ಆನೆಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು

– ನಾಗರಾಜ್ ಬದ್ರಾ.

ಈ ನೆಲದ ಮೇಲಿನ ಅತ್ಯಂತ ಕಸುವುಳ್ಳ ಪ್ರಾಣಿಗಳಲ್ಲಿ ಒಂದಾದ ಆನೆ ಕಂಡರೆ ಯಾರಿಗೆ ಇಶ್ಟವಿಲ್ಲ ಹೇಳಿ. ಸರ‍್ಕಸ್ ನಲ್ಲಿ ಮಂದಿಗೆ ಮನೋರಂಜನೆ ನೀಡಲೂ ಸೈ, ಜಾತ್ರೆಯಲ್ಲಿನ ಮೆರವಣಿಗೆಗೂ ಸೈ, ಕಾಳಗದಲ್ಲಿ ಸೈನಿಕನಂತೆ ಕಾದಾಡಲೂ ಸೈ. ಅಶ್ಟೇ ಏಕೆ, ಮೈಸೂರು ದಸರಾ ಹಬ್ಬದ ಕೇಂದ್ರ ಬಿಂದುವಾದ ಅಂಬಾರಿಯನ್ನು ಹೊತ್ತು ನಡೆವುದು ಆನೆಯೇ ಅಲ್ಲವೇ!? ಇಂತಾ ಆನೆಗಳ ಬಗ್ಗೆ ಒಂದಶ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿಯೋಣ ಬನ್ನಿ.

ಆನೆಗಳ ಕೋರೆದಾಡೆಗಳು ಕೈಗಳಂತೆ ಕೆಲಸ ಮಾಡುತ್ತವೆ

ಆನೆಗಳ ಕೋರೆದಾಡೆಗಳು (tusk) ಕೈಗಳಂತೆ ಕೆಲಸ ಮಾಡುತ್ತವೆ. ಮನುಶ್ಯರಲ್ಲಿ ಹೇಗೆ ಹಲವರು ಹೆಚ್ಚಿನ ಕೆಲಸಗಳಿಗೆ ಬಲಗೈಯನ್ನು ಬಳಸುವರೋ, ಇನ್ನೂ ಕೆಲವರು ಎಡಗೈಯನ್ನು ಬಳಸುತ್ತಾರೆಯೋ, ಆನೆಗಳಲ್ಲೂ ಕೂಡ ಅದೇ ರೀತಿ ಇದೆ. ಆನೆಗಳು ಎರಡು ಕೋರೆದಾಡೆಗಳನ್ನು ಹೊಂದಿದ್ದು, ಕೆಲವೊಂದು ಆನೆಗಳು ವಸ್ತುಗಳನ್ನು ಎತ್ತಲು ಹಾಗೂ ಮರಗಳಿಂದ ಎಲೆ, ತೊಗಟೆಗಳನ್ನು ತೆಗೆಯಲು ಬಲ ಕೋರೆದಾಡೆಯನ್ನು ಹೆಚ್ಚಾಗಿ ಬಳಸಿದರೆ, ಇನ್ನೂ ಕೆಲವು ಎಡ ಕೋರೆದಾಡೆಯನ್ನು ಬಳಸುತ್ತವೆ.

ಆನೆಗಳ ನಡುವೆ ವಿಶಯ ತಿಳಿಸುವ ಬಗೆ ಹೀಗಿದೆ

ಆನೆಗಳು ಹತ್ತಿರದ ಜಾಗದಲ್ಲಿ ಇರುವಾಗ ಸಪ್ಪಳದ ಮೂಲಕ ಅರುಹಿಸುವಿಕೆ ( communicate) ನಡೆಸಿದರೆ, ದೂರದ ಜಾಗದಲ್ಲಿದ್ದರೆ ಇನ್ಪ್ರಾಸೌಂಡ್ (infra sound) ಹಾಗೂ ನೆಲಗುಡುಗಿನ (seismic) ಇಲ್ಲವೇ ನೀರಿನ ಅಲೆಗಳನ್ನು ಬಳಸುತ್ತವೆ. ಆನೆಗಳು ತುಂಬಾ ಕಡಿಮೆ ಸಲದೆಣಿಕೆ (frequency) ಸಪ್ಪಳದಿಂದ ಹಿಡಿದು ಅತಿ ಮೇಲ್ಮಟ್ಟದ ಸಪ್ಪಳಗಳನ್ನು ಹುಟ್ಟು ಹಾಕಬಲ್ಲವು. ಒಂದೊಂದು ಸನ್ನಿವೇಶಕ್ಕೆ ಒಂದೊಂದು ಬಗೆಯ ಸಪ್ಪಳಗಳನ್ನು ಉಂಟು ಮಾಡುತ್ತವೆ.

ಆನೆಗೆ ಮಣ್ಣೆಂದರೆ ಯಾಕೆ ಇಶ್ಟ ಗೊತ್ತೇ?

ಆನೆಗಳ ಮೈ ತೊಗಲು ತುಂಬಾ ದಪ್ಪ ಹಾಗೂ ಗಟ್ಟಿಯಾಗಿರುತ್ತದೆ. ತಲೆ ಹಾಗೂ ಮೈ ಹಿಂಬಾಗದಲ್ಲಿ ವಿಶೇಶವಾಗಿ ಸುಮಾರು 2.5 ಸೆಂಟಿ ಮೀಟರ‍್‌ನಶ್ಟು ದಪ್ಪವಾಗಿರುತ್ತದೆ. ಇನ್ನು ಬಾಯಿ ಸುತ್ತಲೂ ಹಾಗೂ ಕಿವಿಯ ಒಳಗಿನ ತೊಗಲು ತುಂಬಾ ತೆಳುವಾಗಿರುತ್ತದೆ. ಆನೆಗಳ ತೊಗಲು ದಪ್ಪವಾಗಿದರೂ, ಬಹಳ ಸೂಕ್ಶ್ಮವಾಗಿರುತ್ತದೆ (sensitive). ಇವು ಸೂರ‍್ಯನ ಅತಿ ನೇರಳೆ ಕಿರಣಗಳಿಂದ ಮೈ ತೊಗಲನ್ನು ಕಾಪಾಡಲು ಮಣ್ಣನ್ನು ಬಳಸುತ್ತದೆ. ಇದಲ್ಲದೇ ಕೀಟಗಳ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಹಾಗೂ ಮೈಯ ನೀರಿನ ಪಸೆಯನ್ನು (moisture) ಕಾಪಾಡಲು ನಿಯಮಿತವಾಗಿ ಮಣ್ಣಿನಿಂದ ಸ್ನಾನ ಮಾಡುತ್ತವೆ.

ಆನೆಗಳು ಈಜುವುದಕ್ಕೆ ಹೆಸರುವಾಸಿ

ಆನೆಗಳಿಗೆ ನೀರಿನಲ್ಲಿ ಆಡುವುದು ಎಂದರೆ ತುಂಬಾ ಇಶ್ಟ, ಎಲ್ಲಾ ಹಾಲೂಡಿಗಳಂತೆ (mammals) ಆನೆಗಳಿಗೂ ಕೂಡ ಈಜುವ ಚಳಕ ಹುಟ್ಟಿನಿಂದಲೇ ಬಂದಿರುತ್ತದೆ. ಬೆರಗಾಗುವ ಸಂಗತಿ ಎಂದರೆ ಅಶ್ಟೊಂದು ದೊಡ್ಡ ತೂಕದ ಮೈಯನ್ನು ಹೊಂದಿದ್ದರೂ ಇವುಗಳು ತುಂಬಾ ಸುಳುವಾಗಿ ನೀರಿನಲ್ಲಿ ತೇಲಾಡುತ್ತವೆ. ಆನೆಗಳು ಸಂಪೂರ‍್ಣವಾಗಿ ನೀರಿನಲ್ಲಿ ಮುಳುಗಿ ಹಾಗೂ ತಲೆ ಮಾತ್ರ ನೀರಿನ ಮೇಲೆ ಇರುವಂತೆ ಎರಡೂ ಬಗೆಯಲ್ಲಿ ಈಜಬಲ್ಲವು. ಇವು ಈಜುವಾಗ ತಮ್ಮ ನಾಲ್ಕು ಕಾಲುಗಳನ್ನು ಹುಟ್ಟುಗಳಂತೆ ಬಳಸುತ್ತವೆ. ಆನೆಗಳು ನೀರಿನಲ್ಲಿ ಸುಳುವಾಗಿ ಈಜಲು ಮುಕ್ಯ ಕಾರಣವೆಂದರೆ ಅವುಗಳ ಸೊಂಡಿಲು. ಇದು ಆನೆಗಳು ಈಜುವಾಗ ಸಲೀಸಾಗಿ ಉಸಿರಾಡಲು ಹಾಗೂ ತುಂಬಾ ದೂರದವರೆಗೆ ಸಾಗಲು ನೆರವಾಗುತ್ತದೆ.

ಆನೆ ನಿಮ್ಮನ್ನು ಅಟ್ಟಿಸಿಕೊಂಡು ಬಂದರೆ ಹೀಗೆ ಮಾಡಿ

ಆನೆಯು ಸುಮಾರು 2000 ಕೆ.ಜಿ ಯಿಂದ 4000 ಕೆ.ಜಿ. ಗಳಶ್ಟು ತೂಕ ಹೊಂದಿದ್ದು, ಈ ನೆಲದ ಮೇಲಿನ ಅತ್ಯಂತ ದೊಡ್ಡ ಪ್ರಾಣಿಗಳಲ್ಲಿ ಒಂದಾಗಿದೆ.ಇವುಗಳ ಮೈ ತೂಕವು ತುಂಬಾ ಹೆಚ್ಚಾಗಿರುವುದರಿಂದ ಇಳಿಜಾರಿನ ಜಾಗದಲ್ಲಿ ಬಿರುಸಾಗಿ ಓಡಿದರೆ ಉರುಳಿ ಬಿಳಬಹುದು ಎಂದು ಹೆದರುತ್ತವೆ. ಆದ್ದರಿಂದ ಆನೆಗಳು ಅಟ್ಟಿಸಿಕೊಂಡು ಬಂದಾಗ ಇಳಿಜಾರಿನ ಜಾಗದಲ್ಲಿ ಓಡುವುದು ಒಳ್ಳೆಯದು.

ಆನೆಗಳು ಕೂಡ ಒಂದು ಕುಟುಂಬದಂತೆ ಬದುಕುತ್ತವೆ

ಆನೆಗಳು ಇತರೆ ಉಸಿರಿಗಳಿಗಿಂತ ಬೇರೆಯಾಗಿದ್ದು, ಒಂದು ಕುಟುಂಬದಂತೆ ಬದುಕಲು ಇಶ್ಟ ಪಡುತ್ತವೆ. ಇವುಗಳಲ್ಲಿ ಹಿರಿಯ ಹೆಣ್ಣು ಆನೆಯು ಕುಟುಂಬದ ಮುಂದಾಳತ್ವವನ್ನು ವಹಿಸಿಕೊಳ್ಳುತ್ತದೆ. ಒಂದು ಕುಟುಂಬವು ಸಾಮಾನ್ಯವಾಗಿ ತಾಯಿ ಆನೆ, ಅದರ ಅಕ್ಕತಂಗಿಯರು ಹಾಗೂ ಅವುಗಳ ಹೆಣ್ಣು ಮಕ್ಕಳನ್ನು ಒಳಗೊಂಡಿರುತ್ತದೆ. ಒಮ್ಮೊಮ್ಮೆ ಕುಟುಂಬಕ್ಕೆ ಸಂಬಂದವಿರದ ಆನೆಗಳು ಕೂಡ ಸೇರಿಕೊಳ್ಳುತ್ತವೆ. ಇವುಗಳ ಒಂದು ಕುಟುಂಬದಲ್ಲಿ ಮೂರರಿಂದ ಇಪ್ಪತ್ತೈದು ಆನೆಗಳವರೆಗೆ ಇರುತ್ತವೆ. ಗಂಡು ಆನೆಗಳು ಸಾಮಾನ್ಯವಾಗಿ 8 ರಿಂದ 15 ರ ವಯಸ್ಸಿನಲ್ಲಿ ತಮ್ಮ ಕುಟುಂಬವನ್ನು ಬಿಟ್ಟು, ಗಂಡು ಆನೆಗಳ ಹಿಂಡನ್ನು ಸೇರುತ್ತವೆ.

ಆನೆಗಳಿಗೆ ನಿದ್ದೆ ತುಂಬಾ ಕಡಿಮೆ

ಆನೆಗಳು ಒಂದು ದಿನಕ್ಕೆ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡುತ್ತವೆ. ಇನ್ನು ಆನೆಗಳು ಕೂಡ ಆಳವಾದ ನಿದ್ದೆಗೆ ಜಾರಿದಾಗ ನಮ್ಮಂತೆ ಜೋರಾಗಿ ಗೊರಕೆ ಹೊಡೆಯುತ್ತವೆ.

ಮೆದಳು ತುಂಬಾ ಚುರುಕು.

ಇವು ಕೇವಲ ದೊಡ್ಡ ಗಾತ್ರದ ಮೈಯನ್ನು ಮಾತ್ರ ಹೊಂದಿಲ್ಲ, ಸುಮಾರು 4.5 ರಿಂದ 5.5 ಕೆಜಿಯಶ್ಟು ತೂಕದ ಮೆದುಳನ್ನೂ ಹೊಂದಿದೆ. ಇವು ತಮ್ಮ ದೊಡ್ಡದಾದ ಮೆದುಳಿನಲ್ಲಿ ತುಂಬಾ ದೊಡ್ಡ ಪ್ರಮಾಣದ ಮಾಹಿತಿಯನ್ನು ಕೂಡಿಟ್ಟು ಹಲವಾರು ವರ‍್ಶಗಳವರೆಗೆ ನೆನಪಿನಲ್ಲಿಟ್ಟುಕೊಳ್ಳಬಹುದು. ಆನೆಗಳು ಹಲವಾರು ವರ‍್ಶಗಳ ಬಳಿಕ ಬೇಟಿಯಾದರೂ ಗುರುತಿಸಬಲ್ಲವು. ಈ ವಿಶೇಶವಾದ ಅಳವು ಅವುಗಳು ಗುಂಪುಜೀವಿಗಳಾಗಿ ಬದುಕಲು ತುಂಬಾ ನೆರವಾಗಿದೆ.

ಆನೆಗಳ ಕುರಿತು ಇನ್ನಶ್ಟು ಕುತೂಹಲಕಾರಿ ಸಂಗತಿಗಳು

  • ಆನೆಗಳು ಸುಮಾರು 60 ರಿಂದ 70 ವರ‍್ಶಗಳ ಕಾಲ ಬದುಕುತ್ತವೆ.
  • ಜಿಗಿಯಲಾಗದ ಏಕೈಕ ಹಾಲೂಡಿ ಎಂದರೆ ಆನೆ.
  • ಇವು ಸಾಮಾನ್ಯವಾಗಿ ಪ್ರತಿ ಗಂಟೆಗೆ 4 ಮೈಲಿಗಳಶ್ಟು ನಡೆಯುತ್ತವೆ. ಇನ್ನೂ ಬಿರುಸಾಗಿ ನಡೆದರೆ 15 ಮೈಲಿಗಳಶ್ಟು ನಡೆಯಬಹುದು ಎಂದು ಹೇಳಲಾಗುತ್ತದೆ.
  • ಮನುಶ್ಯ, ಕೋತಿ ಹಾಗೂ ಡಾಲ್ಪಿನ್‌ಗಳಂತೆ ಆನೆಗಳು ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತುಹಿಡಿಯಬಲ್ಲ ಒಂದು ವಿಶೇಶ ಅರಿವು ಮತ್ತು ಅಳವು ಹೊಂದಿವೆ.
  • ಯಾವುದಾದರೂ ಒಂದು ಆನೆ ಸತ್ತರೆ ಉಳಿದವು ಸತ್ತ ಆನೆಯ ತಲೆಬುರುಡೆಗೆ ಸೊಂಡಿಲು ಹಾಗೂ ಪಾದಗಳಿಂದ ಮುಟ್ಟುವ ಮೂಲಕ ಗೌರವ ನೀಡುತ್ತವೆ. ಇವು ತಿಂಡಿತಿನಿಸುಗಳನ್ನು ಹುಡುಕಿಕೊಂಡು ಗುಂಪುಗಳಲ್ಲಿ ಹೋಗುವಾಗ, ದಾರಿಯ ನಡುವೆ ಯಾವುದೋ ಒಂದು ಆನೆ ಸತ್ತರೆ ಗುಂಪಿನ ಎಲ್ಲವೂ ಸ್ವಲ್ಪ ಹೊತ್ತಿನವರೆಗೆ ಅಲ್ಲಿಯೇ ನಿಂತು, ಗೌರವ ನೀಡಿ ಬಳಿಕ ಮುಂದೆ ಸಾಗುತ್ತವೆ.

(ಮಾಹಿತಿ ಮತ್ತು ಚಿತ್ರ ಸೆಲೆ: thedodo.com, discoverwildlife.com, wikipedia.orggreenglobaltravel.comwildanimalpark.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. chennagide honalu website.

  2. Nice Website. Informative

Praveen Chandra Puttur ಗೆ ಅನಿಸಿಕೆ ನೀಡಿ Cancel reply