ರೆಡ್ ಮಿ ಬತ್ತಳಿಕೆಯ ಹೊಸ ಬಾಣ: ರೆಡ್ ಮಿ ನೋಟ್ 7 ಪ್ರೋ

ಆದರ‍್ಶ್ ಯು. ಎಂ.

ರೆಡ್ ಮಿ ನೋಟ್ 7 ಪ್ರೋ, Redmi Note 7 Pro

ದಿನೇ ದಿನೇ ಮೊಬೈಲ್ ಪೋನ್ ಗಳ ಬೆಲೆ ಕಮ್ಮಿಯಾಗಿ, ಮೊಬೈಲ್ ನಲ್ಲಿ ಸಿಗುತ್ತಿರುವ ಸೌಕರ‍್ಯಗಳು ಜಾಸ್ತಿಯಾಗುತ್ತಿವೆ. ಇದೀಗ, ಆಗಲೇ ಬಿಸಿಯಾಗಿರುವ ಕಮ್ಮಿ ದರದ ಮೊಬೈಲುಗಳು ಲೋಕಕ್ಕೆ ಕಿಚ್ಚು ಹಚ್ಚಲೆಂದೇ ರೆಡ್ ಮಿ ಹೊಚ್ಚ ಹೊಸ ಮೊಬೈಲನ್ನು ಬಿಡುಗಡೆ ಮಾಡುತ್ತಿದೆ. ಅದರ ಹೆಸರೇ ರೆಡ್ ಮಿ ನೋಟ್ 7 ಪ್ರೋ.

ರೆಡ್ ಮಿ ನೋಟ್ 7 ಪ್ರೋ ನಲ್ಲಿ 6.3 ಇಂಚಿನ ಮುಟ್ಟುತೆರೆಯಿದ್ದು(touchscreen), ಇದರ ಚೌಕಟ್ಟು ತುಂಬಾ ಕಮ್ಮಿ ಇದೆ. ಮೊದಲ ಬಾರಿಗೆ ಹಿಂಬದಿಯಲ್ಲೂ ಕೂಡ ಗಾಜಿನ ಹಿಂಬಾಗ ಬಳಸಲಾಗಿದೆ. ಮುಂಬದಿ ಹಾಗೂ ಹಿಂಬದಿ ಎರಡಕ್ಕೂ ಗೋರಿಲ್ಲಾ ಗ್ಲಾಸ್ 5 ರ ಸುರಕ್ಶತೆ ನೀಡಲಾಗಿದೆ. ಹಾಗಾಗಿ ಒಂದು ಮೀಟರ್ ಎತ್ತರದಿಂದ ಬೀಳಿಸಿದರೂ ಮೊಬೈಲ್ ಗೆ ಏನೂ ಆಗಲ್ಲ ಅಂತ ರೆಡ್ ಮಿ ಯವರು ಹೇಳುತ್ತಾರೆ (ಹಾಗಂತ ಬೀಳಿಸಲು ಹೋಗಬೇಡಿ 🙂 ).  ರೆಡ್ ಮಿ ನೋಟ್ 7 ಪ್ರೋ ನಲ್ಲಿ ಎಂದಿನಂತೆ 3.5 ಮಿಲಿ ಮೀಟರ್ ಉಲಿ ಕಿಂಡಿ (audio jack) ಕೊಡಲಾಗಿದ್ದು, ವಿಶೇಶವೆಂದರೆ ಮೊದಲ ಬಾರಿಗೆ ನೋಟ್ ಸರಣಿಯಲ್ಲಿ ಯು ಎಸ್ ಬಿ ಟೈಪ್ ಸಿ ಪೋರ‍್ಟ್ ಅನ್ನು ನೀಡಿದೆ. ಇದರಿಂದಾಗಿ ಹಾಡುಗಳನ್ನು ಕೇಳಲು, 3.5 ಮಿ.ಮೀ ಇಯರ್ ಪೋನ್, ಟೈಪ್ ಸಿಯ ಇಯರ್ ಪೋನ್ ಹಾಗೂ ಬ್ಲೂಟೂತ್ ಇಯರ್ ಪೋನ್ – ಈ ಮೂರೂ ಬಗೆಯ ಇಯರ್ ಪೋನ್ ಗಳನ್ನು ಬಳಸಬಹುದು.

ರೆಡ್ ಮಿ ನೋಟ್ 7 ಪ್ರೋ ನ ಬ್ಯಾಟರಿ

ರೆಡ್ ಮಿ ನೋಟ್ 7 ಪ್ರೋ 4000 mah ಬ್ಯಾಟರಿ ಹೊಂದಿದೆ. ಹಾಗೆಯೇ, ವೇಗವಾಗಿ ಚಾರ‍್ಜ್ ಮಾಡಬಲ್ಲ ಕ್ವಿಕ್ ಚಾರ‍್ಜ್ 4.0 ಸೌಕರ‍್ಯ ಹೊಂದಿದೆ. ಆದರೆ ಇದನ್ನು ಬೆಂಬಲಿಸಬಲ್ಲ ಚಾರ‍್ಜರ್ ಅನ್ನು ಮೊಬೈಲ್ ಕೊಳ್ಳುವಾಗ ನೀಡುವ ಪೆಟ್ಟಿಗೆಯಲ್ಲಿ ಕೊಡಬಹುದೇ ಎಂದು ಕಾದು ನೋಡಬೇಕು. ಇಯರ್ ಪೋನ್ ಗಳನ್ನಂತೂ ಪೆಟ್ಟಿಗೆಯಲ್ಲಿ ಕೊಡದಿರುವ ಸಂಪ್ರದಾಯವನ್ನು ಶುರುಮಾಡಿದ್ದೇ ರೆಡ್ ಮಿ ಯವರು. ಇಂದು ಎಲ್ಲರೂ ಅದನ್ನೇ ಮಾಡುತ್ತಿದ್ದಾರೆ! 186 ಗ್ರಾಂ ತೂಗುವ ಈ ಪೋನನ್ನು ಪೇಸ್ ಅನ್ಲಾಕ್ ಇಲ್ಲವೇ ಬೆರಳಚ್ಚು (fingerprint) ಮೂಲಕ ಅನ್ ಲಾಕ್ ಮಾಡಬಹುದು.

ರೆಡ್ ಮಿ ನೋಟ್ 7 ಪ್ರೋ ನ ಕ್ಯಾಮೆರಾ

ರೆಡ್ ಮಿ ನೋಟ್ 7 ಪ್ರೋ ನ ಮುಕ್ಯವಾದ ಅಂಶವೆಂದರೆ ಇದರಲ್ಲಿರುವ ಕ್ಯಾಮೆರಾ ಸೆನ್ಸಾರ್ ಗಳು. ಹಿಂಬದಿಯಲ್ಲಿ 48 ಹಾಗೂ 5 ಮೆಗಾ ಪಿಕ್ಸೆಲ್ ಮತ್ತು ಮುಂಬದಿಯಲ್ಲಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕೊಡಲಾಗಿದೆ. 48 ಮೆಗಾ ಪಿಕ್ಸೆಲ್ ಕ್ಯಾಮೆರಾಗೆ ಬಳಸಿರುವ ಸೆನ್ಸಾರ್ ಸೋನಿ ಐಎಂಎಕ್ಸ್ 576 ಆಗಿದ್ದು, ಇದನ್ನು ಬಳಸಿರುವ ಇನ್ನೊಂದು ಮೊಬೈಲಿನ ಬೆಲೆ 38 ಸಾವಿರ ಇದೆ. ಆದ್ದರಿಂದ 48 ಮೆಗಾ ಪಿಕ್ಸೆಲ್ ಕ್ಯಾಮೆರಾದ ಮೊಬೈಲನ್ನು ಕಡಿಮೆ ಬೆಲೆಗೆ ನೀಡುತ್ತಿರುವ ರೆಡ್ ಮಿ ಗೆ ಅಬಿನಂದನೆ ಸಲ್ಲಿಸಬೇಕು. ಸೋನಿ ಐಎಂಎಕ್ಸ್ ಸೆನ್ಸಾರ್ ಇದುವರೆಗೆ ಮೊಬೈಲ್ ನಲ್ಲಿ ಬಳಸಿರುವ ಅತ್ಯುತ್ತಮ ಸೆನ್ಸಾರ್ ಎಂದು ರೆಡ್ ಮಿ ಹೇಳಿದೆ. ಇದರ ಜೊತೆ ಕಟ್ಟು ಜಾಣ್ಮೆ ಚಿತ್ರ ಗುರುತಿಸುವಿಕೆ 2.0 (AI scene detection 2.0), 4ಕೆ ವಿಡಿಯೋ ಚಿತ್ರೀಕರಣ, 1080 ಪಿಕ್ಸೆಲ್ ಚಿತ್ರೀಕರಣದಲ್ಲಿ ಅಲುಗಾಟ ಮರೆಮಾಚುವಿಕೆ(Image stabilization) ಎಂಬಂತ ಪರಿಚೆಗಳಿವೆ (features).

ರೆಡ್ ಮಿ ನೋಟ್ 7 ಪ್ರೋ ನ ಪ್ರೊಸೆಸರ್

48 ಮೆಗಾಪಿಕ್ಸಲ್ ಗಳನ್ನು ಕೊಡಲು ಸಾದ್ಯವಾಗಲು ಸ್ನ್ಯಾಪ್ ಡ್ರಾಗನ್ 675 ಪ್ರೋಸೆಸರ್ ನೀಡಲಾಗಿದೆ. ಇದು ಶಕ್ತಿಶಾಲಿ ಎಂಟು ಕೋರ್ ಗಳ ಪ್ರೋಸೆಸರ್ ಆಗಿದೆ. ಇದರಲ್ಲಿರೋದು ಕ್ರಯೋ 460 ಸಿಪಿಯು ಆಗಿದ್ದು, ಇದರಲ್ಲಿ ಎರಡು ಎ 76 ಕೋರ್ ಗಳು ಹಾಗೂ ಎಂಟು ಎ 55 ಕೋರ್ ಗಳಿವೆ. ರೆಡ್ ಮಿ ನೋಟ್ 7 ಪ್ರೋ, Redmi Note 7 Proಇದನ್ನು ಉನ್ನತ ಮಟ್ಟದ ಸ್ನ್ಯಾಪ್ ಡ್ರಾಗನ್ 855 ಪ್ರೊಸೆಸರ್ ನಲ್ಲಿ ಕಾಣಬಹುದು. ಹಾಗಾಗಿ ನೋಟ್ 7 ಪ್ರೋ ನ ಒಟ್ಟಾರೆ ಪ್ರದರ‍್ಶನ ಪ್ರತಿ ಶತ ಇಪ್ಪತ್ತರಶ್ಟು ಹೆಚ್ಚಿದೆ ಎನ್ನಬಹುದು. ಇದರೊಟ್ಟಿಗೆ ಇದರಲ್ಲಿ ಅಡ್ರಿನೋ ಜಿಪಿಯು 612 ಬಳಸಿರುವುದರಿಂದ ಪಬ್ ಜಿ ಯಂತಹ ಆಟ ಆಡುವವರಿಗೂ ಅನುಕೂಲವಾಗಲಿದೆ.

ಈ ಮೊಬೈಲ್ ನಲ್ಲಿರುವ ಇನ್ ಪ್ರಾ ರೆಡ್ ಬ್ಲಾಸ್ಟರ್ ನಿಂದಾಗಿ (IR blaster) ಟಿವಿ, ಎಸಿ, ಡಿಟಿಎಚ್ ನ ರಿಮೋಟ್ ಗಳನ್ನು ನಿಯಂತ್ರಿಸಬಹುದು. ಇದರಲ್ಲಿ ಬ್ಲೂಟೂತ್ 5.0 ಕೊಟ್ಟಿರುವುದರಿಂದ ಕಡಿಮೆ ಶಕ್ತಿಯಲ್ಲಿ ಬ್ಲೂಟೂತ್ ಚೂಟಿಗಳನ್ನು(device) ಬಳಸಬಹುದು.ಇದರಲ್ಲಿ ಪಿ2ಐ ಸುರಕ್ಶತೆ ಇರೋದರಿಂದ ತುಂತುರು ಹನಿಗಳಿಂದ ಇದಕ್ಕೆ ರಕ್ಶಣೆಯಿದೆ. ಹಾಗಂತ ಪೂರ‍್ತಿ ನೀರಿನಲ್ಲಿ ಮುಳುಗಿಸಲು ಸಾದ್ಯವಿಲ್ಲ.

ರೆಡ್ ಮಿ ನೋಟ್ 7 ಪ್ರೋ ನ ತಂತ್ರಾಂಶ

ಹೈಬ್ರಿಡ್ ಸಿಮ್ ಸ್ಲಾಟ್ ನೀಡಿರುವುದರಿಂದ ಒಂದು ಸಿಮ್ ಕಾರ‍್ಡ್ + ಮೆಮೋರಿ ಕಾರ‍್ಡ್ ಇಲ್ಲವೇ ಎರಡು ಸಿಮ್ ಗಳನ್ನು ಬಳಸಬಹುದು. ಇದರಲ್ಲಿರುವ ತಂತ್ರಾಂಶ android 9.0 ಆಗಿದ್ದು, ಇದರ ಮೇಲೆ ರೆಡ್ ಮಿಯ ಎಂಐ 10 ತಂತ್ರಾಂಶವನ್ನು ಹೊಂದಿಸಲಾಗಿದೆ. ಆದರೆ ಮೊಬೈಲ್ ನಲ್ಲಿ ಜಾಹೀರಾತುಗಳನ್ನು ತೋರುವ ದೂರುಗಳು ಎಂಐ ತಂತ್ರಾಂಶದ ಮೇಲಿದ್ದು ಅದು ನೋಟ್ 7 ಪ್ರೋ ನಲ್ಲೂ ಮುಂದುವರೆಯುವ ಸಾದ್ಯತೆಯಿದೆ. ಈ ಬಾರಿ ಮೂರು ಹೊಸ ಬಣ್ಣಗಳಲ್ಲಿ ರೆಡ್ಮಿ ನೋಟ್ 7 ಪ್ರೋ ಹೊರಬಂದಿದ್ದು, ಆ ಬಣ್ಣಗಳು ನೆಪ್ಚೂನ್ ನೀಲಿ, ನೆಬ್ಯೂಲಾ ಕೆಂಪು ಹಾಗೂ ಸ್ಪೇಸ್ ಕಪ್ಪು ಆಗಿವೆ.

ರೆಡ್ ಮಿ ನೋಟ್ 7 ಪ್ರೋ ನ ವಿಶೇಶತೆಗಳು

  • 48 ಮೆಗಾ ಪಿಕ್ಸೆಲ್ ಕ್ಯಾಮೆರಾ
  • ಆಕರ‍್ಶಕವಾದ ಬೆಲೆ
  • ಯು ಎಸ್ ಬಿ ಟೈಪ್ ಸಿ
  • ಕ್ವಿಕ್ ಚಾರ‍್ಜ್ 4.0

ರೆಡ್ ಮಿ ನೋಟ್ 7 ಪ್ರೋ ನ ಕೊರತೆಗಳು

  • *ಹೈಬ್ರಿಡ್ ಸಿಮ್ ಸ್ಲಾಟ್
  • *ಎಂಐ ತಂತ್ರಾಂಶದಲ್ಲಿ ಕಂಡು ಬರುವ ಜಾಹೀರಾತುಗಳು

ರೆಡ್ ಮಿ ನೋಟ್ 7 ಪ್ರೋ ನ ಬೆಲೆ

4 ಜಿಬಿ+64 ಜಿಬಿ ಆವ್ರುತ್ತಿಯ ಮೊಬೈಲ್ ಗೆ 13,999 ಹಾಗೂ 6ಜಿಬಿ+128 ಜಿಬಿ ಆವ್ರುತ್ತಿಯ ಮೊಬೈಲ್ ಗೆ 16,999 ರೂಪಾಯಿರ ದರವನ್ನು ನಿಗದಿಪಡಿಸಿದ್ದು ಬೆಲೆ ಆಕರ‍್ಶಕವಾಗಿದೆ. ಆದರೆ ಈ ಬಾರಿಯಾದರೂ ಕೆಲವೇ ಸೆಕೆಂಡುಗಳಲ್ಲಿ ಕಾಲಿಯಾಗಿದೇ, ಹೆಚ್ಚು ಮೊಬೈಲ್ ಗಳು ಕೊಳ್ಳಲು ಸಿಗುವಂತೆ ರೆಡ್ ಮಿ ನೋಡಿಕೊಳ್ಳುತ್ತದಾ ಎಂದು ಕಾದುನೋಡಬೇಕು.

( ಚಿತ್ರ ಸೆಲೆ: gizbot.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications