ರಶ್ಯಾದಲ್ಲೊಂದು ಬೆರಗಾಗಿಸುವ ಕೆಸರಿನ ಹೊಂಡ!
– ಕೆ.ವಿ.ಶಶಿದರ.
ರಶ್ಯಾದಲ್ಲಿನ ಕ್ರಾಸ್ನೋಡರ್ ಕ್ರೈ ಪ್ರಾಂತ್ಯದ ಟೆಂರ‍್ಕಿಸ್ಕಿ ಜಿಲ್ಲೆಯ ‘ಪಾರ್ ದಿ ಮದರ್ ಲ್ಯಾಂಡ್’ ಎಂಬ ಹಳ್ಳಿಯ ಬಳಿ ತೀರಾ ವಿಚಿತ್ರ ಎನಿಸುವ ಹೊಂಡವೊಂದಿದೆ. ಅಜೋವ್ ಸಮುದ್ರದಿಂದ 400 ಮೀಟರ್ ದೂರದಲ್ಲಿರುವ ಟಿಡ್ಜರ್ ಜ್ವಾಲಾಮುಕಿಯಿಂದ ಉಂಟಾದ ಈ ಹೊಂಡವು ಕೆಸರಿನಿಂದ ತುಂಬಿಕೊಂಡಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರುವಾಸಿಯಾಗಿದೆ. ಸುಮಾರು ನೂರು ವರ‍್ಶಗಳ ಹಿಂದೆ ಟಿಡ್ಜರ್ ಜ್ವಾಲಾಮುಕಿ ಸ್ಪೋಟಿಸಿದ್ದು, ಅಲ್ಲಿಂದೀಚೆಗೆ ಶಾಂತವಾಗಿದೆ. ಹಾಗಾಗಿ ಜ್ವಾಲಾಮುಕಿ ಉಕ್ಕಿ ಹೊರಬರುತ್ತಿದ್ದ ಜಾಗವೀಗ ಬಹುಪಾಲು ಮುಚ್ಚಿದೆ.
ಇಲ್ಲಿನ ಕೆಸರಿಗೆ ಔಶದೀಯ ಗುಣವಿದೆ
150 ಮೀಟರ್ ಉದ್ದ, 100 ಮೀಟರ್ ಅಗಲದ ಈ ಕೆಸರು ಹೊಂಡ, ಸುಮಾರು 25 ಮೀಟರ್ ಆಳವಿರಬಹುದೆಂದು ಅಂದಾಜಿಸಲಾಗಿದೆ. ಈ ಮಣ್ಣಿನಲ್ಲಿ ಬ್ರೋಮಿನ್, ಅಯೋಡಿನ್ ಮತ್ತು ಹೈಡ್ರೋಜನ್ ಸಲ್ಪೈಡ್‍ನ ಪ್ರಮಾಣ ಅತಿ ಹೆಚ್ಚಿದೆ. ಮಣ್ಣಿನಲ್ಲಿ ಅನೇಕ ಔಶದೀಯ ಗುಣಗಳಿರುವುದರಿಂದ ಈ ಕೆಸರು ಮಣ್ಣಿನಲ್ಲಿ ಸ್ನಾನಕ್ಕೆ ಪ್ರವಾಸಿಗರು ಮುಗಿ ಬೀಳುತ್ತಾರೆ.
ಈ ಕೆಸರ ಹೊಂಡದಲ್ಲಿ ಮುಳುಗುವ ಅಂಜಿಕೆ ಬೇಡ
ಹೆಚ್ಚು ಸಾಂದ್ರತೆಯ ಕೆಸರನ್ನು ಹೊಂದಿರುವ ಈ ಹೊಂಡದಲ್ಲಿ ಮನುಶ್ಯ ಬಿದ್ದರೂ ಮುಳುಗುವ ಸಾದ್ಯತೆ ಇಲ್ಲ. ಬದಲಿಗೆ ಅದು ಮನುಶ್ಯನನ್ನು ಮೇಲಕ್ಕೆ ತಳ್ಳುತ್ತದೆ. ಯಾವುದೇ ಪ್ರಯತ್ನವಿಲ್ಲದೆ, ಮುಳುಗುವ ಬಯವಿಲ್ಲದೆ ಈ ಮಣ್ಣಿನ ಸರೋವರದಲ್ಲಿ ತೇಲಬಹುದು. ಇಲ್ಲಿನ ಮತ್ತೊಂದು ವಿಶೇಶತೆ ಎಂದರೆ ಹೊಂಡದ ಆಳಕ್ಕೆ ಹೋಗುತ್ತಿದ್ದಂತೆ ಮಣ್ಣಿನ ಸಾಂದ್ರತೆ ಹೆಚ್ಚುತ್ತದೆ. ಇದೇ ಕಾರಣದಿಂದಾಗಿ ತಳದವರೆಗೆ ಹೋಗಿ ಸರಿಯಾದ ಆಳವನ್ನು ಕಂಡುಹಿಡಿಯಲು ಸಾದ್ಯವಾಗಿಲ್ಲ.
ಇದೊಂದು ‘ಅಕ್ಶಯ ಪಾತ್ರೆ’ ಇದ್ದಂತೆ!
ಈ ಹೊಂಡದಲ್ಲಿರುವ ಕೆಸರು ಮಣ್ಣು ನಿರಂತರವಾಗಿ ಪ್ರತಿ ನಿಮಿಶವೂ ತಂತಾನೆ ಹೊಸದಾಗುತ್ತಿರುತ್ತದೆ. ಪ್ರತಿ ನಿಮಿಶಕ್ಕೆ 2.5 ಗನ ಮೀಟರ್‌ನಶ್ಟು ನೀಲಿ-ಬೂದು ಬಣ್ಣದ ಮಣ್ಣು ತಳದಿಂದ ಮೇಲಕ್ಕೆ ಬರುವುದರಿಂದ ಎಂದಿಗೂ ಈ ಮಣ್ಣು ತನ್ನ ಔಶದೀಯ ಗುಣವನ್ನು ಕಳೆದುಕೊಳ್ಳುವುದಿಲ್ಲ.
ಇಲ್ಲಿಗೆ ಬರುವ ಪ್ರವಾಸಿಗರು ಔಶದೀಯ ಗುಣದ ಈ ಮಣ್ಣನ್ನು ಹೊರಕ್ಕೆ ಒಯ್ಯುವ ಹಾಗಿಲ್ಲ. ಮಣ್ಣಿನ ಸ್ನಾನದ ಬಳಿಕ ಸ್ವಚ್ಚ ನೀರಿನ ಶವರ್ ಇಲ್ಲವೇ ಸಮುದ್ರದಲ್ಲಿ ಮೈ ತೊಳೆಯುವುದು ಸಾಮಾನ್ಯ. ಆದರೆ ಕೆಲವರು ಸ್ವಚ್ಚ ನೀರಿನಲ್ಲಿ ಮೈತೊಳೆಯದೇ ಮೈಗೆ ಅಂಟಿರುವ ಮಣ್ಣನ್ನು ಹಾಗೆಯೇ ಜೊತೆಗೆ ಒಯ್ಯುತ್ತಾರೆ.
(ಚಿತ್ರ ಮತ್ತು ಮಾಹಿತಿ ಸೆಲೆ: ritebook.in)
ಇತ್ತೀಚಿನ ಅನಿಸಿಕೆಗಳು