ಉತ್ತರ ಅಸೇಟಿಯಾದ ಅನನ್ಯ ಕಲ್ಲಿನ ಸ್ಮಾರಕ

ಕೆ.ವಿ.ಶಶಿದರ.

ಸೇಂಟ್ ಜಾರ‍್ಜ್‍, St. George

ಬಂಡೆಯಿಂದ ಹೊರಬಂದಿರುವ ಸೇಂಟ್ ಜಾರ‍್ಜ್‍ನ (ಯುಆಸ್ಟಿರಡ್ಜಿ) ಅನನ್ಯ ಸ್ಮಾರಕ ಉತ್ತರ ಅಸೇಟಿಯಾದ ವಲಾಡಿಕವ್ಕಾಜ್ ನಲ್ಲಿದೆ. ಈ ಅದ್ಬುತ ಕಲಾಕ್ರುತಿ ಅಸೇಟಿಯನ್ ಮಿಲಿಟರಿ ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಆವ್ರುತವಾಗಿರುವ ಕಣಿವೆಯ ನಡುವೆ ಇದೆ. ಈ ರಸ್ತೆಯ ಒಂದು ಬದಿಯಲ್ಲಿ ಪರ‍್ವತದಿಂದ ಹರಿದು ಬರುವ ಆರ‍್ಡೋನ್ ನದಿಯ ತಣ್ಣೀರಿನ ಬೋರ‍್ಗರೆತವಾದರೆ ಮತ್ತೊಂದೆಡೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಹಚ್ಚ ಹಸಿರಿನ ಸಸ್ಯರಾಶಿ. ನದಿಯ ತಿರುವಿನೊಂದಿಗೆ ಸಮಾನಾಂತರವಾಗಿ ರಸ್ತೆಯೂ ಅನೇಕ ತಿರುವುಗಳನ್ನು ಹೊಂದಿದೆ. ಇಂತಹ ಒಂದು ತಿರುವಿನಲ್ಲಿ ಪರ‍್ವತದ ಮೇಲೆ ಕುದುರೆಯ ಸಮೇತ ರಸ್ತೆಗೆ ಜಿಗಿಯುವಂತೆ ಕಂಡುಬರುವುದೇ ಸೇಂಟ್ ಜಾರ‍್ಜ್‍ನ ದೈತ್ಯ ಪ್ರತಿಮೆ.

ಎತ್ತರದ ಪರ‍್ವತದ ಕಲ್ಲು ಬಂಡೆಯಿಂದ ಹೊರಕ್ಕೆ ಚಿಮ್ಮಿರುವಂತಿರುವ ಈ ಮೇರು ಕ್ರುತಿಯ ಶಿಲ್ಪಿ, ನಿಕೊಲಾಯ್ ಕೊಡೊವ್. ಈ ಬ್ರುಹತ್ ಶಿಲ್ಪವು ತನ್ನ ಬವ್ಯತೆಯಿಂದ ಪ್ರವಾಸಿಗರ ಗಮನವನ್ನು ತನ್ನತ್ತ ಆಕರ‍್ಶಿಸುತ್ತದೆ.

ಬೆಟ್ಟದ ತುದಿಯಿಂದ ಹೊರಚಾಚಿಕೊಂಡಿರುವ ಕಲಾಕ್ರುತಿ

ಕುದುರೆಯ ಮೇಲೆ ಕುಳಿತಿರುವ ಸೇಂಟ್ ಜಾರ‍್ಜ್ ಕಲಾಕ್ರುತಿ, ರಸ್ತೆಯ ಮೇಲೆ ಹೋಗುವ ಪ್ರವಾಸಿಗರ ಮೇಲೆ ತೂಗಾಡುವಂತೆ ಬೆಟ್ಟದ ತುದಿಯಿಂದ ಚಾಚಿಕೊಂಡು ಹೊರಬಂದಿದೆ. ಈ ಕ್ರುತಿ ಎಶ್ಟು ದೈತ್ಯವಾಗಿದೆಯೆಂದರೆ ಕುದುರೆಯ ಗೊರಸೇ 120 ಸೆಂ.ಮೀ. ತಲೆ 6 ಮೀಟರ್.  ಕುದುರೆಯ ಗಾತ್ರದ ಕಿರು ಪರಿಚಯ ಇದಾದರೆ, ಜಾರ‍್ಜ್‍ನ ಕೈ ಅಗಲ ಒಬ್ಬ ಮನುಶ್ಯನನ್ನು ಆರಾಮವಾಗಿ ಹಿಡಿಯುವಶ್ಟಿದೆ ಎಂದರೆ ಆತನ ಪೂರ‍್ಣ ಚಿತ್ರಣದ ಗಾತ್ರ ಊಹಿಸಿಕೊಳ್ಳಲು ಸಾದ್ಯ.

ಸೇಂಟ್ ಜಾರ‍್ಜ್ ನ ಬಗ್ಗೆ

ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಿರುವುದರ ಹಿಂದೆ ಒಂದು ಕತೆಯಿದೆ. ಅದರಂತೆ ಸೇಂಟ್ ಜಾರ‍್ಜ್ (ನೈಕಾಸ್ ಯುಆಸ್ಟಿರಡ್ಜಿ) ತನ್ನ ನೆರವು ಬೇಕೆನ್ನುವವರಿಗೆ ಹಾಗೂ ದುಕ್ಕತಪ್ತರಿಗೆ ಸಹಾಯ ಹಸ್ತ ಚಾಚಲು ಸ್ವರ‍್ಗದಿಂದ ಕೆಳಗಿಳಿಯಲು ಸದಾಕಾಲ ಕಾತುರದಿಂದ ಕಾಯುತ್ತಿರುತ್ತಾನಂತೆ.  ಅದರ ಪ್ರತಿ ರೂಪವೇ ಈ ದೈತ್ಯ ಕಲಾಕ್ರುತಿ. ನಾರ‍್ಟ್ ಮಹಾ ಕಾವ್ಯದಲ್ಲಿ ನೈಕಾಸ್ ಯುಆಸ್ಟಿರಡ್ಜಿಯನ್ನು ಅಸಾದಾರಣ ಯೋದ ಹಾಗೂ ದೇವರೆಂದು ಬಿಂಬಿಸಲಾಗಿದೆ. ಬಿಳಿ ವಸ್ತ್ರ ದರಿಸಿರುವ ಈತ ಮೂರುಕಾಲಿನ ಬಿಳಿ ಕುದುರೆಯ ಮೇಲೆ ಇರುವಂತೆ ಚಿತ್ರಿಸಲಾಗಿದೆ. ಈತ ತನ್ನ ಬಳಿ ಯಾವಾಗಲೂ ಗನ್ ಹೊಂದಿರುತ್ತಾನೆ ಎಂದು ನಂಬಲಾಗಿದೆ.

ಯುಆಸ್ಟಿರಡ್ಜಿ – ಒಳ್ಳೆಯವರಿಗೆ ಒಳ್ಳೆಯವ ಕೆಟ್ಟವರಿಗೆ ಕೆಟ್ಟವ

ಯುಆಸ್ಟಿರಡ್ಜಿ ದೇವರು ಮತ್ತು ಮನುಶ್ಯರ ನಡುವಿನ ಮದ್ಯವರ‍್ತಿ. ಜನರ ಮದ್ಯೆ ವ್ರುದ್ದ ಬಿಕ್ಶುಕನಂತೆ ಕಾಣಿಸಿಕೊಳ್ಳುತ್ತಾನೆ. ಕಳ್ಳರು, ಸುಲಿಗೆಕೋರರು, ಕೊಲೆಗಾರರು, ಪ್ರತಿಬಟನೆಕಾರರು  ಮುಂತಾದ ಸಮಾಜ ವಿರೋದಿಗಳಿಗೆ ಸಿಂಹಸ್ವಪ್ನನಾಗಿ, ಪ್ರಾಮಾಣಿಕರಿಗೆ ಮತ್ತು ಮ್ರುದು ಮನಸ್ಸಿನವರಿಗೆ ಪೋಶಕನಾಗಿ ಕಾಣಿಸುವನು ಅಂತ ಒಂದು ನಂಬಿಕೆ.

ಮಹಿಳೆಯರು ಇವನ ಹೆಸರು ಹೇಳಕೂಡದು!

ಮಹಿಳೆಯರು ಇವನ ಹೆಸರ ಹೇಳುವುದನ್ನು ನಿಶೇದಿಸಲಾಗಿದೆ. ಇದರ ಹಿಂದಿನ ಗುಟ್ಟು ಗುಟ್ಟಾಗಿಯೇ ಇದೆ. ಹಾಗಾಗಿ ಮಹಿಳೆಯರು ಸುತ್ತಿ ಬಳಸಿ ಲಾಗ್ಟಿ ಜುಆರ್ (ಪುರುಶರ ಪೋಶಕ) ಎಂದು ಈತನನ್ನು ಗುರುತಿಸುತ್ತಾರೆ. ದಕ್ಶಿಣ ಅಸೇಟಿಯಾದಲ್ಲಿ ಪ್ರತಿ ವರ‍್ಶ ನವೆಂಬರ್ ನ  ದ್ವಿತೀಯಾರ‍್ದವನ್ನು ಯುಆಸ್ಟಿರಡ್ಜಿಗೆ ಮೀಸಲಾಗಿರಿಸಿದೆ. ಆ ಆವದಿಯಲ್ಲಿ ಹಲವಾರು ಬರ‍್ಜರಿ ಆಚರಣೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

( ಮಾಹಿತಿ ಮತ್ತು ಚಿತ್ರಸೆಲೆ: vsuete.com, meros.org )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Irfan Hasankutty says:

    ಉತ್ತಮ ಮಾಹಿತಿ ಸರ್..ವಿಶ್ವದ ಕೌತುಕದ ವಿಷಯಗಳನ್ನು ತಿಳಿಯಲು ನಿಮ್ಮ ಲೇಖನಗಳನ್ನು ಓದಿದರೆ ಸಾಕು…ಧನ್ಯವಾದಗಳು…

  2. manjunath says:

    super sir

ಅನಿಸಿಕೆ ಬರೆಯಿರಿ: