ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್.

village, hut, ಹಳ್ಳಿ ಮನೆ

“ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ. ಅವನು ಒಣಗಿದ ಕೋಲಿನಿಂದ ಮಣ್ಣಿನ ಹಾದಿಯ ಮೇಲೆ ಗೆರೆ ಮೂಡಿಸುತ್ತಾ ನಡೆದಿದ್ದ. ‘ನ್ಯಾಯಬೆಲೆ ಅಂಗಡಿ’ ಅಂತ ಬರೆದಿದ್ದ ಅಂಗಡಿಯ ಮುಂದೆ ಬಂದು ನಿಂತೆವು. “ನೀನು ಇಲ್ಲೇ ಇರು” ಅಂತ ನನಗೆ ಹೇಳಿದ ಮೋನು, ನನ್ನ ಕೈಯಿಂದ ಕೈಚೀಲವನ್ನು ಬಿಡಿಸಿಕೊಂಡು ಅಂಗಡಿಯ ಒಳಗೆ ಹೋದ. ಅದು ರೇಶನ್ ಕೊಡುವ ಅಂಗಡಿಯಾಗಿತ್ತು, ಅದರ ಪಕ್ಕದಲ್ಲೇ ದೊಡ್ಡದೊಂದು ಗೋದಾಮು.

ಅವನು ಒಳಗೆ ರೇಶನ್ ಅಕ್ಕಿ ತೂಗಿಸಿ ಕೊಳ್ಳುತ್ತಿರುವಾಗ ನಾನು ಗೋದಾಮಿನ ಕಡೆಗೆ ಹೋದೆ. ದೊಡ್ಡ ಶಟರ್, ಒಳಗೆ ಒಂದರ ಮೇಲೆ ಒಂದು ಪೇರಿಸಿಟ್ಟ ಅಕ್ಕಿ ಹಾಗೂ ಸಕ್ಕರೆ ಚೀಲಗಳು. ಅಲ್ಲಿಂದ ಗಮ್ ಅಂತ ಸಕ್ಕರೆಯ ವಾಸನೆ, ಅಕ್ಕಿಯ ಮುಗ್ಗಲು ವಾಸನೆ ಬರುತ್ತಾ ಇತ್ತು. ಮೋನು ರೇಶನ್ ಅಕ್ಕಿ ತಗೊಂಡು ಹೊರಗೆ ಬಂದು, ನನ್ನ ಕಡೆ ನೋಡಿ ಕೂಗಿ ಕರೆದ. ನಾನು ಓಡಿ ಅವನ ಬಳಿ ಬಂದೆ. ಅವನು “ಇದೇ ನೋಡು ರೇಶನ್” ಅಂತ ಕೈಚೀಲದ ಬಾಯಿ ತೆರೆದು ದಪ್ಪನೆಯ ಅಕ್ಕಿ ತೋರಿಸಿದ. ನನ್ನ ಬದುಕಿನಲ್ಲಿ ಅಶ್ಟು ದಪ್ಪನೆಯ ಅಕ್ಕಿ ನಾನು ನೋಡಿರಲಿಲ್ಲ. ಇಬ್ಬರೂ ಚಿಕ್ಕವರು, ಕೈಚೀಲ ಬಾರವಾಗಿತ್ತು. ಅವನೊಬ್ಬನಿಂದ ಎತ್ತಲು ಆಗದೇ ಅವನು, “ನೀನೊಂದು ಕಡೆ ಹಿಡಿ” ಅಂದ. ಇಬ್ಬರೂ ಅದನ್ನು ಹಿಡಿದುಕೊಂಡು ಅವನ ಮನೆಗೆ ಅದೇ ಮಣ್ಣಿನ ಹಾದಿಯಲ್ಲಿ ನಡೆದುಕೊಂಡು ಬಂದೆವು.

ನಾನು ಅಜ್ಜಿಯ ಕಣ್ಣುತಪ್ಪಿಸಿ ಮೋನುವಿನ ಮನೆಯ ಕಡೆ ಹೋಗುತ್ತಿದ್ದೆ. ಅವನ ಮನೆ ಮುಟ್ಟಿದಾಗ ಅವನ ಅಮ್ಮ, “ಇವನ ಅಜ್ಜಿ ಹೀಗೆ ಇವನು ಚೀಲ ಹಿಡಿದುಕೊಂಡು ಬರುವುದನ್ನು ನೋಡಿದರೆ, ಕೆಲಸಕ್ಕೆ ಹಚ್ಚಿದರು ಅಂತ ನನ್ನ ಬೈತಾಳೆ” ಅಂದರು, ನನಗೆ ಅಂಜಿಕೆಯಾಯ್ತು. ಅವನ ಅಮ್ಮ ನಮ್ಮಿಂದ ಅಕ್ಕಿಯನ್ನು ತೆಗೆದುಕೊಂಡು ಮನೆಯ ಒಳಗೆ ಹೋದರು. ಮೋನುವಿನ ಮನೆ ಕಟ್ಟಲು ಬಳಸಿದ ಸಾಮಾನುಗಳಿಂದಲೇ ಅವನು ಬಡವ ಅಂತ ಗೊತ್ತಾಗುತ್ತಿತ್ತು. ಆದರೆ ಪಟ್ಟಣದಿಂದ ಹಳ್ಳಿಯ ಅಜ್ಜಿ ಮನೆಗೆ ಕೇವಲ ಬೇಸಿಗೆ ರಜದಲ್ಲಿ ಹೋಗುತ್ತಿದ್ದ ನನಗೆ ಅವನ ಮನೆ ನಾನು ಪಟ್ಟಣದ ಗಾರ‍್ಡನ್ ನಲ್ಲಿ ನೋಡಿದ ತೀಮ್ ಪಾರ‍್ಕ್ ಕಾಟೇಜ್ ತರಹ ಕಾಣಿಸಿತು.

ಅವನ ಮನೆ ಸುತ್ತಮುತ್ತ ಬೆಳೆದಿದ್ದ ಸೀಬೆ ಮತ್ತು ಬೇವಿನ ಮರಗಳು, ಅಡುಗೆಮನೆ ಚಪ್ಪರದ ಮೇಲೆ ಹಬ್ಬಿದ್ದ ಅವರೆಕಾಯಿ ಬಳ್ಳಿಯಂತೂ ನನ್ನ ಮನಸ್ಸನ್ನು ಗೆದ್ದಿದ್ದವು. ಅದರ ಪಕ್ಕದಲ್ಲೇ ಪಪ್ಪಾಯಿ ಗಿಡ, ಸಗಣಿ ಸಾರಿಸಿದ ಅವರ ಮನೆ ಅಂಗಳದ ನಟ್ಟ ನಡುವೆ ಬೆಳೆಸಿದ್ದ ದುಂಡುಮಲ್ಲಿಗೆ ಗಿಡ. ಅವರ ಅಂಗಳದಲ್ಲಿದ್ದ ಹಗ್ಗದ ಮಂಚದ ಮೇಲೆ ನಾವಿಬ್ಬರೂ ಕೂತುಕೊಂಡೆವು. ಅವನ ಅಮ್ಮ ಅಡುಗೆ ಮಾಡತೊಡಗಿದರು. ಅವರ ಮನೆಯ ಕಂಡ ಎಲ್ಲವೂ ನನಗೆ ಹೊಸದೇ! ಅವನ ಅಮ್ಮ ಮೊದಲು ಮೊರದಲ್ಲಿ ರೇಶನ್ ಅಕ್ಕಿ ಹಾಕಿಕೊಂಡು, ಅದರಲ್ಲಿಂದ ಹರಳು ಹುಲ್ಲಿನ ಬೀಜ ಆರಿಸಿದರು. ಅದನ್ನು ಕೇರಿ, ಪಕ್ಕಕ್ಕೆ ಇಟ್ಟುಕಟ್ಟಿಗೆ ಒಲೆಯ ಮೇಲೆ ನೀರನ್ನು ಎಸರಿಗೆ ಇಟ್ಟು ಕೆಳಗೆ ಉರಿ ಹಾಕಿದರು. ಒಲೆ ಉರಿಯಲು ಶುರುಮಾಡಿದಾಗ ನನಗೆ ಆದ ಸಂತಸ ನೋಡಿ ಅವನ ಮನೆಯವರೆಲ್ಲರೂ ನಕ್ಕರು!

ನಾನು ಮತ್ತೆ ಮತ್ತೆ ಅತ್ತ ಇತ್ತ ನೋಡುತ್ತಿದ್ದೆ. ಎಲ್ಲಿಂದಲಾದರೂ ನನ್ನ ಅಜ್ಜಿ ನನ್ನನ್ನು ಹುಡುಕುತ್ತಾ ಬರುತ್ತಿದ್ದಾಳೋ ಅಂತ. ಅನ್ನದ ಬೋಗುಣಿಯ ಮೇಲಿಂದ ತಟ್ಟೆ ತೆಗೆದು ಅವರಮ್ಮ ಅನ್ನದ ಕೈಯಿಂದ(ಸೌಟು) ಅನ್ನದ ಕೆಲವು ಅಗುಳು ತೆಗೆದು ಕೈ ಬೆರಳುಗಳಿಂದ ಹಿಚಿ(ಸು)ಕಿ ಅನ್ನ ಬೆಂದಿದೆಯಾ ಅಂತ ನೋಡಿದರು. ಒಂದು ತಟ್ಟೆ ತೆಗೆದುಕೊಂಡು ಅದಕ್ಕೆ ಬಿಸಿಬಿಸಿ ಅನ್ನ ಹಾಕಿದರು, ಅದರಿಂದ ಗಮ್ಮೆನ್ನುವ ಹಬೆ‌ ಏಳುತ್ತಿತ್ತು! ಅದರ ಮೇಲೆ ಬೇರೆ ಚರಿಗೆಯಲ್ಲಿ ಮಾಡಿದ ಹುಳಿಸಾರು ಹಾಕಿದರು. ಅವೆರಡರ ಗಮ ನನಗೆ ಬಂತು. ಆ ತಟ್ಟೆ ತೆಗೆದುಕೊಂಡು ಅವರಮ್ಮ ಮೋನುವಿಗೆ ಕೊಟ್ಟು ನನ್ನತ್ತ ನೋಡಿದರು. ನಾನು ಕಣ್ಣು ತಪ್ಪಿಸಿಕೊಂಡು ಸೀಬೆ ಮರದಲ್ಲಿದ್ದ ಸಣ್ಣ ಕಾಯಿಗಳ ಕಡೆಗೆ ನೋಡಿದೆ. ‘ಯಾರ ಮನೆಯಲ್ಲೂ ಅಲ್ಲಿ ಕಾರ‍್ಯಕ್ರಮ ಇಲ್ಲದಿದ್ದರೆ, ಅವರು ನಮ್ಮನ್ನು ಕರೆಯದಿದ್ದರೆ ಊಟ ಮಾಡಬಾರದು, ಅವರು ಊಟ ಮಾಡು ಅಂದರೂ ಒಲ್ಲೆ ಅನ್ನಬೇಕು’ ಅಂತ ಪಟ್ಟಣದಲ್ಲಿ ಅಮ್ಮ ಹಾಗೂ ಹಳ್ಳಿಗೆ ಬಂದ ಮೇಲೆ ಅಜ್ಜಿ ಇಬ್ಬರೂ ಚೆನ್ನಾಗಿ ಹೇಳಿದ್ದರು.

ಮೋನುವಿನ ಅಮ್ಮ ಅಡಿಗೆಯತ್ತ ಹೋಗಿ ಮತ್ತೊಂದು ಪ್ಲೇಟಿನಲ್ಲಿ ಅನ್ನ ಸಾರು ಹಾಕಿಕೊಂಡು ಬಂದು ನನಗೆ ಕೊಟ್ಟರು. ನಾನು “ಬೇಡ ಅಮ್ಮ ನಾ ಒಲ್ಲೆ, ಬೇಡ ಅಮ್ಮ ನಾ ಒಲ್ಲೆ” ಅನ್ನುತ್ತಲೇ ಪ್ಲೇಟನ್ನು ತೆಗೆದುಕೊಂಡೆ! ಅನ್ನ ಸಾರು ಕಲೆಸಿಕೊಂಡು ಮೊದಲ ಬಾರಿಗೆ ನಾನು ರೇಶನ್ ದಪ್ಪ ಅಕ್ಕಿಯ ಅನ್ನ ಹಾಗೂ ಏನೂ ಹಾಕದ ಕೇವಲ ಈರುಳ್ಳಿ ಮತ್ತು ಹುಳಿ ಇದ್ದ ಸಾರನ್ನು ತಿಂದೆ. ಅದರಶ್ಟು ರುಚಿ ಯಾವುದೂ ಇರಲಿಕ್ಕಿಲ್ಲ. ನನ್ನ ಮನೆಯಲ್ಲಿ ಪ್ರತಿ ಬಾನುವಾರ ಮದ್ಯಾಹ್ನ ಮಾಡುತ್ತಿದ್ದ ಚಿಕನ್ ಬಿರಿಯಾನಿ ಅದರ ಮುಂದೆ ಏನೇನೂ ಅಲ್ಲ!

ಊಟ ಆದ ಮೇಲೆ ನಾನು ಮೋನು ಗೋಲಿ ಆಟ ಎಲ್ಲಿ ಆಡುತ್ತಿದ್ದಾರೆ ಅಂತ ಹುಡುಕುತ್ತಾ ಹೋದೆವು. ‘ಇವತ್ತು ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಟ ಆಡುತ್ತಾ ಇದ್ದಾರೆ’ ಅಂತ ಮತ್ತೊಬ್ಬ ಹುಡುಗ ಹೇಳಿದ. ಬಿಸಿಲು ಹೆಚ್ಚಾದಾಗ ಒಂದು ದೊಡ್ಡ ಬೇವಿನ ಮರದ ಕೆಳಗೆ ಆಡುತ್ತಿದ್ದೆವು ಮತ್ತೊಂದು ಜಾಗ ಅಂದರೆ ಮಾವಿನ ತೋಪಿನಲ್ಲಿ ಆಡುತ್ತಿದ್ದೆವು, ಮಾವಿನ ತೋಪಿನಲ್ಲಿ ಗೋಲಿ ಮತ್ತು ಕೆಲವು ಸಲ ಹಣ ಇಟ್ಟು ಕೂಡ ಆಡುತ್ತಿದ್ದರು. ಹಣವಿಟ್ಟು ಆಡಿದ್ದು ಮನೆಯಲ್ಲಿ ಗೊತ್ತಾದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಿದ್ದರು ತಂದೆ ತಾಯಿಗಳು.

ಬೇವಿನ ಮರದ ಬಳಿ ಬಂದಾಗ ಐದಾರು ಹುಡುಗರು ಗೋಲಿ ಆಡುತ್ತಿದ್ದರು, ನಾವೂ ಎರಡು ಗೋಲಿ ತೊಗೊಂಡು ಆಟದಲ್ಲಿ ಸೇರಿದೆವು, ಆಡುತ್ತಿದ್ದದ್ದು ರಾಜಾ ರಾಣಿ,ಅದೇನು ಗೋಲಿ ಕಳೆದುಕೊಳ್ಳುವ ಆಟವಲ್ಲ ಕೇವಲ ಮನರಂಜನೆ. ಗೋಲಿ ಹಾಕಿ ಆಡಿ ಕಳೆದು ಕೊಳ್ಳುವ ಇಲ್ಲವೇ ಗೆಲ್ಲುವ ಬಾಂಬೆ ಆಟ, ಡೇರಾ ಆಟ, ಶಾದಿ ಆಟ, ಡಿಮ್ ಆಟ, ಕಿಲಾ ಆಟ ಇವು ಬೇರೆ. ಅರ‍್ದ ಗಂಟೆವರೆಗೆ ನೆಲದಲ್ಲಿ ಅಗಿದ ಕುಳಿಯ (‍ಬೋಕಾ/ಬೊದ್ದ) ಸುತ್ತಮುತ್ತಲಿನ ಮಣ್ಣನು ಮೈಕೈಗೆ ಮೆತ್ತಿಕೊಳ್ಳುತ್ತಾ, ಚೀರುತ್ತಾ, ಬೈಯುತ್ತಾ-ಬೈದುಕೊಳ್ಳುತ್ತಾ ರಾಜಾ ರಾಣಿ ಗೋಲಿ ಆಟ ಆಡಿದ ಮೇಲೆ ಎಲ್ಲರಿಗೂ ಬೇಸರವಾಯ್ತು. ನಮ್ಮಲ್ಲಿಯೇ ಸ್ವಲ್ಪ ದೊಡ್ಡ ವಯಸ್ಸಿನ ಹುಡುಗನೊಬ್ಬ “ಮಾವಿನ ತೋಪಿನ ಕೊನೆ ಗಿಡದ ಬಳಿ ಆಲೂಬಾತ್ ಮಾಡಿಕೊಂಡು ತಿನ್ನೋಣ,ಅದಕ್ಕೆ ಎಲ್ಲರೂ ಅವರವರ ಮನೆಯಿಂದ ಸ್ವಲ್ಪ ಸ್ವಲ್ಪ ಅಕ್ಕಿ, ಎಣ್ಣೆ, ಅರಿಶಿಣ, ಆಲೂಗಡ್ಡೆ, ಬೋಗುಣಿ, ಅನ್ನದ ಕೈ (ಸೌಟು) ಸಾಸಿವೆ ಜೀರಿಗೆ, ನೀರು ತರ‍್ಬೇಕ್!” ಅಂತ ಪರ‍್ಮಾನು ಹೊರಡಿಸಿದ. ಹಲವು ಹುಡುಗರು ಸಂತಸದಿಂದ ತಟ್ಟನೇ ಹೌದೆಂದರು ಕೆಲವರು ಸುಮ್ಮನಿದ್ದರು ಮೋನು “ನಾನ್ ಬರಲ್ಲ” ಅಂದ, ಇದು ಆ ದೊಡ್ಡ ಹುಡುಗನಿಗೆ ಸಿಟ್ಟು ತರಿಸಿತು.

ಮುಂದೇನಾಯಿತು ಎಂಬುದು ಮಂದಿನ ಬರಹದಲ್ಲಿ 🙂

(ಚಿತ್ರ ಸೆಲೆ: wikimedia.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.