ಅಂಬರೀಶ್ – ಮರೆಯಲಾಗದ ವ್ಯಕ್ತಿ ಮತ್ತು ವ್ಯಕ್ತಿತ್ವ
– ವೆಂಕಟೇಶ ಚಾಗಿ.
ಕೆಲವು ಸಿನಿಮಾಗಳ ಕೆಲವೊಂದು ಡೈಲಾಗ್ ಗಳನ್ನು ಮರೆಯಲು ಸಾದ್ಯವೇ ಇಲ್ಲ. ಅಂಬರೀಶ್ ರವರ ‘ಏ ಬುಲ್ ಬುಲ್ ಮಾತಾಡಾಕಿಲ್ವಾ’ ಡೈಲಾಗ್ ತುಂಬಾ ಜನಪ್ರಿಯ. ಇದರೊಂದಿಗೆ ಅವರ “ಕುತ್ತೇ ಕನ್ವರ್ ನಹೀ ಕನ್ವರ್ ಲಾಲ್ ಬೋಲೊ” ಡೈಲಾಗ್ ಕೂಡ. ಹೀಗೆ ಹಲವಾರು ಡೈಲಾಗ್ ಗಳ ಮತ್ತು ತಮ್ಮ ನಟನೆಯ ಮೂಲಕ ಕೋಟ್ಯಂತರ ಜನರ ಹ್ರುದಯ ಗೆದ್ದ ಅಂಬರೀಶ್ ಒಬ್ಬ ಮಹಾನ್ ಕಲಾವಿದರು. ಅವರದೇ ಆದ ಮ್ಯಾನರಿಸಂ ಮೂಲಕ ಪ್ರೇಕ್ಶಕರನ್ನು ಮಂತ್ರಮುಗ್ದಗೊಳಿಸಿದ್ದರು. ಸಾಮಾಜಿಕ, ಕೌಟುಂಬಿಕ, ಪ್ರಯೋಗಾತ್ಮಕ, ರಾಜಕೀಯ ವಿಶಯವುಳ್ಳ ಸಿನೆಮಾಗಳಲ್ಲಿ ಅಬೂತಪೂರ‍್ವ ಅಬಿನಯವನ್ನು ಉಣಬಡಿಸಿದ ಅಂಬಿ ಇನ್ನು ನಮ್ಮೊಂದಿಗಿರುವುದಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ವಿಶಯ.
ಅಂಬರೀಶ್ ರವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ ಮೇ 29, 1952 ರಂದು ಜನಿಸಿದರು. ಇವರ ತಂದೆ ಹುಚ್ಚೇಗೌಡರು, ತಾಯಿ ಪದ್ಮಮ್ಮ. “ನಾಗರಹಾವು” ಚಿತ್ರದ ಮೂಲಕ ಡಾ|| ವಿಶ್ಣುವರ‍್ದನ್ ರೊಂದಿಗೆ ಚಿತ್ರರಂಗಕ್ಕೆ ಪಾದಾರ‍್ಪಣೆ ಮಾಡಿದರು. ಆ ಚಿತ್ರದ ಜಲೀಲನ ಪಾತ್ರ ಇಂದಿಗೂ ಚಿತ್ರಪ್ರೇಮಿಗಳಿಗೆ ಅಚ್ಚುಮೆಚ್ಚು. ಅಂತ, ಚಕ್ರವ್ಯೂಹ, ನ್ಯೂ ಡೆಲ್ಲಿ ಚಿತ್ರಗಳಲ್ಲಿನ ಅವರ ಅಬಿನಯ ಎಂದಿಗೂ ಮರೆಯಲಾಗದಂತದ್ದು.
ಅವರು ನಟಿಸಿದ ಮೊದಲ ಚಲನಚಿತ್ರ ‘ನಾಗರಹಾವು’ನಿಂದ ಇತ್ತೀಚಿನ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದವರೆಗೂ ಅವರ ಮನೋಗ್ನ ಅಬಿನಯದಿಂದ ಎಲ್ಲ ವರ‍್ಗದ ಜನರನ್ನೂ ಸೆಳೆದರು. ಡಾ|| ರಾಜಕುಮಾರ್, ಡಾ|| ವಿಶ್ಣುವರ‍್ದನ್ ರೊಂದಿಗೂ ನಟಿಸಿ, ಅವರಂತೆಯೇ ಪ್ರಸಿದ್ದ ಸಿನಿಮಾ ನಟರಾಗಿದ್ದರು. ಚಿತ್ರರಂಗಕ್ಕೆ ಹಿರಿಯಣ್ಣರಂತಿದ್ದ ಅಂಬರೀಶ್ ಚಿತ್ರರಂಗದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅಂಬರೀಶ್ ಒಬ್ಬ ಕಲಾವಿದನಾಗಿ ಮಾತ್ರವಲ್ಲದೇ ನೊಂದವರಿಗೆ ಮತ್ತು ಸಹಾಯ ಬೇಡಿ ಬಂದವರಿಗೆ ನೆರವು ನೀಡುವ ಮೂಲಕ ಜನರ ಮನದೊಳಗೆ ಯಾವಾಗಲೂ ನೆಲೆಸಿರುತ್ತಾರೆ. ಅವರ ಈ ಸಾಮಾಜಿಕ ಕಳಕಳಿ ಮರೆಯಲಾಗುವುದಿಲ್ಲ.
ಅಂಬರೀಶ್ ಅವರ ಸಾವಿನಿಂದ ನಟನಾ ವಲಯದ ಹಿರಿಯ ತಲೆಮಾರಿನ ಹಾಗೂ ಹೊಸ ತಲೆಮಾರಿನ ನಡುವಿನ ಕೊಂಡಿ ಕಳಚಿದೆ ಎಂದರೆ ತಪ್ಪಾಗಲಾರದು. ಚಿತ್ರರಂಗಕ್ಕೆ ಹಾಗೂ ಕನ್ನಡಿಗರಿಗೆ ಅಂಬರೀಶ್ ರವರ ಸಾವು ತುಂಬಲಾರದಂತ ನಶ್ಟ ಉಂಟುಮಾಡಿದೆ. ‘ಕುಚಿಕು ಕುಚಿಕು’ ಎಂದಿದ್ದ ಆಪ್ತಮಿತ್ರ ನನ್ನು ಸೇರಲು ಪ್ರಯಾಣ ಬೆಳೆಸಿದ್ದಾರೆ ನಮ್ಮ ಅಂಬಿ.
ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಅವರ ಕುಟುಂಬಕ್ಕೆ ಈ ದುಗುಡವನ್ನು ತಾಳಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ.
ನೆನಪಿನ ಪುಟಗಳಲ್ಲಿ ಅವರೆಂದೂ “ಅಜರಾಮರ”