ಶಾಲಾಗೀತೆ ನೀಡಿದ ಸಮನ್ವಯ ಕವಿಗೊಂದು ಸಲಾಂ

ಪ್ರಿಯದರ‍್ಶಿನಿ ಶೆಟ್ಟರ್.

ಡಾ. ಚೆನ್ನವೀರ ಕಣವಿ, Dr. Chennaveera Kanavi

ನಾನು ದಾರವಾಡದ ಶಾಂತಿಸದನ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ಆಗ ಪ್ರಾಂಶುಪಾಲರಾಗಿದ್ದ ಸಿಸ್ಟರ್ ಐರಿಸ್ ರೋಡ್ರಿಗಸ್‍ರವರು ನಮ್ಮ ಶಾಲಾಗೀತೆಯನ್ನಾಗಿ ನಾಡೋಜ ಡಾ. ಚೆನ್ನವೀರ ಕಣವಿಯವರ ಸಮಗ್ರ ಸಾಹಿತ್ಯ ಸಂಪುಟದಿಂದ ಬಿಟ್ಟು ಹೋದ ಕವನಗಳಲ್ಲಿ ಒಂದಾದ ‘ಆಗು’ ಪದ್ಯವನ್ನು ಆಯ್ಕೆ ಮಾಡಿದರು. ನಂತರ ಶಿಕ್ಶಕರಾದ ಜಗದೀಶ ಮಳಗಿಯವರು ಅದೇ ಕವನಕ್ಕೆ ಪಲ್ಲವಿಯಾಗಿ,

‘ಶಾಂತಿ ಸದನದಿ ಸುಂದರ ತಾಣದಿ
ವಿದ್ಯಾ ವಿನಯದ ಗಣಿಯಾಗು…..’

ಎಂಬ ಅಂದದ ಸಾಲುಗಳನ್ನು ಸೇರಿಸಿ ಅದಕ್ಕೆ ರಾಗ ಸಂಯೋಜನೆಯನ್ನೂ ಮಾಡಿದರು. ಅವರ ಜೊತೆ ನಮ್ಮ ತರಗತಿಯ ಶಿಕ್ಶಕಿ ಸಿಸ್ಟರ್ ಜುಲಿಯಾನಾ, ಸಿಸ್ಟರ್ ಐರಿಸ್ ಅವರು ನಮಗೆಲ್ಲ ಈ ಹಾಡನ್ನು ರಾಗಬದ್ದವಾಗಿ ಕಲಿಸಿಕೊಟ್ಟರು. ಮತ್ತೆ ಮತ್ತೆ ಹಾಡಿಸಿ, ತಾಲೀಮು ಮಾಡಿಸಿ, 15-20 ವಿದ್ಯಾರ‍್ತಿಗಳ ನಮ್ಮ ಗುಂಪನ್ನು ಕಣವಿ ಅಜ್ಜನವರ ಮನೆಗೆ ಕರೆದೊಯ್ದು ಅವರ ಸಮ್ಮುಕದಲ್ಲಿಯೇ ನಮ್ಮಿಂದ ಶಾಲಾಗೀತೆಯನ್ನು ಹಾಡಿಸಿದರು.

ಕಲ್ಯಾಣನಗರದಲ್ಲಿರುವ ಅವರ ಮನೆ ನಮ್ಮ ಶಾಲೆಗೆ ಬಹಳ ಹತ್ತಿರವಿತ್ತು. ಎಳೆಯರಾದ ನಾವು ಅವರ ಮನೆಗೆ ಹೋಗಿ ಅವರ ಸಮ್ಮುಕದಲ್ಲಿ ಅವರದೇ ಪದ್ಯವನ್ನು ಹಾಡಿ ಸಂಬ್ರಮಿಸಿದ್ದು ನಮಗೆಲ್ಲ ಒಂದು ಅವಿಸ್ಮರಣೀಯ ಅನುಬವ. ಇಂತಹ ಅವಕಾಶ ಕಲ್ಪಿಸಿದ ನಮ್ಮ ಶಿಕ್ಶಕರಿಗೆ ನಾವು ಎಂದೆಂದಿಗೂ ಆಬಾರಿಯಾಗಿದ್ದೇವೆ.

ನಮ್ಮ ಶಾಲಾಗೀತೆಯ ಸಾಲುಗಳು ಹೀಗಿದ್ದವು:

ಶಾಂತಿ ಸದನದಿ ಸುಂದರ ತಾಣದಿ
ವಿದ್ಯಾ ವಿನಯದ ಗಣಿಯಾಗು

ಎಲ್ಲ ದಳಗಳೂ ಒಂದೇ ದೇಟಿನಲಿ
ಮಾಟಗೊಂಡ ಮ್ರುದು ಹೂವಾಗು
ಎಲ್ಲ ಹೂವುಗಳ ಪರಿಮಳ ಹೀರುತ
ಒಂದೇ ಹುಟ್ಟಿನಲಿ ಜೇನಾಗು

ಹಲವು ಹಕ್ಕಿಗಳ ಗೂಡಿಗೆ ಕರೆಯುವ
ಹಣ್ಣನೀವ ಹೆಮ್ಮರವಾಗು
ಹಾರಿದನಿತು ವಿಸ್ತಾರಕೇರುವ
ಹಾಡ ಬಿಡುಗಡೆಯ ಬಾನಾಗು

ಎಲ್ಲೊ ಹುಟ್ಟಿ ಮತ್ತೆಲ್ಲಿಗೊ ಹರಿದರು
ಎಲ್ಲ ಜೀವಿಗಳ ಸೆಲೆಯಾಗು
ಬೆಟ್ಟ ಕಡಲುಗಳ ತೊಟ್ಟಿಲು ತೂಗುವ
ಅಂತಹಕರಣದ ನೆಲೆಯಾಗು

ನಾವು ಚಿಕ್ಕವರಿದ್ದಾಗ ಅವರೆದುರು ಈ ಹಾಡನ್ನು ಹೇಳಿದ್ದು ರೋಮಾಂಚನವನ್ನುಂಟು ಮಾಡಿತ್ತಾದರೂ ಮಕ್ಕಳಾದ ನಮಗೆ ಅದು ಅಶ್ಟಾಗಿ ಅರ‍್ತವೇನೂ ಆಗಿರಲಿಲ್ಲ. ಮೂರ‍್ನಾಲ್ಕು ವರ‍್ಶಗಳ ನಂತರ ನಮ್ಮ ಹಿಂದಿ ಶಿಕ್ಶಕಿ ರೀಟಾ ಟೀಚರ್ ಅದರ ಬಾವಾರ‍್ತವನ್ನು  ವಿವರಿಸಿದ್ದರು. ನಿಸರ‍್ಗದ ಜೊತೆಗೆ ಸಮನ್ವಯ ಸಾದಿಸುವ ಬಗೆಯನ್ನು ಇಲ್ಲಿ ಪ್ರತಿ ಸಾಲಿನಲ್ಲಿಯೂ ಕಾಣಬಹುದಾಗಿದೆ. ಹೂವು ಹಣ್ಣು, ಮಕರಂದ ಹೀರುವ ಜೇನು, ಹಕ್ಕಿಗಳು, ನದಿ, ಬೆಟ್ಟ, ಕಡಲು – ಹೀಗೆ ನಿಸರ‍್ಗದೊಂದಿಗೆ ನಮ್ಮ ಬದುಕನ್ನು ಸಮೀಕರಿಸಿಕೊಂಡು ಸಾರ‍್ತಕವಾಗಿಸಿಕೊಳ್ಳುವ ಪರಿಯನ್ನು ಈ ಗೀತೆ ಬಿಂಬಿಸುತ್ತದೆ.

ಈಗ ಕಣವಿ ಅಜ್ಜ ನಾಡಿನ ಶ್ರೇಶ್ಟ ಸಾಹಿತ್ಯ ಪ್ರಶಸ್ತಿಗೆ ಬಾಜನರಾದ ಈ ಸಂದರ‍್ಬದಲ್ಲಿ ಅವರ ಈ ಕವಿತೆಯನ್ನು ದಶಕದ ನಂತರ ಮತ್ತೊಮ್ಮೆ ನೆನಪಿಸಿಕೊಂಡು ಗುನುಗುನಿಸುವಾಗ ಒಬ್ಬ ಹಿರಿಯಜ್ಜ ನಾಡಿನ ಮಕ್ಕಳಿಗೆ ಬದುಕು ಸಾರ‍್ತಕವಾಗಲು ಯಾವ ರೀತಿಯ ಮಾರ‍್ಗದರ‍್ಶಿ ಸೂತ್ರಗಳು ಅವಶ್ಯಕವೆಂಬುದನ್ನು ಕಂಡರಿಸಿದ ಪರಿ ಅಚ್ಚರಿ ಮೂಡಿಸುತ್ತದೆ. ಇಂತಹ ಶ್ರೇಶ್ಟ ಕವಿಯೊಬ್ಬರ ಪದ್ಯವನ್ನು ಶಾಲಾಗೀತೆಯನ್ನಾಗಿ ನಾವು ಅಳವಡಿಸಿಕೊಂಡಿದ್ದೆವೆಂಬುದು ನಮಗೆ ಅಬಿಮಾನದ ಸಂಗತಿ.

ವಿನಯದ ಗಣಿಯಾಗುವ, ಅಂತಹಕರಣದ ನೆಲೆಯಾಗುವ ಕನಸನ್ನು ನಮ್ಮಲ್ಲಿ ಬಿತ್ತಿದ ಸಮನ್ವಯ ಕವಿ 2019ನೇ ಸಾಲಿನ ನ್ರುಪತುಂಗ ಸಾಹಿತ್ಯ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇದೋ ಅವರಿಗೆ ನಮ್ಮ ಅಬಿನಂದನೆಗಳು.

( ಚಿತ್ರಸೆಲೆ : prajavani.net )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Vaibhav G H says:

    Nice article Priya !

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *