ಮಕ್ಕಳ ಕಲಿಕೆಯ ಮೇಲೆ ಶಾಲೆಗಳ ಬದಲಾವಣೆಯ ಪರಿಣಾಮ
ಮಕ್ಕಳ ಮನಸ್ಸು ಗಾಳಿ ತುಂಬಿದ ಬಲೂನಿನಂತೆ ಬಹಳ ಸೂಕ್ಶ್ಮ. ಗಾಳಿ ತುಂಬಿದ ಬಲೂನನ್ನು ನಾಜೂಕಾಗಿ ನೋಡಿಕೊಳ್ಳದೆ ಹೋದರೆ ಅದು ಒಡೆದು ಹೋಗುತ್ತದೆ. ನಯವಾಗಿ ನೋಡಿಕೊಂಡರೆ ಬಹುಕಾಲ ಗಾಳಿಯಲ್ಲಿ ಸ್ವಚ್ಚಂದದಿಂದ ತೇಲಿಕೊಂಡಿರುತ್ತದೆ. ಮಕ್ಕಳ ಮನಸ್ಸನ್ನು ಬಹಳ ಎಚ್ಚರಿಕೆಯಿಂದ ನಿರ‍್ವಹಿಸಬೇಕು.
ಮಕ್ಕಳು ಶಾಲೆಗೆ ಹೋಗಲು ಮೊದಮೊದಲು ಹಟ ಹಿಡಿಯುತ್ತಾರೆ. ಏಕೆಂದರೆ ಮನೆಯೆಂಬ ರಕ್ಶಣಾ ತಾಣದಲ್ಲಿ ಅಕ್ಕರೆಯ ಅಪ್ಪ-ಅಮ್ಮನ, ಅಜ್ಜ-ಅಜ್ಜಿಯ ಸವಿ ನುಡಿಯ ಜೊತೆಗೆ, ಸಮಯದ ಹಂಗಿಲ್ಲದೆ ಸ್ವಚ್ಚಂದವಾಗಿ ಆಡಿಕೊಂಡಿದ್ದ ಮತ್ತು ಮನೆಯ ವಾತಾವರಣಕ್ಕೆ ಒಗ್ಗಿಕೊಂಡಿದ್ದ ಮಗು ಇದ್ದಕಿದ್ದಂತೆ ಶಾಲೆಯೆಂಬ ಹೊಸ ಪರಿಸರದಲ್ಲಿ ಹೊಸ ಮುಕಗಳೊಡನೆ ಹೊಂದಿಕೊಳ್ಳುವುದು ಅಶ್ಟು ಸುಲಬದ ಮಾತಲ್ಲ. ಅಲ್ಲಿ ಸ್ವಲ್ಪ ದಿನ ಮಾನಸಿಕ ಹಿಂಸೆ ಅನುಬವಿಸಬೇಕಾಗುತ್ತದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಬೇಕಾಗಿ ಬಂದಾಗ ಅಳುತ್ತವೆ, ಕಿರುಚಾಡುತ್ತವೆ, ಕಿನ್ನರಾಗಿ ಬಿಡುತ್ತವೆ, ಅಪ್ಪ-ಅಮ್ಮನ ಮೇಲೆ ಮುನಿಸಿಕೊಳ್ಳುತ್ತವೆ. ಕ್ರಮೇಣ ಇದು ಅನಿವಾರ‍್ಯ, ಈ ವಾತಾವರಣಕ್ಕೆ ಹೊಂದಿಕೊಳ್ಳಲೇಬೇಕು ಎಂದು ತಿಳಿವಿಗೆ ಬರುತ್ತಿದ್ದಂತೆ, ಅಸಹಾಯಕರಾಗಿ ಅಂಜಿಕೆಯಿಂದಲೇ ಅಲ್ಲಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಬರುಬರುತ್ತ ಶಿಕ್ಶಕರ ಜೊತೆ, ಸಹಪಾಟಿಗಳ ಜೊತೆಗೆ ಸ್ನೇಹ ಬೆಳೆದು, ತಮ್ಮ ಮನಸ್ಸಿಗೆ ದೈರ‍್ಯದ ಬಾವನೆ ಮೂಡಿದಾಗ ಶಾಲೆಯ ಪರಿಸರಕ್ಕೆ ಒಗ್ಗಿಕೊಂಡು ಆಟ ಪಾಟದ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಸಹಪಾಟಿಗಳೊಂದಿಗಿನ ಈ ಸ್ನೇಹದ ಬೆಸುಗೆಯಲ್ಲಿ ತಮ್ಮ ಸ್ವಬಾವಕ್ಕೆ ಹೊಂದಿಕೊಳ್ಳುವ ಕೆಲವರನ್ನಶ್ಟೇ ಹಚ್ಚಿಕೊಳ್ಳುತ್ತಾರೆ. ಹೀಗೆ ಶುರುವಾಗುವ ಈ ಬಾಂದವ್ಯ, ದಿನಗಳು ಕಳೆಯುತ್ತಿದ್ದಂತೆ ಮಕ್ಕಳ ನಡುವೆ ಆತ್ಮೀಯವಾಗಿ ಬೆಳೆಯುತ್ತದೆ.
ಮುಂದೊಮ್ಮೆ ಪ್ರಾತಮಿಕ, ಮಾದ್ಯಮಿಕ ಶಾಲಾ ಹಂತ ಮುಗಿಸಿ ಮುಂದಿನ ಹಂತದ ಓದಿಗಾಗಿ ಬೇರೆ ಕಡೆಗೆ ಹೊರಡಬೇಕಾಗಿ ಬಂದಾಗ ಮತ್ತೆ ಮಕ್ಕಳು ಕಿನ್ನತೆಗೆ ಒಳಗಾಗುವುದನ್ನು ನೋಡುತ್ತೇವೆ. ಏಕೆಂದರೆ ಈ ಹಿಂದೆ ಇದ್ದ ಆತ್ಮೀಯ ಗೆಳೆಯರು ಮುಂದಿನ ಓದಿನ ಸಲುವಾಗಿ ಬೇರೆ ಊರು, ಬೇರೆ ಶಾಲೆಗಳ ದಾರಿ ಹಿಡಿದಾಗ ಅನಿವಾರ‍್ಯವಾಗಿ ಅಲ್ಲಿಗೆ ಆ ಸ್ನೇಹದ ಬೆಸುಗೆ ಕಳಚುತ್ತದೆ. ಮತ್ತೊಂದು ಶಾಲೆಯ ಹೊಸ ವಾತಾವರಣದಲ್ಲಿ ಹೊಸ ಗೆಳೆಯರೊಂದಿಗೆ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಇಲ್ಲಿ ಮಕ್ಕಳ ಮನಸ್ಸಿನ ತಲ್ಲಣ ಹೆಚ್ಚಾದರೆ ಗಾಜಿನಂತಹ ಮನಸ್ಸು ಒಡೆದು ಕಲಿಕೆಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ. ಇಂತಹ ಸಂದರ‍್ಬದಲ್ಲಿ ತಂದೆ-ತಾಯಂದಿರು, ಮನೆಯ ಹಿರಿಯರು ಮಕ್ಕಳಿಗೆ ಹುರುಪು ತುಂಬಿ ಮಕ್ಕಳಲ್ಲಿ ಉಂಟಾಗುವ ಮಾನಸಿಕ ಏರುಪೇರಿಗೆ ಸಾಂತ್ವನ ಹೇಳುವ ಮನೋತಗ್ನರಾಗಬೇಕು. ಮಕ್ಕಳ ಕಲಿಕೆ ಮತ್ತು ನಡವಳಿಕೆಗಳ ಮೇಲೆ ನಿಗಾ ಇಡಬೇಕು. ಕ್ರಮೇಣ ತಮ್ಮ ಸ್ವಬಾವಕ್ಕನುಗುಣವಾದ ಗೆಳೆಯರು ಸಿಕ್ಕಾಗ ಆ ವಾತಾವರಣಕ್ಕೆ ಹೊಂದಿಕೊಳ್ಳುತ್ತ, ನಿರಾಳವಾಗಿ ಕಲಿಕೆಯ ಮೇಲೆ ನಿಗಾವಹಿಸುತ್ತಾರೆ.
ವಸ್ತು ಸ್ತಿತಿ ಹೀಗಿರುವಾಗ, ತಂದೆ-ತಾಯಿಗಳು ತಮ್ಮ ಪ್ರತಿಶ್ಟೆಯ ಸಲುವಾಗಿ ಮಕ್ಕಳ ಶಾಲೆಯನ್ನು ಪದೇ ಪದೇ ಬದಲಾಯಿಸುತ್ತ ಹೋದರೆ, ತಲ್ಲಣಗೊಳ್ಳುವ ಮಕ್ಕಳ ಮನಸ್ಸು ಹೊಸ ವಾತಾವರಣಕ್ಕೆ, ಹೊಸ ಮುಕಗಳಿಗೆ ಹೊಂದಿಕೊಳ್ಳಲಾಗದೆ ನೊಂದು ಹೋಗುತ್ತದೆ. ಅದು ಕಲಿಕೆಯ ಮೇಲೆ ತೀವ್ರ ಹಿನ್ನಡೆ ಉಂಟು ಮಾಡುವುದಲ್ಲದೆ, ಮಕ್ಕಳು ಸಾರ‍್ವಜನಿಕ ಬದುಕಿನಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತದೆ. ಇನ್ನೂ ಕೆಲವು ಮಕ್ಕಳು ಮುಂದುವರಿದು ಈ ಮಾನಸಿಕ ಕಿರಿಕಿರಿ ಮರೆಯಲು ನಶೆಯಂತಹ ದುರಬ್ಯಾಸಗಳಿಗೂ ಬಲಿಯಾಗಬಹುದು. ಇದು ಮುಂದುವರಿದು ಹಿರಿಯರ ಗಮನವೂ ಅತ್ತ ಹರಿಯದೇ ಮಕ್ಕಳ ಮಾನಸಿಕ ತೊಳಲಾಟ ಬೆಳೆಯುತ್ತಾ, ಮುಂದೊಮ್ಮೆ ಸಮಾಜಕ್ಕೆ ಕಂಟಕನಾಗಿ ಅಪರಾದ ಲೋಕಕ್ಕೂ ಕಾಲಿಡಬಹುದು.
ನಮ್ಮ ನೈತಿಕತೆಯನ್ನು ಪ್ರಶ್ನೆ ಮಾಡಿಕೊಂಡರೆ, ತಿಳಿಮನಸ್ಸಿನ ಮಗುವೊಂದನ್ನು ಸಮಾಜಕ್ಕೆ ಕಂಟಕಪ್ರಾಯನಾಗಿ ಬದಲಾಗುವಂತಹ ವಾತಾವರಣ ಉಂಟುಮಾಡಿದ್ದು ನಾವೇ ಅಲ್ಲವೇ? ಎಂದನಿಸುವುದು ಕಂಡಿತಾ. ನಮ್ಮದೇ ಮಕ್ಕಳ ಬದುಕಿನಲ್ಲಿ ಪರೋಕ್ಶವಾಗಿ ನಾವೇ ಕಳನಾಯಕರಾಗಿ ಬಿಡುತ್ತೇವೆ. ಆದ್ದರಿಂದ ಮಕ್ಕಳಿಗೆ ಪದೇ ಪದೇ ಶಾಲೆಯನ್ನು ಬದಲಾಯಿಸುವ ತಪ್ಪು ಮಾಡಬೇಡಿ. ಸಾದ್ಯವಾದಶ್ಟು ಇದ್ದ ಪರಿಸರದಲ್ಲೇ ಮಕ್ಕಳನ್ನು ಬೆಳೆಯಲು ಕಲಿಯಲು ಬಿಡಿ.
‘ಕಲಿಕೆಯು ಶಾಲೆಯ ಶ್ರೇಶ್ಟತೆ, ಶ್ರೇಣೀಕ್ರುತ ವ್ಯವಸ್ತೆಗೆ ಸಂಬಂದಪಟ್ಟಿದ್ದಲ್ಲ; ಅದು ಮನಸ್ಸಿಗೆ ಸಂಬಂದಪಟ್ಟಿದೆ’.
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು