‘ರುಸ್ತುಂ’ ಚಿತ್ರ ಹೇಗಿದೆ?

Rustum

ಮಳೆ ಶುರುವಾಗುವ ಈ ಹೊತ್ತಿನಲ್ಲಿ, ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು ಕ್ರಿಕೆಟ್ ಜ್ವರದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರ ‘ರುಸ್ತುಂ’ ಹೇಗಿದೆ ಅನ್ನುವ ಕುತೂಹಲ ಎಲ್ಲರಿಗೂ ಇತ್ತು. ಡಾ.ಶಿವರಾಜ್ ಕುಮಾರ್ ನಟಿಸಿ, ರವಿವರ‍್ಮಾ ನಿರ‍್ದೇಶಿಸಿರುವ ಈ ಚಿತ್ರ ಅಪ್ಪಟ ಮನರಂಜಿಸುವ ಚಿತ್ರ ಅಂತನ್ನಬೇಕು. ಈ ಚಿತ್ರದ ಕತೆ ಇಬ್ಬರೂ ಪೋಲಿಸ್ ಅದಿಕಾರಿಗಳು ಹಾಗೂ ಒಬ್ಬ ಪ್ರಾಮಾಣಿಕೆ ಐಪಿಎಸ್ ಅದಿಕಾರಿಯ ಸುತ್ತ ಸುತ್ತುತ್ತದೆ. ಪೋಲಿಸ್ ಕತೆಗಳು ಹೊಸದಲ್ಲದಿದ್ದರೂ ಒಂದು ಪ್ರಚಲಿತ ಸಮಸ್ಯೆಯನ್ನು ಹಿಡಿದು ಕತೆ ಹೆಣೆದಿರುವ ರೀತಿ ಚೆನ್ನಾಗಿದೆ. ಚಿತ್ರಕತೆಯಲ್ಲಿನ ವೇಗದಿಂದಾಗಿ ಚಿತ್ರ ಎಲ್ಲೂ ಬೇಸರವೆನಿಸಲ್ಲ.

ಚಿತ್ರಕತೆಯಲ್ಲಿನ ವೇಗಕ್ಕೆ ಕಾರಣ ದೀಪು ಎಸ್ ಕುಮಾರ್ ಅವರ ಸಂಕಲನವಾದರೆ, ಮಜವಾದ ಹಿನ್ನಲೆ ಸಂಗೀತ ನೀಡಿರುವ ಅನೂಪ್ ಸೀಳಿನ್ ಹಾಡುಗಳಲ್ಲಿ ಅವರ ಎಂದಿನ ಜಾದೂ ಮಾಯವಾಗಿದೆ ಎನ್ನಬಹುದು. ಈ ಚಿತ್ರದ ಶಕ್ತಿಗಳಲ್ಲೊಂದು ಮಹೇನ್ ಸಿಂಹರ ಚಾಯಾಗ್ರಹಣ. ಅವರ ಕ್ಯಾಮೆರಾ ಕಣ್ಣಲ್ಲಿ ಈ ಚಿತ್ರ ಅಂದವಾಗಿರುವುದಶ್ಟೇ ಅಲ್ಲದೇ, ಈ ಚಿತ್ರದಲ್ಲಿ ಬರುವ ಬೇರೆ ಬೇರೆ ಸನ್ನಿವೇಶಕ್ಕೆ ತಕ್ಕನಾದ ಬೆಳಕು, ಹಿನ್ನಲೆಯನ್ನು ಒದಗಿಸಿದ್ದಾರೆ.

ಇಶ್ಟು ದಿನ ಸಾಹಸ ನಿರ‍್ದೇಶನ ಮಾಡುತ್ತಿದ್ದ ರವಿವರ‍್ಮಾ ಈಗ ನಿರ‍್ದೇಶನ ಮಾಡುವ ಸಾಹಸಕ್ಕೆ ಕೈ ಹಾಕಿ ಗೆದ್ದಿದ್ದಾರೆ ಎನ್ನಬಹುದು. ಬರೀ ಸಾಹಸವಶ್ಟೇ ಅಲ್ಲದೇ, ಕೌಟುಂಬಿಕ ಸನ್ನಿವೇಶ, ಬಾವನಾತ್ಮಕ ಸನ್ನಿವೇಶಗಳನ್ನೂ ಇಟ್ಟು ಜಾಣ್ಮೆಯನ್ನು ಮೆರೆದಿದ್ದಾರೆ. ಆದರೆ ‘ತೆರಿ’ ಹಾಗೂ ‘ತುಪ್ಪಾಕಿ’ ಚಿತ್ರದ ಎರಡು ದ್ರುಶ್ಯಗಳನ್ನು ಹಾಗೇಯೇ ಇಳಿಸಿ ಉಳಿದ ದ್ರುಶ್ಯಗಳನ್ನು ಹಾಗೆಯೇ ಮಾಡಿದ್ದಾರೇನೋ ಎಂದು ಅನ್ನಿಸುವಂತೆ ಮಾಡಿದ್ದಾರೆ.

ಈ ಚಿತ್ರದ ನಿಜವಾದ ಸೂಜಿಗಲ್ಲು ಎಂದರೆ ಅದು ಶಿವರಾಜ್ ಕುಮಾರ್. ಕೌಟುಂಬಿಕ ಸನ್ನಿವೇಶ, ಬಾವಾನಾತ್ಮಕ ಸನ್ನಿವೇಶ ಹಾಗೂ ಸಾಹಸ ದ್ರುಶ್ಯಗಳಲ್ಲಿ ನಟಿಸುವಾಗ ಅವರ ಅಬಿನಯ ಇಶ್ಟವಾಗುತ್ತದೆ. ಶ್ರದ್ದಾ, ಮಯೂರಿ, ರಚಿತಾ ರಾಮ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ನೇಹಿತನ ಪಾತ್ರದಲ್ಲಿ ವಿವೇಕ್ ಒಬೆರಾಯ್ ಗಮನಾರ‍್ಹ ಅಬಿನಯ ನೀಡಿದ್ದಾರೆ. ಶಿವರಾಜ್ ಹೊಸಪೇಟೆ ಚಿತ್ರಕ್ಕೆ ಬೇಕಾದ ಅಗತ್ಯವಾದ ನಗು ಮೂಡಿಸುತ್ತಾರೆ. ರೋಹಿತ್ ಕಾಣಿಸಿಕೊಳ್ಳುವ ಚಿಕ್ಕ ಪಾತ್ರದಲ್ಲಿ ಮನ ಗೆಲ್ಲುತ್ತಾರೆ.

ಈ ಸಿನಿಮಾದಲ್ಲಿ ಐಟಮ್ ಹಾಡು ಹಾಗೂ ಉಳಿದ ಹಾಡುಗಳನ್ನೂ ಬಳಸದೇ ಇರಬಹುದಿತ್ತು, ಚಿತ್ರದ ವೇಗಕ್ಕೆ ಅದು ಅಡ್ಡಿಯಾಗುತ್ತದೆ. ಅನೂಪ್ ಸೀಳಿನ್‌ ಅವರ ‘ಪೋಲಿಸ್ ಬೇಬಿ’ ಹಾಡು ತಮಿಳಿನ ‘ರೌಡಿ ಬೇಬಿ’ಯನ್ನು ನೆನಪಿಸುತ್ತದೆ. ಚಿತ್ರದಲ್ಲಿ ಬೋಜಪುರಿ ನುಡಿ ಸುಮಾರು ಕಾಲು ಬಾಗ ಈ ಸಿನಿಮಾದಲ್ಲಿದೆ, ಇದು ಸ್ವಲ್ಪ ಕಿರಿಕಿರಿಯೆನಿಸುತ್ತದೆ. ಕಳನಾಯಕನ ಪಾತ್ರಗಳಿಗೆ ಹೊರನುಡಿಯ ನಟರಿಗಿಂತ ನಮ್ಮ ಕನ್ನಡದ ನಟರನ್ನೇ ಬಳಸಬಹುದಿತ್ತು.

ಇವಿಶ್ಟೂ ಹೊರತು ಪಡಿಸಿದರೆ ನೀವು ಶಿವರಾಜ್ ಕುಮಾರ್ ಅವರ ಅಬಿನಯ, ಮೈ ನವಿರೇಳಿಸುವ ಸಾಹಸ, ಕೌಟುಂಬಿಕ ದ್ರುಶ್ಯಗಳನ್ನು ನೋಡಲು ರುಸ್ತುಂ ಚಿತ್ರವನ್ನು ನೋಡಬಹುದು.

(ಚಿತ್ರ ಸೆಲೆ: thenewsminute.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: