ಕ್ಯಾಮರೂನಿನ ವಿಚಿತ್ರ ‘ಜುಜು’ ಟೋಪಿಗಳು
– ಕೆ.ವಿ.ಶಶಿದರ.
ಇತ್ತೀಚಿನ ದಿನಗಳಲ್ಲಿ ಉಳ್ಳವರ ಮನೆಯ ಅಲಂಕಾರಿಕ ವಸ್ತುಗಳಿಗೂ ಜುಜು ಟೋಪಿಗೂ ಅವಿನಾಬಾವ ಸಂಬಂದ. ಜುಜು ಟೋಪಿಗಳ ಹೊಸ ವಿನ್ಯಾಸಗಳು ಸೊಗಸಾದ ಬಂಗಲೆಯ ಗೋಡೆಗಳನ್ನು ಸುಂದರಗೊಳಿಸಿವೆ. ಒಳಾಂಗಣ ವಿನ್ಯಾಸದ ಹಲವಾರು ಮ್ಯಾಗಜೀನ್‍ಗಳು ದೊಡ್ಡ ಕಟ್ಟಡಗಳ ಮೆರಗನ್ನು ಇದು ಹೆಚ್ಚಿಸುತ್ತದೆ ಎಂದು ಪ್ರತಿಪಾದಿಸುತ್ತಿವೆ.
ವಿಸ್ತಾರವಾದ ಗರಿಗಳು ಮತ್ತು ಕಣ್ಣು ಕೋರೈಸುವ ಬಣ್ಣ ಜುಜು ಟೋಪಿಗಳ ಹೆಗ್ಗಳಿಕೆ. ಪಶ್ಚಿಮ ಕ್ಯಾಮರೂನ್‍ನ ಬಮಿಲೆಕೆ ಜನರಿಗೆ ಇದೇ ಪ್ರಮುಕ ಅಲಂಕಾರಿಕ ವಸ್ತು. ಅವರು ಜುಜು ಟೋಪಿಗಳನ್ನು ಅಪರೂಪಕ್ಕೊಮ್ಮೆ ಅತಿ ಮುಕ್ಯ ದಿನಗಳಲ್ಲಿ ದರಿಸುತ್ತಿದ್ದರು.
ಜುಜು ಎಂಬ ಹೆಸರು ಹೇಗೆ ಬಂತು?
ಮೊದಮೊದಲು ಈ ಟೋಪಿಗಳನ್ನು ‘ಜುಜು’ ಎಂಬ ಹೆಸರಿನಿಂದ ಗುರುತಿಸುತ್ತಿರಲಿಲ್ಲ. ಬಮಿಲೆಕೆ ಬುಡಕಟ್ಟಿನರಿಗೆ ಇದು ಟೈನ್. ಜುಜು ಎಂಬ ಹೆಸರು ಇದಕ್ಕೆ ಹೇಗೆ ಅಂಟಿಕೊಂಡಿತು ಎನ್ನುವ ಬಗ್ಗೆ ಕೆದಕಿ ನೋಡಿದರೆ ‘ಡ್ಜುಡ್ಜು’ ಎಂಬ ಶಬ್ದ ಇದರ ಜನಕನಿರಬಹುದು ಎನಿಸುತ್ತದೆ. ಉತ್ತರ ನೈಜೀರಿಯಾದ ಹಉಸಾ ಜನಾಂಗದವರು ದುಶ್ಟ ಶಕ್ತಿಗಳನ್ನು ಸೂಚಿಸಲು ‘ಡ್ಜುಡ್ಜು’ ಪದ ಬಳಸುತ್ತಿದ್ದರು. ಅದರ ಅಪಬ್ರಂಶವೇ ಜುಜು ಎಂಬ ಒಂದು ಸಿದ್ದಾಂತವಿದೆ. ಪ್ರೆಂಚಿನಲ್ಲಿ ಆಟದ ಬೊಂಬೆಯನ್ನು ‘ಜೌಜೌ’ ಎನ್ನುತ್ತಾರೆ. ಬಹುಶಹ ಇದರಿಂದ ಜುಜು ಪದ ಎರವಲು ಪಡೆದಿರಬಹುದು ಎಂಬುದು ಮತ್ತೊಂದು ಸಿದ್ದಾಂತ.
ಜುಜು ಎಂಬ ಪದವು 17ನೇ ಶತಮಾನದಲ್ಲಿ ಯೂರೋಪಿನಾದ್ಯಂತ ಬಹಳಶ್ಟು ಜನಪ್ರಿಯತೆ ಗಳಿಸಿತು. ಪಶ್ಚಿಮ ಆಪ್ರಿಕಾದ ವೈದ್ಯರು ಈ ಟೋಪಿಯನ್ನು ದರಿಸುತ್ತಿದ್ದುದೇ ಅದರ ಜನಪ್ರಿಯತೆಗೆ ಮೂಲ ಕಾರಣ. ಅಟ್ಲಾಂಟಿಕ್ ಗುಲಾಮರ ಮಾರಾಟ ಕಾಲದಲ್ಲಿ ಜುಜು ಎಂಬ ಪದ ಅವರೊಂದಿಗೆ ಪ್ರಯಾಣ ಬೆಳೆಸಿ ಅಮೇರಿಕಾಕ್ಕೂ ಕಾಲಿಟ್ಟಿತು. ಅಲ್ಲಿ ಮಂತ್ರವಾದಿಗಳು, ತಾಯಿತ ಕಟ್ಟುವವರು ಹಾಗೂ ಮಾಟಗಾತಿಯರನ್ನು ಉಲ್ಲೇಕಿಸಲು ಸಾಮಾನ್ಯವಾಗಿ ಈ ಶಬ್ದವನ್ನು ಬಳಸುತ್ತಾರೆ.
ಬುಡಕಟ್ಟು ಜನಾಂಗದವರಿಗೆ ಈ ಟೋಪಿಗಳು ಸಮ್ರುದ್ದಿಯ ಸಂಕೇತ!
ಜುಜು ಟೋಪಿಗಳು ಬಮಿಲೆಕೆ ಬುಡಕಟ್ಟು ಜನಾಂಗದವರಲ್ಲಿ ಸಮ್ರುದ್ದಿಯ ಹಾಗೂ ಪಕ್ಶಿಗಳ ಗುಣಗಳನ್ನು ಸಂಕೇತಿಸುತ್ತದೆ. ಅತ್ಯಂತ ವಿಸ್ತಾರವಾದ ಜುಜು ಟೋಪಿಗಳನ್ನು ಅನುವಂಶಿಕ ಹಕ್ಕು ಹೊಂದಿರುವ ಎಂಟು ಜನ ಮಾತ್ರ ದರಿಸಬಹುದು. ಅವರನ್ನು ಮ್ಕೆಮ್ ಎನ್ನುತ್ತಾರೆ. ಬಮಿಲೆಕೆ ಬುಡಕಟ್ಟು ಜನಾಂಗದ ಮುಕ್ಯಸ್ತನಿಗೆ ಜುಜು ಟೋಪಿಯೊಡನೆ ಆನೆ ಮತ್ತು ಚಿರತೆಯ ಮುಕವಾಡ ಮೀಸಲಾಗಿದೆ. ಆತನೇ ಪಾನ್. ಬುಡಕಟ್ಟಿನ ಮುಕ್ಯಸ್ತ ಪಾನ್‍ಗೆ ಅಲೌಕಿಕ ಶಕ್ತಿಯಿದೆ ಎಂದು ಅಲ್ಲಿನ ಜನರ ನಂಬಿಕೆ.
ಬಮಿಲೆಕೆ ಸಮಾಜದಲ್ಲಿ ಮತ್ತೊಂದು ಗಣ್ಯ ಗುಂಪಿದೆ. ಅದೇ ಕುಯೊಸಿ. ಶ್ರೀಮಂತರಾದ ನಿವ್ರುತ್ತ ಯೋದರು ಅವರು. ಈ ಕುಯೊಸಿಗಳು ಚದ್ಮವೇಶದ ನಾಟಕೀಯ ಹಾಸ್ಯಾಸ್ಪದ ಜುಜು ಟೋಪಿಗಳ ಪ್ರದರ‍್ಶನಕ್ಕೆ ಜವಾಬ್ದಾರರು. ಅವರು ದರಿಸುವ ಮುಕವಾಡಗಳು ಸ್ತ್ರೀ ಮತ್ತು ಪುರುಶನ ತಲೆ, ಎಮ್ಮೆ, ಪಕ್ಶಿ ಹಾಗೂ ಪ್ರಾಣಿಗಳನ್ನು ಪ್ರತಿನಿದಿಸುತ್ತವೆ. ಸಮಾಜದಲ್ಲಿ ಉನ್ನತ ಸ್ತಾನಕ್ಕೆ ಏರುತ್ತಾ ಹೋದಲ್ಲಿ ಜುಜು ಟೋಪಿಯ ವಿನ್ಯಾಸ ರೋಚಕವಾಗುತ್ತ ಹೋಗುತ್ತದೆ ಹಾಗೂ ಹೆಚ್ಚು ಹೆಚ್ಚು ವರ‍್ಣರಂಜಿತವಾಗುತ್ತದೆ.
ಬಗೆ ಬಗೆಯ ಗರಿಗಳಿಂದ ಜುಜು ಟೋಪಿಗಳನ್ನು ಮಾಡಲಾಗುತ್ತದೆ
ಜುಜು ಟೋಪಿಗಳನ್ನು ನೈಸರ‍್ಗಿಕವಾದ ಗರಿಗಳನ್ನು, ಕೋಳಿ ಇಲ್ಲವೇ ಇತರೆ ಪಕ್ಶಿಗಳ ಗರಿಗಳಿಗೆ ಬಣ್ಣ ಹಾಕಿ, ನೇಯ್ದು ಪಾಮ್ ಮರದ ನಾರಿನಿಂದ ಹೊಲಿಯಲಾಗುತ್ತೆ. ಟೋಪಿಯ ಹಿಂಬಾಗಕ್ಕೆ ಲಗತ್ತಿಸಲಾದ ಚರ‍್ಮದ ಪಟ್ಟಿ ಟೋಪಿಯನ್ನು ಪೂರ‍್ಣ ಪ್ರಮಾಣಕ್ಕೆ ಹಿಗ್ಗಿಸಲು ಅತವಾ ಕುಗ್ಗಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಜುಜು ಟೋಪಿಯ ವ್ಯಾಸ 80 ಸೆಂ.ಮೀ. ಬಳಕೆಯಲ್ಲಿ ಇಲ್ಲದಿದ್ದಾಗ ಗರಿಗಳನ್ನು ಹಾಳಾಗದಂತೆ ಒಳಗೆ ಮಡಿಚಿಡಲು ಅವಕಾಶ ಕಲ್ಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಜುಜು ಟೋಪಿಗಳ ಪ್ಯಾಶನ್ ಗೀಳು ಬಹಳ ವಿಚಿತ್ರವಾಗಿದೆ ಹಾಗೂ ತಮಾಶೆಯಾಗಿದೆ. ಚಿತ್ರ ವಿಚಿತ್ರ ಬಣ್ಣ ಹಾಗೂ ಆಕಾರದ ಟೋಪಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ತಯಾರಕರ ದ್ರುಶ್ಟಿಕೋನದಂತೆ ನಾನಾ ರೀತಿಯ ಜುಜು ಟೋಪಿಗಳು ತಯಾರಾಗುತ್ತವೆ. ಮತ್ತೊಂದು ದ್ರುಶ್ಟಿಕೋನದಿಂದ ಗಮನಿಸಿದಲ್ಲಿ ಶ್ರೀಮಂತ ಮಹಿಳೆಯರನ್ನು ಮಂತ್ರಮುಗ್ದರನ್ನಾಗಿಸಿದ ಈ ಟೋಪಿ ಅಲಂಕಾರಿಕ ವಸ್ತುವಾಗಿ ಬವ್ಯ ಬಂಗಲೆಗಳ ಗೋಡೆಗಳ ಮೇಲೆ ವಿವಿದ ವಿನ್ಯಾಸದಲ್ಲಿ ರಾರಾಜಿಸುತ್ತಾ ಗೋಡೆಯ ಶೋಬೆಯನ್ನು ದ್ವಿಗುಣಗೊಳಿಸಿದೆ. ಮನೆಯ ಅಳತೆ, ಗೋಡೆಗಳಿಗೆ ಬಳಿದಿರುವ ಬಣ್ಣ ಇವುಗಳಿಗೆ ಹೊಂದುವ ಜುಜು ಹ್ಯಾಟ್‍ಗಳನ್ನು ತಯಾರಿಸುವ ಕಂಪನಿಗಳು ಈಗ ತಲೆಯೆತ್ತಿರುವುದು ಈ ಹ್ಯಾಟ್‍ಗೆ ವಿಶ್ವದಲ್ಲಿ ದಕ್ಕಿರುವ ಮನ್ನಣೆಯ ಸಂಕೇತ.
(ಮಾಹಿತಿ ಸೆಲೆ: designmyworld.net)
(ಚಿತ್ರ ಸೆಲೆ: designmyworld.net)
ಇತ್ತೀಚಿನ ಅನಿಸಿಕೆಗಳು