ನೆರಳು – ಒಂದು ಅನಿಸಿಕೆ

– ಕೆ.ವಿ. ಶಶಿದರ

ನೆರಳು

ಮುಂಜಾನೆಯ ಸಮಯ. ಎಳೆಯ ಸೂರ‍್ಯ ಕಿರಣಗಳು ಮೂಡಿವೆ. ಮುಂಜಾನೆ ನಡಿಗೆಗಾಗಿ ಪಶ್ಚಿಮ ದಿಕ್ಕಿನತ್ತ ನೀವು ಹೋರಟಿರುತ್ತೀರಿ. ನಿಮ್ಮ ಮುಂದೆ ನಿಮ್ಮ ನೆರಳು ಹೋಗುತ್ತಿರುತ್ತೆ. ರಸ್ತೆಯಲ್ಲಿನ ಉಬ್ಬು ತಗ್ಗುಗಳನ್ನು ಏರಿ, ಇಳಿದು ಕೊಂಚವೂ ಬದಲಾಗದಂತೆ ಅದು ಸಾಗಿರುತ್ತೆ. ಇದರ ಬಗ್ಗೆ ನಿಮಗೆ ಕೊಂಚವೂ ಗಮನವಿರುವುದಿಲ್ಲ. ನಿಮ್ಮ ಮನದಲ್ಲಿನ ಯೋಚನೆಯಲ್ಲಿ ನೀವು ಮುಳುಗಿರುತ್ತೀರಿ. ಆದರೂ ನೆರಳು ಮಾತ್ರ ತನ್ನ ಕಾರ‍್ಯದಲ್ಲಿ ತಾನು ನಿಸ್ಪ್ರುಹವಾಗಿ ನಿರತವಾಗಿರುತ್ತೆ. ಯಾವುದಾದರೂ ದೊಡ್ಡ ಕಟ್ಟಡ, ಅತವಾ ಮರ ಅತವಾ ವಾಹನ ನಿಮ್ಮ ಮತ್ತು ಸೂರ‍್ಯನ ಕಿರಣಗಳ ನಡುವೆ ಅಡ್ಡ ಬಂದಾಗ ನೆರಳು ಬಚ್ಚಿಟ್ಟುಕೊಂಡು ಬಿಡುತ್ತೆ. ಅವುಗಳ ಬಗ್ಗೆ ಅದಕ್ಕೆ ಎಲ್ಲಿಲ್ಲದ ಬಯ, ಹೆದರಿಕೆ. ಅವೆಲ್ಲಾ ಸರಿದ ನಂತರ ನೆರಳು ಮತ್ತೆ ಹಾಜರು. ಇಶ್ಟೆಲ್ಲಾ ಬದಲಾವಣೆ ನಿಮ್ಮ ಕಣ್ಣ ಮುಂದೆ ಆಗುತ್ತಿದ್ದರೂ ಸಹ ನೀವು ನಿರ‍್ಲಿಪ್ತರಂತೆ, ನಿರ‍್ಬಾವನೆಯಿಂದ ಮುಂದುವರೆಯುತ್ತಿರುತ್ತೀರಿ.

ಎಂದಾದರೂ ಇದರ ಬಗ್ಗೆ ಚಿಂತಿಸಿದ್ದೀರಾ?? ಯಾರೂ ಚಿಂತಿಸಿರುವುದಿಲ್ಲ ಎಂಬುದು ನೂರಕ್ಕೆ ನೂರು ಸತ್ಯ. ಯಾಕೆಂದರೆ ದಿನಾ ಸಾಯುವವರಿಗೆ ಅಳುವವರು ಯಾರು? ಇದು ಸಹ ದಿನನಿತ್ಯದ ಆಗುಹೋಗುಗಳಲ್ಲಿ ಒಂದು. ಅತಿ ಸಾಮಾನ್ಯ. ಇದರಲ್ಲಿ ಯಾವುದೇ ವಿಶೇಶತೆ ಕಂಡಿತ ಇಲ್ಲ ಎನ್ನುವ ಬಾವನೆ ಎಲ್ಲರಲ್ಲೂ. ಇನ್ನು ಮಕ್ಕಳಿಗೂ ನೆರಳಿಗೂ ಅವಿನಾಬಾವ ಸಂಬಂದವಿದೆ. ನೆರಳನ್ನು ಕಂಡಾಗ ಮಕ್ಕಳಿಗೆ ಏನೋ ಒಂದು ರೀತಿಯ ರೋಮಾಂಚನ. ಬಹುಶಹ ಮಕ್ಕಳು ನೆರಳನ್ನು ಆಟವಾಡಿಸಲು ತಾವು ಅಡ್ಡಗಾಲು, ತೊಡರಗಾಲು ಹಾಕಿ ನಡೆದು ನೆರಳು ಸಹ ತನ್ನಂತೇ ನಡೆದಾಗ ಕುಶಿ ಪಡುವುದು ಹೌದು. ಕುಪ್ಪಳಿಸುವುದು, ಮೂತಿಯನ್ನು ಸೊಟ್ಟೆಗೆ ಮಾಡುವುದು, ಗೋಡೆಯ ಹಿಂದೆ ಅಡಗಿ ಕೂರುವುದು, ಕೈ ಕಾಲುಗಳನ್ನು ವಕ್ರವಾಗಿ ಆಡಿಸುವುದು, ಮುಂತಾದ ಮಂಗ ಚೇಶ್ಟೆ ಮಾಡುವುದನ್ನೂ ಕಂಡಿದ್ದೇನೆ. ಕೆಲವೊಮ್ಮೆ ನೆರಳನ್ನು ಹಿಡಿಯುವ ವ್ಯರ‍್ತ ಪ್ರಯತ್ನ ಸಹ ಮಾಡುವುದು ಉಂಟು. ಅದು ತಮ್ಮದೇ ನೆರಳು ಎಂದು ಅರಿಯದ ಮುಗ್ದರು.
ನೆರಳನ್ನು ಮನದಲ್ಲಿ ಕಲ್ಪಿಸಿಕೊಳ್ಳಿ. ಈಗ ಕೊಂಚ ಚಿಂತನೆ ಮಾಡಿ. ನೆರಳು ಎಂದರೇನು? ಎಂಬ ಬಗ್ಗೆ ಯೋಚಿಸಿ.

ನೆರಳು ಎಂದರೆ ನೆರಳು ಅಶ್ಟೆ. ಈ ಪದ ಎಶ್ಟು ಸರಳವಾಗಿ ಕಾಣುತ್ತದೋ ಅದರ ಅರ‍್ತ ಅಶ್ಟೆ ಕ್ಲಿಶ್ಟ ಕೂಡ. ಇದನ್ನು ವಿವರಿಸಬಹುದೇ ಹೊರತು, ಪರ‍್ಯಾಯ ಪದ ಹುಡುಕುವುದು ಸಾಹಸವೇ ಸೈ.
ಯಾವುದಾದರೂ ಗನ ವಸ್ತುವಿನ ಮೇಲೆ ಬೆಳಕಿನ ಕಿರಣ ಬಿದ್ದಲ್ಲಿ, ಕಿರಣಗಳು ಅದರಲ್ಲಿ ತೂರಿ ಹೋಗಲು ಸಾದ್ಯವಿಲ್ಲ. ಇದು ಪ್ರಕ್ರುತಿ ನಿಯಮ. ಏಕೆಂದರೆ ಬೆಳಕಿನ ಕಿರಣಗಳು ನೇರ ರೇಕೆಯಲ್ಲಿ ಹೋಗುತ್ತದೆ. ಅಂಕುಡೊಂಕಾಗಿ ಅಲ್ಲ. ಬೆಳಕು ಬರುವ ವಿರುದ್ದ ದಿಕ್ಕಿನಿಂದ ಗನ ವಸ್ತುವನ್ನು ಗಮನಿಸಿ. ಎಶ್ಟು ಬಾಗದಲ್ಲಿ ಬೆಳಕಿನ ಕಿರಣಗಳು ಹಾದು ಹೋಗಲು ಸಾದ್ಯವಿಲ್ಲವೋ ಅಶ್ಟು ಮಾತ್ರ ಕಪ್ಪಾಗಿರುತ್ತೆ. ಅದು ಸರ‍್ವವಿದಿತ. ನೆರಳಿನ ರೂಪದಲ್ಲಿ, ಬೆಳಕಿನ ಕಿರಣಗಳು ಹಾದು ಹೋಗುವ ದಿಕ್ಕಿನತ್ತ, ಕಾಲಿ ಜಾಗವಿರಲಿ ಆತವ ಯಾವುದೇ ವಸ್ತು ಇರಲಿ ಅದರ ಮೇಲೆ ಹರಡಿರುತ್ತೆ. ಉಳಿದೆಡೆ ಬೆಳಕಿನ ಕಿರಣಗಳು ಕಾಣುತ್ತದೆ. ಕಪ್ಪಾದ ಆಕಾರವೇ ಗನ ಪದಾರ‍್ತದ ಪಡಿಯಚ್ಚು. ಅದರ ಹಿಂದೆಯೇ ಹಬ್ಬಿರುತ್ತೆ. ಇದನ್ನೇ ಅಲ್ಲವೆ ನೆರಳು ಎಂದು ಗುರುತಿಸುವುದು. ರೂಪ ಒಂದೇ ಆದರೂ ಗಾತ್ರದಲ್ಲಿ ವ್ಯತ್ಯಾಸ ಇರುತ್ತದೆ. ಇದಕ್ಕೂ ಕಾರಣ ಇದೆ. ಇಲ್ಲಿ ಬೇಡ ಬಿಡಿ.

ನೆರಳೇ ಇಲ್ಲದಿದ್ದರೆ ಏನಾಗುತ್ತಿತ್ತು?

ನೆರಳು ಬೀಳಲು ಅವಶ್ಯವಾಗಿ ಬೇಕಿರುವುದು ಬೆಳಕಿನ ಕಿರಣ ಮತ್ತು ಗನ ಪದಾರ‍್ತ. ನೆರಳು ಇಲ್ಲವಾಗಬೇಕಾದರೆ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಈಡೇರಲೇಬೇಕು. ಗನವಸ್ತುಗಳ ಮೂಲಕ ಬೆಳಕಿನ ಕಿರಣಗಳು ಹಾದು ಹೋಗುವಂತಿರಬೇಕು, ಇಲ್ಲವೆ ಬೆಳಕು ವಕ್ರ ರೇಕೆಯಲ್ಲಿ ತನಗಿಶ್ಟ ಬಂದ ಕಡೆ, ಹಿಂದಕ್ಕೆ, ಮುಂದಕ್ಕೆ, ಎಡಕ್ಕೆ, ಬಲಕ್ಕೆ, ಮೇಲೆ, ಕೆಳಗೆ ಹೋಗುವಂತಿರಬೆಕು. ಮೊದಲು ಇತ್ತೀಚಿಗೆ ಸಂಬವಿಸಿದ ಗ್ರಹಣದ ವಿಚಾರವನ್ನೇ ಗಮನಿಸುವ. ಚಂದ್ರ ಗ್ರಹಣವಾಗಲಿ, ಸೂರ‍್ಯ ಗ್ರಹಣವಾಗಲಿ ಸಂಬವಿಸುವಲ್ಲಿ ನೆರಳಿನಲ್ಲಿ ಪಾತ್ರ ಬಹು ಮುಕ್ಯ. ಬೂಮಿಯ ನೆರಳು ಚಂದ್ರನ ಮೇಲೆ ಬಿದ್ದಲ್ಲಿ ಚಂದ್ರ ಗ್ರಹಣವಾಗುವುದು ಸರ‍್ವವಿದಿತ. ಇದರಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲ. ಬೂಮಿಯ ಮತ್ತು ಸೂರ‍್ಯನ ನಡುವೆ ಚಂದ್ರ ಬಂದಲ್ಲಿ ಸೂರ‍್ಯ ಗ್ರಹಣವಾಗುತ್ತದೆ. ಇಲ್ಲಿ ಚಂದ್ರನ ನೆರಳು ಬೂಮಿಯ ಬೀಳುತ್ತದೆ. ಅಂದಲ್ಲಿ ಚಂದ್ರ, ಸೂರ‍್ಯ ಮತ್ತು ಬೂಮಿಯ ನಡುವೆ ಬಂದಾಗ ಅದರ ನೆರಳು ಬೀಳುವ ಪ್ರದೇಶದಲ್ಲಿ ಪೂರ‍್ಣ ಅತವ ಬಾಗಶಹ ಸೂರ‍್ಯ ಕಾಣಲಾರ ಎನ್ನುವುದಂತೂ ಸತ್ಯ.

ಗನವಸ್ತುಗಳು ಪಾರದರ‍್ಶಕವಾದಲ್ಲಿ ಅದರಲ್ಲಿ ಬೆಳಕಿನ ಕಿರಣಗಳು ಹಾದು ಹೋಗುವ ಕಾರಣ ಅದರ ನೆರಳು ಕಾಣುವುದಿಲ್ಲ. ಇದು ಸಾದ್ಯವೇ? ಯೋಚಿಸಿ ನೋಡಿ. ಮರ, ಗಿಡ, ಮನೆ, ಮಟ, ಪ್ರಾಣಿ, ಮನುಶ್ಯ, ವಸ್ತ್ರ ಎಲ್ಲವೂ ಪಾರದರ‍್ಶಕವಾದಲ್ಲಿ ಏನಾಗಬಹುದು ಎಂದು. ಇದರಶ್ಟು ಅಸಹ್ಯ ಮತ್ತೊಂದು ಇಲ್ಲ. ಯಾಕೆ ಅಸಹ್ಯ ಎಂದನೆಂದರೆ ಇದಕ್ಕೆ ನಾವು ಒಗ್ಗಿಲ್ಲ. ಪ್ರಾಣಿಗಳಿಗೆ ವಸ್ತ್ರ ಇಲ್ಲವಾದರೂ ಅದು ಅಸಹ್ಯವೆನಿಸುವುದಿಲ್ಲ. ಆನೆಗೆ ಚಡ್ಡಿ ಹಾಕಿದರೆ ಎಲ್ಲರಿಗೂ ಅಚ್ಚರಿಯಾಗುತ್ತೆ. ಹಾಕಿದ ಚಡ್ಡಿ ಸಹ ಪಾರದರ‍್ಶಕವಾದರೆ ದೇವರೇಗತಿ.

ಬಿಡಿ. ಈಗ ಎರಡನೆಯದನ್ನು ಪರಿಶೀಲಿಸುವ. ಸೂರ‍್ಯನ ಕಿರಣವೇ ಆಗಲಿ, ಬೇರಾವುದೆ ಬೆಳಕಿನ ಕಿರಣವಾಗಲಿ ಚಲಿಸುವುದು ನೇರವಾಗಿ. ಯಾವುದಾದರೂ ಗನ ಪದಾರ‍್ತ ಅದಕ್ಕೆ ಅಡ್ಡವಾದರೆ ಅದೂ ಅಲ್ಲಿಗೆ ತನ್ನ ಪ್ರಯಾಣವನ್ನು ಮುಗಿಸುತ್ತದೆ. ಬೆಳಕು ವಕ್ರ ರೇಕೆಯಲ್ಲಿ ಚಲಿಸಿದರೆ ಆಗುವ ಅನಾಹುತಗಳನ್ನು ಅವಲೋಕಿಸುವ. ಮೊದಲು ನೆರಳು ನಾಶವಾಗುತ್ತೆ. ಮನೆ, ಮಟ, ಮರದಡಿ ಎಲ್ಲೇ ಹೋಗಿ ನೆರಳು ಇರಲು ಸಾದ್ಯವೇ ಇಲ್ಲದ ಪರಿಸ್ತಿತಿ ನಿರ‍್ಮಾಣವಾಗುತ್ತೆ. ಕಾರಲ್ಲಾಗಲಿ, ಬಸ್ಸಲ್ಲಾಗಲಿ, ಮನೆಯಲ್ಲಾಗಲಿ, ಮರದಡಿಯಲ್ಲಾಗಲಿ ನೆರಳು ಇಲ್ಲದಿದ್ದಲ್ಲಿ ಜೀವ ಸಂಕುಲದ ಗತಿ ಏನು? ಸ್ವಲ್ಪ ಪರಾಮರ‍್ಶೆ ಮಾಡಿ. ಕಾದ ಕೊಪ್ಪರಿಗೆ ಎಣ್ಣೆಯಲ್ಲಿ ಹಾಕಿದಂತಾಗುತ್ತೆ. ನೆನಸಿಕೊಂಡರೆ ಮೈ ಜುಂ ಅನ್ನುತ್ತೆ. ನರಕ ಕಣ್ಣ ಮುಂದೆ ಬರುತ್ತೆ. ಅಬ್ಬಬ್ಬಾ… ಅದರಶ್ಟು ಗನ ಗೋರ ಶಿಕ್ಶೆ ಮತ್ತಾವುದು ಇಲ್ಲ. ನೆರಳು ಹಾಗೂ ಪ್ರಕ್ರುತಿಯಲ್ಲಿನ ಇನ್ನೂ ಅನೇಕ ವಿಶೇಶತೆಗಳಿಗೂ ತನ್ನದೇ ಆದ ಪ್ರಾಮುಕ್ಯತೆ, ಮಹತ್ವ, ವೈಶಿಶ್ಟ್ಯ, ಬೆಲೆ ಇದೆ. ಅದಕ್ಕೆ ವಿರುದ್ದವಾಗಿ ಹೋದಾಗ, ಇಂದಿನ ಪೀಳಿಗೆ ಹಾಗೂ ಮುಂದಿನ ಹಲವಾರು ಪೀಳಿಗೆಗಳು, ಅವರುಗಳು ಮಾಡದ ತಪ್ಪಿಗೆ, ದಂಡ ತೆರಬೇಕಾಗುವುದು ಅನಿವಾರ‍್ಯ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: