ಕವಿತೆ: ಮನದೊಳಗಿನ ಮಾತುಗಳು ಇಂಗಿಹೋಗಿವೆ

– ವೆಂಕಟೇಶ ಚಾಗಿ.

ನಾನೀಗ ಕಾಲಿಯಾಗಿರುವೆ
ನಿನ್ನ ಸನಿಹದ ಕ್ಶಣಗಳ ಕಜಾನೆಯಿಲ್ಲದೆ
ನಿನ್ನ ಹೊಗಳುವ ಸುಳ್ಳುಗಳೂ
ಕಾಲಿಯಾಗಿವೆ ಮಾತಿಗೆ ಜೀವವಿಲ್ಲದೆ

ಆಗಸದ ನಕ್ಶತ್ರಗಳೂ ಕಾಲಿಯಾಗಿವೆ
ಮಿನುಗುವ ನಿನ್ನ ಕಣ್ಣುಗಳಿಲ್ಲದೆ
ಗಾಳಿಯು ಸುಳಿಯುವುದನ್ನೆ ಮರೆತಂತಿದೆ
ನಿನ್ನ ಮಂಗುರುಳ ಹಾಜರಿಯಿಲ್ಲದೆ

ಮೊಗ್ಗುಗಳು ಅರಳುವುದನ್ನೆ ಮರೆತಂತಿವೆ
ನಿನ್ನ ಸ್ಪರ‍್ಶದ ಸುಕವಿಲ್ಲದೆ
ಗಾಳಿ ಸುಳಿಯುವುದನು ನಿಲ್ಲಿಸಿದೆ
ನಿನ್ನ ಬಿಸಿಯುಸಿರ ಚೈತನ್ಯವಿಲ್ಲದೆ

ಸೋನೆಮಳೆಯ ಮುತ್ತುಗಳು ಮರೆಯಾಗಿವೆ
ನಿನ್ನ ಬೊಗಸೆಯ ಹಿಡಿತವಿಲ್ಲದೆ
ಕಾಮನಬಿಲ್ಲು ಬಣ್ಣ ಕಳೆದುಕೊಂಡಿದೆ
ನಿನ್ನ ಕೆನ್ನೆಯ ರಂಗು ಕಾಣದೆ

ಮಾವಿನ ಮರದ ಕೋಗಿಲೆಯ ದನಿ ಮಂಕಾಗಿದೆ
ನಿನ್ನ ನಗುವಿನ ಅಲೆಯಿಲ್ಲದೆ
ಮನದೊಳಗಿನ ಮಾತುಗಳು ಇಂಗಿಹೋಗಿವೆ
ನಿನ್ನ ಕಣ್ಣುಗಳ ಮಾತಿಲ್ಲದೆ

(ಚಿತ್ರ ಸೆಲೆ: ninjamarketing.it)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: