ಎಲ್ಲಿ ಹುಡಕಲಿ ಕುಶಿಯ…?

– ವೆಂಕಟೇಶ ಚಾಗಿ.

ಮಗು baby

ಜನರು ಕುಶಿಗಾಗಿ ಏನೆಲ್ಲಾ ಮಾಡುತ್ತಾರೆ. ಕುಶಿ ಎಲ್ಲಿ ದೊರೆಯುತ್ತದೆ? ಅದನ್ನು ಹೇಗೆ ಪಡೆಯುವುದು? ಕುಶಿಯನ್ನು ಹೇಗೆ ಉಳಿಸಿಕೊಳ್ಳುವುದು? ಹೀಗೆ ಹಲವಾರು ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಅಕ್ಕಿ ಬೇಳೆ ಸಿಗುವ ಹಾಗೆ ಕುಶಿ ಎನ್ನುವ ಸರಕು ಮಾರ‍್ಕೆಟ್ ನಲ್ಲಿ ದೊರೆಯುವಂತಾಗಿದ್ದರೆ ನಮ್ಮ ಜನ ಕುಶಿಯನ್ನು ಕೊಳ್ಳಲು ಮುಗಿ ಬೀಳುತ್ತಿದ್ದರು. ದುಕ್ಕವನ್ನು ಯಾರೂ ಸಹ ತಿರುಗಿಯೂ ನೋಡುತ್ತಿರಲಿಲ್ಲ. ಹಾಗಾದರೆ ಕುಶಿ ಎನ್ನುವುದು ಏನು? ಕುಶಿಯನ್ನು ಹೊಂದಲು, ಅನುಬವಿಸಲು ಏನು ಮಾಡಬೇಕು? ಈ ರೀತಿಯ ಪ್ರಶ್ನೆಗಳಿಗೆ ಸಮರ‍್ಪಕವಾದ ಉತ್ತರಗಳು ನಮ್ಮಲ್ಲಿಯೇ ಇವೆ.

ಒಂದು ವರ‍್ಶದ ಮಗುವನ್ನು ಗಮನಿಸಿ. ಆ ಮಗುವಿಗೆ ಯಾವಾಗ ಕುಶಿ ಆಗುವುದು, ಯಾವಾಗ ದುಕ್ಕವಾಗುವುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಗುವಿಗೆ ಇಂತಹದೇ ಆಟಿಕೆ ಬೇಕು ಎಂಬ ನಿಯಮ ಅತವಾ ಬೇಡಿಕೆ ಇರುವುದಿಲ್ಲ. ಸಿಕ್ಕ ವಸ್ತುವಿನಲ್ಲೇ ಆಟವಾಡುತ್ತ ಆನಂದ ಪಡೆಯುತ್ತದೆ. ಆ ವಸ್ತು ತನ್ನ ಕೈಯಿಂದ ಕಳೆದುಕೊಂಡಾಗ ಮಗುವಿನ ದುಕ್ಕ ಕ್ಶಣಮಾತ್ರ. ಮತ್ತೆ ಗಮನ ಬೇರೆಡೆ ಹರಿಯುತ್ತದೆ. ಸದಾ ಚಟುವಟಿಕೆಯಿಂದ ಕೂಡಿದ, ಸುಮ್ಮನಿದ್ದವರನ್ನೂ ಮಾತನಾಡಿಸುವ, ಎಂತವರ ಮುಕದಲ್ಲೂ ನಗು ತರಿಸುವಂತಹ, ಅತಿ ಆಸೆ ಇಲ್ಲದ, ಅಸೂಯೆ, ದ್ವೇಶ ಇಲ್ಲದ ಜೀವಿ ಮಗು. ಮಗುವಿನ ಅಳು ಕೂಡಾ ತನಗೆ ಆಟವಾಡಲು ಸಿಗಬೇಕಾದ ವಸ್ತು ಸಿಗುವವರೆಗೆ ಮಾತ್ರ.

ಅತಿ ಆಸೆ, ಮೋಹ, ಎಂಬುವಂತಹ ಮನದೊಳಗಿರುವ ಮನದ ನಿರ‍್ವಾಹಕರ ಮೇಲೆ ಸರಿಯಾದ ಅಂಕಿತವಿಲ್ಲದೇ ಇದ್ದಾಗ ಇಂತಹ ವಿಶಯಗಳಿಂದಾಗಿ ಕುಶಿ ಕಳೆದು ಹೋಗುವುದು ಎನ್ನಬಹುದು. ಹಾಗಾದರೆ ಇಂತಹ ಎಲ್ಲಾ ಗುಣಗಳನ್ನು ತ್ಯಜಿಸಬೇಕೆ? ಆಗ ನಮಗೆ ಸಂತೋಶ ದೊರೆಯುತ್ತದೆಯೇ? ಇಲ್ಲ ಈ ಗುಣಗಳೂ ಸಹ ಒಳ್ಳೆಯ ಗುಣಗಳಂತೆ ಮೊತ್ತವನ್ನು ಪಡೆದಿವೆ ಎನ್ನುವಂತಿಲ್ಲ. ಆದರೆ ನಿಯಂತ್ರಣದಲ್ಲಿ ಇರಬೇಕಶ್ಟೇ.

ಒಬ್ಬ ಬಿಕ್ಶುಕನಿಗೂ ಸಂತೋಶ ದೊರೆಯುತ್ತದೆ. ಶ್ರೀಮಂತ ವ್ಯಕ್ತಿಗೂ ಸಂತೋಶ ದೊರೆಯುತ್ತದೆ‌. ಆದರೆ ಮನಸಲ್ಲಿ ಸಂತ್ರುಪ್ತಿಯ ಬಾವನೆ ತಳೆದಾಗ ಮಾತ್ರ ಕುಶಿಗಾಗಿ ದೇಶ ವಿದೇಶ ಅಲೆಯುವ ಅವಶ್ಯಕತೆ ಬರುವುದಿಲ್ಲ. ನಾವಿರುವ ಜಾಗದಲ್ಲೇ ಕುಶಿ ದೊರೆಯುತ್ತದೆ. ಕುಶಿ ದುಕ್ಕದ ಯಜಮಾನರು ನಾವೇ. ಅವೆರಡೂ ನಮ್ಮ ಬೆನ್ನ ಹಿಂದೆಯೇ ಇರುತ್ತವೆ. ಒಂದು ವಿಶಯವನ್ನು ನಾವು ನೆನಪಿಟ್ಟುಕೊಳ್ಳಲೇಬೇಕು ಇಲ್ಲಿ ಯಾರೂ ಹಿಂದಿನ ಜನ್ಮದ ಕುಶಿಯ ಬಾಕಿಯನ್ನು ಹೊತ್ತು ತಂದಿಲ್ಲ. ಎಲ್ಲರಿಗೂ ಒಂದು ಕೊನೆ ದಿನ ಎನ್ನುವುದಿದೆ. ಆ ಕೊನೆಯ ಒಳಗಡೆ ಕುಶಿಯನ್ನು ಸಂಪಾದಿಸಿ ಅನುಬವಿಸುವುದು ನಮ್ಮ ಕೈಯಲ್ಲಿದೆ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: