ಗೋವಾ ಪೆನಿ

ಗೋಪಾಲಕ್ರಿಶ್ಣ ಬಿ. ಎಂ.

ಪೆನಿ, ಗೋವಾ ಪೆನಿ

ಎರಡು ವರುಶಗಳ ಹಿಂದೆ ಗೋವಾ ಸುತ್ತಾಟಕ್ಕೆ ಹೋಗಿ ಹಿಂತಿರುಗಿ ಬೆಂಗಳೂರಿಗೆ ಬಂದಾಗ, ನನ್ನ ಕೊಂಕಣಿ ಗೆಳೆಯನೊಬ್ಬ,

“ಗೋವಾ ‘ಪೆನಿ’ ಸವಿದ್ದಿದೀಯಾ?” ಎಂದು ಕೇಳಿದ.

“ಅದೇನದು? ಇಲ್ಲಿ ಸಿಗೊಲ್ವ?” ಅಂತ ಕೇಳ್ದೆ.
“ಇಲ್ಲ, ಅದು ಅಲ್ಲಿ ಮಾತ್ರ ಸಿಗುವ ಕುಡಿಗೆ (drink), ಮತ್ತೊಮ್ಮೆ ಹೋದಾಗ ಮರಿಯದೇ ಸವಿದು ನೋಡು” ಎಂದ ಹೇಳಿದ್ದ.

ಈ ಬಾರಿ ಗೋವಾ ಸುತ್ತಾಟಕ್ಕೆ ಹೋದಾಗ ಆ ವಿಶಯ ನನ್ನ ಗಮನದಲ್ಲಿತ್ತು. ನಾವು ಇಳಿದುಕೊಂಡಿದ್ದ ಜಾಗ ತೆಂಕಣ ಗೋವೆಯಲ್ಲಿ ಇತ್ತು. ಅಲ್ಲಿ ಸಿಗುವ “ಪೆನಿ” ಬಹಳ ಹೆಸರುವಾಸಿಯಾಗಿದೆ ಅಂತ ತಿಳಿಯಿತು. ಈ ಬಗ್ಗೆ ಅಲ್ಲಿನ ಮಂದಿಯನ್ನು ಕೇಳಿದಾಗ, ಗೋವಾ ನಡುಬಾಗದಲ್ಲಿ “ಪೋಂಡ – ಬೆಳಗಾವಿ” ಹೆದ್ದಾರಿಯಲ್ಲಿ ಒಂದು ತೋಟವಿದ್ದು (Sahakari spice farm) ಅದು ಸಾಂಬಾರು ಮಸಾಲೆ ಬೆಳೆಯುವ ತೋಟವಾಗಿದ್ದು ಅಲ್ಲಿ ಈ “ಪೆನಿ ಕುಡಿಗೆ”ಯ ತಯಾರಿಕೆ ನೋಡಬಹುದೆಂದು ತಿಳಿಯಿತು.

ಅಲ್ಲಿ ಹೋದಾಗ ಈ “ಪೆನಿ” ಬಗ್ಗೆ ಬಹಳ ಇಂಪೆಸವ ಸಂಗತಿಗಳ ಅರಿವಾಯ್ತು.

ಮೊದಲನೆಯದಾಗಿ “ಪೆನಿ” (Feni/Fenno/Fenny/Fenim) ಎಂಬುದು ಗೋವಾ ನೆಲದ ಸಾರಾಯಿ! ಇದಕ್ಕೆ 400 ವರ‍್ಶಗಳ ಇತಿಹಾಸ ಇದೆ. “ಪೆನಿ” ಎಂಬ ಪದ ಸಂಸ್ಕ್ರುತದ “ಪೆನ” – ಅಂದರೆ ಗುಳ್ಳೆಗಳು – (ಅದನ್ನು ಕಾಯುಸುವಾಗ ಬರುವ ಗುಳ್ಳೆಗಳು ಕಾರಣ ಇರಬಹುದು) ಎಂಬ ಪದದಿಂದ ಬಂದಿದೆ ಎಂಬುದು ಒಂದು ವಾದ.
ಪೆನಿ ಕುಡಿಕೆಯ ಎರಡು ಬಗೆಗಳಿವೆ

1- ಗೋಡಂಬಿ ಪೆನಿ / ಕಾಜು ಪೆನಿ
2- ಎಳನೀರ ಪೆನಿ / ತೆಂಗಿನ ಪೆನಿ (ನಮ್ಮ ಕಡೆ ನೀರಾ ಅಂತಾರಲ್ಲ ಅದರ ಹತ್ತಿರದ ಸಂಬಂದಿ)

ಇದರಲ್ಲಿ ಎಳನೀರ ಪೆನಿ ತಯಾರಿಕೆ ಗೋವೆ ಮತ್ತಿತರ ಕಡೆ ಆಗಲೇ ಇತ್ತು. ಆದರೆ ಗೋಡಂಬಿ ಗಿಡವನ್ನು ಪೋರ‍್ಚುಗೀಸರು ಹೊತ್ತು ಬಾರತಕ್ಕೆ ತಂದಿದ್ದರಿಂದ, ಕಾಜು ಪೆನಿ ಅವರಿಂದಲೇ ಆಯ್ತು ಎಂಬುದು ಒಂದು ವಾದ.

ಇನ್ನೂ ಈ ಪೆನಿ ಕುಡಿಗೆ ಹೇಗೆ ತಯಾರು ಮಾಡುತ್ತಾರೆ ನೋಡೋಣ.

ಗೇರು

ಗೋಡಂಬಿ ಪೆನಿಯನ್ನ, ನೆಲದಮೇಲೆ ಅದಾಗಿಯೆ ಬೀಳುವ ಗೋಡಂಬಿ ಹಣ್ಣುಗಳನ್ನು ಆಯ್ದು ತಂದು ಚೆನ್ನಾಗಿ ಹಿಚುಕಿ/ತುಳಿದು ರಸ ತೆಗೆದು ದೊಡ್ಡ ಮಡಿಕೆಗಳಲ್ಲಿ ಮೂರು ದಿನ ಹುದುಗೆಬ್ಬಿಸಿ (Fermentation) ನಂತರ ಬೇಯಿಸಿ, ಮೂರು ಬಾರಿ ಹರಿಗೆಯಿಳಿಸಿ (distill) ತಯಾರಿಸುತ್ತಾರೆ. ಇನ್ನು, ಎಳನೀರ ಪೆನಿಯನ್ನು ತೆಂಗಿನ ಹೂವುಗಳನ್ನು ಎರಡು ಬಾರಿ ಹರಿಗೆಯಿಳಿಸಿ ತಯಾರು ಮಾಡುತ್ತಾರೆ.

ಇದರಲ್ಲಿ ಇನ್ನೊಂದು ಹೆಚ್ಚುಗಾರಿಕೆ ಅಂದರೆ, ತೆಂಕಣ ಗೋವೆಯಲ್ಲಿ ತಯಾರಾಗುವ ಪೆನಿಯಲ್ಲಿ ಹೆಂಡದ ಅಳತೆ (Alcohol content) ಜಾಸ್ತಿ (45%) ಬಡಗಣದಲ್ಲಿ ತಯಾರಾಗುವ ಪೆನಿಯಲ್ಲಿ ಕಡಿಮೆ (42.8%) ಇರುತ್ತದೆ. ಗೋಡಂಬಿಯ ಇಳುವರಿ ಬರಿ ಪೆಬ್ರವರಿ – ಮೇ ತಿಂಗಳಲ್ಲಿ ಮಾತ್ರ ಇದ್ದು, ತಯಾರಿಕೆ ಆ ತಿಂಗಳಲ್ಲಿ ಮಾತ್ರ. ತೆಂಗಿನ ಪೆನಿ ಈಗ ಅಶ್ಟಾಗಿ ಇಲ್ಲ, ಕಾರಣ ಅದಕ್ಕೆ ತಗಲುವ ವೆಚ್ಚ ಹೆಚ್ಚು.

ಈ ಕುಡಿಗೆಯ ರುಚಿ ಬಗ್ಗೆ ಹೇಳಬೇಕೆಂದರೆ ಇದು ಬಹಳ ವಗರು ವಗರಾಗಿ ಇದ್ದು, ಇದರ ಗಾಟು ಮೂಗಿಗೆ ರಾಚುತ್ತದೆ. ಆದ್ದರಿಂದ ಇದನ್ನು ಸೇವಿಸುವ ಬಗೆಯಲ್ಲಿ ಒಂದು ಸ್ವಾರಸ್ಯ ಇದೆ. ಇದನ್ನು ಅದು ಇದ್ದ ಹಾಗೆಯೇ ಮಂಜುಗಡ್ಡೆಯೊಂದಿಗೆ ಒಂದೇ ಗುಟುಕಿಗೆ ಕುಡಿಯಬಹುದು, ಅತವಾ ಅದಕ್ಕೆ ಸ್ವಲ್ಪ ಲಿಂಬೆರಸ, ಸಕ್ಕರೆ/ ಉಪ್ಪು ಬೆರಸಿ ಕುಡಿಯಬಹುದು, ಅತವಾ ಬೇರೆ ಕುಡಿಗೆಯಂದಿಗೆ ಸೇರಿಸಿ ಕುಡಿಯಬಹುದು. ಎಳನೀರಿನ ಪೆನಿ ಅತವಾ ನೀರಾ ಪೆನಿಯನ್ನು ತೆಂಗಿನ ಕಾಯಿ ಚಿಪ್ಪಿನಲ್ಲಿ ಸೇವಿಸಿದರೆ ರುಚಿ ಜಾಸ್ತಿ!

ಇನ್ನು ಇದರ ಬಳಕೆ ಮದ್ದಿನ ರೂಪದಲ್ಲು ಮಾಡುತ್ತಿದ್ದರು ಎಂಬುದು ಕೆಳಗಿನ ಚಿತ್ರದ ಮೂಲಕ ಕಂಡುಬರುವ ಅರಿವು. ಜ್ವರ, ತಂಡಿ, ಕೆಮ್ಮು ಮತ್ತು ಕಡಿಮೆ ನೆತ್ತರೊತ್ತಡಕ್ಕೆ ಇದು ಒಳ್ಳೆಯ ಮದ್ದಂತೆ!

ಪೆನಿ

ಇನ್ನೂ ಇದರ ಇನ್ನೊಂದು ಹೆಚ್ಚುಗಾರಿಕೆ ಎಂದರೆ ಈ ಕುಡಿಗೆಯನ್ನು ನೀರು ಅತವಾ ಯಾವುದೇ ಬೇರೆ ಕುಡಿಗೆಯೊಂದಿಗೆ ಬೆರಸದೇ ಹಾಗೇ ಕುಡಿದರೂ ನಿಮಗೆ ಕುಡಿತಾಗುಹು (Hangover) ಆಗದಿರುವುದು ದಿಟ! ಇನ್ನೂ ಈ ಗೋಡಂಬಿ ಪೆನಿ ಕುಡಿಗೆಗೆ 2009ರಲ್ಲಿ ಜಿಯೋಗ್ರಾಪಿಕ್ ಇಂಡಿಕೇಶನ್ ( Geographic Indication – ಅಂದರೆ ಒಂದು ಪ್ರದೇಶದ ಜೊತೆ ಗುರುತಿಸಲ್ಪಡುವುದು) ಹೆಗ್ಗಳಿಕೆ ದೊರೆತಿದೆ. 2016 ನಲ್ಲಿ ಗೋವಾ ಆಳ್ವಿಕೆ ಪೆನಿಯನ್ನು “ಬಳುವಳಿಕೆ ಕುಡಿಗೆ” (Heritage Brew) ಎಂದು ಸಾರಿದೆ.

ಕಡೆಯದಾಗಿ ಈ “ಕಾಜು ಪೆನಿ” ಕುಡಿಗೆ ಬರಿ ಗೋವೆಯಲ್ಲಿ ಮಾತ್ರ ದೊರೆಯುವುದು… ಆದ್ದರಿಂದ ಗೋವಕ್ಕೆ ಹೋಗಲು ಮತ್ತೊಂದು ಕಾರಣ ಸಿಕ್ತು ಬನ್ನಿ ಬೇಗ ಹೋಗೋಣ.

(ಚಿತ್ರ ಸೆಲೆ: newsnation wikimedia)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ನಿಮ್ಮ ಗೆಳೆಯರು ನಿಮಗಾಗಿ ಪೆನಿ ತರದಿದ್ದದ್ದು ಸ್ವಲ್ಪ ವಿಶಾದ lol !

ಅನಿಸಿಕೆ ಬರೆಯಿರಿ: