“ಎಣ್ಣೆ ಚಿಂತೆ”

–  ಅಶೋಕ ಪ. ಹೊನಕೇರಿ.

ನಗದಿಗ, Cashier

ಜಿಟಿ ಜಿಟಿ ಮಳೆ..‌ಬೆಳ ಬೆಳಗ್ಗೆ ಜೀವ ವಿಮಾ ಕಚೇರಿ ಗ್ರಾಹಕರಿಂದ ಗಿಜಗಿಜ ಎನಬೇಕಾಗಿದ್ದು ಮಳೆಯ ಕಾರಣದಿಂದಾಗಿ ನೀರವ ಮೌನ. ಈ ವಿಮಾ ಕಚೇರಿ ಸಣ್ಣ ಉಪಗ್ರಹ ಶಾಕೆ. ಇಲ್ಲಿ ಎರಡು ಮೂರು ಜನ ಉದ್ಯೋಗಿಗಳಶ್ಟೆ ಇರುವುದರಿಂದ ಗ್ರಾಹಕರಿಲ್ಲದಿದ್ದರೆ ಒಂದು ರೀತಿಯಲ್ಲಿ ಸ್ತಬ್ದ.

ಸುರೇಶ ಕ್ಯಾಶ್ ಕೌಂಟರ್ ಒಳಗೆ ಆಕಳಿಸುತ್ತ ಕುಳಿತಿದ್ದ, ಹಳೆಯ ಪ್ಯಾನೊಂದು ತಲೆಯ ಮೇಲೆ ಗರ…ಗರ…ಶಬ್ದ ಮಾಡುತ್ತ ಪ್ರಯಾಸದಿಂದ ತಿರುಗುತ್ತಿದೆ. ಹಣ ಕಟ್ಟುವ ಗ್ರಾಹಕ ಇಲ್ಲದಿದದ್ದಲ್ಲಿ ಸುರೇಶ ಕ್ಯಾಶಿಯರ್ ಆಗಿ ಏನು ಮಾಡಬೇಕು? ಆಕಳಿಸುತ್ತ ತೂಕಡಿಸುತ್ತ ಕಾಲ ತಳ್ಳುತಿದ್ದ. ಆ ಸಮಯಕ್ಕೆ ಸರಿಯಾಗಿ ಒಂದು ಹಳ್ಳಿಯ ಹೆಣ್ಣುಮಗಳ ಕಚೇರಿಗೆ ಆಗಮಿಸಿದಳು. ಅವಳನ್ನು ನೋಡುತ್ತಿದ್ದಂತಯೇ ಯಾರಾದರೂ ಈಕೆ ಬಡ ಕ್ರುಶಿಕ ಮನೆತನದ ಹೆಣ್ಣುಮಗಳು ಎಂದು ನಿರ‍್ದರಿಸಬಹುದಾಗಿತ್ತು. ಆಕೆಯ ಮಾತಾನಾಡುವ ಶೈಲಿ ಮತ್ತು ಮುಗ್ದತೆ, ಆಕೆ ಹೆಚ್ಚು ಓದಿದವಳಲ್ಲ ಎಂಬುದು ಸಾಬೀತು ಪಡಿಸಿತ್ತು.

“ಯಪ್ಪಾ ರೊಕ್ಕಾ ತುಂಬೋದು ಯಾಕಡೆ…? ರೊಕ್ಕಾ ತುಂಬೋದು ಕಟಬಾಕಿ ಆಗೇತಿ” ಎಂದು ಕಚೇರಿಯಲ್ಲಿ ಎದುರಿಗೆ ಕುಳಿತಿದ್ದ ವ್ಯಕ್ತಿಗೆ ವಿಚಾರಿಸಿದಳು ಅದಕ್ಕಾತ “ಕ್ಯಾಶ್ ಕೌಂಟರ್ ಗೆ ಹೋಗ್ ಬೇ…” ಎಂದು ಕೈ ಮಾಡಿ ಕ್ಯಾಶಿಯರ್ ಸುರೇಶನ ಕಡೆಗೆ ಬೆರಳು ತೋರಿಸಿದ.

“ಯಪ್ಪಾ..ಏಟ್ ನೋಡೋ… ರೊಕ್ಕದ್ ತುಂಬ ತ್ರಾಸ್ ಆಗಿ ಇನ್ಸುರೆನ್ಸ್ ಕಟ್ಟೂದು ಕಟಬಾಕಿ ಆಗಿ ಕುಂತೇತಿ” ಎಂದು ಕ್ಯಾಶಿಯರ್ ಸುರೇಶನಿಗೆ ಹಳೆ ರಶೀತಿ ತೋರಿಸಿದಳು.

“ಹೌದಮ್ಮ ಇನ್ಶುರೆನ್ಸ್ ಹಣ ಎರಡು ಕಂತು ಬಾಕಿ ಇದೆ ತುಂಬ್ತೀರಾ…?” ಎಂದ.

“ಯಪ್ಪಾ ರೊಕ್ಕದ್ ತುಂಬ ತ್ರಾಸ್ ಆಗೇತಿ, ನಮ್ದು ಮಳಿ ಬಂದ್ರ ಬೆಳಿ, ಬೆಳಿ ಚಲೋ ಬಂದ್ರ ಆಟ್ ರೊಕ್ಕ ಕೈಯಾಗ್ ಆಡ್ತಾವ್, ಮಳಿ ಬರ‍್ಲಿಲ್ಲ ಬೆಳಿ ಕೈಗ್ ಹತ್ತಲಿಲ್ಲ ಅಂದ್ರ ಸಾಲ ಸೋಲ ಮಾಡಿ ಸಾಲದೋರಿಗೆ ಬಡ್ಡಿ ತುಂಬುದಾಗ್ತೇತಿ ನಮ್ಮ ಬಾಳೇವು..ಹ್ವಾದ್ ವರ‍್ಸಾ ಆಚಿ ವರ‍್ಸಾ ಚೊಲೋ ಮಳಿ ಆಗ್ಲಿಲ್ಲೆಪ್ಪ..ಹಂಗಾಗಿ ಕಂತು ತುಂಬುದೂ ಕಟಬಾಕಿ ಆಗಿ ಕುಂತೇತಿ”

ಅದಕ್ಕೆ ಕ್ಯಾಶಿಯರ್ “ಈ ವರ‍್ಶ ಹೊಲದಲ್ಲಿ ಏನ್ ಮಾಡಿದಿರಮ್ಮ?” ಎಂದ. ಬಹುಶಹ ಆ ತಾಯಿಗೆ ಇವನ ಮಾತು ಸರಿ ಕೇಳಲಿಲ್ಲವೋ ಅತವಾ ಆಕೆ ತಪ್ಪಾಗಿ ಅರ‍್ತೈಸಿಕೊಂಡಳೋ, ಆಕೆ ಅವನ ಪ್ರಶ್ನೆಗೆ “ನಮ ಗಣಮಕ್ಕಳು ಎಣ್ಣಿ ಹೊಡೀತಾರೆಪ್ಪ” ಎಂದಳು.

ಸುರೇಶನು, “ಎಣ್ಣೆ ಹೊಡೆಯೊದು ದೊಡ್ಡ ಸಾಮಾಜಿಕ ಪಿಡುಗಾಗಿದೆ, ಈ ಗಂಡಸರು ದುಡಿದ ಹಣ ಹೆಚ್ಚು ಬಾಗ ಕುಡಿತಕ್ಕೆ ಕಳಿಯುತ್ತಾರೆ, ಚೇ” ಅಂತ ಮನದಲ್ಲೆ ಅಂದುಕೊಳ್ಳುತ್ತ… “ನಿಮ್ಮೂರಲ್ಲಿ ಎಣ್ಣೆ ಅಂಗಡಿ ಇದಿಯೋ” ಎಂದು ಆಕೆಗೆ ಕೇಳಿದ.

“ಯಪ್ಪಾ ನಮ್ಮೂರಾಗಿಲ್ಲ ಎಣ್ಣಿ ತಗೋಳಾಕ್ 30 ರೂಪಾಯಿ ಬಸ್ ಚಾರ‍್ಜ್ ಕೊಟ್ಟು ಸೋಮನಕೊಪ್ಪಕ್ ಹೋಗ್ಬೇಕಪ್ಪ” ಅಂದಳು. ಅದಕ್ಕವನು “ಎಣ್ಣೆಗೆ ಎಶ್ಟು ಕರ‍್ಚು ಮಾಡ್ತಾರಮ್ಮ..?” ಎಂದ. ಅದಕ್ಕವಳು “ಎರಡು ಮೂರು ಸಾವಿರ ಆಕ್ಯೇತಪ್ಪ” ಎಂದಳು.

ಸುರೇಶನಿಗೆ ಗಾಬರಿ..’ಅರೇ, ಎಣ್ಣೆ ಹೊಡಿಯೋಕೆ ತಿಂಗಳಿಗೆ ಮೂರು ಸಾವಿರ ಕರ‍್ಚು ಮಾಡಿದರೆ ವರ‍್ಶಕ್ಕೆ ಮೂವತ್ತರಿಂದ ನಲವತ್ತು ಸಾವಿರದವರೆಗೆ ಎಣ್ಣೆ ಹೊಡಿಯೋಕೆ ಕರ‍್ಚು ಮಾಡ್ತಾರಂದ್ರೆ, ಇನ್ನೂ ಬಡ ರೈತ ಕುಟುಂಬ ಉದ್ದಾರವಾಗೋದಾದ್ರೂ ಹೇಗೆ’ ಎಂದು ಮನದಲ್ಲೆ ಅಂದುಕೊಂಡು.

” ಏನಮ್ಮ ಎಲ್ಲ ಹೆಂಗಸರು ಸೇರಿ ಎಣ್ಣೆ ಅಂಗಡಿ ಊರಿಂದ ಎತ್ತಿಸಿ ಬಿಡ್ರಿ” ಎಂದ. ಅದಕ್ಕಾ ಹೆಣ್ಣುಮಗಳು “ಅಯ್ಯೋ ಶಿವನಾ, ಆ ಎಣ್ಣಿ ಅಂಗಡಿ ಎತ್ತಿಸಿ ಏನ್ಮಾಡೂನಪ್ಪ, ಎಣ್ಣಿ ಕರೀದಿಗೆ ಇದಾ ಅಂಗಡಿ ನಮಗ್ ಹತ್ರ, ಇಲ್ಲಂದ್ರ ನೂರು ರೂಪಾಯಿ ಕರ‍್ಚು ಮಾಡ್ಕೊಂಡು ಹುಬ್ಬಳ್ಳಿಗ್ ಹೋಗ್ಬೇಕಾಕ್ಯೇತಿ” ಎಂದಳು.

ಸುರೇಶ ಗೊಂದಲಕ್ಕೆ ಬಿದ್ದ ‘ಅರೇ ಎಣ್ಣೆ ಹೊಡಿಯೋ ಗಂಡಸರಿಗೆ ಈ ಹೆಣ್ಣು ಮಗಳು ಪರೋಕ್ಶವಾಗಿ ಬೆಂಬಲಿಸಿದಂತೆ ಕಾಣುತ್ತದಲ್ಲ’ ಎಂದುಕೊಂಡು, “ಅಲ್ಲಮ್ಮ ಎಣ್ಣೆ ಹೊಡಿಯೋದು ತಪ್ಪಲ್ಲೇನಮ್ಮ? ಇದರಿಂದ ಎಶ್ಟು ದುಡ್ಡು ಹಾಳಾಗುತ್ತೆ. ನೀವೆಲ್ಲ ನಿಮ್ಮ ಗಂಡಸರಿಗೆ ಬುದ್ದಿವಾದ ಹೇಳ್ಬೇಕು” ಎಂದ.

ಅದಕ್ಕೆ ಆ ಹೆಣ್ಣುಮಗಳು “ಅಯ್ಯೋ ಯಪ್ಪಾ ಎಣ್ಣಿ ಹೊಡೀದಿದ್ರ ನಾವೆಲ್ಲಿಗ್ ಹೊಗೋನೋ ಯಪ್ಪಾ… ಎಣ್ಣಿ ಹೊಡಿದಿದ್ರ ಇರೋ ಈಟು ಆಟು ಬೆಳಿ ಹುಳ ಹತ್ತಿ ಕೈಗೆ ಏನು ಸಿಗದಂಗಾಕ್ಯೇತೋ ಯಪ್ಪಾ” ಎಂದು ಉತ್ತರಿಸಿದಳು.

ಈಗ ಸುರೇಶನಿಗೆ ‘ಎಣ್ಣಿ’ ಎಂದರೆ ಏನು ಎಂಬುದು ಅರಿವಿಗೆ ಬಂದಿತ್ತು. ಆ ತಾಯಿ ಹೇಳುತ್ತಿರುವ ‘ಎಣ್ಣಿ’ ಕ್ರಿಮಿನಾಶಕವಾಗಿತ್ತು. ಆದರೆ ಸುರೇಶನು ಅಂದು ಕೊಂಡ ‘ಎಣ್ಣಿ’ ಸಾರಾಯಿಯಾಗಿತ್ತು. ಆ ಜಿಟಿ ಜಿಟಿ ಮಳೆಗೆ ‘ಎಣ್ಣೆ’ ಯ ನೆನೆಸಿಕೊಂಡಿದ್ದಕ್ಕೆ ನಕ್ಕು, ಆ ತಾಯಿಯ ವಿಮಾ ಕಂತನ್ನು ತುಂಬಿಸಿಕೊಂಡು ರಶೀತಿ ಕೊಟ್ಟು ಕಳುಹಿಸಿದ.

( ಚಿತ್ರ ಸೆಲೆ : flyclipart.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V Shashidhara says:

    ಹಾಸ್ಯ ಮಿಶ್ರಿತ ಲಘು ಬರಹ. ಸೊಗಸಾಗಿದೆ

  2. ಮಾರಿಸನ್ ಮನೋಹರ್ says:

    ಎಣ್ಣೆ ಗೊಂದಲ ಮೂಡಿಸಿದ್ದು ಸೊಗಸಾಗಿ ಮೂಡಿ ಬಂದಿದೆ

ಅನಿಸಿಕೆ ಬರೆಯಿರಿ: