ರಜೆ ಬಂತು ರಜೆ
– ವೆಂಕಟೇಶ ಚಾಗಿ.
ರಜೆ ಎಂದರೆ ಯಾರಿಗೆ ಇಶ್ಟವಿಲ್ಲ ಹೇಳಿ. ಮಕ್ಕಳಿಗೆ ರಜೆ ಬಂದಿತೆಂದರೆ ಕುಶಿಯೋ ಕುಶಿ. ಶಾಲೆಗೆ ಹೋಗುವ ಗೊಡವೆ ಇರುವುದಿಲ್ಲ. ಬೆನ್ನ ಮೇಲೆ ಶಾಲಾ ಬ್ಯಾಗ್ ನ ಹೊರೆ ಇರುವುದಿಲ್ಲ. ಅರೆಬರೆ ಟಪಿನ್, ಅವಸರದ ಕೆಲಸಗಳು, ಹೋಮ್ ವರ‍್ಕ್, ಪಾಟ ಪ್ರವಚನ, ಶಿಕ್ಶಕರ ಬೋದನೆ ಇವೆಲ್ಲ ರಗಳೆಗಳಿಂದ ಮುಕ್ತ ಮುಕ್ತ ಮುಕ್ತ.
ರಜೆಗೆ ನೂರಾ ಎಂಟು ಪ್ಲ್ಯಾನ್ ಗಳು. ಬಂದು ಬಳಗ, ಅಜ್ಜಿ ಮನೆ, ಸಂಬಂದಿಕರ ಊರಿಗೆ ಹೋಗುವುದು, ಕಿರು ಪ್ರವಾಸಗಳು, ಮದುವೆ, ಜಾತ್ರೆ, ಉತ್ಸವ ಹೀಗೆ ಹಲವಾರು ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೂಕ್ತ ಅವಕಾಶ. ರಜೆ ಇದ್ದರೂ ಕೆಲವು ಶಾಲೆಗಳು ಮಕ್ಕಳಿಗೆ ಹೋಮ್ ವರ‍್ಕ್ ಕೊಡುವ ಪದ್ದತಿಯನ್ನು ರೂಡಿಸಿಕೊಂಡು ಬಂದಿವೆ. ಓದುವ ಬರೆಯುವ ರೂಡಿ ತಪ್ಪದಿರಲಿ, ಸಮಯದ ಸದುಪಯೋಗವಾಗಲಿ ಅತವಾ ಮುಂದಿನ ತರಗತಿಗೆ ತಯಾರಾಗಲಿ ಎಂಬ ಇರಾದೆ ಶಾಲೆಗಳದ್ದು. ಇದು ಒಂದು ರೀತಿಯಲ್ಲಿ ಸರಿ ಎನಿಸಿದರೂ ಮಕ್ಕಳಿಗೆ ಮಾನಸಿಕವಾಗಿ ಒತ್ತಡ ಮೂಡಿಸುವ ಅತವಾ ಕಿರಿಕಿರಿ ಉಂಟುಮಾಡುವಂತದ್ದು.
ಇತ್ತೀಚೆಗೆ ಪಾಲಕರ ಕೋರಿಕೆಯ ಮೇರೆಗೆ ಕಡ್ಡಾಯವಾಗಿ ಹೋಮ್ ವರ‍್ಕ್ ಕೊಡುವ ಸಂಪ್ರದಾಯ ಶುರುವಾಗಿದೆ. “ಸರ್, ಸ್ವಲ್ಪ ಜಾಸ್ತಿನೇ ಹೋಂ ವರ‍್ಕ್ ಕೊಡಿ, ಮನೇಲಿ ಸುಮ್ನೆ ಕಾಲಹರಣ ಮಾಡ್ತಾರೆ” ಅನ್ನುವ ಪಾಲಕರ ಮಾತಿಗೆ ಮಣಿದು, ಹೆಚ್ಚು ಹೆಚ್ಚು ಹೋಂ ವರ‍್ಕ್ ಕೊಡುವಂತಹ ಪರಿಪಾಟವನ್ನು ಕೆಲವು ಶಾಲೆಗಳು ಬೆಳೆಸಿಕೊಂಡಿವೆ. ಶಾಲೆ ಇರುವಾಗಲೂ ಹೋಮ್ ವರ‍್ಕ್ ಮಾಡುತ್ತೇವೆ, ಶಾಲೆಗೆ ರಜೆ ಇರುವಾಗಲೂ ಹೋಮ್ ವರ‍್ಕ್ ಮಾಡಬೇಕೆ ಎಂದು ಮಕ್ಕಳಿಗೆ ಅನಿಸುವುದು ಸಹಜ.
ರಜೆಯು ಮಕ್ಕಳಿಗೆ ಸದುಪಯೋಗವಾಗುವಂತೆ ನೋಡಿಕೊಳ್ಳುವುದು ಪಾಲಕರ ಪ್ರಮುಕ ಕರ‍್ತವ್ಯ. ಓದು ಬರಹ ಮಕ್ಕಳಿಗೆ ಹೊರೆಯಾಗದಂತೆ ನೋಡಿಕೊಳ್ಳುವುದು ಉತ್ತಮ. ರಜಾ ದಿನಗಳಲ್ಲಿ ಓದು ಬರಹಕ್ಕೆ ಕಡಿಮೆ ಪ್ರಾಮುಕ್ಯತೆಯನ್ನು ನೀಡಿ ಪಟ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವುದು ಒಳ್ಳೆಯದು. ಬಂದು ಬಳಗದೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ, ತಂದೆ ತಾಯಿಗಳೊಂದಿಗೆ ಹೆಚ್ಚು ಕಾಲ ಬೆರೆಯುವಂತೆ ಮಾಡಬೇಕು. ಸಬೆ, ಸಮಾರಂಬ, ಉತ್ಸವ ಜಾತ್ರೆಗಳಂತಹ ಸಾರ‍್ವಜನಿಕ ಕಾರ‍್ಯಕ್ರಮಗಳಲ್ಲಿ ಬಾಗವಹಿಸುವಂತೆ ಮಾಡಬೇಕು. ಹಳ್ಳಿಯ ಪರಿಸರ, ಹೊಲ ಗದ್ದೆ ತೋಟ, ಹಳ್ಳ ನದಿ, ಬೆಟ್ಟ ಗುಡ್ಡ ಕಾಡು ಹೀಗೆ ಮುಂತಾದ ಪ್ರಾಕ್ರುತಿಕ ತಾಣಗಳೊಂದಿಗೆ ಮಕ್ಕಳು ಬೆರೆಯುವ ಹಾಗೆ ಮಾಡಿದರೆ ತುಂಬಾ ಒಳ್ಳೆಯದು. ಈಜು, ಸೈಕ್ಲಿಂಗ್, ಚಿತ್ರ ಕಲೆ, ನಾಟಕ, ಹಾಡುಗಾರಿಕೆ, ನ್ರುತ್ಯ ಹೀಗೆ ವಿವಿದ ವಲಯಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ರಜಾದಿನಗಳು ಸದವಕಾಶವನ್ನು ನೀಡುತ್ತವೆ. ಕುಲಕಸುಬುಗಳನ್ನು ಕೂಡ ಮಕ್ಕಳಿಗೆ ಹೇಳಿ ಕೊಡುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಸಮಯ ಅಮೂಲ್ಯವಾದದ್ದು. ರಜೆ ಇದೆ ಎಂದು ಕಾಲಹರಣ ಮಾಡುವುದರಿಂದ ಮುಂದಿನ ದಿನಮಾನಗಳಲ್ಲಿ ತೊಂದರೆಗಳನ್ನು ಅನುಬವಿಸಬೇಕಾದೀತು. ಮುಂಬರುವ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬೇಕಾಗಬಹುದು. ಟಿವಿ, ಇಂಟರ‍್ನೆಟ್, ಮೊಬೈಲ್, ಗೇಮ್ಸ್ ಇವುಗಳಿಂದ ಮಕ್ಕಳನ್ನು ಆದಶ್ಟು ದೂರವಿರಿಸುವುದು ಒಳಿತು. ಮಕ್ಕಳ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಪ್ರಗ್ನೆಯ ಬೆಳವಣಿಗೆಗೆ ಇಂತಹ ಅವಕಾಶಗಳನ್ನು ಸಾದ್ಯವಾದಶ್ಟು ಮಟ್ಟಿಗೆ ಮಕ್ಕಳಿಗೆ ಒದಗಿಸಿಕೊಡುವುದು ಪಾಲಕರ ಕರ‍್ತವ್ಯ. ಹಾಗಂತ ಮಕ್ಕಳಿಗೆ ಇದು ಹೊರೆಯಾಗದಿರಲಿ, ಮಕ್ಕಳಿಗೆ ರಜೆಯಿಂದ ಹೆಚ್ಚು ಉಪಯೋಗವಾಗಲಿ ಎಂಬುದೊಂದು ಆಶಯ.
( ಚಿತ್ರಸೆಲೆ : indianexpress.com )
ಶಾಲೆಗೆ ಹೋಗುವ ಗೊಡವೆ ಇರುವುದಿಲ್ಲ.
ಹೋಮ್ ವರ‍್ಕ್, ಪಾಟ ಪ್ರವಚನ, ಶಿಕ್ಶಕರ ಬೋದನೆ ಇವೆಲ್ಲ ರಗಳೆಗಳಿಂದ ಮುಕ್ತ
ಎಂದು ಬರೆದಿದ್ದೀರಿ. ಇದು ಗೊಡವೆ ಮತ್ತು ರಗಳೆ ಎಂದು ಬಿಂಬಿಸುವುದು ಸರಿಯಲ್ಲ
ಮಕ್ಕಳು ರಜೆಯಲ್ಲಿ ಆಟವಾಡಬೇಕು
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸರ್. ನಾನು ಒಬ್ಬ ಶಿಕ್ಷಕನಾಗಿ ಮಕ್ಕಳ ಮನೋಭಾವವನ್ನು ಅರಿತು ಈ ಪದಗಳನ್ನು ಬಳಸಿರುವೆ. ಎಲ್ಲಾ ಮಕ್ಕಳಿಗೂ ಇದು ಅನ್ವಯಿಸದಿರಬಹುದು. ಆದರೆ ಮಕ್ಕಳು ರಜೆಯನ್ನು ಇಷ್ಟಪಡುವುದೇ ಇವೆಲ್ಲವುಗಳಿಂದ ಸ್ವಲ್ಪ ಕಾಲ ದೂರ ಇರುತ್ತೆವಲ್ಲ ಅನ್ನೊ ಕಾರಣಕ್ಕೆ ಎನ್ನುವುದು ನನ್ನ ಭಾವನೆ. ಆದರೆ ಶಿಕ್ಷಕನ ಸ್ಥಾನದಲ್ಲಿ ನಿಂತಾಗ ಈ ಪದಗಳ ಬಳಕೆ ಸರಿ ಅಲ್ಲ.. ತಮ್ಮ ಸಲಹೆಯನ್ನು ಸ್ವಾಗತಿಸುತ್ತೇನೆ.