ಮನೆಯಲ್ಲೇ ಮಾಡಿ ಉಸುರುದೊಳೆ

ಕುಮಾರಸ್ವಾಮಿ ಕಡಾಕೊಳ್ಳ.

ಬಚ್ಚಲು ತೊಳೆಯಲು, ನೆಲತೊಳೆಯಲು ಪಿನಾಯಿಲ್ ಬೇಕು, ಟಾಯ್ಲೆಟ್ ತೊಳೆಯಲು ಹಾರ‍್ಪಿಕ್ ಬೇಕು, ಬಟ್ಟೆ ತೊಳೆಯಲು ಬಟ್ಟೆ ಸೋಪು ಬೇಕು, ಮೈ ತೊಳೆದುಕೊಳ್ಳಲು ಮೈ ತೊಳೆಯುವ ಸೋಪು ಬೇಕು, ತಲೆಗೆ ಶಾಂಪೂ ಬೇಕು. ಇವಿಲ್ಲದ್ದಿದ್ದರೆ ಏನೋ ಕಡಿಮೆಯಾದಂತೆ ಅನಿಸುತ್ತದೆ. ಇಂತಹ ಮನೆ ಸ್ವಚ್ಚಗೊಳಿಸುವ ವಸ್ತುಗಳಲ್ಲಿ ಅಮೋನಿಯಾ, ಪಾಸ್ಪೇಟ್, ಕ್ಲೋರೀನ್ ನಂತಹ ಏಡಿಹುಣ್ಣು(ಕ್ಯಾನ್ಸರ‍್) ಉಂಟುಮಾಡುವಂತಹ ಕೆಟ್ಟ ರಾಸಾಯನಿಕಗಳಿವೆ. ಇವುಗಳ ಬಳಕೆಯಿಂದ ನಮ್ಮ ಆರೋಗ್ಯಕ್ಕೂ ಹಾಗೂ ಸುತ್ತಣಕ್ಕೂ ಆಗುವ ತೊಂದರೆ ತುಂಬಾ ಇದೆ. ನಾವು ಬಳಸಿ ಚೆಲ್ಲುವ ಈ ರಾಸಾಯನಿಕಗಳು ಕೊಳವೆ-ಕಾಲುವೆಯ ಮೂಲಕ ಹರಿದು ಕೆರೆ ಇಲ್ಲವೇ ನದಿ ಸೇರುತ್ತವೆ. ಅದೇ ನೀರನ್ನು ನಂಬಿ ಬದುಕುವ ಪ್ರಾಣಿ-ಹಕ್ಕಿ-ಹುಳ-ಹುಪ್ಪಡಿಗಳ ಬಳಗ, ಇಂತಹ ನೀರನ್ನು ಕುಡಿದರೆ ಅವುಗಳಿಗೂ ಕಂಡು ಕೇಳರಿಯದ ಬೇನೆ ಬೆನ್ನತ್ತಿ ಬದುಕು ದುಸ್ತರವಾಗುತ್ತದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಬೆಳಂದೂರು ಕೆರೆ ನೊರೆಯನ್ನ ಉಗುಳುತ್ತಿದ್ದುದು ಸುದ್ದಿಹಾಳೆಗಳಲ್ಲಿ ವರದಿಯಾಗಿತ್ತು. ನಾವು ನೀರಿಗೆ ಸೇರಿಸುವ ರಾಸಾಯನಿಕಗಳು ಎಂತಹ ಅಪಾಯಕಾರಿ ಹಾಗೂ ಯಾವ ಮಟ್ಟದಲ್ಲಿ ನೀರಿಗೆ ಇಂತಹ ಕೆಮಿಕಲ್ಸ್ ಗಳನ್ನು ಸೇರಿಸುತ್ತಿದ್ದೇವೆ ಎಂದು ಇದರಿಂದ ತಿಳಿಯುತ್ತದೆ.

ಇದು ಒಂದು ಕಡೆಯಾದರೆ ರೈತರು(ಒಕ್ಕಲಿಗರು) ಇಂತಹ ನೀರನ್ನೇ ನೆಚ್ಚಿಕೊಂಡು ಸೊಪ್ಪು, ಹಣ್ಣು, ಕಾಯಿಪಲ್ಲೆಗಳನ್ನ ಬೆಳೆಯುತ್ತಾರೆ. ಅವರು ಅಲ್ಲಿ ಬೆಳೆದು ಪಟ್ಟಣಕ್ಕೆ ತಂದು ಮಾರಿದ್ದನ್ನು ನಾವು ಮನೆಗೆ ತಂದು ತಿನ್ನುತ್ತೇವೆ. ಇಂತಹ ನಂಜು ತುಂಬಿದ ನೀರಿನಿಂದ ಬೆಳೆದ ತರಕಾರಿ, ಕಾಳು-ಕಡಿಗಳನ್ನ ತಿಂದ ನಮಗೆಲ್ಲ ಎಂದೂ ಕೇಳರಿಯದ ಬೇನೆಗಳು ಬಂದರೆ ಬೆರಗೇನಿಲ್ಲ. ಇಂತಹ ವಸ್ತುಗಳಲ್ಲಿರುವ ರಾಸಾಯನಿಕಗಳು ಹೇಗೆಲ್ಲಾ ನಮ್ಮ ಮಯ್ಯೊಳಗೆ ಸೇರುತ್ತವೆ ನೋಡಿ – ಶಾಂಪೂ ತಲೆಗೆ ಹಾಕಿ, ಮೈಗೆ ಸೋಪು ಹಾಕಿಕೊಂಡು ಉಜ್ಜಿಕೊಳ್ಳುವ ಹೊತ್ತಲ್ಲಿ ಅವುಗಳಲ್ಲಿರುವ ರಾಸಾಯನಿಕಗಳು ತೊಗಲಿನಲ್ಲಿರುವ ತೂತುಗಳಿಂದ ಒಳನುಸುಳಿ ನೆತ್ತರನ್ನು ಸೇರುತ್ತವೆ. ಹೆಚ್ಚು ಹೊತ್ತು ಉಜ್ಜಿದಶ್ಟೂ ಹೆಚ್ಚಿನ ಮಟ್ಟದಲ್ಲಿ ರಾಸಾಯನಿಕಗಳು ನೆತ್ತರನ್ನು ಸೇರುತ್ತವೆ. ನೀರಿಗೆ ಪಿನಾಯಿಲ್ ಹಾಕಿಕೊಂಡು ನೆಲ ತೊಳೆಯುವಾಗ ಗಾಳಿಯ ಮೂಲಕ ನಮ್ಮ ಗಾಳಿಚೀಲ ಸೇರುತ್ತವೆ.

ಇಂತಹ ಮೈಯೊಳಿತಿಗೆ ಮಾರಕವಾಗಿರುವ ರಾಸಾಯನಿಕ ತುಂಬಿದ ವಸ್ತುಗಳ ಬಳಕೆಯಿಂದ ನಾವು ದೂರ ಉಳಿಯಬಹುದೇ? ಇದಕ್ಕೆ ಬದಲಾಗಿ ನಮ್ಮ ಪರಿಸರದಲ್ಲಿ, ಸುತ್ತಣದಲ್ಲಿ ದೊರೆಯುವ ವಸ್ತುಗಳನ್ನೇ ಬಳಸಿ ನಮ್ಮ ಮನೆ, ಬಚ್ಚಲು, ಚೊಕ್ಕವಾಗಿಟ್ಟುಕೊಳ್ಳಬಹುದೇ? ಸಾದ್ಯವಿದೆ ಎನ್ನುತ್ತಾರೆ ಪರಿಸರ ಒಲವಿಗರು. ನಮಗೂ ಹಾನಿ ಮಾಡದ, ಸುತ್ತಣಕ್ಕೂ ಕೆಡುಕು ಮಾಡದ, ಮನೆಯನ್ನು ಚೊಕ್ಕ ಮಾಡುವ ವಸ್ತುವನ್ನು ಕಸವೆಂದು ಚೆಲ್ಲುವ ಹಣ್ಣಿನ ಸಿಪ್ಪೆ, ತರಕಾರಿ ಸಿಪ್ಪೆಗಳಿಂದ, ಮನೆಯಲ್ಲಿಯೇ  ಮಾಡಬಹುದು. ಅದೇ ಉಸುರುದೊಳೆ (Bioenzyme).

ಉಸುರುದೊಳೆ ಮಾಡುವುದು ಹೇಗೆ? ಏನೆಲ್ಲ ಬೇಕು?

ಉಸುರುದೊಳೆ ಮಾಡುವುದು ಬಲು ಸುಳುವಾಗಿದೆ.

  • ಒಮ್ಮೆ ಬಳಸಿ ಬಿಸಾಡುವ ಪೆಪ್ಸೀ, ಕೋಲ, ನೀರಿನ ಬಾಟಲ್ (2 / 5 / 10 ಲೀಟರ್ – ಯಾವುದಾದರೂ ಆಗಬಹುದು).
  • ಹಣ್ಣಿನ ಸಿಪ್ಪೆ (ನಿಂಬೆ ತರಹದ್ದು ಹೆಚ್ಚು ಒಳ್ಳೆಯದು) ಇಲ್ಲವೇ ತರಕಾರಿ ಸಿಪ್ಪೆ – ನಿಂಬೆ, ಅನಾನಸ್, ಮೂಸಂಬಿ, ಕಿತ್ತಳೆ, ಚಕ್ಕೋತದಂತ ಹಣ್ಣಿನ ಸಿಪ್ಪೆಗಳು ತುಂಬಾ ಪರಿಣಾಮಕಾರಿ, ಕಾಯಿಪಲ್ಲೆ ಸಿಪ್ಪೆ (ಆಲೂಗಡ್ಡೆ, ಉಳ್ಳಾಗಡ್ಡಿ[ಈರುಳ್ಳಿ], ಬೆಳ್ಳುಳ್ಳಿ ಹೊರತುಪಡಿಸಿ).
  • ಬೆಲ್ಲ – ಆದಶ್ಟು ಕಡಿಮೆ ರಾಸಾಯನಿಕವಿರುವ ಬೆಲ್ಲ ಬಳಸಬೇಕು.
  • ನೀರು.

ಉಸುರುದೊಳೆ, BioEnzyme

ಇವೆಲ್ಲವನ್ನೂ (ಹಣ್ಣಿನ ಸಿಪ್ಪೆ, ಬೆಲ್ಲ ಮತ್ತು ನೀರನ್ನು) ಪಟ್ಟಿಯಲ್ಲಿ ತೋರಿಸಿದಂತೆ 1:3:10 ಹೊಂದಿಕೆಯಲ್ಲಿ ಒಂದು ಗಾಳಿಹೋಗದ ಪ್ಲಾಸ್ಟಿಕ್ ಬಾಟಲಿನಲ್ಲಿ ಹಾಕಿ, ಕುಲುಕಿ ಮುಚ್ಚಳ ಮುಚ್ಚಬೇಕು. ದಿನಕ್ಕೆರಡು ಬಾರಿ, ಅಂದರೆ ಮುಂಜಾನೆ ಹಾಗೂ ಸಂಜೆಗೊಮ್ಮೆ ಮುಚ್ಚಳ ತೆಗೆದು ಗಾಳಿಯನ್ನ ಹೊರಹಾಕುತ್ತಿರಬೇಕು. ಹೀಗೆ ಮಾಡದಿದ್ದರೆ ಬಾಟಲ್ ನಲ್ಲಿ ಗಾಳಿ ಒತ್ತಡ ಹೆಚ್ಚಾಗಿ ಬಾಟಲ್ ಸಿಡಿಯಬಹುದು. ಗಾಳಿಯನ್ನ ಹೀಗೆ ವಾರದವರಗೆ ತಪ್ಪದೆ ಹೊರಹಾಕುತ್ತಿರಬೇಕು. ಆಮೇಲೆ, ಆಗೊಮ್ಮೆ-ಈಗೊಮ್ಮೆ ಮುಚ್ಚಳ ತೆಗೆದು ಗಾಳಿಹೊರಹಾಕಿದರೆ ಸಾಕು. ಹೀಗೆ ಮೇಲೆ ಬೆರೆಸಿಟ್ಟ ದಿನಿಸುಗಳನ್ನ 3 ತಿಂಗಳಹೊತ್ತು ಮುಚ್ಚಿ ಇಟ್ಟರೆ ಉಸುರುದೊಳೆ ತಯಾರಾಗುತ್ತದೆ. ಮೊದಲನೇ ದಿನವೇ ಮಿಶ್ರಣಕ್ಕೆ ಒಂದು ಚಿಟಿಕೆ ಈಶ್ಟು ಹಾಕಿದರೆ ಮೂರು ತಿಂಗಳಿಗಿಂತ ಮೊದಲೇ ಅಂದರೆ 40-45 ದಿನದಲ್ಲಿ ಸಿಪ್ಪೆ-ಬೆಲ್ಲ-ನೀರು ಉಸುರುದೊಳೆಯಾಗಿ ಮಾರ‍್ಪಾಡಾಗುತ್ತದೆ

ಗಮನಿಸಬೇಕಾದ್ದುದು: ನಾವು ಬಳಸುವ ಬಾಟಲ್ ಪ್ಲಾಸ್ಟಿಕ್ ನದ್ದಾಗಿರಬೇಕು, ಅದು ಗಾಳಿ ಹಿಡಿತದ್ದಾಗಿರಬೇಕು (Air Tight), ಲೋಹದ್ದು ಬಳಸಿದರೆ ತುಕ್ಕು ಹಿಡಿಯುತ್ತದೆ, ಗಾಜಿನದು ಬಳಸಿದರೆ ಸಿಡಿಯುತ್ತದೆ ಯಾಕೆಂದರೆ ಉಸುರುದೊಳೆ ತಯಾರಾಗುವಾಗ ಬ್ಯಾಕ್ಟೀರಿಯಾಗಳು ದೊಡ್ಡ ಹಣ್ಣಿನ ಕಣಗಳನ್ನ ತುಂಡರಿಸಿ ಸಣ್ಣ ಕಣಗಳನ್ನಾಗಿ ಮಾರ‍್ಪಡಿಸುತ್ತವೆ. ಆಗ ತುಂಬಾ ಗಾಳಿ ಬಿಡುಗಡೆಯಾಗುತ್ತದೆ. ಗಾಜಿನ ಬಾಟಲ್ ಬಳಸಿದರೆ ಹೆಚ್ಚಾದ ಗಾಳಿಯ ಒತ್ತಡದಿಂದ ಅದು ಸಿಡಿಯುವ ಸಾದ್ಯತೆ ಹೆಚ್ಚು. ಪ್ಲಾಸ್ಟಿಕ್ಕಿನಿದ್ದಾದರೆ ಒತ್ತಡ ಹೆಚ್ಚಾದಾಗ ಹಿಗ್ಗುತ್ತದೆ.

ಉಸುರುದೊಳೆ, BioEnzyme

  • ಹೀಗೆ ತಯಾರಾದ ಉಸುರುದೊಳೆಯನ್ನ ಸೋಸಿ ತೆಗೆಯಬೇಕು. ತುಂಡಾಗದೇ ಉಳಿದ ಹಣ್ಣಿನ ಸಿಪ್ಪೆಯನ್ನ ಬೇರೆ ಮಾಡಬೇಕು. ತುಂಡಾಗದ ಸಿಪ್ಪೆಯನ್ನ ಸ್ವಲ್ಪ ಟಾಯ್ಲೆಟ್ ಗೆ ಹಾಕಿ ತೊಳೆದರೆ ಅದು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಉಳಿದ ಹಣ್ಣಿನ ಸಿಪ್ಪೆಯನ್ನ ಇನ್ನೊಂದು ಬಾರಿ ಬಯೋ ಎಂಜೈಮ್ ಮಾಡುವ ಬಾಟಲಿಗೆ ಸೇರಿಸಿದರೆ ಬೇಗನೆ ಅಂದರೆ ನಲವತ್ತು ನಲವತ್ತೈದು ದಿನದಲ್ಲಿ ಉಸುರುದೊಳೆಯಾಗಿ ಬದಲಾಗುತ್ತದೆ. ಬೆರೆಸಿದ ಹಳೆಯ ಉಸುರುದೊಳೆಯಲ್ಲಿ ಇರುವ ಬ್ಯಾಕ್ಟೀರಿಯಾಗಳು ಈಶ್ಟಿನಂತೆ ಕೆಲಸ ಮಾಡುತ್ತವೆ.
  • ಹೀಗೆ ಹುಳಿಹಣ್ಣಿನಿಂದ ಮಾಡಿದ ಉಸುರುದೊಳೆಯಿಂದ ನೆಲ (ಟೈಲ್ಸ್, ಗ್ರಾನೈಟ್, ಗಾಜು), ಕಕ್ಕಸು ಕುಳಿ (Pit), ಕೈತೊಳೆಯುವ ಕುಳಿ (Wash Basin) ತೊಳೆದರೆ ತುಂಬಾ ಚೊಕ್ಕವಾಗುತ್ತವೆ.
  • ಒಂದಶ್ಟು ಅಂಟವಾಳ ಕಾಯಿ ರಾತ್ರಿ ಬಿಸಿನೀರಿಗೆ ಹಾಕಿ ನೆನೆಸಿ, ಮರುದಿನ ಅದರ ರಸವನ್ನ ಕಿವುಚಿ ತೆಗೆದು ಉಸುರುದೊಳೆಯಲ್ಲಿ ಬೆರೆಸಿ ಬಟ್ಟೆ ತೊಳೆಯಲು ಬಳಸಬಹುದು. ಬಟ್ಟೆ ಬಹಳ ಸ್ವಚ್ಚವಾಗುತ್ತವೆ.
  • ಸೀಗೆಕಾಯಿ, ಅಂಟವಾಳ ಕಾಯಿಯ ಪುಡಿಯಲ್ಲಿ ಉಸುರುದೊಳೆಯನ್ನ ಕೊಂಚ ಬೆರೆಸಿ ತಲೆ ಕೂದಲು ತೊಳೆಯಲು ಶಾಂಪೂವಿನಂತೆ ಬಳಸಬಹುದು.
  • ಕಾಯಿಪಲ್ಲೆ ಸಿಪ್ಪೆಗಳಿಂದ ತಯಾರಿಸಿದ ಉಸುರುದೊಳೆಯನ್ನ ಗಿಡಗಳಿಗೆ ಹಾಕಬಹುದು. ಇದೊಂದು ಜೈವಿಕ ಗೊಬ್ಬರದಂತೆ ಕೆಲಸ ಮಾಡುತ್ತದೆ.
  • ನೀರಿಗೆ ಒಂದಶ್ಟು ಉಸುರುದೊಳೆ ಹಾಕಿಕೊಂಡು ಗಿಡಗಳಿಗೆ ಸಿಂಪಡಿಸಿದರೆ ಗಿಡಗಳು ಚನ್ನಾಗಿ ಬೆಳೆಯುತ್ತವೆ.

ಎಲ್ಲರೂ ಉಸುರುದೊಳೆ ಮನೆಯಲ್ಲೇ ಮಾಡಲು ಮುಂದಾದರೆ ತಿಂಗಳಿಗೆ ನೂರಿನ್ನೂರು ರೂಪಾಯಿ ಹಣ ಉಳಿಯುತ್ತದೆ. ಮನೆಯಲ್ಲಿ ಉಂಟಾಗುವ ಹಸಿ ಕಸ ಬಳಸಿ, ಹೊರಗೆ ಗುಡ್ಡದಂತೆ ಬೆಳೆಯುತ್ತಿರುವ ಕಸದ ರಾಶಿಯನ್ನು ಕಡಿಮೆ ಮಾಡಬಹುದು. ಮನೆಯಲ್ಲಿ ಬಳಸುವ ನಂಜಿನ ರಾಸಾಯನಿಕಗಳ ಬಳಕೆ ತಗ್ಗಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಸುತ್ತಣಕ್ಕೆ ಸೇರುವ ನಂಜು ಕಡಿಮೆ ಮಾಡಬಹುದು.

ಬನ್ನಿ, ಎಲ್ಲರೂ ಉಸುರುದೊಳೆ ಮನೆಯಲ್ಲಿ ಮಾಡೋಣ ಸುತ್ತಣವನ್ನು ಚೊಕ್ಕವಾಗಿಟ್ಟುಕೊಳ್ಳೋಣ, ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಮಾರಿಸನ್ ಮನೋಹರ್ says:

    ಬರಹ ತುಂಬ ಚೆನ್ನಾಗಿದೆ, ಇಂತಹ ಹೊಸ ವಿಶಯದ ಬರಹ ತಂದಿದ್ದು ಚೆನ್ನಾಗಿದೆ.ಇಂತಹ ಬರಹ ಕನ್ನಡದಲ್ಲಿ ಇದೇ ಮೊದಲು ಅನ್ನಿಸಿದೆ

ಅನಿಸಿಕೆ ಬರೆಯಿರಿ: