ಹವಾಯಿಯಲ್ಲಿ ಲಾವಾದಿಂದ ಸ್ರುಶ್ಟಿಯಾದ ಗುಮ್ಮಟ
– ಕೆ.ವಿ.ಶಶಿದರ.
ಹವಾಯಿನಲ್ಲಿನ ಕಿಲೌಯಿ ಜ್ವಾಲಾಮುಕಿಯ ಮೌನಾ ಉಲು ಸ್ಪೋಟವು ಐದು ವರ‍್ಶ ಕಾಲ ಎಡೆಬಿಡದೆ ಲಾವಾ ಉಗುಳಿತು. 1774 ದಿನಗಳ ಕಾಲ ಸಂಬವಿಸಿದ ಈ ಸ್ಪೋಟ ಅಂದಿನ ದಿನಕ್ಕೆ ಅತ್ಯಂತ ದೀರ‍್ಗ ಸಮಯದ ಸ್ಪೋಟ ಎಂಬ ಕ್ಯಾತಿಗೆ ಬಾಜನವಾಗಿತ್ತು. ಕಿಲೌಯಿಯ ಈ ಸ್ಪೋಟ ಸುಮಾರು 460 ದಶಲಕ್ಶ ಕ್ಯೂಬ್ ಯಾರ್ಡ್‌ನಷ್ಟು ಲಾವಾ ಹೊರಹಾಕಿತು. 24ನೇ ಮೇ 1969ರಂದು ಪ್ರಾರಂಬವಾದ ಲಾವಾ ಉಗುಳುವಿಕೆ 1974ರ ಬೇಸಿಗೆಯವರೆಗೂ ಮುಂದುವರೆಯಿತು. ಲಾವಾ ಉಗುಳುವಿಕೆಯನ್ನು ನೋಡಲು ಅಲ್ಲಲ್ಲೇ ಸಾರ‍್ವಜನಿಕ ವೀಕ್ಶಣ ವೇದಿಕೆಗಳು ಸಜ್ಜಾಗಿದ್ದವು. ದೀರ‍್ಗ ಕಾಲದ ಈ ಉಗುಳುವಿಕೆ, ಸಾಮಾನ್ಯವಾದ ಸ್ಪೋಟದಲ್ಲಿ ಕಂಡು ಬರದಂತಹ ಹಾಗೂ ವಿರಳವಾಗಿ ಕಂಡುಬರುವ, ನಂಬಲಾಗದಂತಹ ಅನೇಕ ನೈಸರ‍್ಗಿಕ ಗಟನೆಗಳ ಮತ್ತು ವಿದ್ಯಮಾನಗಳ ಹುಟ್ಟಿಗೆ ಕಾರಣವಾಯಿತು.
ಐದು ವರ‍್ಶಗಳ ಸತತ ಜ್ವಾಲಾಮುಕಿಯ ಸ್ಪೋಟದ ಪರಿಣಾಮವಾಗಿ ಹನ್ನೆರಡು ಕಾರಂಜಿಗಳು ಹುಟ್ಟಿಕೊಂಡವು. 20 ಮೀಟರ್ (65 ಅಡಿ) ಎತ್ತರದ ಕಾರಂಜಿ ಈ ಸ್ಪೋಟದ ಮೊದಲ ವರ‍್ಶದಲ್ಲಿ ಹುಟ್ಟು ಕಂಡಿತು. ಚಿಮ್ಮುವ ಲಾವಾದ ಕಾರಂಜಿ ಎಶ್ಟು ಬಲವಾಗಿತ್ತೆಂದರೆ 7.5 ಮೈಲಿಗಳಶ್ಟು ದೂರದ ಸಮುದ್ರದಲ್ಲಿ ಕೊನೆಗೊಳ್ಳುವಶ್ಟು ಪ್ರಬಲವಾಗಿತ್ತು. ಈ ಕಾರಂಜಿ ಹಲವಾರು ದಿನಗಳ ಕಾಲ ಮುಂದುವರೆಯಿತು ಅಂದರೆ ನಿಕರವಾಗಿ ಅಕ್ಟೋಬರ್ 10 ರಿಂದ 13 ರವರೆಗೆ. ಇದರಿಂದ ಚಿಮ್ಮಿದ ಕಾರಂಜಿ 245 ಅಡಿ ಎತ್ತರವನ್ನು ಮುಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಜೂನ್ 25, 1969ರಂದು 220 ಮೀಟರ‍್(722 ಅಡಿ) ಎತ್ತರದ ಕಾರಂಜಿ ಈ ಜ್ವಾಲಾಮುಕಿಯಿಂದ ಸ್ಪೋಟಗೊಂಡಿತು. 1969ರ ಅಗಸ್ಟ್ 15ರಂದು ಕೇವಲ ಎಂಟು ಮೀಟರ್‌ನಶ್ಟು (26 ಅಡಿ) ಕರಗಿದ ಕಲ್ಲು ಹೊರಕ್ಕೆ ಚಿಮ್ಮಿತು. ಇದರ ವಿಶೇಶತೆಯಂದರೆ ನಾಯಿಕೊಡೆಯ ಮೋಡದಂತೆ ಕಂಡಿದ್ದು. ಈ ಹಂತದಲ್ಲಿ ಇದೇ ರೀತಿಯ ಚಿಮ್ಮುವಿಕೆ ಮೌನಾ ಉಲುವಿನಲ್ಲಿ ನಡೆಯುತ್ತಿತ್ತು.
ಅತ್ಯಂತ ಅದ್ಬುತವಾದ ಗಟನೆಯಂದರೆ ಆಗಸ್ಟ್ 5ರಂದು ಚಿಮ್ಮಿದ 100 ಮೀಟರ್ ಎತ್ತರದ ಲಾವ ಉಗುಳುವಿಕೆ. ಇದು ಕಿಲೌಯಿಯ ‘ಅಲೇ’ ಕಣಿವೆಯನ್ನು ತುಂಬಿ ತುಳುಕಿಸಿತ್ತು. ಇಂತಹ ಅತ್ಯದ್ಬುತವಾದ ಗಟನೆ ಈ ಜ್ವಾಲಾಮುಕಿಯಲ್ಲಿ ಕೊನೆಯಾಗಲಿಲ್ಲ. ಅಕ್ಟೋಬರ್ 20ರಂದು ಚಿಮ್ಮಿದ ಕಾರಂಜಿ 800 ಮೀಟರ್ (2625 ಅಡಿ) ದೂರದಲ್ಲಿದ್ದ ವೀಕ್ಶಣಾ ವೇದಿಕೆಯಲ್ಲಿನ ನೋಡುಗರು ಅದರ ಕಾವಿನ ಉಶ್ಣತೆಯನ್ನು ಅನುಬವಿಸಿದರು. ಲಾವದಿಂದ ಹಾಗೂ ಅದರ ಬಯಂಕರ ಕಾವಿನಿಂದ ಬಚಾವಾಗಲು ಹತ್ತಿರದ ಕಲ್ಲು ಬಂಡೆಗಳನ್ನು ಅವರು ಆಶ್ರಯಿಸದೇ ವಿದಿಯಿರಲಿಲ್ಲ. ಕಾವು ಎಶ್ಟರ ಮಟ್ಟಿಗೆ ತೀಕ್ಶ್ಣವಾಗಿತ್ತೆಂದರೆ ಅವರ ಅಕ್ಕ ಪಕ್ಕದಲ್ಲಿದ್ದ ಹಸೀ ಹುಲ್ಲು ಕೂಡ ಕ್ಶಣ ಮಾತ್ರದಲ್ಲಿ ಹತ್ತಿ ಉರಿಯುವಶ್ಟು.
ಈ ಗುಮ್ಮಟದ ಕಾರಂಜಿ ವಿಶೇಶತೆ ಏನು?
ಬಹುತೇಕ ಕಾರಂಜಿಗಳ ವೈಶಿಶ್ಟ್ಯ ಮೇಲ್ಮುಕವಾಗಿ ಚಿಮ್ಮುವುದು. ಎಪ್ಕಾಟ್ ಸೆಂಟರ್‍ನಂತೆ (ಅಮೇರಿಕಾ ಪ್ಲೋರಿಡಾದಲ್ಲಿರುವ ಡಿಸ್ನಿ ಲ್ಯಾಂಡ್‍ನ ಗೋಳ) ಹೊಳೆಯುವ ಗೋಳಾಕ್ರುತಿ ಮೌನಾ ಉಲು ಲಾವಾದಿಂದ ರೂಪುಗೊಂಡಿರುವುದು ಅಪರೂಪವಾಗಿದೆ. ಬಹಳಶ್ಟು ಚಾಯಾಚಿತ್ರಗಳಲ್ಲಿ ಗುಮ್ಮಟಾಕಾರದ ಕಾರಂಜಿ ನೀರಿನ ಮದ್ಯದಲ್ಲಿ ಇರುವಂತೆ ಕಂಡುಬಂದರೂ ವಾಸ್ತವವಾಗಿ ಅದು ಬೂಮಿಯ ಮೇಲಿದ್ದು, ಲಾವಾದ ತರಂಗಗಳು ನೀರಿನ ಅಲೆಯ ಬ್ರಮೆ ಹುಟ್ಟಿಸುತ್ತದೆ. ಜ್ವಾಲಾಮುಕಿ ಸ್ಪೋಟಗೊಂಡಾಗ ಸಣ್ಣ ಸಣ್ಣ ರಂದ್ರದಿಂದಾಗಲಿ, ಬಿರುಕುಗಳಿಂದಾಗಲಿ ಲಾವಾ ಹೊರಬರುವಾಗ ಕರಗಿದ ಕಲ್ಲಿನ ತಾಪಕ್ಕೆ ಅಲ್ಲಿನ ಗಾಳಿ ಹಿಗ್ಗುತ್ತದೆ. ಹಿಗ್ಗುವಿಕೆಯಿಂದ ಒಳಗಿನ ಒತ್ತಡ ಹೆಚ್ಚಾದಾಗ ವಿದಿಯಿಲ್ಲದೇ ಸ್ಪೋಟಿಸುತ್ತದೆ. ಸ್ಪೋಟಿಸಿದ ಗಾಳಿಯ ಜೊತೆ ಲಾವಾ ಸೇರಿ ಹೊರ ನುಗ್ಗುವ ರಬಸಕ್ಕೆ ಕಾರಂಜಿ ಸ್ರುಶ್ಟಿಯಾಗುತ್ತದೆ. ಕಾರಂಜಿಯ ಎತ್ತರ ಹೊರ ನುಗ್ಗುವ ಗಾಳಿಯ ಒತ್ತಡ ಹಾಗೂ ವೇಗದ ಮೇಲೆ ಅವಲಂಬಿತವಾಗಿರುತ್ತದೆ.
ಮೌನಾ ಉಲು ತನ್ನ ಅತ್ಯಂತ ಸುದೀರ‍್ಗ ಸಮಯದ ಲಾವಾ ಉಗುಳುವಿಕೆಯ ಜ್ವಾಲಾಮುಕಿ ಎಂಬ ಕ್ಯಾತಿಯನ್ನು, ಜನವರಿ 3, 1983ರಿಂದ ಏಪ್ರಿಲ್ 2018ರ ಕೊನೆಯವರೆಗೆ ಲಾವಾ ಉಗುಳುತ್ತಿರುವ ‘ಪುವು ಒಒ’ಗೆ ಬಿಟ್ಟುಕೊಟ್ಟಿದೆ. ಇದು ಚರಿತ್ರೆಯಲ್ಲಿ ಹವಾಯಿಯ ಜ್ವಾಲಾಮುಕಿಗಳು ಎಶ್ಟು ಸಕ್ರಿಯವಾಗಿದೆ ಎಂಬುದರ ನಿದರ‍್ಶನ. ನಿರಂತರವಾಗಿ ಚಿಮ್ಮುತ್ತಿರುವ ಜ್ವಾಲಾಮುಕಿ ಎಂದು ಗಿನ್ನೆಸ್ ದಾಕಲೆ ಹೊಂದಿರುವುದು ಇಟಲಿಯ ಟೈರ‍್ಹೇನಿಯನ್ ಸಮುದ್ರದ ಕರಾವಳಿಯಲ್ಲಿರುವ ಮೌಂಟ್ ಸ್ಟ್ರೊಂಬೋಲಿ. ಗ್ರೀಕ್ ವಸಾಹತುಗಾರರ ದಾಕಲೆಯ ಪ್ರಕಾರ ಇದು ಕ್ರಿಸ್ತ ಪೂರ‍್ವ ಏಳನೇ ಶತಮಾನದಿಂದಲೂ ಸಕ್ರಿಯವಾಗಿದೆ. ಮೆದು ಅನಿಲ ಸ್ಪೋಟ ಮತ್ತು ಲಾವಾ ಚಿಮ್ಮುವಿಕೆ ಪ್ರತಿ ಗಂಟೆಯಲ್ಲೂ ಕಾಣಬಹುದು. ಇದರಿಂದಾಗಿ ಈ ಜ್ವಾಲಾಮುಕಿಯನ್ನು ‘ಮೆಡಿಟರೇನಿಯನ್ ಲೈಟ್ ಹೌಸ್’ ಎನ್ನುತ್ತಾರೆ.
(ಚಿತ್ರಸೆಲೆ: wiki)
ಇತ್ತೀಚಿನ ಅನಿಸಿಕೆಗಳು