ಅಪತಾನಿ ಹೆಂಗಸರ ಹಚ್ಚೆ ಮತ್ತು ಮೂಗಿನ ಬಿರಡೆ
– ಕೆ.ವಿ.ಶಶಿದರ.
ಸುಂದರವಾಗಿ ಕಾಣಲು ಹಲವರು ಅನೇಕ ಕ್ರುತಕ ಸೌಂದರ್ಯ ಸಾದನಗಳನ್ನು ಬಳಸುವುದು ಜಗಜ್ಜಾಹೀರಾದ ಸತ್ಯ. ಇದನ್ನು ಮನಗಂಡ ಹಲವಾರು ಸಂಸ್ತೆಗಳು ಮಿಲಿಯಗಟ್ಟಲೆ ಹಣ ಸುರಿದು ಕಂಪನಿಗಳನ್ನು ಹುಟ್ಟು ಹಾಕಿದ್ದಾರೆ. ಇಂತಹ ಕಂಪನಿಗಳಿಂದ ಪ್ರತಿದಿನ ಹೊಸ ಹೊಸ ಸೌಂದರ್ಯ ವರ್ದಕಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಇವೆಲ್ಲಾ ಯಾಕೆ ಹೇಳ ಹೊರಟೆನೆಂದರೆ ಬಾರತದಲ್ಲಿ ಒಂದು ಜನಾಂಗವಿದೆ. ಅಪತಾನಿ ಎಂದು ಕರೆಯಲ್ಪಡುವ ಈ ಬುಡಕಟ್ಟು ಜನಾಂಗದವರು ಸೌಂದರ್ಯಕ್ಕೆ ವ್ಯತಿರಿಕ್ತವಾದ ಸಂಪ್ರದಾಯವನ್ನು ಹೊಂದಿದ್ದಾರೆ. ಈ ಜನಾಂಗದ ಗಂಡಸರಲ್ಲಿ ಬೇರೂರಿರುವ ನಂಬಿಕೆಯಂತೆ, ತಮ್ಮ ಜನಾಂಗದ ಹೆಂಗಸರು ಅಪ್ರತಿಮ ಸುಂದರಿಯರು. ಹಾಗಾಗಿ ಅವರನ್ನು ಕಾಪಾಡಲು ಅವರು ಕುರೂಪಾಗಿ ಕಾಣುವಂತೆ ಮಾಡುವ ದೇಹ ಪರಿವರ್ತನೆಯ ಪ್ರಕ್ರಿಯೆ ತಲೆತಲಾಂತರದಿಂದ ನಡೆದುಬಂದಿದೆ!
ದೇಹ ಪರಿವರ್ತನೆಗೆ ಇವರು ಕಂಡುಕೊಂಡ ದಾರಿ ಹೆಂಗಸರ ಮೂಗಿಗೆ ಬಿರಡೆ ಹಾಗೂ ಮುಕದ ಮೇಲೆ ಹಚ್ಚೆ ಹಾಕುವುದು. ಇವರು ಮೂಲತಹ ತಾನಿಸ್ ಪಂಗಡಕ್ಕೆ ಸೇರಿದ್ದು ಅಪತಾನಿ ಎನ್ನುವ ಹೆಸರು ಇವರು ನೆಲೆಸಿರುವ ಅರುಣಾಚಲ ಪ್ರದೇಶದ ಲೋಯರ್ ಸುಬನ್ಸಿರಿ ಜಿಲ್ಲೆಯ ಅಪತಾನಿ ಪ್ರಸ್ತಬೂಮಿಯಿಂದ ಬಂದಿದೆ. ಇಲ್ಲಿಗೆ ಇವರು ವಲಸೆ ಬಂದವರು. ಯಾವಾಗ ಇಲ್ಲಿಗೆ ವಲಸೆ ಬಂದರು? ಎಲ್ಲಿಂದ ಬಂದರು? ಯಾವುದಕ್ಕೂ ಸರಿಯಾದ ದಾಕಲೆಗಳಿಲ್ಲ.
ಇವರು ಕ್ರುಶಿಯಲ್ಲಿ ಎತ್ತಿದ ಕೈ!
ಅಪತಾನಿ ಅತವಾ ತಾನಿಸ್ ಪಂಗಡದಲ್ಲಿ ಸರಿ ಸುಮಾರು 60 ಸಾವಿರ ಸದಸ್ಯರಿದ್ದಾರೆ. ಇವರ ಮೂಲ ಕಾಯಕ ಕ್ರುಶಿ. ತಾನಿಸ್ ಪಂಗಡದವರು ಅನುಸರಿಸುತ್ತಿರುವ ಅತ್ಯಂತ ಪರಿಣಾಮಕಾರಿ ಕ್ರುಶಿ ವಿದಾನ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದೆ. ಯಾವುದೇ ಯಂತ್ರ ಅತವಾ ಪ್ರಾಣಿಯ ಸಹಾಯವಿಲ್ಲದೆ ಕ್ರುಶಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಗ್ಗಳಿಕೆ. ಈ ಕ್ರುಶಿ ವಿದಾನದ ಬಗ್ಗೆ ಎಲ್ಲೂ ದಾಕಲೆಗಳಿಲ್ಲ. ಸಂಪ್ರದಾಯದಂತೆ ಈ ಪದ್ದತಿ ಪೀಳಿಗೆಯಿಂದ ಪೀಳಿಗೆಗೆ ಮೌಕಿಕವಾಗಿ ಹರಿದು ಬಂದಿದೆ.
ಈ ಬುಡಕಟ್ಟಿನ ಹೆಂಗಸರು ತುಂಬಾ ಸುಂದರವಾಗಿದ್ದಾರೆ, ನೆರೆಹೊರೆಯ ಬುಡಕಟ್ಟು ಜನಾಂಗದ ಗಂಡಸರು ಇವರ ಸೌಂದರ್ಯಕ್ಕೆ ಮಾರುಹೋಗಿ ಅಪಹರಿಸುತ್ತಾರೆ ಎಂಬ ವದಂತಿ ಇವರಲ್ಲಿ ಇತ್ತು. ಅಪಹರಣ ಆಗದಂತೆ ತಡೆಯಲು ಹಿರಿಯರು ಕಂಡುಕೊಂಡ ದಾರಿ ಎಂದರೆ ಹೆಂಗಸರ ಸೌಂದರ್ಯವನ್ನು ಕ್ರುತಕವಾಗಿ ಕಡಿಮೆ ಮಾಡುವುದು. ಇದಕ್ಕಾಗಿ ಅವರು ಹೆಂಗಸರ ಮುಕಕ್ಕೆ ಹಚ್ಚೆ ಮತ್ತು ಮೂಗಿಗೆ ಬಿರಡೆ ಹಾಕುವುದನ್ನು ಪ್ರಾರಂಬಿಸಿದರು.
ಮುಕದ ಮೇಲಿನ ಹಚ್ಚೆ ಹಾಗೂ ಮೂಗಿನ ಬಿರಡೆ ಇವರಿಗೆ ಹೆಗ್ಗುರುತು!
ಮುಕದ ಮೇಲಿನ ಹಚ್ಚೆ ಮತ್ತು ಮೂಗಿನ ಬಿರಡೆ ಇವು ಅಪತಾನಿ ಹೆಂಗಸರ ಹೆಗ್ಗುರುತು. ಇದಕ್ಕೆ ಹೊಂದುವ ಜಾನಪದ ಕತೆಯನ್ನೂ ಸಹ ಅವರು ಹೇಳುತ್ತಾರೆ. ಮೂಲವಾಗಿ ಮೇಲೆ ಹೇಳಿದಂತೆ ಹೆಂಗಸರ ಅಪಹರಣವನ್ನು ತಡೆಯುವ ನಿಟ್ಟಿನಲ್ಲಿ ಈ ದೇಹದ ಮಾರ್ಪಾಡು ಎನ್ನುವುದು ಮಾತ್ರ ಸತ್ಯ. ಇದರಿಂದ ಅವರ ಸೌಂದರ್ಯ ಮರೆಯಾಗುತ್ತದೆ ಎನ್ನುವುದು ಗಂಡಸರ ನಂಬಿಕೆ.
ಅಪತಾನಿ ಜನಾಂಗದ ಹೆಣ್ಣು ಮಕ್ಕಳು ಹತ್ತು ವರ್ಶದವರಿರುವಾಗಲೇ ಜನಾಂಗದ ಹಿರಿಯ ಹೆಂಗಸು ‘ಟಿಪ್ಪಿ’ ಎನ್ನಲಾಗುವ ಹಚ್ಚೆಯನ್ನು ಮುಕದ ಮೇಲೆ ಹಾಕುವುದು ವಾಡಿಕೆ. ಅಗ್ಗಿಶ್ಟಿಕೆಯಿಂದ ಬರುವ ಕಪ್ಪು ಮಸಿ ಮತ್ತು ಹಂದಿಯ ಕೊಬ್ಬನ್ನು ಬಳಸಿ ಶಾಯಿ ತಯಾರಿಸಿ ಹಚ್ಚೆ ಹಾಕುವುದು ರೂಡಿ. ಹೆಣ್ಣು ಮಗುವಿನ ತಲೆಯನ್ನು ಒಬ್ಬ ಹಿರಿಯ ಹೆಂಗಸು ಹಿಡಿಯುತ್ತಾಳೆ ಮತ್ತು ಮತ್ತೊಬ್ಬಳು ಹಚ್ಚೆಯ ಕಲೆಯನ್ನು ರಚಿಸುತ್ತಾಳೆ. ಹಚ್ಚೆಯನ್ನು ಅಪತಾನಿ ಬಾಲಕಿಯ ಹಣೆಯ ಮೇಲ್ಬಾಗದಿಂದ ಮೂಗಿನ ತುದಿಯವರೆಗೂ ನೇರ ಗೆರೆಯನ್ನು, ಬಳಿಕ ಗಲ್ಲದ ಮೇಲೆ ದಪ್ಪವಾದ ಐದು ನೇರ ಗೆರೆಗಳನ್ನು ಹಾಕಲಾಗುತ್ತೆ.
ಬಹಳಶ್ಟು ಅಪತಾನಿ ಹೆಂಗಸರು ಹಚ್ಚೆಯಿಂದಾದ ತಮ್ಮ ಮುಕದ ಮಾರ್ಪಾಟಿನ ಬಗ್ಗೆ ಹಾಗೂ ತಮ್ಮ ಜನಾಂಗದ ಹೆಂಗಸರ ಗುರುತಿನ ಮೂಲದ ಬಗ್ಗೆ ಹೆಮ್ಮೆ ಪಡುತ್ತಾರೆ. ಈ ಹಚ್ಚೆಯನ್ನು ಅಪತಾನಿ ಗಂಡಸರಿಗೂ ಹಾಕಲಾಗುತ್ತದೆ. ಗಂಡಸರ ಗಲ್ಲದ ಮೇಲೆ ಇಂಗ್ಲಿಶಿನ ‘ಟಿ’ ಅಕ್ಶರದ ಸಣ್ಣ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಅಪತಾನಿ ಜನಾಂಗದಲ್ಲಿನ ಸಾಂಪ್ರದಾಯಿಕ ಗುರುತಾದ ಮೂಗಿನ ಬಿರಡೆ ಮತ್ತು ಮುಕದ ಹಚ್ಚೆ ಹೊಂದಿರುವ ಬಹಳಶ್ಟು ಹೆಂಗಸರು ಈಗ 45 ವರ್ಶಕ್ಕಿಂತಾ ಮೇಲ್ಪಟ್ಟವರಾಗಿದ್ದಾರೆ. ಕಾರಣ 1970ರ ದಶಕದ ಆರಂಬದಲ್ಲಿ ಈ ಸಂಪ್ರದಾಯಕ್ಕೆ ಸರ್ಕಾರ ಹೇರಿದ ನಿಶೇದ.
ತಾನಿಸ್ ಹೆಂಗಸರಿಗೆ ದೊಡ್ಡ ದೊಡ್ಡ ಮೂಗಿನ ಬಿರಡೆ ಹೊಂದುವುದು ಪ್ರತಿಶ್ಟೆ. ಇದು ತಮ್ಮ ಸಂಪ್ರದಾಯದ ಅವಿಬಾಜ್ಯ ಅಂಗವೆಂದು ಅವರು ಪರಿಗಣಿಸುತ್ತಾರೆ. ಅತಿ ದೊಡ್ಡ ಮೂಗಿನ ಬಿರಡೆ ಹೊಂದಿದವರಿಗೆ ಬಹುಮಾನ ನೀಡುವುದೂ ಸಹ ರೂಡಿಯಲ್ಲಿದೆ.
(ಮಾಹಿತಿ ಸೆಲೆ: barcroft.tv, odditycentral.com)
(ಚಿತ್ರ ಸೆಲೆ: wiki)
ಇತ್ತೀಚಿನ ಅನಿಸಿಕೆಗಳು