ಬಡತನದ ಸಿರಿ

– ಹರೀಶ್ ಸೀತಾರಾಮ್.

ಅಪ್ಪ-ಮಗ, Father-Son

ನೀಲ ಒಬ್ಬ ಕಾಲೇಜು ವಿದ್ಯಾರ‍್ತಿ. ಎಲ್ಲರಂತೆ ಅನೇಕ ಕನಸುಗಳನ್ನು ಹೊತ್ತು ಓದುತ್ತಿದ್ದ. ಅದರಂತೆಯೇ ತನ್ನ ವಿದ್ಯಾರ‍್ತಿ ಜೀವನವನ್ನೂ ಸಹ ನೆನಪಿಟ್ಟುಕೊಳ್ಳುವಂತೆ ಜೀವಿಸಬೇಕಂಬ ಬಯಕೆ ಅವನದ್ದು. ಆದರೆ ಅಲ್ಲೊಂದು ಕೊರತೆ ಇತ್ತು. ಆತ ಒಬ್ಬ ಸಾಮಾನ್ಯ ಕೆಳಮದ್ಯಮ ವರ‍್ಗದ ಕುಟುಂಬದ ಹುಡುಗ. ತನ್ನ ಕಾಲೇಜಿನ ಕೆಲ ಇತರೆ ವಿದ್ಯಾರ‍್ತಿಗಳಂತೆ ದೊಡ್ಡ ವ್ಯಾಪಾರಿಮಳಿಗೆಗಳಲ್ಲಿ ದುಬಾರಿ ಬಟ್ಟೆಗಳನ್ನು ಕೊಂಡು ದರಿಸುವುದಕ್ಕಗಾಲಿ, ದುಬಾರಿ ಹೋಟೆಲುಗಳನ್ನು ಸುತ್ತುವುದಕ್ಕಾಗಲಿ ಅವನ ಬಳಿ ಹಣ ಇರುತ್ತಿರಲಿಲ್ಲ. ಇದಕ್ಕೆ ಕಾರಣ, ನೀಲನು ತನ್ನ ಕರ‍್ಚುಗಳನ್ನು ತಾನೇ ನಿಬಾಯಿಸುತ್ತಿದ್ದ.

ನೀಲನ ತಂದೆ ರವಿ ಒಬ್ಬ ಸಾಮಾನ್ಯ ಗುಮಾಸ್ತ. ಬೆಳಿಗ್ಗೆ ಕೆಲಸಕ್ಕಾಗಿ ಮನೆ ಬಿಟ್ಟರೆ ಮತ್ತೆ ಮನೆ ಸೇರುವುದು ರಾತ್ರಿ. ಒಮ್ಮೆಯೂ ನೀಲನ ಶಾಲೆಗಾಗಲೀ ಕಾಲೇಜಿಗಾಗಲೀ ಹೋದವನೇ ಅಲ್ಲ. ಎಲ್ಲವೂ ತಾಯಿಯೇ ನೋಡಿಕೊಳ್ಳಬೇಕು. ಆದರೂ ನೀಲನನ್ನು ಕಾಸಗಿ ಶಾಲೆಗೆ ಸೇರಿಸಿ ಉತ್ತಮ ಶಿಕ್ಶಣ ಕೊಡಿಸಿದ್ದ. ಆದರೆ ಪದವಿಯ ಶಿಕ್ಶಣದ ವೆಚ್ಚ ಬರಿಸಲು ಅವನಲ್ಲಿ ಸಾಕಶ್ಟು ಹಣ ಇರಲಿಲ್ಲ.  ಹಾಗಾಗಿ ನೀಲನಿಗೆ ಸರಕಾರಿ ಕಾಲೇಜು ಸೇರುವಂತೆ ಹೇಳಿದ. ನೀಲನಿಗೆ ತನ್ನ ಉತ್ತಮ ಬವಿಶ್ಯದ ಚಿಂತೆಯಿತ್ತು. ಸರಕಾರಿ ಕಾಲೇಜಿಗೆ ಹೋಗಲು ನೀಲ ಒಪ್ಪಲಿಲ್ಲ.

ನೀಲ ತನ್ನ ಶ್ರಮದಿಂದ ವಿದ್ಯಾರ‍್ತಿವೇತನವನ್ನು ಸಂಪಾದಿಸಿ ಅದರ ಜೊತೆಗೆ ತಂದೆ ನೀಡಿದ ಹಣದ ಸಹಾಯದಿಂದ ಒಳ್ಳೆಯ ಕಾಸಗಿ ಕಾಲೇಜು ಸೇರಿದ. ಆದರೆ ತನ್ನ ಮಾತನ್ನು ಮೀರಿ ನೀಲ ಕಾಸಗಿ ಕಾಲೇಜು ಸೇರಿದನೆಂಬ ಅಸಮಾದಾನ ರವಿಗೆ ತುಸು ಹೆಚ್ಚೇ ಇತ್ತು. ಇದರಿಂದಾಗಿ ಕಾಲೇಜಿನ ಶುಲ್ಕ ಪಾವತಿಸಲು ನೀಡುವ ಹಣ ಬಿಟ್ಟರೆ ಬೇರೆ ಕರ‍್ಚುಗಳಿಗೆ ಆತ ನೀಲನಿಗೆ ಹಣ ನೀಡುವುದನ್ನು ನಿಲ್ಲಿಸಿಯೇ ಬಿಟ್ಟ. ನೀಲ ಹೇಗೋ ತನ್ನ ವಿದ್ಯಾರ‍್ತಿವೇತನದಲ್ಲೇ ತನ್ನ ಕಾಸಗಿ ಕರ‍್ಚುಗಳನ್ನು ನಿಬಾಯಿಸಿ ಮುಂದೆ ಸಾಗಿದ. ಈ ವಿಚಾರ ಇಬ್ಬರ ಮನಸುಗಳ ನಡುವೆ ಒಡಕು ಉಂಟು ಮಾಡಿದ್ದಂತೂ ನಿಜ.

ಪದವಿ ಶಿಕ್ಶಣದ ಕೊನೆಯ ವರುಶದಲ್ಲಿ ನೀಲನಿಗೆ ತನ್ನ ಸ್ನೇಹಿತರಿಗೆ ದುಬಾರಿ ಹೋಟೆಲೊಂದರಲ್ಲಿ ಔತಣ ನೀಡುವ ಮನಸಾಯಿತು. ಔತಣ ನೀಡುವ ಕೆಲ ದಿನಗಳ ಹಿಂದೆ ತಂದೆಯ ಬಳಿ ಬಂದು ಹಣ ಕೇಳಿದ. ಆದರೆ ರವಿ ತನ್ನ ಮಗನಿಗೆ ಹಣ ನೀಡಲು ನಿರಾಕರಿಸಿ ಸಿಟ್ಟಿನ ಮಾತುಗಳಾಡಿದ. ನೀಲನಿಗೂ ಮಾತು ತಡೆಯಲಿಲ್ಲ. ಇಬ್ಬರ ನಡುವೆ ಮಾತಿನ ಜಗಳವಾಗಿ, ಕಡೆಗೆ ನೀಲನ ತಾಯಿಯೇ ಬಂದು ಇಬ್ಬರನ್ನು ಸಮಾದಾನ ಪಡಿಸಬೇಕಾಯಿತು. ಗೆಳೆಯರಿಗೆ ಔತಣ ನೀಡುವ ದಿನ ನೀಲ ರವಿಯ ಕಿಸೆಯಿಂದ ಅವನಿಗೆ ತಿಳಿಸದೆ ಹಣ ತೆಗೆದುಕೊಂಡು ಕಾಲೇಜಿಗೆ ಹೊರಟ. ಇತ್ತ ರವಿಗೆ, ತನ್ನ ಕಿಸೆಯಿಂದ ನೀಲ ಹಣ ತೆಗೆದ ವಿಚಾರ ತಿಳಿದು ಕೋಪ ನೆತ್ತಿಗೇರಿತ್ತು. ಸಂಜೆ ಮನೆಗೆ ಬಂದು ಮಗನಿಗೆ ಬುದ್ದಿ ಕಲಿಸುವುದಾಗಿ ಹೇಳಿ ಕೆಲಸಕ್ಕೆ ಹೊರಟ.

ಅತ್ತ ನೀಲ ಸ್ನೇಹಿತರಿಗೆ ಮೊದಲಬಾರಿಗೆ ದುಬಾರಿ ಹೋಟೆಲಿನಲ್ಲಿ ಔತಣ ನೀಡುತ್ತಿದ್ದ. ಆ ಹೋಟೆಲಿನಲ್ಲಿ ಒಬ್ಬ ಮಹಿಳೆ ಅಡುಗೆಮನೆಯ ಒಳಗಡೆ ಪಾತ್ರೆಗಳನ್ನು ತೊಳೆಯುತ್ತಿದ್ದಳು. ಕೆಲ ಸಮಯದ ನಂತರ ಆಕೆ ತನ್ನ ಕೆಲಸ ಬಿಟ್ಟು ಹೊರಗಡೆಗೆ ಓಡುತ್ತಿದ್ದದ್ದನ್ನು ನೀಲ ಕಂಡ. ಅಲ್ಲಿ ಏನಾಯಿತೋ ಎಂಬ ಕುತೂಹಲದಿಂದ ಹೊರಗೆ ನೋಡಿದ. ಅಲ್ಲಿ ಸುಮಾರು ಹನ್ನೆರಡರಿಂದ ಹದಿನಾಲ್ಕು ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ತಮ್ಮ ಸರಕಾರಿ ಶಾಲೆಯ ಉಡುಪಿನಲ್ಲಿ ನಿಂತಿದ್ದರು. ಅವರೆಡೆಗೆ ಆ ಮಹಿಳೆ ಓಡಿದ್ದರಿಂದ ಅವರಿಬ್ಬರು ಆಕೆಯ ಮಕ್ಕಳೆಂಬ ವಿಚಾರ ನೀಲನಿಗೆ ತಿಳಿಯಲು ಹೊತ್ತು ಹಿಡಿಯಲಿಲ್ಲ. ಆ ಮಹಿಳೆ ತನ್ನ ಹಿರಿಮಗಳ ಜಡೆಯನ್ನು ಬಿಗಿ ಮಾಡಿ, ತನ್ನ ಕೈಗಳಿಂದಲೇ ಇಬ್ಬರಿಗೂ ದ್ರುಶ್ಟಿ ತೆಗೆದು ಮುತ್ತಿಟ್ಟಳು. ನಂತರ ಆ ಮಕ್ಕಳು ಶಾಲೆಯ ಬಳಿ ಮಿಟಾಯಿ ಕೊಳ್ಳಲು ಇಪ್ಪತ್ತು ರೂಪಾಯಿಗಳನ್ನು ಕೇಳಿದಾಗ ಅವರ ಕೈಗೆ ಹತ್ತು ರೂಪಾಯಿಗಳನ್ನಿತ್ತು ಸಮಾದಾನ ಪಡಿಸಿದಳು. ಮತ್ತೊಮ್ಮೆ ಅವರಿಬ್ಬರ ಕೆನ್ನೆಗೆ ಮುತ್ತಿಟ್ಟು ತನ್ನ ಮಕ್ಕಳನ್ನು ಬೀಳ್ಕೊಟ್ಟಳು.

ಹಿಂದಿರುಗಿ ಬಂದ ಮೇಲೆ ಹೋಟೆಲಿನ ಮಾಲೀಕ ಅವಳನ್ನು, “ಏನಮ್ಮ ಮಕ್ಕಳು ಚೆನ್ನಾಗಿ ಓದ್ತಾಯಿದ್ದಾರಾ?’, ಎಂದು ಕೇಳಲು ಆಕೆ, “ಹೂಂ ಸ್ವಾಮಿ.. ಈ ಸರ‍್ತಿ ನನ್ನ ಕಿರಿಮಗಳು ಪಸ್ಟ್ ರ‍್ಯಾಂಕ್ ಬಂದಿದಾಳೆ” ಎಂದಳು. ನೀಲ ಈಗ ಯೋಚಿಸತೊಡಗಿದ, “ಅಬ್ಬಾ.. ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳ ಬಗ್ಗೆ ಆ ತಾಯಿಗೆ ಅದೆಶ್ಟು ಹೆಮ್ಮೆ! ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೂ ಆ ಮಕ್ಕಳಲ್ಲಿ ಓದಿನ ಕಡೆಗೆ ಅದೆಂತಾ ಆಸಕ್ತಿ!”.

ಆ ದ್ರುಶ್ಯ ನೀಲನ ಮನಸಿನಲ್ಲಿ ಸಂಚಲನ ಉಂಟುಮಾಡಿತು. ಒಮ್ಮೆಗೆ, ತನ್ನ ತಂದೆ, ಅವರು ಪಡುವ ಕಶ್ಟ, ಅವರ ಕೆಲಸದ ಒತ್ತಡ, ತನ್ನ ಬಗ್ಗೆ ಅವರಿಗಿದ್ದ ಕಾಳಜಿ, ಹೀಗೆ ಅವನಿಗೆ ತನ್ನ ತಂದೆಯ ತ್ಯಾಗಮಯ ಜೀವನದ ಅರಿವಾಯಿತು. ಇದರ ನಡುವೆ ತನ್ನ ತಂದೆಯ ಕಿಸೆಯಿಂದ ಹಣ ಕದ್ದೆನಲ್ಲ ಎಂಬ ನಾಚಿಕೆ ನೀಲನಿಗೆ. ಈ ಯೋಚನೆಯಲ್ಲೇ ಮನೆ ಸೇರಿದ ನೀಲ ತನ್ನ ತಂದೆಯ ಬರುವಿಕೆಗೆ ಕಾಯುತ್ತಿದ್ದ. ಅತ್ತ ರವಿ ನೀಲನ ಹಣ ಕದಿಯುವಿಕೆಯಿಂದ ಕೋಪದಿಂದಲೇ ಮನೆ ಸೇರಿದ. ಇಬ್ಬರೂ ಮುಕಾಮುಕಿಯಾಗಿ, ರವಿಗೂ ಮುಂಚೆಯೇ ನೀಲ ತಾನು ಕಿಸೆಯಿಂದ ಹಣ ತೆಗೆದು ಸ್ನೇಹಿತರಿಗೆ ಔತಣ ನೀಡಿದ ವಿಚಾರ ತಿಳಿಸಿದ. ನಂತರ ಮಿಕ್ಕ ಹಣವನ್ನು ಹಿಂದಿರುಗಿಸಿ ಕ್ಶಮೆ ಕೋರಿದ.

ಕೋಪದಿಂದ ನೀಲನನ್ನು ದಂಡಿಸಬೇಕೆಂದುಕೊಂಡಿದ್ದ ರವಿಯ ಮನಸಿನಲ್ಲಿ ಈಗ ಹಲವಾರು ವಿಚಾರಗಳು ಹರಿದಾಡತೊಡಗಿದವು. ತನ್ನ ಮಗ ಓದಿ ದೊಡ್ಡ ಹುದ್ದೆಗೇರಬೇಕೆಂಬ ಬಯಕೆ ಇದ್ದರೂ, ಅವನು ತಾನು ಹೇಳಿದಂತೆ ಸರಕಾರಿ ಕಾಲೇಜು ಸೇರಲಿಲ್ಲ ಎಂಬ ಕೋಪ ಅವನನ್ನು ಆವರಿಸಿತ್ತು. ಅದರೊಂದಿಗೆ ನೀಲನ ಈ ಹಣ ಕದ್ದ ವಿಚಾರ ರವಿಯ ಮನಸಿನಲ್ಲಿನ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಆದರೀಗ ನೀಲನ ಪ್ರಾಮಾಣಿಕ ತಪ್ಪೊಪ್ಪಿಗೆ ಆ ಬೆಂಕಿಯ ಮೇಲೆ ನೀರು ಸುರಿದಿತ್ತು. ಕಾಲೇಜು ವಿದ್ಯಾರ‍್ತಿಯಾಗಿ ಹಲವು ಕಾಸಗಿ ಕರ‍್ಚುಗಳಿದ್ದರೂ, ಅವುಗಳಿಗೆ ತನ್ನನ್ನು ಅವಲಂಬಿಸದೆ ವಿದ್ಯಾರ‍್ತಿ ವೇತನ ಸಂಪಾದಿಸಿದ ಮಗನ ಬಗ್ಗೆ ರವಿಗೆ ಹೆಮ್ಮೆಯಾಯಿತು. ನೀಲನು ಕಾಸಗಿ ಕಾಲೇಜನ್ನು ಸೇರಿದ್ದು ಕೇವಲ ತನ್ನ ಒಳ್ಳೆಯ ಬವಿಶ್ಯದ ವಿಚಾರವಾಗಿ ಎಂದು ಅವನಿಗೆ ಮನವರಿಕೆಯಾಯಿತು. ತಕ್ಶಣವೇ ನೀಲನನ್ನು ಕ್ಶಮಿಸಿ ಅವನು ನೀಡಿದ ಹಣವನ್ನು ಅವನಿಗೇ ಹಿಂದಿರುಗಿಸಿದ.

ಅಲ್ಲಿಂದಾಚೆಗೆ ನೀಲನ ಯೋಜನೆಗಳಿಗೆ ರವಿ ಬೆನ್ನೆಲುಬಾಗಿ ನಿಂತ. ನೀಲನೂ ಸಹ ತನ್ನ ತಂದೆಯನ್ನು ಗೌರವದಿಂದ ಕಾಣುತ್ತಾ ಅವರ ತ್ಯಾಗಗಳನ್ನು ಮರೆಯದೆ ಬದುಕಿದ. ತಂದೆ ಮಗನ ನಡುವೆ ಒಂದು ಸುಂದರ ಸ್ನೇಹ ನಿರ‍್ಮಾಣವಾಯಿತು. ಒಂದು ಬಡತನದ ಕುಟುಂಬ ತಮಗಿದ್ದ ಸ್ವಲ್ಪ ಅವಕಾಶಗಳಲ್ಲೇ ತ್ರುಪ್ತಿಯಿಂದ ಜೀವನ ನಡೆಸುತ್ತಿದ್ದ ಒಂದು ದ್ರುಶ್ಯ ನೀಲ ಮತ್ತು ರವಿಯರ ಜೀವನದ ನೋಟವನ್ನೇ ಬದಲಾಯಿಸಿತ್ತು. ನಿಜವಾದ ಸಿರಿ ಎಂದರೆ ಅದು ‘ತ್ರುಪ್ತಿಯ ಬಾವ’ವೇ ಅಲ್ಲವೇ?

( ಚಿತ್ರ ಸೆಲೆ: wikihow )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ashoka p says:

    ಪ್ರಾಮಾಣಿಕತೆ ವ್ಯಕ್ತಿಯ ವ್ಯಕ್ತಿತ್ವದ ಕೈಗನ್ನಡಿ ಎಂಬುದು ಕತೆ ಬಿಂಬಿಸುತ್ತದೆ

ಅನಿಸಿಕೆ ಬರೆಯಿರಿ:

%d bloggers like this: