ಸಣ್ಣಕತೆ – ಇಲ್ಲವಾದವಳು

– ಅಶೋಕ ಪ. ಹೊನಕೇರಿ.
ಮಳೆಗಾಲ mansoon

‘ಅಬ್ಬಾ…!! ಎಂತ ಮಳೆ, ನಾವು ನಮ್ಮ ಈ ವಯಸ್ಸಿನವರೆಗೆ ಇಂತಹ ಯಮ‌ ಮಳೆ ಕಂಡಿಲ್ಲ. ದೇವರೆ…. ಈ ಮಳೆಗೆ ಕಡಿವಾಣ ಹಾಕು ಇಲ್ಲದಿದ್ದರೆ ನಮ್ಮ ತವರು ಮನೆ ಹೇಳ ಹೆಸರಿಲ್ಲದಂತೆ ನಾಶವಾಗಿ ಬಿಡುತ್ತದೆ…!!. ಮೊನ್ನೆ ನಮ್ಮ ಅಮ್ಮನ ಮನೆಯ ಹಿಂದಿನ ಎತ್ತರದ ದರೆ ಕುಸಿದು ಎತ್ತು, ಹಸು ಕಟ್ಟುವ ಕೊಟ್ಟಿಗೆ ಮಣ್ಣು ಪಾಲಾಗಿದೆ. ಪಾಲೂರಿನ ಬೆಟ್ಟಗಳೆಲ್ಲ ಅದುರಿದಂತೆ ಎಲ್ಲೆಂದರಲ್ಲಿ ರಸ್ತೆಗಳು ಗಿರಿಕಂದರಗಳು ಬಿರುಕು ಬಿಡುತ್ತಿವೆ. ಪಾಲೂರಿನ ಮೂಡಣ ದಿಕ್ಕಿನ ಎರಡು ಎಕರೆ ಬತ್ತದ ಗದ್ದೆ ಕೂಡ ದರೆ ಕುಸಿದು ಮಣ್ಣಿನಲ್ಲಿ ಮುಚ್ಚಿ ಹೋಗಿದೆ’….. ಹೀಗೆ ಕಾವೇರಿಯ ಯೋಚನೆಯ ಲಹರಿ, ನಿಲ್ಲದೆ ಸಾಗಿತ್ತು. ಬಾವಿ ನೀರನ್ನು ಮೇಲೆತ್ತಲು ಕೊಡಪಾನಕ್ಕೆ ಹಗ್ಗ ಸರಕು ಹಾಕಿ ಒಂದು ತಾಸಾಗಿದೆ…. ಆದರೆ ಅವಳ ಚಿಂತೆ, ಅಳಲು, ತವರಿನ ಪರಿಸ್ತಿತಿಯ ಬಗ್ಗೆ ನೆನೆದು ದುಕ್ಕ ಉಮ್ಮಳಿಸಿದೆ. ಹಾಗೆ ಮೈ ಮರೆತಿದ್ದು ಕೊಡಪಾನದಿಂದ ನೀರೆತ್ತವುದನ್ನೆ ಮರೆತು ಯೋಚನೆಯಲ್ಲಿ ಮುಳುಗಿದ್ದಾಳೆ…!!?

‘ಕಾವೇರಿ…. ಕಾವೇರಿ…. ಎಶ್ಟೊತ್ತಾಯ್ತು ಬಾವಿಗೆ ಹೋಗಿ?’ ಎಂದು ಅವರತ್ತೆ ಮನೆಯ ಒಳಗಿಂದ ಕೂಗಿದಾಗ ಎಚ್ಚೆತ್ತ ಕಾವೇರಿ ಲಗು ಬಗೆಯಿಂದ ಕೊಡಪಾನದಲ್ಲಿ ನೀರೆತ್ತಿಕೊಂಡು ಮನೆ ಒಳಗೆ ನಡೆದಳು.

ಕಾವೇರಿ ಮನಸ್ಸಿಗೆ ಸಮದಾನವೇ ಇಲ್ಲ ಮನೆಗೆಲಸ ಬೇಕು..ಬೇಕು… ಬೇಡ… ಬೇಡ ಎನ್ನುವಂತೆ ಮಾಡುತ್ತಿದ್ದಾಳೆ. ಸ್ವಲ್ಪ ಮಳೆ ಕಡಿಮೆ ಆದರೆ ನನ್ನ ತವರಿಗೆ ಹೋಗಿ ಬರಬೇಕು. ಅಲ್ಲಿ ನನ್ನ ತಾಯಿ, ನನ್ನ ವಿದವೆ ಅಕ್ಕ, ನಮ್ಮ ಅಣ್ಣ, ಅತ್ತಿಗೆ, ತಮ್ಮ, ತಮ್ಮನ ಹೆಂಡತಿ ಇವರನ್ನೆಲ್ಲ ನೋಡಿ ಮಾತನಾಡಿ ಸಾಂತ್ವ‌ನಾ ಹೇಳಿ ಬರಬೇಕು‌ ಎಂಬ ಗಮನದಲ್ಲಿದ್ದಳು.

ಅಶ್ಟರಲ್ಲಿ ಕಾವೇರಿಯ ಪತಿರಾಯ ‘ಕಾವೇರಿ… ಕಾವೇರಿ… ಬೇಗನೆ ಒಂದು ಲೋಟ ಬಿಸಿ ಕಾಪಿ‌ಮಾಡು. ಈ ಬೊಬ್ಬಿರಿತಿರೋ ಮಳೆಯಿಂದ ಮೈ ಕೈ ಎಲ್ಲ ತಂಡಿ ಹಿಡಿದು ಬಿಟ್ಟಿದೆ’ ಎಂದು ಕೂಗುತ್ತ ಕೈಕಾಲು ತೊಳೆದು ಒಳಗೆ ಬಂದ. ಆದರೆ ಕಾವೇರಿ ಲವಲವಿಕೆ ಇಲ್ಲದೆ ಮೌನವಾಗಿದ್ದನ್ನು ಕಂಡ ಪತಿರಾಯ ‘ಯಾಕ್ ಕಾವೇರಿ, ಒಂತರ ಇದಿ?’ ಎಂದ. ‘ಇಲ್ಲರೀ… ನಾನು ಒಂದೆರಡು ದಿವಸದ ಮಟ್ಟಿಗೆ ತವರಿಗೆ ಹೋಗಿ ಬರ‍್ಬೇಕು. ಅಲ್ಲಿ ಬಾರಿ ಮಳೆಯಿಂದ ಮನೆಯವರೆಲ್ಲ ತೊಂದರೆಗೆ ಸಿಕ್ಕಿದ್ದಾರೆ’ ಅಂತ ಕಾವೇರಿ ಅಂದಳು.  ಪತಿರಾಯ ‘ಅಲ್ಲ ಮಾರಾಯ್ತಿ ಮಳೆ ಒಂದೇ ಸಮನೆ ದೋ ಅಂತ ಸುರಿತಿದೆ, ಅಲ್ಲಲ್ಲಿ ಹೊಳೆ ಹಳ್ಳ ತುಂಬಿ‌ ರಸ್ತೆ ಎಲ್ಲ ಮುಚ್ಚೋಗಿದೆ. ದರೆಗಳು ಕುಸಿದು ಓಡಾಡ್ದಂಗಾಗಿದೆ. ಮಳೆ ಪೂರ‍್ತಿ ಕಮ್ಮಿ ಆಗ್ಲಿ ಆಮೇಲೆ ಹೋದ್ರಾಯ್ತು’ ಎಂದ.

‘ಇಲ್ಲರೀ… ನನಗೆ ಯಾಕೋ ಕೆಟ್ಟ ಕೆಟ್ಟ ಕನಸು ಬೀಳ್ತಾ, ಇದೆ ತವರಿಗೆ ಏನೋ ಕೇಡು ಕಾದಿದೆ ಅಂತ ಅನಿಸ್ತಾ ಇದೆ ರೀ..!!’

‘ಅಲ್ಲ ಕಣೇ…ಈ‌ ಮಳೆಗೆ ಪಾಲೂರಿಗೆ ಹೋಗೋ ರಸ್ತೆಗಳಿಗೆಲ್ಲ ಅಡೆತಡೆ ಆಗಿದೆ. ಪ್ರವಾಹದಿಂದ ನೀರು ಸೊಂಟದ ತನಕ ಬಂದು ನಿಮ್ಮೂರು ದ್ವೀಪ ಆಗಿದೆ. ಮಳೆ ಎಲ್ಲ ಕಡಿಮೆ ಆಗಿ ನೀರೆಲ್ಲ ಇಳಿದು, ರಸ್ತೆ ಎಲ್ಲ ಸರಿ ಆಗ್ಲಿ ಆಮೇಲೆ ಹೋಗುವಿಯಂತೆ’  ಅಂತ ಕಾವೇರಿ ಗಂಡ ಅಂದನು. ಆದರೆ ಇವಳ ತಳಮಳ ಸ್ವಲ್ಪವೂ ಕಡಿಮೆ ಆಗ್ಲಿಲ್ಲ.

‘ಇಲ್ಲಾರೀ.. ಪಾಲೂರಿಗೆ ಸುತ್ತಾಗಿ ದೇವಗಿರಿ ಕಡೆಯಿಂದ ಊರಿಗೆ ಹೋಗಕ್ಕೆ ದಾರಿ ಇದೆ, ಒಂದು ಹತ್ತಿಪ್ಪತ್ತು ಕಿಲೋಮೀಟರ್ ಜಾಸ್ತಿ ಆಗುತ್ತೆ ಅಶ್ಟೆ. ಯಾಕೋ ಅವರನ್ನೆಲ್ಲ ನೋಡಿ ಮಾತಾಡಿಸಬೇಕು ಅಂತ ಮನಸು ಹಾತೊರಿತಿದೆರೀ!!’

‘ಸರಿ ಇವತ್ತು ರಾತ್ರಿ ಕಳೀಲಿ, ನಾಳೆ ಮಣ್ಣೂರಿಂದ ಬಸ್ ಹತ್ತಿಸಿ ಬರ‍್ತೀನಿ. ನೀನು ಹುಶಾರಾಗಿ ಹೋಗಿ ಬರುವಂತೆ. ಆಯ್ತ, ಈಗ ಮಕ್ಕಳಿಗೆ ಊಟ ಮಾಡ್ಸಿ ನನಗೂ ಸ್ವಲ್ಪ ಬಡಿಸು’ ಅಂತ ಹೇಳಿ ಕೈ ಕಾಲು ತೊಳೆಯಲು ಬಚ್ಚಲಿಗೆ ನಡೆದ.

ತವರನ್ನು ಕಾಣುವ ಹಂಬಲದಿಂದ ಕಾವೇರಿ ಒಬ್ಬಳೆ ಬಸ್ಸು ಹತ್ತಿ ಪ್ರಯಾಣ ಬೆಳೆಸಿದ್ದಾಳೆ. ತಾನು ಹತ್ತು ವರ‍್ಶದವಳಿದ್ದಾಗ ಅಪ್ಪ ಕ್ರುಶಿ ಸಾಲದ ಬಾದೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅಕ್ಕನಿಗೆ ಕುಂದೂರಿನ‌ ರಮೇಶ್ ಗೆ ಮದುವೆ ಮಾಡಿಕೊಟ್ಟ ಮೇಲೆ ಬಾವ ರಸ್ತೆ ಅಪಗಾತದಲ್ಲಿ ಮರಣ ಹೊಂದಿ ಅಕ್ಕ ವಿದವೆ ಆಗಿ ವಾಪಾಸು ತವರು ಸೇರಿದ್ದು, ಇಡೀ ಕುಟುಂಬದ ಜವಾಬ್ದಾರಿ ಅಣ್ಣ ಶಿವಣ್ಣನ ಹೆಗಲಿಗೆ ಬಿದ್ದಿದ್ದು, ಸಾಲ ತೀರಿಸುವ ಬಾರದ ನಡುವೆ ಅಣ್ಣ ಕಶ್ಟ ಪಟ್ಟು ನನ್ನ ಮದುವೆಮಾಡಿದ್ದು, ತಮ್ಮನಿಗೆ ಓದಿಸೋ ಜವಾಬ್ದಾರಿ ಇವೆಲ್ಲದರಿಂದ ಹಣ್ಣಾಗಿ ಆತ ನಲವತ್ತು ವರ‍್ಶವಾದರೂ ಮದುವೆನೇ ಆಗಿರಲಿಲ್ಲ. ಎಲ್ಲರ ಒತ್ತಾಯದ ಮೇರೆಗೆ ಇತ್ತೀಚಿಗೆ ಮದುವೆಯಾಗಿದ್ದ – ಹೀಗೆ ಅವಳ ಮನ ಪಟಲದಲ್ಲಿ ಸಿನಿಮಾದಂತೆ ತವರಿನ ಚಿತ್ರಣಗಳು ಬಂದು ಹೋಗುತಿದ್ದವು. ತಂಗಿ ಬರುತ್ತಾಳೆಂದು ಶಿವಣ್ಣ ಎತ್ತಿನ ಗಾಡಿ ಕಟ್ಟಿಕೊಂಡು ದೇವಗಿರಿಗೆ ಬಂದಿದ್ದ. ಬಹಳ ಮಳೆ, ಕೆಸರು ಬಹಳ ಕಶ್ಟದಲ್ಲಿ ಗಾಡಿ ಹೂಡಿಕೊಂಡು ಬಂದು ತಂಗಿ‌ ಕಾವೇರಿಯನ್ನು ಕರೆದುಕೊಂಡು ಮನೆ ಸೇರಿದಾಗ ರಾತ್ರಿ ಎಂಟು ಗಂಟೆ.

ಎಲ್ಲರೂ ಕಾವೇರಿ ತವರಿಗೆ ಬಂದ ಸಂಬ್ರಮದಲ್ಲಿ ಅಡಿಗೆ ತಯಾರಿಯ ತರಾತುರಿಯಲ್ಲಿದ್ದರು. ಅಮ್ಮನಂತು ಮಗಳ ಯೋಗ ಕ್ಶೇಮ ವಿಚಾರಿಸುವುದರಲ್ಲಿ, ಗಂಡ ಮಕ್ಕಳ ಬಗ್ಗೆ ವಿಚಾರಣೆಯಲ್ಲೆ ಮುಳುಗಿದ್ದಳು.

‘ಕಾವೇರಿ ಏನು ಹಾಳು ಮಳೆ ಅಂತಿ…ನಾವು ಬೆಳೆದ ಪೈರೆಲ್ಲ ಮಣ್ಣುಪಾಲಾಗಿದೆ. ಎತ್ತು ಹಸುಗಳೆಲ್ಲ ದರೆ ಕುಸಿತಕ್ಕೆ ಸಿಕ್ಕು ಮಣ್ಣು ಪಾಲಾಗಿದೆ. ಒಟ್ಟಿನಲ್ಲಿ ನಮ್ಮ‌ ಗ್ರಹಚಾರನೆ ಚೆನ್ನಾಗಿಲ್ಲ ಕಾವೇರಿ. ಶಿವಣ್ಣ ಒಬ್ಬ ರಾತ್ರಿ ಹಗಲು ಈ ಮನೆಗಾಗಿ ಒದ್ದಾಡ್ತಾನೆ’ ಎಂದೆಲ್ಲ ಮಾತು ಸಾಗಿದ್ದಾಗ. ಮಳೆಯ ರಬಸ ಜೋರಾಗಿದ್ದರಿಂದ ಕರೆಂಟು ಹೋಗಿ ಮನೆಯೆಲ್ಲ ಕತ್ತಲಾಯ್ತು. ಅಶ್ಟರಲ್ಲಿ ಮನೆಯ ಹಿಂದಿನ ಬೆಟ್ಟದಲ್ಲಿ ಬಾಂಬ್ ಸಿಡಿದಂತೆ ಜೋರಾಗಿ ಸದ್ದಾಯ್ತು! ಏನೋ ಅನಾಹುತವಾಗ್ತಿದೆ ಅಂತ ಅರಿತ ಶಿವಣ್ಣ, ‘ಎಲ್ಲರೂ ಮನೆ ಬಿಟ್ಟು ಹೊರಗೆ ಹೋಗೋಣ ನಡೀರಿ, ಏನೋ ಅನಾಹುತ ಆಗುವಂತೆ ತೋರುತ್ತಿದೆ’ ಎಂದ. ಎಲ್ಲರೂ ಆ ಕತ್ಲೆಯಲ್ಲಿ ದೋ… ಎಂದು ಹುಯ್ಯುತ್ತಿರುವ ಮಳೆಯಲ್ಲಿಯೇ ಹೊರಬಂದರು. ಬೂ ಕಂಪನದಂತೆ ಬಾಸವಾಯಿತು. ಇದ್ದಕ್ಕಿದಂತೆ ಮನೆಯ ಹಿಂದಿನ ಬೆಟ್ಟ ಸದ್ದು ಮಾಡುತ್ತಾ ಜರಿಯತೊಡಗಿತು. ಆ ಕತ್ತಲೆಯಲ್ಲಿ ಯಾರು ಏನು ಮಾಡಬೇಕು ಎಂದು ತೋಚಲಿಲ್ಲ. ಅಶ್ಟರಲ್ಲಿ ಆ ಬೆಟ್ಟ ಕುಸಿದು ಮನೆಯ ಮೇಲೆ ಉರುಳುತ್ತಲೆ ಜೀವ ಬಯದಿಂದ ಎಲ್ಲರೂ ದಿಕ್ಕಾಪಾಲಾಗಿ ಆ ಕತ್ತಲೆಯಲ್ಲಿ ಓಡ ತೊಡಗಿದರು ಆದರೆ….ವಿದಿ ಲಿಕಿತ ಬೇರೆಯೇ ಆಗಿತ್ತು. ಅವರೆಲ್ಲರ ಮೇಲೆ ಬೆಟ್ಟದ ಮಣ್ಣು ಕುಸಿದು ಎಲ್ಲರೂ ಮಣ್ಣಿನ ರಾಶಿಯಡಿ ಮಣ್ಣಾಗಿ ಜೀವ ಕಳೆದುಕೊಂಡರು!  ಬಹುಶಹ ಕಾವೇರಿಯ ತವರಿನ ಸೆಳೆತ ತನ್ನೆಲ್ಲ ತವರಿನ ಸದಸ್ಯರೊಂದಿಗೆ ಮಣ್ಣಲ್ಲಿ ಬೆರೆತು ಮರೆಯಾಗುವುದೇ ಆಗಿತ್ತೇನೋ?!

ಒಟ್ಟಿನಲ್ಲಿ ಈಗ ಅಕ್ಶರಶಹ ಅನಾತವಾದವರು ಕಾವೇರಿಯ ಗಂಡ ಮತ್ತು ಆಕೆಯ ಎರಡು ಮಕ್ಕಳು…

(ಚಿತ್ರ ಸೆಲೆ: maxpixel.net)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.