ಬಸವಣ್ಣನ ವಚನಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

 

ನಾನೊಂದ ನೆನೆದಡೆ
ತಾನೊಂದ ನೆನೆವುದು
ನಾನಿತ್ತಲೆಳದಡೆ
ತಾನತ್ತಲೆಳುವುದು
ತಾ ಬೇರೆ ಎನ್ನನಳಲಿಸಿ ಕಾಡಿತ್ತು
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು
ಕೂಡಲಸಂಗನ ಕೂಡಿಹೆನೆಂದಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.

ತನ್ನ ಮನದೊಳಗೆ ತುಡಿಯುತ್ತಿರುವ ಒಳಿತು/ಕೆಡುಕಿನ ಆಸೆ/ಕಾಮನೆ/ಬಯಕೆಗಳ ನಡುವೆ ಸಿಲುಕಿ ಕಂಗಾಲಾಗಿರುವ ವ್ಯಕ್ತಿಯು , ಕೆಡುಕಿನಿಂದ ಪಾರಾಗಿ ಒಳ್ಳೆಯ ನಡೆನುಡಿಗಳನ್ನು ಅಳವಡಿಸಿಕೊಂಡು ಬಾಳಲು ಹಂಬಲಿಸುತ್ತಿರುವುದನ್ನು ಈ ವಚನದಲ್ಲಿ ಹೇಳಲಾಗಿದೆ.

( ನಾನ್+ಒಂದ; ನಾನ್=ವ್ಯಕ್ತಿಯು; ಒಂದ=ಒಂದು ಸಂಗತಿಯನ್ನು/ವಿಚಾರವನ್ನು; ನೆನೆ=ಆಲೋಚಿಸು/ಚಿಂತಿಸು/ಬಯಸು/ಸಂಕಲ್ಪಿಸು/ಮನಸ್ಸಿಗೆ ತಂದುಕೊಳ್ಳುವುದು; ನೆನೆದಡೆ=ನೆನೆಸಿಕೊಂಡರೆ/ಮಾಡಬೇಕೆಂದು ಬಯಸಿದರೆ; ತಾನ್+ಒಂದ; ತಾನ್=ವ್ಯಕ್ತಿಯ ಮನದಲ್ಲಿಯೇ ಮತ್ತೊಂದು ಬಗೆಯ ಆಲೋಚನೆ/ಬಯಕೆ/ಚಿಂತನೆ/ವಿಚಾರ; ನೆನೆವುದು=ಮೂಡುವುದು/ಉಂಟಾಗುವುದು/ಬರುವುದು;

ನಾನೊಂದ ನೆನೆದಡೆ ತಾನೊಂದ ನೆನೆವುದು=ಯಾವುದೇ ಒಂದು ಕೆಲಸ/ಕಾರ‍್ಯ/ಎಸಕ/ಗೆಯ್ಮೆಯಲ್ಲಿ ತೊಡಕು ಉಂಟಾದಾಗ ವ್ಯಕ್ತಿಯ ಮನಸ್ಸು ಇಬ್ಬಗೆಯ ತೊಳಲಾಟಕ್ಕೆ ಗುರಿಯಾಗುತ್ತದೆ/ಹಾಗೆ ಮಾಡಿದರೆ ಸರಿ ಎಂದು ಒಂದು ಮನಸ್ಸು ಹೇಳಿದರೆ, ಹಾಗೆ ಮಾಡುವುದು ಸರಿಯಲ್ಲವೆಂದು ಮತ್ತೊಂದು ಮನಸ್ಸು ಎದುರಾಗುತ್ತದೆ;

ನಾನ್+ಇತ್ತಲ್+ಎಳೆದಡೆ; ಇತ್ತ=ಈ ಕಡೆ/ಈ ಪಕ್ಕ/ಈ ದಿಕ್ಕು; ಇತ್ತಲ್=ಈ ಕಡೆಗೆ/ಈ ಪಕ್ಕಕ್ಕೆ; ಎಳೆ=ಸೆಳೆಯುವುದು/ಜಗ್ಗುವುದು; ಎಳೆದಡೆ=ಸೆಳೆದರೆ/ಜಗ್ಗಿದರೆ; ತಾನ್+ಅತ್ತಲ್+ಎಳೆವುದು; ಅತ್ತ=ಆ ಕಡೆ/ಆ ಪಕ್ಕ/ಆ ದಿಕ್ಕು; ಅತ್ತಲ್=ಆ ಕಡೆಗೆ/ಆ ಪಕ್ಕಕ್ಕೆ/ ಆ ದಿಕ್ಕಿಗೆ; ಎಳೆವುದು=ಎಳೆಯುತ್ತದೆ;

ನಾನಿತ್ತಲೆಳದಡೆ ತಾನತ್ತಲೆಳುವುದು=ಮನದಲ್ಲಿ ಉಂಟಾದ ಇಬ್ಬಗೆಯ ತುಯ್ದಾಡುವಿಕೆಯು ವ್ಯಕ್ತಿಯನ್ನು ಒಳಿತು/ಕೆಡುಕಿನ ಒತ್ತಡಕ್ಕೆ/ಗೊಂದಲಕ್ಕೆ ಗುರಿಮಾಡಿ , ಏನೊಂದನ್ನು ಮಾಡಲಾಗದೆ ಮಿಲಮಿಲನೆ ಒದ್ದಾಡುವಂತೆ ಮಾಡುತ್ತದೆ;

ತಾ=ಮನದಲ್ಲಿನ ಮತ್ತೊಂದು ಬಗೆಯ ಚಿಂತನೆ/ಆಲೋಚನೆ/ಬಯಕೆ; ಬೇರೆ=ಜತೆಗೆ/ಕೂಡ; ಎನ್ನನ್+ಅಳಲಿಸಿ; ಎನ್ನನ್ನು=ನನ್ನನ್ನು; ಅಳಲು=ಸಂಕಟ/ಶೋಕ/ವೇದನೆ/ನೋವು/ಯಾತನೆ; ಅಳಲಿಸಿ=ಸಂಕಟಕ್ಕೆ ಗುರಿ ಮಾಡಿ; ಕಾಡು+ಇತ್ತು; ಕಾಡು=ಹಿಂಸಿಸು/ಪೀಡಿಸು/ನೋಯಿಸು; ಇತ್ತು=ಇರುವುದು/ಇದೆ; ಕಾಡಿತ್ತು=ನೋಯಿಸುತ್ತಿದೆ/ಪೀಡಿಸುತ್ತಿದೆ; ಎನ್ನ=ನನ್ನನ್ನು; ಬಳಲು=ದಣಿಯುವುದು/ಆಯಾಸಗೊಳ್ಳುವುದು/ಮಯ್ ಮನಗಳ ಕಸುವು ಕುಗ್ಗುವುದು; ಬಳಲಿಸಿ=ಕುಗ್ಗುವಂತೆ ಮಾಡಿ/ದಣಿಯುವಂತೆ ಮಾಡಿ/ಕುಸಿಯುವಂತೆ ಮಾಡಿ;

ತಾ ಬೇರೆ ಎನ್ನನಳಲಿಸಿ ಕಾಡಿತ್ತು ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು=ಮನದಲ್ಲಿ ಉಂಟಾದ ಇಬ್ಬಗೆಯ ತಾಕಲಾಟದಲ್ಲಿ ಏನನ್ನು ಮಾಡಬೇಕು/ಏನನ್ನು ಮಾಡಬಾರದು ಎಂಬುದನ್ನು ನಿರ‍್ಣಯಿಸಲಾಗದೆ/ತೀರ‍್ಮಾನಿಸಲಾಗದೆ ವ್ಯಕ್ತಿಯು ಮಾನಸಿಕ ಒತ್ತಡಕ್ಕೆ/ಬಿಕ್ಕಟ್ಟಿಗೆ/ಸಂಕಟಕ್ಕೆ ಗುರಿಯಾಗಿ ನರಳತೊಡಗುತ್ತಾನೆ;

ಕೂಡಲಸಂಗ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಕೂಡಿ+ಇಹೆನ್+ಎಂದಡೆ; ಕೂಡಿ=ಸೇರಿ/ಜತೆಯಾಗಿ; ಇಹೆನ್=ಇರುವೆನು; ಎಂದಡೆ=ಎಂದುಕೊಂಡರೆ;

ಕೂಡಲಸಂಗನ ಕೂಡಿಹೆನೆಂದಡೆ=ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳುವುದರ ಮೂಲಕ ಕೂಡಲಸಂಗನ ಜತೆಗೂಡಬೇಕೆಂದು ಬಯಸಿದರೆ;

ತಾನ್+ಎನ್ನ; ಮುಂದು+ಕೆಡಿಸಿ+ಇತ್ತು; ಮುಂದು=ಎದುರಿನಲ್ಲಿರುವುದು; ಕೆಡು=ಇಲ್ಲವಾಗು/ನಾಶವಾಗು/ಹದಗೆಡು; ಇತ್ತು=ಇರುವುದು/ಇದೆ; ಮುಂದುಗೆಡಿಸಿತ್ತು=ಮುಂದಿನ ದಾರಿಯೇ ಕಾಣದಂತೆ ಮಾಡಿದೆ/ಮುಂದಿನ ದಿಕ್ಕನ್ನು ಕಾಣದಂತೆ ಮಾಡಿದೆ/ಏನನ್ನು ಮಾಡಬೇಕೆಂದು ತೋಚದೆ ಕಂಗಾಲಾಗುವಂತೆ ಮಾಡಿದೆ; ಮಾಯೆ=ವ್ಯಕ್ತಿಯ ಮಯ್ ಮನದಲ್ಲಿ ಬಯಕೆಯನ್ನು/ಕಾಮನೆಯನ್ನು/ಆಸೆಯನ್ನು ಕೆರಳಿಸಿ ತಮ್ಮತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿಗಳು;

ತಾನೆನ್ನ ಮುಂದುಗೆಡಿಸಿತ್ತು ಮಾಯೆ=ಮಯ್ ಮನದಲ್ಲಿ ಬಹುಬಗೆಯ ಕೆಟ್ಟ ಬಯಕೆಗಳನ್ನು/ಕೆಟ್ಟ ಆಸೆಗಳನ್ನು ಮೂಡಿಸುವ ವಸ್ತು/ಜೀವಿ/ಸಂಗತಿಯು ವ್ಯಕ್ತಿಯ ನಡೆನುಡಿಯಲ್ಲಿ ಏರುಪೇರುಗಳನ್ನು ಉಂಟುಮಾಡುತ್ತ/ಅಡೆತಡೆಗಳನ್ನು ಒಡ್ಡುತ್ತ , ವ್ಯಕ್ತಿಯ ಬದುಕು ಸರಿಯಾದ ಹಾದಿಯಲ್ಲಿ ಸಾಗದಂತೆ ಮಾಡಿದೆ;

‘ಕೆಟ್ಟ ಬಯಕೆ/ಕೆಟ್ಟ ಆಸೆ’ಎಂದರೆ ತನಗೆ ಒಲವು ನಲಿವನ್ನು ನೀಡಿದರೂ, ಇತರರಿಗೆ ಮತ್ತು ಸಮಾಜಕ್ಕೆ ಹಾನಿಯನ್ನು ಉಂಟುಮಾಡುವುದು.

‘ಒಳ್ಳೆಯ ಬಯಕೆ/ಒಳ್ಳೆಯ ಆಸೆ’ ಎಂದರೆ ತನಗೆ ಒಲವು ನಲಿವನ್ನು ನೀಡುವಂತೆಯೇ ಇತರರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವುದು.)

 

ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.

ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುತ್ತ, ತಾನು ಆಡುವ ಒಳ್ಳೆಯ ಮಾತಿಗೆ ತಕ್ಕಂತೆ ಒಳ್ಳೆಯ ಕೆಲಸವನ್ನು ಮಾಡಲಾಗದೆ ಪರಿತಪಿಸುತ್ತ/ನೊಂದುಕೊಳ್ಳುತ್ತ/ಕಳವಳಪಡುತ್ತಾ, ಒಳ್ಳೆಯ ನಡೆನುಡಿಗಳ ಮೂಲಕ ಬದುಕನ್ನು ರೂಪಿಸಿಕೊಳ್ಳುವ ಹಂಬಲದಿಂದ ಕಾತರಿಸುತ್ತಿರುವುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಎನ್ನ=ನನ್ನ; ನಡೆ+ಒಂದು; ನಡೆ=ನಡವಳಿಕೆ/ವರ‍್ತನೆ/ಮಾಡುವ ಕೆಲಸ/ಆಚರಣೆ; ಪರಿ=ರೀತಿ/ಬಗೆ; ನುಡಿ+ಒಂದು; ನುಡಿ=ಮಾತು/ಸೊಲ್ಲು;

ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ=ನಾನು ಆಡುವ ಮಾತುಗಳಿಗೂ ನಾನು ಮಾಡುವ ಕೆಲಸಗಳಿಗೂ ಯಾವುದೇ ನಂಟಿಲ್ಲ. ಹೇಳುವುದು ಒಂದು, ಮಾಡುವುದು ಮತ್ತೊಂದು/ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡುತ್ತ, ನಿತ್ಯ ಜೀವನದಲ್ಲಿ ಕೆಟ್ಟ ಕೆಲಸಗಳಲ್ಲಿ ತೊಡಗಿದ್ದೇನೆ/ ನಾನು ಆಡುವ ಮಾತುಗಳಿಗೂ ನಾನು ಮಾಡುವ ಕೆಲಸಗಳಿಗೂ ಪರಸ್ಪರ ಹೊಂದಾಣಿಕೆಯಿಲ್ಲ;

ಎನ್ನ+ಒಳಗೆ+ಏನೂ; ಒಳಗೆ=ಅಂತರಂಗದಲ್ಲಿ/ಮನದಲ್ಲಿ; ಏನೂ=ಯಾವುದೇ ಬಗೆಯ/ರೀತಿಯ; ಶುದ್ಧ+ಇಲ್ಲ; ಶುದ್ಧ=ಸರಿಯಾದುದು/ಚೊಕ್ಕಟವಾಗಿರುವುದು/ಶುಚಿಯಾಗಿರುವುದು; ಶುದ್ಧವಿಲ್ಲ=ಸರಿಯಾಗಿಲ್ಲ/ಚೊಕ್ಕಟವಾಗಿಲ್ಲ; ನೋಡು+ಅಯ್ಯಾ; ನೋಡು=ಕಾಣು/ತಿಳಿ/ಅರಿ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ=ನನ್ನ ಮನದಲ್ಲಿ ಒಳ್ಳೆಯ ಚಿಂತನೆ/ಆಲೋಚನೆ/ಕಲ್ಪನೆ/ವಿಚಾರಗಳು ಮೂಡುವುದರ ಜತೆಜತೆಗೆ ಕೆಟ್ಟ ಚಿಂತನೆ/ಆಲೋಚನೆ/ಕಲ್ಪನೆ/ವಿಚಾರಗಳು ಸೇರಿಕೊಂಡು, ನನ್ನ ಮನಸ್ಸು ಗೊಂದಲಕ್ಕೆ/ಒತ್ತಡಕ್ಕೆ/ಚಡಪಡಿಕೆಗೆ/ಕಳವಳಕ್ಕೆ ಗುರಿಯಾಗಿದೆ;

ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ=ಪ್ರತಿಯೊಬ್ಬ ವ್ಯಕ್ತಿಯು ತನಗೆ ಅರಿವು ಬಂದ ಗಳಿಗೆಯಿಂದ ಸಾಯುವ ತನಕ ಜೀವನದ ಹಲವಾರು ಸನ್ನಿವೇಶಗಳಲ್ಲಿ ಆಡುವ ಮಾತು ಒಂದಾದರೆ, ಮಾಡುವ ಕೆಲಸವೇ ಮತ್ತೊಂದಾಗಿರುತ್ತದೆ. ವ್ಯಕ್ತಿಯ ಇಂತಹ ಇಬ್ಬಗೆಯ ವರ‍್ತನೆಗೆ ಕಾರಣವೇನೆಂಬುದನ್ನು ನಿಸರ‍್ಗ ಮತ್ತು ಸಮಾಜದ ನೆಲೆಗಳಿಂದ ನೋಡಬೇಕು.

ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳಿ ಅಳಿಯುವ ಜೀವಿಗಳಲ್ಲಿ ಮಾನವಜೀವಿಯನ್ನು ಹೊರತುಪಡಿಸಿ, ಇನ್ನುಳಿದ ಪ್ರಾಣಿ/ಹಕ್ಕಿ/ಕ್ರಿಮಿಕೀಟಗಳೆಲ್ಲವೂ ನಿಸರ‍್ಗದ ನೆಲೆಯಲ್ಲಿ ಬೆತ್ತಲೆಯಾಗಿ ಅಂದರೆ ಮಯ್ ಮೇಲೆ ಯಾವುದೇ ಬಗೆಯ ಬಟ್ಟೆಯನ್ನು ತೊಡದೆ, ಬೆತ್ತಲೆಯಾಗಿಯೇ ಬಾಳಿ ಅಳಿಯುತ್ತವೆ. ಆದರೆ ಮಯ್ ಮೇಲೆ ಬಟ್ಟೆಯನ್ನು ತೊಟ್ಟಿರುವ ಮಾನವ ಜೀವಿಯು ಮಾತ್ರ ನಿಸರ‍್ಗದ ನೆಲೆಯಲ್ಲಿ ಇತ್ತ ಒಂದು ಪ್ರಾಣಿಯಾಗಿ, ಅತ್ತ ತಾನೇ ಕಟ್ಟಿಕೊಂಡಿರುವ ಸಮಾಜದ ನೆಲೆಯಲ್ಲಿ ಒಬ್ಬ ಸಾಮಾಜಿಕ ವ್ಯಕ್ತಿಯಾಗಿ ಬಾಳುತ್ತಿದ್ದಾನೆ. ಒಂದು ಕಡೆ ಅವನ ಮಯ್ ಮನಗಳು ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳಲು ಮತ್ತು ಕಾಮದ ನಂಟನ್ನು ಪಡೆಯಲು ತುಡಿಯುತ್ತಿದ್ದರೆ, ಮತ್ತೊಂದು ಎಡೆಯಲ್ಲಿ ಜಾತಿಮತಗಳ ಕಟ್ಟುಪಾಡು/ಸಂಪ್ರದಾಯ/ಆಡಳಿತದ ಕಾನೂನುಗಳಿಗೆ ವ್ಯಕ್ತಿಯ ನಡೆನುಡಿಗಳು ಒಳಪಟ್ಟಿರುತ್ತವೆ. ಆದುದರಿಂದ ನಿಸರ‍್ಗ ಸಹಜವಾದ ಹಸಿವನ್ನು/ಮಯ್ಯಿನ ಕಾಮವನ್ನು/ಮನದ ಬಯಕೆಯನ್ನು ಸಮಾಜ ಮತ್ತು ಆಡಳಿತದ ನೀತಿನಿಯಮಗಳ ಎಲ್ಲೆಯೊಳಗೆ ಪೂರಯಿಸಿಕೊಳ್ಳಬೇಕಾಗಿದೆ.

ಇತರ ಜೀವಿಗಳ ಬದುಕಿನಲ್ಲಿ ಎದುರಾಗದ/ಇತರ ಜೀವಿಗಳ ಮನದಲ್ಲಿ ಇಲ್ಲದ “ ಒಳಿತು/ಕೆಡುಕು, ಸರಿ/ತಪ್ಪು, ನೀತಿ/ಅನೀತಿ, ನ್ಯಾಯ/ಅನ್ಯಾಯದ ನಡೆನುಡಿಗಳೆಂಬ ಇಬ್ಬಗೆಯ ತಾಕಲಾಟಗಳು “ ಮಾತು ಬಲ್ಲ ಮಾನವ ಜೀವಿಯನ್ನು ಕಾಡುತ್ತಿವೆ. ಮಾತು ಎಂಬುದು ಮಾನವ ಜೀವಿಯು ತನ್ನ ಮನದ ಒಳಮಿಡಿತಗಳನ್ನು ಮರೆಮಾಚಲು/ಮುಚ್ಚಿಡಲು ಬಳಸುವ ಒಂದು ಉಪಕರಣವಾಗಿಯೂ ಬಳಕೆಯಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಪಡೆಯುವ ಅರಿವು, ಆಡುವ ಮಾತು ಮತ್ತು ಮಾಡುವ ಕೆಲಸ/ಕಾರ‍್ಯ/ಎಸಕದ ನಡುವೆ ಹಲವಾರು ಸನ್ನಿವೇಶಗಳಲ್ಲಿ ಯಾವುದೇ ಬಗೆಯ ಹೊಂದಾಣಿಕೆಯಿಲ್ಲದೆ, ಅವೆಲ್ಲವೂ ಬೇರೆ ಬೇರೆಯಾಗಿರುತ್ತವೆ. ಇಂತಹ ಇಬ್ಬಗೆಯ ವ್ಯಕ್ತಿತ್ವವು ಮಾನವ ಸಮುದಾಯದಲ್ಲಿ ಗಂಡು ಹೆಣ್ಣು ಎನ್ನದೆ ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಇದ್ದೇ ಇರುತ್ತದೆ;

ನುಡಿಗೆ=ಆಡುವ ಮಾತುಗಳಿಗೆ; ತಕ್ಕ=ಸರಿಯಾದ/ಸಮನಾದ/ಒಂದೇ ರೀತಿಯಲ್ಲಿರುವ; ನಡೆಯ=ವರ‍್ತನೆಯನ್ನು/ಕೆಲಸವನ್ನು/ಆಚರಣೆಯನ್ನು; ಕಾಣ್=ನೋಡು/ತಿಳಿ/ಅರಿ; ಕಂಡಡೆ=ನೋಡಿದರೆ/ಅರಿತುಕೊಂಡರೆ/ತಿಳಿದುಕೊಂಡರೆ; ಕೂಡಲಸಂಗಮದೇವನ್+ಒಳಗೆ+ಇಪ್ಪನ್+ಅಯ್ಯಾ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಇಪ್ಪನ್=ಇರುವನು;

ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವನೊಳಗಿಪ್ಪನಯ್ಯಾ=ವ್ಯಕ್ತಿಯು ಆಡುವ ಒಳ್ಳೆಯ ಮಾತಿಗೆ ತಕ್ಕಂತೆ ಅವನು ಒಳ್ಳೆಯ ಕೆಲಸವನ್ನು ಮಾಡಿದರೆ, ಅಂತಹವರನ್ನು ದೇವರು ಮೆಚ್ಚಿಕೊಳ್ಳುತ್ತಾನೆ. ಶಿವಶರಣಶರಣೆಯರು ‘ವ್ಯಕ್ತಿಯ ಒಳ್ಳೆಯ ನಡೆನುಡಿಗಳೇ ದೇವರು’ ಎಂಬ ನಿಲುವನ್ನು ಹೊಂದಿದ್ದರು.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: