ನಮ್ಮೂರ ಶಾಲಾ ದಿನಗಳು – ಒಂದು ನೆನಪು
ನಾಲ್ಕು ದಶಕಗಳ ಹಿಂದಿನ ಹೊತ್ತು. ನಾವೆಲ್ಲ ಚಡ್ಡಿ ಅಂಗಿ ತೊಟ್ಟು ಪಾಟಿ ಚೀಲ ಹೆಗಲಿಗೇರಿಸಿ ಒಂದು-ಎರಡನೇ ತರಗತಿಗೆ ಹೋಗುತ್ತಿದ್ದ ಕಾಲವದು. ನಮ್ಮ ಮನೆಯಿಂದ ಸರ‍್ಕಾರಿ ಪ್ರಾತಮಿಕ ಶಾಲೆಗೆ ನಡೆದೆ ಹೋಗಬೇಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಪಕ್ಕಾ ಮಲೆನಾಡ ಹಳ್ಳಿ ಬೇರೆ. ಈ ಶಾಲೆ ಪ್ರಾರಂಬ ಆಗುತಿದ್ದದ್ದು ಜೂನ್ ತಿಂಗಳಲ್ಲಿ! ಮಳೆಗಾಲದ ಪ್ರಾರಂಬಕ್ಕೆ ಶಾಲೆ ಶುರು. ನಮ್ಮಪ್ಪ ಕೊಡಿಸಿದ ಮರದ ಕೋಲಿನ ದೊಡ್ಡ ಚತ್ರಿ ಕೈಯಲ್ಲಿ. ಎತ್ತ ಗಾಳಿ ಮಳೆ ಬೀಸುತ್ತದೋ ಅತ್ತ ಗುರಾಣಿಯಂತೆ ಈ ಚತ್ರಿಯನ್ನು ಬಳಕೆ ಮಾಡಿಕೊಳ್ಳಬೇಕಾಗುತಿತ್ತು.
ಶಾಲೆಗೆ ಹೋದ ಕೂಡಲೆ ನಮ್ಮ ನಮ್ಮ ಪಾಳಿಯಂತೆ ಶಾಲಾ ಕೊಟಡಿ, ಶಾಲೆಯ ಹಜಾರ ಗುಡಿಸುವ ಕಾಯಕ ಇರುತಿತ್ತು. ನಮ್ಮ ಶಾಲಾ ಕೊಟಡಿಗೆ ಈಗಿನಂತೆ ಗಾಜಿನ ಕಿಟಕಿಗಳು ಇದ್ದಿಲ್ಲ, ಪಕ್ಕಾ ಮರದ ಹಲಗೆಯ ಕಿಟಕಿಗಳು. ಜೋರಾಗಿ ಮಳೆ ಬಂದರೆ ಕಿಟಕಿಯ ಒಳಗಿಂದ ಹಂಚಿನ ಮಾಡಿನಿಂದ ನೀರು ಸೋರಿ ಶಾಲೆ ಮಡುವಾಗಿ ಬಿಡುತಿತ್ತು. ಜೋರಾಗಿ ಮಳೆ ಬಂದಾಗ ಕಿಟಕಿ ಹಾಕುತಿದ್ದುದ್ದರಿಂದ ಶಾಲಾ ಕೊಟಡಿಯಲ್ಲಿ ಅಮವಾಸ್ಯೆಯ ಕತ್ತಲೆ! ಪಾಪ ಮೇಸ್ಟ್ರು ಏನು ಹೇಳುತ್ತಿದ್ದರೋ, ಕತ್ತಲಲ್ಲಿ ನಾವೇನು ಕೇಳಿಸಿಕೊಳ್ಳುತಿದ್ದೆವೋ ಆ ಹರನಿಗಶ್ಟೇ ಗೊತ್ತಿತ್ತು.
ಮಳೆಗಾಳಿಯ ತಂಡಿಯ ನಡುಕಕ್ಕೆ ಕಣ್ಣು ಜೊಂಪು ಹತ್ತುತ್ತಿದ್ದವು. ಹಿಂದಿನ ಮಣೆಯಲ್ಲಿ ಕುಳಿತ ಶಿಶ್ಯರ ಬಳಗದ್ದು ಬರಿ ಮಾತೇ!! ಆಗಾಗ ಶೇಶಾದ್ರಿ ಮಾಸ್ಟ್ರು “ಏಯ್ ಯಾರೋ ಅದು ಮಾತಾಡೋದು ಬಂದು ಜಜ್ಜಿ ಬಿಡ್ತೀನಿ ನೋಡು” ಎಂಬ ಮಾತು ನಡು ನಡುವೆ ಕಿವಿಗೆ ರಾಚೋದು. ಈ ಮಳೆಗಾಲದಲ್ಲಿ ಆಗಾಗ ಮೂತ್ರದ ಒತ್ತಡ ಬೇರೆ. ಎದ್ದು ನಿಂತು ಸಾರ್ ಎಂದು ಬೆರಳು ಮಾಡಿ ತೋರಿಸಿ ಅನುಮತಿ ಪಡೆದುಕೊಳ್ಳಬೇಕು. ಮಾಸ್ಟ್ರು ಸುಮ್ಮನೆ ಅನುಮತಿ ಕೊಡುತ್ತಿರಲಿಲ್ಲ “ಅಹಾ ತಿಂದ್ಬಿಟ್ಟು ಬಂದ್ಬಿಟ್ಟ ಬ್ರುಹಸ್ಪತಿ. ಏನು ಆಗದಿದ್ರು ಇವೆಲ್ಲ ಕಾಲ ಕಾಲಕ್ಕೆ ಆಗುತ್ತೆ ಎದ್ದೋಗೊ” ಅಂದಾಗ ನಾವು ಅಮೇರಿಕಾಕ್ಕೆ ವೀಸಾ ಸಿಕ್ಕಶ್ಟೆ ಸಂತೋಶದಲ್ಲಿ ಮೂಲೆಯಲ್ಲಿ ಒಟ್ಟಿದ್ದ ಚತ್ರಿ ಸಮೂಹದಲ್ಲಿ ನಮ್ಮ ಚತ್ರಿ ಹುಡುಕಿ ತೆಗೆದು ಶಾಲೆಯ ಹೊರಗಿನ ಬಯಲಿಗೋಡುತ್ತಿದ್ದೆವು (ಆಗಾ ಶಾಲೆಗಳಲ್ಲಿ ಮೂತ್ರಿಗಳು ಇರಲಿಲ್ಲ). “ಹಿಂಗಿಂದ ಹಿಂಗೆ ಮನೆಗೆ ಓಡಿ ಹೋಗಿ ಬಿಡ್ಲ” ಅಂತ ಅನ್ಸೋದು. ಆದರೆ ಮಾಸ್ಟ್ರ ಹೆದರಿಕೆಯಿಂದ ಹಾಗೆ ಮಾಡದೆ ಡೀಸೆಂಟಾಗಿ ಶಾಲಾ ಕೊಟಡಿಗೆ ತೆರಳುತಿದ್ದೆವು.
ನಮ್ಮ ಗಣಿತದ ರಾಜಪ್ಪ ಮೇಸ್ಟ್ರು ಬಲು ಜೋರು. “ಏಯ್ ಯಾರೋ ಅದು ಕೊಟ್ಟ ಲೆಕ್ಕ ಮಾಡ್ಕೊಂಡು ಬಂದಿಲ್ಲ ಅವನಿಗೆ ಎದೆ ಕಟ್ಡಿ ಒದ್ದು ಬಿಡ್ತೀನಿ ನೋಡು” ಎಂದಾಗ ಅಂತಹ ಮಳೆಗಾಳಿಯಲ್ಲು ಬೆವರುತಿದ್ದೆವು. ಅವರು ಉಗ್ರ ಕೋಪಿ, ಸಿಟ್ಟು ಬಂದ್ರೆ ಮುಕಾಮೂತಿ ನೊಡ್ದಂಗೆ ಚಚ್ಚಿ ಹಾಕಿ ಬಿಡ್ತಿದ್ರು. ಬಹುಶಹ ಇವರ ಓಲೈಕೆಗಾಗಿ ನಮ್ಮ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು, ಸೊಪ್ಪು ಆಗಾಗ ರಾಜಪ್ಪ ಮೇಸ್ಟ್ರಿಗೆ ಕಪ್ಪಕಾಣಿಕೆ ಸಲ್ಲಿಸಿ ರಾಜಿ ಮಾಡಿಕೊಳ್ಳಬೇಕಿತ್ತು. ಇಲ್ದಿದ್ರೆ ಅಶ್ಟೆ ಗತಿ!
ರಾಜಪ್ಪ ಮೇಸ್ಟ್ರಿಗೆ ಹಲಸಿನ ಹಣ್ಣು ತಿನ್ನೊ ಉಮೇದು ಬಂದರಂತು “ಏಯ್ ಶಿಕಾಮಣಿ ನಿಮ್ಮ ಮನೆಲಿ ಹಲ್ಸಿನ ಮರ ಐತಲ್ಲೆನೊ ಹೋಗಿ ಒಂದು ಒಳ್ಳೆ ಹಣ್ಣು ಬಿಡ್ಸಕೊಂಡ್ ಬಾ ಹೋಗು, ಹಂಗೆ ಕುಡ್ಲು ಮತ್ತೆ ಬಟ್ಟಲಲ್ಲಿ ಸ್ವಲ್ಪ ಎಣ್ಣೆ ತಗೊಂಬಾ ಅಂತ ಕಳ್ಸೋರು ಜೊತೆಗೆ ನಿನ್ನೆರಡು ಬಾಲಾನು ಕರ‍್ಕೊಂಡು ಹೋಗು” ಅಂತ ಪರ‍್ಮಾನು ಹೊರಡಿಸೋರು. ನಾವು ಆಗ ಇಡಿ ತರಗತಿಯ ಹೀರೊಗಳು. ಬಿಡಿಸಿ ತಂದ ಹಲಸಿನ ಹಣ್ಣಿನ ಮಾರಣ ಹೋಮ ಶಾಲೆಯ ಅಂಗಳದಲ್ಲೇ. ಬಿಡಿಸಿದ ಒಂದೊಂದು ಹಲಸಿನ ತೊಳೆ ಮೆಲ್ಲುತ್ತ ಮಾಸ್ಟ್ರು “ಆಹಾ ಸಕ್ರೆ ಸಕ್ರೆ…” ಅನ್ನೋರು. ನಮಗೆ ಮಾತ್ರ ಹಲಸಿನ ಅಂಟೇ ಗತಿ.
ನಮ್ಮ ಶಾಲೆಗೆ ಸ್ಕೂಲ್ ಇನ್ಸ್ಪೆಕ್ಶನ್ ಗೆ ಇಲಾಕೆಯಿಂದ ಒಬ್ಬರು ಬರ‍್ತಾರೆ ಎಂಬ ಸುದ್ದಿ ಬರುತ್ತಿದ್ದಂತೆ ನಮ್ಮ ಶಾಲೆ ಮಿಲಿಟರಿ ಶಿಸ್ತು ಪಡೆದುಕೊಳ್ಳುತ್ತಿತ್ತು. ಬರುವ ಆ ಸಾಹೇಬ್ರು ನಮಗೆ ಪ್ರದಾನಮಂತ್ರಿಗೋ ರಾಶ್ಟ್ರಪತಿಗೋ ಸಮ. ಅವರು ಬಂದು ಹೋಗುವವರೆಗೂ ಎಲ್ಲರಿಗೂ ನಡುಕ. ರಾಜಪ್ಪ ಮೇಸ್ಟ್ರಂತ ಮೇಸ್ಟ್ರೇ ನಡುಗಿ ಹೋಗೋರು. ಇಂತಾ ನೂರಾರು ಅನುಬವಗಳೊಂದಿಗೆ, ನೂರಾರು ಹುಚ್ಚಾಟಗಳೊಂದಿಗೆ ನಾವು ಈ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಓದು ಮುಗಿಸಿದೆವು.
ಪ್ರಾತಮಿಕ ಶಾಲೆಯ ಇಂತಹ ನೂರಾರು ನೆನಪುಗಳಿವೆ. ಇಂದಿಗೂ ಆ ನೆನಪುಗಳು ಮತ್ತು ಆ ನೆನಪುಗಳು ನೀಡುವ ನಲಿವು ಮರೆಯಲಾಗದ್ದು.
(ಚಿತ್ರ ಸೆಲೆ: klp )
ಇತ್ತೀಚಿನ ಅನಿಸಿಕೆಗಳು