ಕವಿತೆ: ಕಣ್ ಬಿಟ್ಟ ಕೂಡಲೇ ಕಂಡವಳು

– ವಿನು ರವಿ.

ತಾಯಿ ಮತ್ತು ಮಗು

ಕಣ್ ಬಿಟ್ಟ ಕೂಡಲೇ ಕಂಡವಳು
ನೀನಲ್ಲವೇ ಅಮ್ಮಾ… ನಿನ್ನ
ಕಣ್ ತಂಪಿನಲಿ ಬೆಳೆದವಳು
ನಾನಲ್ಲವೇ ಅಮ್ಮಾ

ಜಗದಾ ಸುಕವೆಲ್ಲಾ ನನಗೆ ಸಿಗಲೆಂದು
ಹಾರೈಸಿದವಳು ನೀನಲ್ಲವೇ ಅಮ್ಮಾ
ನಿನ್ನಾ ಪ್ರೀತಿಯ ಸುದೆಯಾ ಸವಿಯುಂಡು
ನಲಿದವಳು ನಾನಲ್ಲವೇ ಅಮ್ಮಾ

ನೆತ್ತಿಗೆ ಎಣ್ಣೆ ತೋಯಿಸಿ
ಮೆತ್ತಗೆ ಬಿಸಿನೀರಲಿ ಮೀಯಿಸಿ
ಬೆಚ್ಚಗೆ ಬಟ್ಟೆ ತೊಡಿಸಿ
ನಿನ್ನ ಕಾಡಿಗೆ ಕಣ್ಣಿಂದ ದ್ರುಶ್ಟಿ ಬೊಟ್ಟಿರಿಸಿ
ಲಾಲಿ ಜೋಗುಳ ಹಾಡಿದವಳು

ಅಂಬೆಗಾಲನಿಕ್ಕಿ ಹೊಸಿಲ ದಾಟಿ
ಹೊರಗೆ ದ್ರುಶ್ಟಿ ನೆಟ್ಟ ನನ್ನ
ಕಣ್ಣಗಾವಲ ಕವಚ ತೊಡಿಸಿದವಳು

ಅನ್ನವ ತುಪ್ಪದಿ ಮಿದ್ದಿಸಿ
ಸಕ್ಕರೆ ಬೆರಸಿದ ಹಾಲು ಕುಡಿಸಿ
ಪುಟ್ಟ ಹೆಜ್ಜೆಯ ಇರಿಸಿ ಹೊರಟ
ನನ್ನ ಕೈಹಿಡಿದು ನಡೆಸಿದವಳು

ನಿದಿರೆಯೊಳಗೆ ತುಸು ನಕ್ಕ
ಮುದ್ದು ಮೊಗವ ಕಂಡು
ದ್ರುಶ್ಟಿ ನೆಟ್ಟಿಗೆ ಮುರಿದು
ಸೆರಗ ಮೈತುಂಬಾ ಹೊದ್ದಿಸಿ
ಬೆಚ್ಚಗೆ ತಬ್ಬಿದವಳು

ಅತ್ತಾಗ ನೀನಿತ್ತ ಪ್ರೀತಿಯ ಹೂಮುತ್ತ
ಹಸಿದಾಗ ನೀನಿತ್ತ ಸವಿಯಾದ ತುತ್ತ
ನೊಂದಾಗ ನಿನ್ ಮಡಿಲಾ ಸಂತೈಸಿದ ಪರಿಯ
ನಾ ಹೇಗೆ ಮರೆಯಲಮ್ಮಾ
ಅಮ್ಮಾ ನಾ ಹೇಗೆ ಮರೆಯಲಮ್ಮ

(ಚಿತ್ರ ಸೆಲೆ:pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: