2018/19 ರಣಜಿ: ಕರ‍್ನಾಟಕ ಕ್ರಿಕೆಟ್ ತಂಡದ ಆಟ-ಮರುನೋಟ

– ರಾಮಚಂದ್ರ ಮಹಾರುದ್ರಪ್ಪ.

ವಿನಯ್ ಕುಮಾರ್, Vinay Kumar

ಕಳೆದ ಹಲವಾರು ವರುಶಗಳಂತೆ ಈ ವರುಶವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ 2018/19 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಕಣಕ್ಕಿಳಿದ ಕರ‍್ನಾಟಕ ಕಳೆದ ನಾಲ್ಕು ಬಾರಿಯಂತೆ ಈ ಬಾರಿಯೂ ರೋಚಕ ಹಂತದಲ್ಲಿ ಎಡವಿ ಹೊರ ನಡೆದದ್ದು ಮತ್ತೊಮ್ಮೆ ರಾಜ್ಯ ತಂಡದ ಅಬಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಸೆಮಿಪೈನಲ್ ವರೆಗು ತಲುಪಿದ ಕರ‍್ನಾಟಕ ಒಟ್ಟು 10 ಪಂದ್ಯಗಳನ್ನು ಆಡಿ 4 ಪಂದ್ಯಗಳನ್ನು ಗೆದ್ದು 3 ಪಂದ್ಯಗಳಲ್ಲಿ ಸೋಲು ಅನುಬವಿಸಿತು.

ಈ ಬಾರಿ ಕೆಲವು ಹಿರಿಯ ಆಟಗಾರರನ್ನು ತಂಡದಿಂದ ಕೈಬಿಟ್ಟು ಹೊಸ ಪ್ರತಿಬೆಗಳಿಗೆ ಮಣೆ ಹಾಕಲಾಯಿತು. ಜೊತೆಗೆ ಕಳೆದ 9 ವರ‍್ಶಗಳಿಂದ ತಂಡದ ನಾಯಕರಾಗಿದ್ದ ವಿನಯ್ ಕುಮಾರ್ ಲೀಗ್ ಹಂತದ ನಡುವಿನಲ್ಲಿ ನಾಯಕತ್ವವನ್ನು ತೊರೆದು ಮನೀಶ್ ಪಾಂಡೆ ಹೆಗಲಿಗೆ ತಂಡದ ನೊಗವನ್ನು ಹೊರಸಿದರು.

ಈ ಬಾರಿ ಚೊಚ್ಚಲ ಪಂದ್ಯ ಆಡಿದ ಆಟಗಾರರು

2010/11 ರ ನಂತರ ಇದೇ ಮೊದಲ ಬಾರಿಗೆ ಕರ‍್ನಾಟಕ ತಂಡ ಸಾಕಶ್ಟು ಪ್ರಯೋಗಗಳನ್ನು ಮಾಡಿತು. ಆಡಿದ 10 ಪಂದ್ಯಗಳಲ್ಲಿ ಒಟ್ಟು 23 ಆಟಗಾರರನ್ನು ಕಣಕ್ಕಿಳಿಸಿತು. ಅದರಲ್ಲಿ 7 ಹೊಸ ಆಟಗಾರರು ಪಾದಾರ‍್ಪಣೆ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಒಂದು ದಾಕಲೆಯೇ ಸರಿ. ಬವಿಶ್ಯದ ದ್ರುಶ್ಟಿಯಿಂದ ಹಿರಿಯ ಆಟಗಾರರಾದ ಸ್ಟುವರ‍್ಟ್ ಬಿನ್ನಿ ಮತ್ತು ಸಿ.ಎಮ್ ಗೌತಮ್ ರನ್ನು ಕೈ ಬಿಡಲಾಯಿತು. ಬ್ಯಾಟ್ಸ್ಮನ್ ಗಳಾದ ಕೆ.ವಿ ಸಿದ್ದಾರ‍್ತ್, ದೇವದತ್ ಪಡಿಕಲ್, ಲಿಯಾನ್ ಕಾನ್, ಬೌಲರ್ ಗಳಾದ ಪ್ರತೀಕ್ ಜೈನ್, ಶುಬಾಂಗ್ ಹೆಗ್ಡೆ ಹಾಗೂ ವಿಕೆಟ್ ಕೀಪರ್ ಗಳಾದ ಶರತ್ ಬಿ. ಆರ್ ಮತ್ತು ಶರತ್ ಶ್ರೀನಿವಾಸ್ ಈ ಬಾರಿ ರಾಜ್ಯ ತಂಡದ ಪರ ಪಾದಾರ‍್ಪಣೆ ಮಾಡಿದರು. ಇವರಲ್ಲಿ ಕೆ.ವಿ ಸಿದ್ದಾರ‍್ತ್ ತಂಡದ ಪರ ಅತಿ ಹೆಚ್ಚು ರನ್ (728) ಗಳಿಸಿ ಬರವಸೆ ಮೂಡಿಸಿದರೆ ದೇವದತ್ 3 ಅರ‍್ದ ಶತಕಗಳನ್ನು ಗಳಿಸಿಯೂ ಹೆಚ್ಚು ರನ್ ಕಲೆ ಹಾಕದೆ ವೈಪಲ್ಯ ಅನುಬವಿಸಿದರು. ಒಂದೇ ಒಂದು ಪಂದ್ಯವಾಡಿದ ಲಿಯಾನ್ ಎರಡೂ ಇನ್ನಿಂಗ್ಸ್ ನಲ್ಲಿ ಹತ್ತರ ಗಡಿ ದಾಟಲಿಲ್ಲ.

ಬೌಲರ್ ಗಳಾದ ಪ್ರತೀಕ್ ಮತ್ತು ಶುಬಾಂಗ್ ತಲಾ ಒಂದು ಪಂದ್ಯಗಳನ್ನಶ್ಟೇ ಆಡಿದರೂ ಪ್ರಬಾವ ಬೀರುವಂತ ಪ್ರದರ‍್ಶನ ನೀಡಿದರು. ಮುಂದಿನ ವರುಶಗಳಲ್ಲಿ ಹೆಚ್ಚು ಅವಕಾಶಗಳು ಸಿಕ್ಕಲ್ಲಿ ಇವರಿಬ್ಬರಿಂದ ಒಳ್ಳೆ ಆಟವನ್ನು ಎದುರು ನೋಡಬಹುದು. ವಿದರ‍್ಬ ಎದುರು ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಕಲೆ ಬರೆದ ಶರತ್ ಬಿ.ಆರ್ ರ ಬ್ಯಾಟ್ ನಿಂದ ನಂತರದ ಪಂದ್ಯಗಳಲ್ಲಿ ರನ್ ಬರಲೇ ಇಲ್ಲ. ಇದರ ಜೊತೆಗೆ ಸಾಕಶ್ಟು ಕ್ಯಾಚ್ ಗಳನ್ನು ಕೂಡ ಅವರು ಕೈ ಚೆಲ್ಲಿದ್ದು ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಬಿ.ಆರ್ ಶರತ್ ರ ವೈಪಲ್ಯದಿಂದ ನಂತರದ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಹೊರೆಯನ್ನು ಶರತ್ ಶ್ರೀನಿವಾಸ್ ರ ಹೆಗಲಿಗೆ ಹೊರಿಸಲಾಯಿತು. ವಿಕೆಟ್ ನ ಹಿಂದೆ ಗೋಡೆಯಂತೆ ನಿಂತು ಕೀಪಿಂಗ್ ಮಾಡಿದ ಶರತ್ ಶ್ರೀನಿವಾಸ್ ರ ಬ್ಯಾಟ್ ನಿಂದ ರನ್ ಗಳು ಕೂಡ ಹರಿದವು. ಜೊತೆಗೆ ಅವರು ಬೌಲರ್ ಗಳನ್ನು ಕನ್ನಡದಲ್ಲಿ ಹುರಿದುಂಬಿಸುತ್ತಿದ್ದದ್ದು ಅಬಿಮಾನಿಗಳಿಗೆ ನಲಿವು ತಂದಿತು.

ಹಿರಿಯ ಆಟಗಾರರ ಸಾದನೆ

ಹಲವಾರು ವರುಶಗಳಿಂದ ದೇಸೀ ಕ್ರಿಕೆಟ್ ಜೊತೆಗೆ ಬಾರತದ ಪರ ಅಂತರಾಶ್ಟ್ರೀಯ ಪಂದ್ಯಗಳನ್ನೂ ಆಡಿರುವ ವಿನಯ್, ಕರುಣ್ ಮತ್ತು ಇತ್ತೀಚಿಗಶ್ಟೇ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಾದಾರ‍್ಪಣೆ ಮಾಡಿದ ಮಾಯಾಂಕ್ ಕರ‍್ನಾಟಕ ತಂಡದ ಆದಾರ ಸ್ತಂಬಗಳು. ಆದರೆ ಈ ಬಾರಿ ಯಾರಿಂದಲೂ ಹೇಳಿಕೊಳ್ಳುವಂತ ಆಟ ನೋಡ ಸಿಗಲಿಲ್ಲ. ವಿನಯ್ ರ ಬೌಲಿಂಗ್ ನಲ್ಲಿ ಮೊದಲಿದ್ದ ಮೊನಚು ಇಲ್ಲವಾಗಿದೆ. ಅವರು ತಮ್ಮ ಎಂದಿನ ಲಯ ಕಂಡುಕೊಳ್ಳಲು ಸೆಮಿಪೈನಲ್ ತನಕ ಕಾಯಬೇಕಾಯಿತು. ಆದರೆ ಅವರ ಬ್ಯಾಟಿಂಗ್ ಈ ಬಾರಿ ತಂಡಕ್ಕೆ ವರವಾಯಿತು. ಒಟ್ಟು 332 ರನ್ ಗಳಿಸಿದ ವಿನಯ್, ತಂಡ ಕುಸಿತ ಕಂಡಾಗ ಕೆಳ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಮಾಡಿ ಹಲವಾರು ಬಾರಿ ತಂಡವನ್ನು ಕಾಪಾಡಿದರು. ಅದರಲ್ಲೂ ರಾಜಸ್ತಾನದ ಎದುರು ಕ್ವಾರ‍್ಟರ್ ಪೈನಲ್ ನಲ್ಲಿ ಕಡೇ ವಿಕೆಟ್ ಗೆ ರೋನಿತ್ ಮೋರೆ ಅವರೊಟ್ಟಿಗೆ ಆಡಿದ 97 ರನ್ ಗಳ ಜೊತೆಯಾಟ ತಂಡವನ್ನು ಸೆಮಿಪೈನಲ್ ಗೆ ತಲುಪಿಸಿತು.

ಮಿತುನ್ ತಮ್ಮ ಎಂದಿನ ಸ್ತಿರ ಪ್ರದರ‍್ಶನವನ್ನು ಕಾಯ್ದುಕೊಂಡು 26 ವಿಕೆಟ್ ಗಳನ್ನು ಪಡೆದರು. ಅವರ ಬೌಲಿಂಗ್ ನಲ್ಲಿ ಹೆಚ್ಚು ಕ್ಯಾಚ್ ಗಳನ್ನು ಆಟಗಾರರು ಕೈಚೆಲ್ಲಿದ್ದನ್ನು ಮರೆಯುವಂತಿಲ್ಲ. ಆದರೆ ಈ ಬಾರಿ ವೇಗದ ಬೌಲರ್ ಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ ಅತಿ ಹೆಚ್ಚು ವಿಕೆಟ್ (37) ಗಳನ್ನು ಪಡೆದದ್ದು ರೋನಿತ್ ಮೋರೆ.

ಗಂಟೆಗೆ 135 km ಕ್ಕೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವಂತ ಅಳವಿರುವ (capacity) ರೋನಿತ್ ಮುಂಬರುವ ದಿನಗಳಲ್ಲಿ ವಿನಯ್ ರ ಸ್ತಾನವನ್ನು ತುಂಬುವ ಮುನ್ಸೂಚನೆ ನೀಡಿದ್ದಾರೆ. ಇನ್ನು ಪ್ರಸಿದ್ ಕ್ರಿಶ್ಣಗೆ ಆಡಲು ಹೆಚ್ಚು ಅವಕಾಶ ಸಿಗದೇ ಹೊರಗುಳಿದರು. ಲೀಗ್ ಹಂತದ ಆರಂಬದ ಪಂದ್ಯಗಳಲ್ಲಿ ಕೆ ಎಂ ಗೌತಮ್ ರ ಅನುಪಸ್ತಿತಿಯಲ್ಲಿ ಆಡುವ ಅವಕಾಶ ಪಡೆದ ಎಡಗೈ ಸ್ಪಿನ್ನರ್ ಸುಚಿತ್ 5 ಪಂದ್ಯಗಳಲ್ಲಿ 24 ವಿಕೆಟ್ ಪಡೆದರು. ಗೌತಮ್ ನಂತರದ ಪಂದ್ಯಗಳಿಗೆ ಹಿಂತಿರುಗಿ 5 ಪಂದ್ಯಗಳಲ್ಲಿ 20 ವಿಕೆಟ್ ಗಳನ್ನು ಪಡೆದರು.

ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಒಟ್ಟು 32 ವಿಕೆಟ್ ಗಳನ್ನು ಪಡೆಯುವುದರ ಜೊತೆಗೆ 524 ರನ್ ಗಳನ್ನೂ ಗಳಿಸಿ ಒಳ್ಳೆ ಪ್ರದರ‍್ಶನ ನೀಡಿದರು. ಆದರಲ್ಲಿಯೂ ಗೌತಮ್- ಶ್ರೇಯಸ್ ರ ಸ್ಪಿನ್ ಜುಗಲ್ಬಂದಿ ಡ್ರಾನತ್ತ ಸಾಗಿದ್ದ ರೈಲ್ವೇಸ್ ಮತ್ತು ಚತ್ತೀಸ್ ಗಡ ಎದುರಿನ ಪಂದ್ಯಗಳಲ್ಲಿ, ಕಡೇ ದಿನದ ಟೀ ವಿರಾಮದ ಬಳಿಕ ವಿಕೆಟ್ ಗೊಂಚಲುಗಳನ್ನು ಕಬಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಕರ‍್ನಾಟಕದ ಹಿರಿಯ ಬ್ಯಾಟ್ಸ್ಮನ್ ಗಳಾದ ಸಮರ‍್ತ್ ಮತ್ತು ಕರುಣ್ ರ ಬ್ಯಾಟ್ ನಿಂದ ರನ್ ಗಳು ಹರಿಯಲೇ ಇಲ್ಲ. ಒಂದೂ ಅರ‍್ದ ಶತಕ ಗಳಿಸದೇ 12 ರ ಸರಾಸರಿಯಲ್ಲಿ ರನ್ ಗಳಿಸಿದ ಸಮರ‍್ತ್ ರಿಗೆ ಇದು ತಮ್ಮ ವ್ರುತ್ತಿ ಬದುಕಿನ ಅತ್ಯಂತ ಕೆಟ್ಟ ವರ‍್ಶವಾಯಿತು. ಟೆಸ್ಟ್ ಆಟಗಾರರಾದ ಕರುಣ್ ಕೂಡ ಎರಡು ಅರ‍್ದ ಶತಕಗಳನ್ನು ಗಳಿಸಿದ್ದನ್ನು ಬಿಟ್ಟರೆ ಹೇಳಿಕೊಳ್ಳುವಂತ ಆಟವನ್ನೇನು ಆಡಲಿಲ್ಲ. ಅದರಲ್ಲಿ, ಮನೀಶ್ ರೊಟ್ಟಿಗೆ ಕ್ವಾರ‍್ಟರ್ ಪೈನಲ್ ನಲ್ಲಿ ಅವರಾಡಿದ ಜೊತೆಯಾಟವೇ ಈ ಸಾಲಿನ ಅವರ ಶ್ರೇಶ್ಟ ಪ್ರದರ‍್ಶನ.

3 ಶತಕಗಳನ್ನು ಸಿಡಿಸಿ ಸಿದ್ದಾರ‍್ತ್ ರ ಬಳಿಕ ಅತಿ ಹೆಚ್ಚು ರನ್ ಗಳನ್ನು (628) ಗಳಿಸಿದ್ದ ನಿಶ್ಚಲ್ ರನ್ನು ಕೈ ಬಿಟ್ಟು ಸೆಮಿಪೈನಲ್ ನಲ್ಲಿ ಸಮರ‍್ತ್ ರಿಗೆ ಮಣೆ ಹಾಕಿದ್ದು ತಂಡಕ್ಕೆ ಮುಳುವಾಯಿತು ಎಂದರೆ ತಪ್ಪಾಗಲಾರದು. ಮಾಯಾಂಕ್ ಆಡಿದ 2 ಪಂದ್ಯಗಳಲ್ಲಿ ಒಂದು ಅರ‍್ದ ಶತಕವನ್ನು ಗಳಿಸಿದ್ದನ್ನು ಬಿಟ್ಟರೆ ಅವರಿಂದ ನಿರೀಕ್ಶಿಸಿದ ಮಟ್ಟಕ್ಕೆ ರನ್ ಬರಲಿಲ್ಲ. ಮತ್ತು ಮನೀಶ್ ತಮ್ಮ ಸ್ವಾಬಾವಿಕ ಬಿರುಸಿನ ಆಟವನ್ನು ಮುಂದುವರೆಸಿ 439 ರನ್ ಗಳನ್ನು ಬಾರಿಸಿದರು.

ಈ ವರುಶವೂ ಕೈಗೂಡದ ಕನಸು

ಕಳೆದ ಹತ್ತು ವರುಶಗಳ ರಣಜಿ ಟೂರ‍್ನಿಯಲ್ಲಿ ಯಾವ ತಂಡವೂ ಗೆಲ್ಲದಶ್ಟು ಪಂದ್ಯಗಳನ್ನು ಕರ‍್ನಾಟಕ ಗೆದ್ದಿದೆ. ಒಟ್ಟು 41 ಪಂದ್ಯಗಳನ್ನು ಗೆದ್ದು ಮೊದಲ ಸ್ತಾನದಲ್ಲಿ ಕರ‍್ನಾಟಕ ಇದ್ದರೆ 29 ಪಂದ್ಯಗಳನ್ನು ಗೆದ್ದು ಮುಂಬೈ ಎರಡನೇ ಸ್ತಾನದಲ್ಲಿದೆ. ಇನ್ಯಾವ ಎಲೈಟ್ ಗುಂಪಿನ ತಂಡವೂ 25 ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ (ಅಂಕಿ-)ಅಂಶ. ಇದರ ಅರ‍್ತ ಕರ‍್ನಾಟಕ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆಗಶ್ಟೇ ಆಡದೆ ಗೆಲ್ಲಲು ಕಣಕ್ಕಿಳಿಯುತ್ತದೆ ಎಂದು. ಪ್ರತಿ ಸಾರಿ 20 ವಿಕೆಟ್ ಪಡೆಯುವಂತ ಬೌಲಿಂಗ್ ಪಡೆ ರಾಜ್ಯ ತಂಡದ ಬತ್ತಳಿಕೆಯಲ್ಲಿರುವುದು ಬೇರೆ ತಂಡಗಳಿಗೆ ಅಸೂಯೆ ಉಂಟು ಮಾಡಿರುವುದು ಸುಳ್ಳಲ್ಲ. ಹೀಗಿದ್ದರೂ ಕಳೆದ ಹತ್ತು ವರ‍್ಶಗಳಲ್ಲಿ ಕೇವಲ 2 ಟೂರ‍್ನಿಗಳನ್ನಶ್ಟೇ ಗೆದ್ದಿರುವದು ತಂಡದಲ್ಲಿರುವ ಕುಂದುಗಳಿಗೆ ಒಂದು ಎತ್ತುಗೆ ಎಂದೇ ಹೇಳಬೇಕು.

2016/17 ರ ಕ್ವಾರ‍್ಟರ್ ಪೈನಲ್ ನಲ್ಲಿ ಎರಡೇ ದಿನಗಳಲ್ಲಿ ತಮಿಳುನಾಡು ಎದುರು ಸೋತ ಪಂದ್ಯ, 2017/18 ರ ಸೆಮಿ ಪೈನಲ್ ನಲ್ಲಿ ವಿದರ‍್ಬ ಎದುರು 5 ರನ್ ಗಳಿಂದ ಸೋತ ಪಂದ್ಯ ಮತ್ತು ಈ ವರ‍್ಶದ ಸೆಮೀಸ್ ನಲ್ಲಿ ಸೌರಾಶ್ಟ್ರ ಮೇಲೆ ಸೋತದ್ದನ್ನು ಯಾವ ಅಬಿಮಾನಿಯೂ ನೆನೆಯಲು ಬಯಸುವುದಿಲ್ಲ. ಒತ್ತಡದ ಮಾಡು ಇಲ್ಲವೇ ಮಾಡಿ ಪಂದ್ಯಗಳಲ್ಲಿ ನಮ್ಮ ಆಟಗಾರರು ಎಡವಿರೋದು ಸುಳ್ಳಲ್ಲ. ಆದರೆ ಈ ಬಾರಿ 14 ವರ‍್ಶಗಳ ಬಳಿಕ ಮೊದಲ ಬಾರಿಗೆ ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನು ಸೋತ ನಂತರವೂ, ಪ್ರಮುಕ ಆಟಗಾರರ ಅನುಪಸ್ತಿತಿಯಲ್ಲೂ ಕರ‍್ನಾಟಕ ಸೆಮಿಪೈನಲ್ ತಲುಪಿದ್ದು ತಂಡದ ಬೆಂಚ್ ಅಳವಿನ ಬಗ್ಗೆ ಸಾರಿ ಹೇಳುತ್ತದೆ.

ಈ ವರುಶದ ಸೆಮಿಪೈನಲ್ ದುರಂತ

ಅಬಿಮನ್ಯು ಮಿತುನ್, Abhimanyu Mithunಸೌರಾಶ್ಟ್ರ ಎದುರು ಬೆಂಗಳೂರಿನಲ್ಲಿ ನಡೆದ ಸೆಮಿಪೈನಲ್ ಪಂದ್ಯ ವಿವಾದಗಳ ಗೂಡಾಯಿತು. ಆಟಕ್ಕಿಂತ ಅಂಪೈರ್ ಗಳ ಬಗ್ಗೆಯೇ ಹೆಚ್ಚು ಚರ‍್ಚೆಯಾದದ್ದು ಬೇಸರದ ಸಂಗತಿ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ‍್ನಾಟಕ 275 ರನ್ ಕಲೆ ಹಾಕಿತು. ಇದರ ಬೆನ್ನತ್ತಿದ ಸೌರಾಶ್ಟ್ರ 236 ರನ್ ಗಳನ್ನಶ್ಟೇ ಕಲೆ ಹಾಕಿ 39 ರನ್ ಗಳ ಮುನ್ನಡೆ ಬಿಟ್ಟು ಕೊಟ್ಟಿತು. ಆದರೆ ಸೌರಾಶ್ಟ್ರ ತಂಡದ ಆಟಗಾರ ಪೂಜಾರ 1 ರನ್ ಗಳಿಸಿದ್ದಾಗ ಮಿತುನ್ ರ ಬೌಲಿಂಗ್ ನಲ್ಲಿ ಗ್ಲೌಸ್ ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಆಟಗಾರರ ಮನವಿಯನ್ನು ತಿರಸ್ಕರಿಸಿದ ಬರೋಡಾದ ಅಂಪೈರ್ ಸಯ್ಯದ್ ಕಾಲಿದ್ ಪೂಜಾರರಿಗೆ ಜೀವದಾನ ನೀಡಿದರು. ಕಡೆಗೆ 44 ರನ್ ಗಳಿಗೆ ಪೂಜಾರ ಮಿತುನ್ ರಿಗೆ  ಔಟ್ ಆದ್ದರಿಂದ ಕರ‍್ನಾಟಕಕ್ಕೆ ಆ ಜೀವದಾನ ಹೆಚ್ಚು ದುಬಾರಿ ಅನಿಸಲಿಲ್ಲ.

ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ ಕರ‍್ನಾಟಕ 279 ರ ಗುರಿಯನ್ನು ಸೌರಾಶ್ಟ್ರದ ಮುಂದಿಟ್ಟಿತು. ಎರಡನೇ ಇನ್ನಿಂಗ್ಸ್ ನಲ್ಲಿಯೂ ಅಂಪೈರ್ ಮತ್ತೊಮ್ಮೆ ಪೂಜಾರರಿಗೆ ಜೀವದಾನ ನೀಡಿದರು. ವಿನಯ್ ರ ಬೌಲಿಂಗ್ ನಲ್ಲಿ ಪೂಜಾರರ ಬ್ಯಾಟ್ ಗೆ ಬಡಿದ ಚೆಂಡನ್ನು ಕೀಪರ್ ಕ್ಯಾಚ್ ಹಿಡಿದರೂ ಅಂಪೈರ್ ಅಲುಗಾಡಲಿಲ್ಲ. ಬದಲಿಗೆ ಮನವಿಯನ್ನು ನಿಲ್ಲಿಸಿ ಆಟ ಮುಂದುವರಿಸುವಂತೆ ಆಟಗಾರರಿಗೆ ಎಚ್ಚರಿಕೆ ನೀಡಿದರು. ಚಿನ್ನಸ್ವಾಮಿ ಆಟದ ಕಣದಲ್ಲಿ ಕೂತು ಆಟವನ್ನು ನೋಡುತ್ತಿದ್ದ ಕರ‍್ನಾಟಕ ತಂಡದ ಅಬಿಮಾನಿಗಳನ್ನು ಇದು ಕೆರಳಿಸಿತು. ಒಕ್ಕೊರಲಿನಿಂದ ಪೂಜಾರರನ್ನು “ಚೀಟರ‍್, ಚೀಟರ‍್” ಎಂದು ಕೂಗಲು ಶುರು ಮಾಡಿದರು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಪೂಜಾರರನ್ನು ಟೀಕಿಸಿದರು. ಕ್ರಿಕೆಟ್ ನಿಯಮಗಳ ಪ್ರಕಾರ ಅಂಪೈರ್ ಔಟ್ ನೀಡದ್ದಿದ್ದರೆ ಅದು ಬ್ಯಾಟ್ಸ್ಮನ್ ತಪ್ಪಲ್ಲ. ಬ್ಯಾಟ್ಸ್ಮನ್ ತಾನಾಗಿ ಹೊರನಡೆಯಬೇಕೆನ್ನೊ ನಿಯಮವೂ ಇಲ್ಲ. ಆದರೂ ಅಂತರಾಶ್ಟ್ರೀಯ ಆಟಗಾರರಾದ ಪೂಜಾರ ರಣಜಿ ಟ್ರೋಪಿಯಲ್ಲಿ ಕನಿಶ್ಟ ಎರಡನೇ ಇನ್ನಿಂಗ್ಸ್ ನಲ್ಲಾದರೂ ಹೊರನಡೆದು ಕ್ರೀಡಾ ಸ್ಪೂರ‍್ತಿಯನ್ನು ಎತ್ತಿ ಹಿಡಿಯಬೇಕಿತ್ತು ಅನ್ನೋದು ರಾಜ್ಯ ತಂಡದ ಅಬಿಮಾನಿಗಳ ಅಂಬೋಣವಾಗಿತ್ತು.

ಎರಡನೇ ಇನ್ನಿಂಗ್ಸ್ ನ ಜೀವದಾನವನ್ನು ಪೂಜಾರ ಬಳಿಸಿಕೊಂಡು ಶತಕ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಸೋಲು ಕರುನಾಡ ಕ್ರಿಕೆಟ್ ಪ್ರೇಮಿಗಳಿಗೆ ಅರಗಿಸಿಕೊಳ್ಳಲಾಗಲಿಲ್ಲ. ಯಾವ ತಪ್ಪಿಗೆ ನಮಗೆ ಈ ಶಿಕ್ಶೆ ಎಂದು ಡ್ರೆಸಿಂಗ್ ರೂಮ್ ನಲ್ಲಿ ಆಟಗಾರರು ಕಣ್ಣೇರಿಟ್ಟಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಂತರ ಕಳಪೆ ಅಂಪೈರಿಂಗ್ ಬಗ್ಗೆ ಕೆ.ಎಸ್.ಸಿ.ಎ, ಬಿ.ಸಿ.ಸಿ.ಐ ಗೆ ದೂರು ನೀಡಿತು. ಅದರ ಬಗ್ಗೆ ಇನ್ನೂ ವಿಚಾರಣೆ ನಡೆಯಬೇಕಿದೆ.

ಎರಡೂ ತಂಡಗಳು ಕಳಪೆ ಅಂಪೈರಿಂಗ್ ನಿಂದ ಪೆಟ್ಟು ತಿಂದವು ಅನ್ನೋದು ಸುಳ್ಳಲ್ಲ. ಆದರೆ ಕರ‍್ನಾಟಕದ ಹಾದಿಗೆ ಮಾತ್ರ ಅದು ಮುಳುವಾಯಿತು ಅನ್ನೋದು ಅಶ್ಟೇ ದಿಟ.

ಕರ‍್ನಾಟಕ ಕ್ರಿಕೆಟ್ ತಂಡಕ್ಕಿರುವಶ್ಟು ಅಬಿಮಾನಿಗಳು ಬೇರೆ ಯಾವ ರಾಜ್ಯ ಕ್ರಿಕೆಟ್ ತಂಡಕ್ಕೂ ಇಲ್ಲ!

ಯಾವ ದೇಸೀ ಕ್ರಿಕೆಟ್ ತಂಡಕ್ಕೂ ಇಲ್ಲದಶ್ಟು ಬೆಂಬಲಿಗರು ಕರ‍್ನಾಟಕ ಕ್ರಿಕೆಟ್ ತಂಡಕ್ಕೆ ಇದ್ದಾರೆ. ಇದು ದೇಸೀ ಕ್ರಿಕೆಟ್ ಗೆ ವರದಾನವೆಂದೇ ಹೇಳಬೇಕು. 2012/13 ರ ಸಾಲಿನಲ್ಲಿ ಮೈಸೂರಿನಲ್ಲಿ ಹರಿಯಾಣ ಎದುರಿನ ಪಂದ್ಯದಲ್ಲಿ ರಾಜ್ಯ ತಂಡದ ಬದಲು ಬಾರತ ತಂಡದ ಆಟಗಾರನೆಂದು ಸೆಹ್ವಾಗ್ ರಿಗೆ ಬೆಂಬಲ ನೀಡಿ ರಾಜ್ಯ ಆಟಗಾರರ ಮನೋಬಲ ಕುಸಿಯುವಂತೆ ಮಾಡಿದ್ದ ಅಬಿಮಾನಿಗಳು, ಈಗ ಬಾರತ ತಂಡಕ್ಕೆ ಆಡುವ ಪೂಜಾರರನ್ನು ಲೆಕ್ಕಿಸದೇ ಕರ‍್ನಾಟಕ ತಂಡಕ್ಕೆ ಬೆಂಬಲ ನೀಡಿದ್ದು ಗಮನಿಸಬೇಕಾದ ಬೆಳವಣಿಗೆ ಎಂದೇ ಹೇಳಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಪೂಜಾರರಿಗೆ ಸಿಕ್ಕ ಜೀವದಾನಗಳನ್ನು ಮರೆಮಾಚಿ ಅವರ ಶತಕವನ್ನಶ್ಟೇ ಹೊಗಳಿದ ಹಲವಾರು ಕ್ರಿಕೆಟ್ ಪಂಡಿತರಿಗೆ ಹಾಗೂ ಮಾಜಿ ಆಟಗಾರರಿಗೆ ಕರ‍್ನಾಟಕ ಕ್ರಿಕೆಟ್ ಪ್ರೇಮಿಗಳು ಸರಿಯಾಗಿ ಚುರುಕು ಮುಟ್ಟಿಸಿದರು. ಅದೂ ಯಾವ ಮಟ್ಟಕ್ಕೆ ಎಂದರೆ, ಇದರ ಸಲುವಾಗಿಯೇ ‘ವಾಯ್ಸ್ ಅಪ್ ಇಂಡಿಯನ್ ಕ್ರಿಕೆಟ್’ ಎಂದೇ ಹೆಸರುವಾಸಿಯಾಗಿರುವ ಹರ‍್ಶ ಬೋಗ್ಲೆ ಕ್ರಿಕ್ ಬಜ್ ಗಾಗಿ ಒಂದು ವಿಡಿಯೋ ವಿಶ್ಲೇಶಣೆ ಮಾಡಿದರು. ಅದರಲ್ಲಿ ನಗುತ್ತಲ್ಲೇ ಕರ‍್ನಾಟಕ ಕ್ರಿಕೆಟ್ ಅಬಿಮಾನಿಗಳ ಟೀಕೆಯ ಬಗ್ಗೆ ಪ್ರಸ್ತಾಪಿಸಿದ ಅವರು ಒಂದು ದೇಸೀ ತಂಡಕ್ಕೆ ಈ ಬಗೆಯ ಬೆಂಬಲಿಗರಿರೋದು ಸಂತಸದ ವಿಶಯ ಎಂದರು.ಇನ್ನು ಮುಂದೆ ದೇಸೀ ಕ್ರಿಕೆಟ್ ಗೂ ಡಿ.ಆರ್.ಎಸ್ ಅನ್ನು ಅಳವಡಿಸಬೇಕೆಂಬ ಅನಿಸಿಕೆ ವ್ಯಕ್ತ ಪಡಿಸಿದರು. ಕರ‍್ನಾಟಕ ಸೋತರೂ ಬಾರತದ ಮಟ್ಟದಲ್ಲಿ ಅಬಿಮಾನಿಗಳು ಸದ್ದು ಮಾಡಿ ಕ್ರಿಕೆಟ್ ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಲು ಕಾರಣ ಕರ‍್ನಾಟಕದ ಬವ್ಯ ಕ್ರಿಕೆಟ್ ಪರಂಪರೆ ಎಂದೇ ಹೇಳಬೇಕು.

ಕರ‍್ನಾಟಕ ಕ್ರಿಕೆಟ್ – ಮುಂದೆ

ಈ ಸಾಲಿನಲ್ಲಿ ಅಳವುಳ್ಳ ಸಾಕಶ್ಟು ಆಟಗಾರರು ರಾಜ್ಯ ತಂಡದ ಪರ ಪಾದಾರ‍್ಪಣೆ ಮಾಡಿದರು. ಅವರೆಲ್ಲಾ ಕಂಡಿತವಾಗಿಯೂ ರಾಜ್ಯ ತಂಡದ ಮುಕ್ಯ ಆಟಗಾರರಾಗಿ ಬೆಳೆಯುತ್ತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್ ನಲ್ಲಿ ದೇವದತ್, ಸಿದ್ದಾರ‍್ತ್, ನಿಶ್ಚಲ್ ತಾವೇ ತಂಡದ ಬವಿಶ್ಯ ಎಂಬುವ ಬರವಸೆ ಮೂಡಿಸಿದ್ದಾರೆ. ಇನ್ನು ಬೌಲಿಂಗ್ ನಲ್ಲಿ  ವಿನಯ್ ಹೆಚ್ಚೆಂದರೆ ಇನ್ನೊಂದು ವರುಶ ಆಡಬಹುದು. ಹಾಗಾಗಿ ಪ್ರಸಿದ್, ಪ್ರತೀಕ್ ಮತ್ತು ಪ್ರದೀಪ್ ರನ್ನು ಅಶ್ಟರಲ್ಲಿ ಸಜ್ಜಾಗಿರುವಂತೆ ಮಾಡಬೇಕಿದೆ. ಸುಚಿತ್ ಸಿಕ್ಕ ಕಡಿಮೆ ಅವಕಾಶಗಳನ್ನು ಬಳಸಿಕೊಂಡರೂ ಶ್ರೇಯಸ್, ಗೌತಮ್ ಇರುವಾಗ ಹೆಚ್ಚು ಅವಕಾಶ ಸಿಗದಂತಾಗಿದೆ. ಜೊತೆಗೆ ಪೈಪೋಟಿ ನೀಡಲು ಈಗ ಶುಬಾಂಗ್ ಕೂಡ ಅಣಿಯಾಗಿದ್ದಾರೆ. ಸದ್ಯಕ್ಕೆ ಶರತ್ ಶ್ರೀನಿವಾಸ್ ವಿಕೆಟ್ ಕೀಪಿರ್ ಆಗಿ ಕಾಯಂ ಸದಸ್ಯರಾಗುವ ಮುನ್ಸೂಚನೆ ನೀಡಿದ್ದಾರೆ. ಮನೀಶ್ ನಾಯಕನ ಚಳಕವನ್ನು ಇನ್ನೂ ಮೈಗೂಡಿಸಿಕೊಳ್ಳಬೇಕಿದೆ. ಹಾಗಾದಾಗ ಮಾತ್ರ ಒತ್ತಡದ ಪಂದ್ಯಗಳಲ್ಲಿ ತಂಡ ಎದೆಗುಂದದೆ ಆಡಲು ಸಾದ್ಯ. ಹೀಗೇ ಪ್ರತಿ ವರ‍್ಶವೂ ಒಬ್ಬೊಬ್ಬ ಆಟಗಾರನ ಪ್ರದರ‍್ಶವನ್ನು ಗಮನಿಸಿ ತಂಡವನ್ನು ಕಟ್ಟಬೇಕಿದೆ. ಕರ‍್ನಾಟಕದ ಕಿರಿಯರ ತಂಡದಲ್ಲಿಯೂ ಪ್ರತಿಬೆಗೆ ಕೊರತೆ ಇಲ್ಲ. ಹಾಳೆ ಮೇಲೆ, ದೇಶದ ಅತ್ಯುತ್ತಮ ರಾಜ್ಯ ಕ್ರಿಕೆಟ್ ತಂಡವಾಗಿ ಕಾಣುವ ಕರ‍್ನಾಟಕಕ್ಕೆ ಮುಂದಿನ ವರ‍್ಶವಾದರೂ ಅದ್ರುಶ್ಟ ಕೈಗೂಡಿ 9 ನೇ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಳ್ಳಲಿ ಎನ್ನುವುದು ಕರುನಾಡ ಕ್ರಿಕೆಟ್ ತಂಡದ ಅಬಿಮಾನಿಗಳ ಹೆಬ್ಬಯಕೆ.

( ಚಿತ್ರಸೆಲೆ – deccanherald.comsportstar.thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *