ತಂದ ಹಣ್ಣಿನ ಪುಟ್ಟಿಗಳು(ಬುಟ್ಟಿಗಳು) ಹಾಗೂ ಕುರುಕಲು ತಿಂಡಿಗಳನ್ನ ಮುಂದಿಟ್ಟುಕೊಂಡು ತಾದ್ಯಾತ್ಮದಿಂದ ನಾವು ಹೊರಬರುವುದನ್ನೇ ಕಾಯುತ್ತ ಕುಳಿತಿರುತ್ತಿದ್ದರು. ಇನ್ನೂ ಅವರು ತರುತ್ತಿದ್ದ ನೇರಳೆಹಣ್ಣು, ಬಾರೆಹಣ್ಣು, ಮರಸೇಬು, ಪೇರಲಹಣ್ಣು, ಲಿಂಬೆಹುಳಿ ಪೆಪ್ಪರಮೆಂಟು ಹಾಗೂ ಸಿಕ್ಕಲು ಶೇಂಗ, ಕುಸುಬೆ, ಕಡ್ಲೆ, ಹುರಳಿಕಾಳುಗಳಿಂದ ಕೂಡಿದ ಕಾರ ಮಿಶ್ರಿತ ಚಿನಕುರುಳಿಗಳು ನಮ್ಮನ್ನು ತಮ್ಮತ್ತ ಸೆಳೆಯುತ್ತಿದ್ದವು.

ಎರಡನೇ ಅವದಿ ಮುಗಿದು ವಿರಾಮಕಾಲದ ಗಂಟೆ ಹೊಡೆಯುವುದೇ ತಡ, ತಹತಹಿಸಿ ಹೋದವರೇ ಅವರ ಪುಟ್ಟಿಗಳ ಮೇಲೆ ಮುಗಿಬಿದ್ದುಬಿಡುತ್ತಿದ್ದೆವು. “ಅಕ್ಕ ನಾನು ಪಸ್ಟ್ ಬಂದಿದ್ದು ನಂಗೆ ಕೊಡು, ಇಲ್ಲ ನಾನು ಬಂದಿದ್ದು, ಹೋಗ್ಲೇ ಅತ್ಲಾಗೆ ನಾನು ಮೊದ್ಲು ಬಂದಿದ್ದು”, ಹೀಗೆ ಗೆಳೆಯರೆಲ್ಲ ತಳ್ಳಾಡುತ್ತಲೇ ಪುಟ್ಟಿಗೆ ದಾಳಿಯಿಡುತ್ತಿದ್ದೆವು. ಪಾಪ! ಆ ಜೀವಗಳು ಮಾತ್ರ,”ತಡ್ರೆಪ್ಪ, ಒಬ್ಬೊಬ್ರ ಬರ‍್ರಿ, ನಾ ಹೆಂಗ್ ಕೊಡ್ಲಿ?”ಅಂತ ಸಮಾದಾನದಿಂದಲೇ ಅಮ್ಮನ ಪ್ರೀತಿ ತೋರುತ್ತಾ ವ್ಯಾಪರಿಸುತ್ತಿದ್ದರು. ನಾನಂತು, ಅಕ್ಕ ಇಶ್ಟೇನಕ್ಕಾ? ಇನ್ನೊಂದೆರೆಡು ಕೊಡಕ್ಕ! ಅನ್ನುತ್ತಿದ್ದೆ, ಅವರು ಮಾತ್ರ ನಗುನಗುತ್ತಲೇ ಕೊಡುತ್ತಿದ್ದರು. ಮದ್ಯಾಹ್ನದ ಬಿಸಿಯೂಟವಿಲ್ಲದ ಆ ದಿನಗಳಲ್ಲಿ ಹಳ್ಳಿಗಳಿಂದ ಬರುತ್ತಿದ್ದ ವಿದ್ಯಾರ‍್ತಿಗಳು ಆ ಹಣ್ಣು ಹಾಗೂ ಕುರಕಲು ತಿಂಡಿ ತಿಂದೇ ಹಸಿವು ತಣಿಸಿಕೊಳ್ಳುತ್ತಿದ್ದರು. ಎಶ್ಟೋ ಗೆಳೆಯರು ಹಣವನ್ನೇ ತಂದಿರುತ್ತಿರಲಿಲ್ಲ ಅಂತವರಿಗೆ ಸಾಲವಾಗಿ ಅತವಾ ಪುಕ್ಕಟೆಯಾಗಿ ಕೊಡುತ್ತಾ, “ಚೆನ್ನಾಗಿ ಓದಿ ಅಪ್ಪ-ಅಮ್ಮಗೆ ಒಳ್ಳೆ ಹೆಸರು ತನ್ರಪ್ಪ” ಎನ್ನುವುದನ್ನ ಮರೆಯುತ್ತಿರಲಿಲ್ಲ. ಜೊತೆಗೆ ಪಕ್ಕದ ಹಳ್ಳಿಗಳಿಂದ ಬಂದ ವಿದ್ಯಾರ‍್ತಿಗಳಿಗೆ ಅನಿವಾರ‍್ಯವಾಗಿ ಪೆನ್ನು, ನೋಟ್ ಪುಸ್ತಕ ಬೇಕಾದಾಗ ಕೆಲವೊಮ್ಮೆ ಅವರೇ ಹಣ ಕೊಟ್ಟು ಪೋಶಕರಾಗಿದ್ದು ಉಂಟು. ಇನ್ನೂ ಈ ಪುಟ್ಟ ವ್ಯಾಪಾರದಿಂದ ಅವರಿಗೆ ಬರುತ್ತಿದ್ದ ಲಾಬ ಅತೀ ಕಡಿಮೆ. ಆದರೆ ಮಕ್ಕಳೊಂದಿಗೆ ಮಕ್ಕಳಾಗಿ ನಲಿದು ಹೋಗುತ್ತಿದ್ದ ಅವರ ಮಾತ್ರುಮನಕ್ಕೆ ಬೆಲೆಕಟ್ಟಲಾದಿತೇ?. ಮುಂಜಾನೆ ಹೊಲಕ್ಕೆ ಹೋಗಿ ಹಣ್ಣು ಆಯ್ದುಕೊಂಡು ಇಲ್ಲವೇ ಪೇಟೆಗೆ ಹೋಗಿ ಕೊಂಡುಬಂದು ಮನೆಗೆಲಸ ಮಾಡಿ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದ ಅವರು ಸಮಯಪಾಲಕರೂ ಹೌದು. ನಮ್ಮ ಸಂತೋಶದಲ್ಲಿ ಅವರ ಹಾಗೂ ಅವರ ಮಕ್ಕಳ ಸಂತೋಶ ಕಾಣುತ್ತಿದ್ದ ತಾಯಿ ಮನಗಳು.

ಅಂದು ಆ ಹಣ್ಣು, ಚಿನಕುರುಳಿ ಕೊಡುತಿದ್ದ ಅಮಿತ ರುಚಿ, ಸಂತೋಶ ಇಂದಿಲ್ಲ. ಇನ್ನೂ ನಮ್ಮ ಮಕ್ಕಳು ಗೋಬಿ, ಪಾನಿಪೂರಿ, ಪಿಜ್ಹಾ ಬರ‍್ಗರ್ ತಿನ್ನುವಾಗ ಮನಸ್ಸಿಗೆ ಬೇಜಾರಾಗಿ, ಅಯ್ಯೋ ಕರ‍್ಮವೇ ಎಂದೆನಿಸದೇ ಇರಲಾರದು.

ಇತ್ತೀಚೆಗೆ ನಮ್ಮೂರ ಶಾಲೆಯ ಶತಮಾನೋತ್ಸವವನ್ನು ಶಾಲೆಯ ಹಳೆವಿದ್ಯಾರ‍್ತಿಗಳ ಸಂಗ ಹಾಗೂ ಊರಿನ ಹಿರಿಯರೆಲ್ಲ ಸೇರಿ ಅತ್ಯಂತ ವಿಜ್ರುಂಬಣೆಯಿಂದ ಮಾಡಿ, ಕಲಿಸಿದ ಗುರುಗಳನ್ನು, ಶಾಲೆಗೆ ನೆರವಾದ ದಾನಿಗಳನ್ನು ಅಂದು ವೇದಿಕೆಯಲ್ಲಿ ಸನ್ಮಾನಿಸುವಾಗ, ಆ ವೇದಿಕೆಯ ಪಕ್ಕದಲ್ಲಿ ನಿಂತಿದ್ದ ನನಗೆ ನೆನಪಾದದ್ದು ಈ ಹಸಿವು ತಣಿಸಿದ ಜೀವಗಳು. ಒಡನೆ ಮನದಲ್ಲೇ ಅವರಿಗೂ ನಮಿಸುವಾಗ ಕಣ್ಣಾಲಿಗಳು ತುಂಬಿ ಕ್ರುತಗ್ನತೆಯ ಹನಿಯೊಂದು ಹೊರಬಿತ್ತು. ಅಂದು ನಮ್ಮ ಹಸಿವು ತಣಿಸಿದ ಅಮ್ಮಂದಿರೇ ನಿಮಗೆ ‘ನನ್ನದೊಂದು ಸಲಾಂ’.

( ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: