‘ದಂಡಂ ದಶಗುಣಂ’ – ಇದರ ನಿಜವಾದ ಅರ್‍ತವೇನು?

– ಕೆ.ವಿ.ಶಶಿದರ.

ದಂಡ, stick

‘ದಂಡಂ ದಶಗುಣಂ’ ಈ ಪದಪುಂಜವನ್ನು ಕೇಳದವರಿಲ್ಲ. ಸಮಯಕ್ಕನುಗುಣವಾಗಿ ಇದನ್ನು ಉಪಯೋಗಿಸಿ, ಕ್ರುತಾರ‍್ತರಾದವರು ಅನೇಕರಿದ್ದಾರೆ. ಹಿಂದಿನ ಕಾಲದಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ‍್ತಿಗಳು ಸರಿಯಾಗಿ ಪಾಟಪ್ರವಚನ ಕೇಳದಿದ್ದಲ್ಲಿ, ಹೋಂ ವರ‍್ಕ್ ಮಾಡದಿದ್ದಲ್ಲಿ ಅತವಾ ನಡೆದ ಪರೀಕ್ಶೆಗಳಲ್ಲಿ ತಪ್ಪು ತಪ್ಪು ಉತ್ತರ ಬರೆದು ಹೆಚ್ಚಿನ ಅಂಕ ಪಡೆಯದಿದ್ದಲ್ಲಿ ಶಿಕ್ಶಕರು ಬೆತ್ತ ಹಿಡಿದು ದಂಡಿಸುತ್ತಿದ್ದುದು ಸಾಮಾನ್ಯ. ಬಾಯಿ ಮಾತಲ್ಲಿ ಹೇಳಿದರೆ ಕೇಳದಿದ್ದಲ್ಲಿ ದಂಡ ಪ್ರಯೋಗವೇ ಉತ್ತಮ ಹಾಗೂ ಕೊನೆಯ ಅಸ್ತ್ರ ಎನ್ನುವುದು ಎಲ್ಲರೂ ತಿಳಿದಿದ್ದ ವಿಚಾರ.

ಈ ಪದಪುಂಜವನ್ನು ಇಂದಿನ ದಿನಗಳಲ್ಲಿ ಅರ‍್ತೈಸುವ ರೀತಿಯೇ ಬೇರೆ. ಬಾಯಿ ಮಾತಲ್ಲಿ ಇಲ್ಲವೆ ಒಳ್ಳೆಯ ಮಾತಲ್ಲಿ ಹತ್ತು ಬಾರಿ ಹೇಳುವುದೂ ಒಂದೆ, ದಂಡ(ಕೋಲಿ)ದಿಂದ ಒಂದು ಬಾರಿ ದಂಡಿಸುವುದೂ ಒಂದೇ ಎಂಬ ಬಾವ ಎಲ್ಲರಲ್ಲೂ ಮೂಡಿದೆ. ಇದು ನಿಜವೇ? ಹಾಗಾದರೆ ಇದರಲ್ಲಿ ಅಡಗಿರುವ ಸತ್ಯವೇನು? ದಂಡ ಎನ್ನುವುದು ದಂಡಿಸುವುದು ಎನ್ನುವುದರ ಸಂಕ್ಶಿಪ್ತ ರೂಪವೆ?
ಕೆಲವು ಸಂಸ್ಕ್ರುತ ಶ್ಲೋಕಗಳನ್ನು ಅದರ ಪೂರ‍್ಣ ರೂಪದ ಅರ‍್ತವನ್ನು ಗ್ರಹಿಸಿದೆ ಉಪಯೋಗಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಅದೇ ರೀತಿಯಲ್ಲಿ ಈ ಪದಪುಂಜ ಸಹ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪದಪುಂಜದ ಹಿಂದಿರುವ ಸಂಸ್ಕ್ರುತದ ಪೂರ‍್ಣ ಶ್ಲೋಕವನ್ನು ಒಮ್ಮೆ ಅವಲೋಕಿಸೋಣ.

ವಿಶ್ವಾಮಿತ್ರೇಚ ವಾರ್ಧಕ್ಯೇ ರಾತ್ರೌ ಅಪ್ಸು ಕರ್ದಮೇ |
ಅನ್ಧೇ ಸರ್ಪೇಚ ಕ್ರೀಡೇಚ  ದಣ್ಡಂ ದಶಗುಣಂ ಭವೇತ್ !

ಇಲ್ಲಿನ ಪದಗಳನ್ನು ಬಿಡಿಸಿ ಅರ‍್ತೈಸಿದರೆ ಸಿಗುವ ಉತ್ತರವೇ ಬೇರೆ. ಬಹಳಶ್ಟು ಸಂಸ್ಕ್ರುತ ಶ್ಲೋಕಗಳಲ್ಲಿ ಪದಗಳ ನೇರ ಅರ‍್ತಕ್ಕಿಂತ, ಗೂಡಾರ‍್ತ ಅತಿ ಹೆಚ್ಚು ವಿಸ್ತಾರವಾಗಿರುತ್ತೆ. ಈ ಶ್ಲೋಕದಲ್ಲೂ ಅಶ್ಟೆ. ದಂಡ ಎಂಬ ಪದದ ಅರ‍್ತ ಒಮ್ಮೆ ಅವಲೋಕಿಸಿ ನೋಡುವ. ದಂಡ ಅಂದರೆ ಜುಲ್ಮಾನೆ ಎಂಬ ಅರ‍್ತ ಇದೆ. ಇನ್ನೊಂದು ಅರ‍್ತ ಕೋಲು. ಮತ್ತೊಂದು ಅರ‍್ತದಲ್ಲಿ ತೋಳು ಅಂತಾಗುತ್ತದೆ.

ಮೇಲಿನ ಶ್ಲೋಕದ ಕೊನೆಯಲ್ಲಿ ದಂಡಂ ದಶಗುಣಂ ಅಂತಿದೆ. ದಂಡಂ ದಶಗುಣಂ ಅಂದಲ್ಲಿ ನಾವು ತಿಳಿದಂತೆ ಬಾಯಿ ಮಾತಿಗಿಂತ ದಂಡಿಸಿದರೆ ಹತ್ತು ಪಟ್ಟು ತೀಕ್ಶ್ಣಅಂತಲ್ಲ. ಬದಲಿಗೆ ದಂಡದ/ಕೋಲಿನ ಹತ್ತು ಉಪಯೋಗಗಳು ಎಂದು.

ಈ ಶ್ಲೋಕದ ಪ್ರಾರಂಬವನ್ನು ಗಮನಿಸಿದರೆ, ಇದಕ್ಕೂ ವಿಶ್ವಾಮಿತ್ರ ರುಶಿಗೂ ಏನಾದರೂ ಸಂಬಂದವಿದಯೇ ಅನಿಸುವುದು ಸಹಜ. ಕಂಡಿತ ಇಲ್ಲ. ವಿಶ್ವಾಮಿತ್ರೇಚ ಎಂದ ಪದದಲ್ಲಿ ಮೂರು ಪದಗಳು ಮಿಳಿತವಾಗಿದೆ. ‘ವಿ, ‘ಶ್ವಾ’ಮತ್ತು ‘ಅಮಿತ್ರ’. ‘ವಿ’ ಎಂದಲ್ಲಿ ‘ವಿಹಗ’ಅಂದರೆ ಪಕ್ಶಿ, ‘ಶ್ವಾ’ ಎನ್ನುವುದು ಶ್ವಾನದ ಸಂಕ್ಶಿಪ್ತ ರೂಪ. ‘ಅಮಿತ್ರ’ ಎಂದಲ್ಲಿ ಮಿತ್ರನ ವಿರುದ್ದ ಪದ, ಶತ್ರು. ಇದೇ ರೀತಿಯಲ್ಲಿ ಇಡೀ ಶ್ಲೋಕದಲ್ಲಿನ ಪದ ವಿಂಗಡಣೆ ಮಾಡಿ ಗಮನಿಸಿದರೆ

ದಂಡವು –
1. ವಿಹಗ – ಪಕ್ಶಿಗಳನ್ನು ಓಡಿಸಲು
2. ಶ್ವಾನ – ನಾಯಿಗಳನ್ನು ಓಡಿಸಲು
3. ಅಮಿತ್ರ – ಶತ್ರುಗಳನ್ನು ಎದುರಿಸಲು,
4. ವಾರ್ಧಕ್ಯೇ – ಇಳಿವಯಸ್ಸಿನಲ್ಲಿ ಊರುಗೋಲಾಗಿ
5. ರಾತ್ರೌ – ಕತ್ತಲಲ್ಲಿ ಪಯಣಿಸಲು
6. ಅಪ್ಸು – ತೊರೆ, ನದಿಗಳನ್ನು ದಾಟುವಾಗ ಹಾಯಿಗೋಲಾಗಿ
7. ಕರ್ದಮೇ – ಕೆಸರು ಅತವಾ ಮರಳಿನಲ್ಲಿ ಹುದುಗಿದಾಗ ಹೊರಬರಲು
8. ಅನ್ಧೇ – ಕುರುಡರಿಗೆ ದಾರಿ ದೀಪವಾಗಿ
9. ಸರ್ಪೇ – ಹಾವಿನಿಂದ ರಕ್ಶಣೆಗಾಗಿ
10. ಕ್ರೀಡೇ – ಹಲವೊಂದು ಆಟ, ಚಿನ್ನೀ ದಾಂಡು, ಹಾಕಿ, ಜಾವೆಲಿನ್ ಮುಂತಾದವನ್ನು ಆಡುವ ಸಲುವಾಗಿ ಉಪಯೋಗವಾಗುತ್ತದೆ.

ಈ ರೀತಿಯಾಗಿ ಕೋಲಿನ/ದಂಡದ ಹತ್ತು ಹಲವು ಉಪಯೋಗಗಳಿಗೆ ದಂಡಂ ದಶಗುಣಂ ಎನ್ನುವುದು ಈ ಶ್ಲೋಕದಲ್ಲಿ ಅಡಗಿರುವ ಅರ‍್ತ. ಒಬ್ಬ ಮೂರ‍್ಕನ ಕೈಯಲ್ಲಿ ದಂಡ/ಕೋಲು ಸೇರಿದರೆ, ಅದನ್ನು ಆತ ಯಾರನ್ನಾದರೂ ಬಡಿಯಲು ಉಪಯೋಗಿಸಬಹುದು ಅಶ್ಟೆ. ಆದರೆ ಅದೇ ದಂಡ/ಕೋಲು ಒಬ್ಬ ಬುದ್ದಿವಂತನ ಕೈ ಸೇರಿದರೆ, ಹತ್ತು ಹಲವು ಉಪಯೋಗಕ್ಕೆ ಕಾರಣವಾಗುತ್ತದೆ ಎನ್ನುವುದೇ ಈ ಶ್ಲೋಕದ ವಿಸ್ತಾರವಾದ ಅರ‍್ತ.

(ಚಿತ್ರ ಸೆಲೆ: thegaurdian)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ವಿನಯ says:

    ಸಕತ್.. ಇಶ್ಟುದಿನ ನಾನೂ ದಂಡಿಸೋದು ಅನ್ನೋ ಅರ್ಥದಲ್ಲೆ ಬಳಸ್ತಿದ್ದೆ. ನನ್ನಿ

ವಿನಯ ಗೆ ಅನಿಸಿಕೆ ನೀಡಿ Cancel reply

%d bloggers like this: