ಸಣ್ಣಕತೆ – ವಲಸೆ
– ವೆಂಕಟೇಶ ಚಾಗಿ.
ಬರಬಂದೈತೆ ಬರಬಂದೈತೆ
ಬರಸಿಡಿಲು ಬಡಿದಂತೆ
ಬಿಸಿಲುಕ್ಕಿ ಹರಿದಂತೆ
ಬರಬಂದೈತೆ ಬರಬಂದೈತೆ…||
ಹೀಗೆ ಸುಂದರವಾಗಿ ಹಾಡುತ್ತಾ ಇದ್ದ ಕಿರು ದ್ವನಿಯ ಸ್ವರ ಹಾಗೆಯೇ ಕ್ಶೀಣವಾಗತೊಡಗಿತು. ಆಟವಾಡುತ್ತಿದ್ದ ಕಂದನ ಒಡಲಿನ ಆಕ್ರಂದನ ಹಸಿವಿನ ಕಡೆಗೆ ತಿರುಗಿತ್ತು. ಕಂದ ಮರಿಯಾ ತನ್ನ ತಾಯಿ ಮೌಸಿನ್ ಕಡೆ ತಿರುಗಿ “ಅಮ್ಮ, ಸಮಯವಾಗಿದೆ, ನನಗೀಗ ಹಸಿವಾಗಿದೆ. ಊಟ ಕೊಡಮ್ಮಾ . ನೀನೇಕೋ ಇತ್ತೀಚಿಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ” ಎಂದು ತನ್ನ ಅಳಲು ತೋಡಿಕೊಂಡಳು. ಅದಕ್ಕೆ ಮೌಸಿನ್ “ಮರಿಯಾ, ನಿಂಗೆ ಹೇಳಿಲ್ವಾ ನಾನು, ಈಗ ಬರ ಬಂದಿದೆ. ನಿನ್ನ ತಾತ ರಾಜನ ಬಳಿ ಸಹಾಯ ಕೇಳಲು ಹೋಗಿದ್ದಾರೆ. ರಾಜ ಸಹಾಯ ಮಾಡುತ್ತಾರೆ. ಆಗ ನೀನು ತ್ರುಪ್ತಿಯಾಗುವಶ್ಟು ಊಟಮಾಡುವಂತೆ. ಈಗ ಗಂಜಿ ಇದೆ, ಕುಡಿಯುವಂತೆ ಬಾ” ಎಂದು ಮೌಸಿನ್ ಮರಿಯಾಳನ್ನು ಮನೆಯೊಳಗೆ ಕರೆದುಕೊಂಡು ಹೋಗುತ್ತಾಳೆ.
ರಾಜನ ಅರಮನೆ. ಅರಮನೆಯ ಎದುರು ಅನೇಕ ಜನರ ಗುಂಪೊಂದು ನೆರೆದಿದೆ. ಎಲ್ಲರೂ ಮಹಾರಾಜ ಸೆಲಿತ್ ರವರಿಗೆ ಜಯವಾಗಲಿ ಎಂಬ ಗೋಶಣೆ ಕೂಗುತ್ತಿದ್ದಾರೆ. ಬರದಿಂದ ತತ್ತರಿಸಿ ಹಸಿವಿನಿಂದ ಕಂಗಾಲಾದ ಪ್ರಜೆಗಳು ರಾಜನ ಸಹಾಯಕ್ಕಾಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಬಟರು ಹಿಂದಕ್ಕೆ ತಳ್ಳುತ್ತಿದ್ದ ದ್ರುಶ್ಯ ಕರಳು ಹಿಂಡುವಂತಿತ್ತು. ಎಲ್ಲ ಪ್ರಜೆಗಳ ಕೂಗಿನೊಂದಿಗೆ ಬೇಡಿಕೆಯನ್ನು ಹೊತ್ತು ತಾತ ಪಾವೆಲ್ ರಾಜನನ್ನು ಕಾಣಲು ಬಟರಿಗೆ ಮನವಿ ಮಾಡಿಕೊಳ್ಳುತ್ತಾನೆ. ಪಾವೆಲ್ ನ ಮನವಿಯನ್ನು ಬಟರು ರಾಜನಿಗೆ ಸಲ್ಲಿಸುತ್ತಾರೆ. ರಾಜ ಸೆಲಿತ್ ಮಹಾ ಲೋಬಿ. ಕರುಣೆಯಿಲ್ಲದ ಕ್ರೂರಿ. ಆದರೂ ಪಾವೆಲ್ ನನ್ನು ಒಳಬರಲು ಹೇಳಿ ಕಳುಹಿಸುತ್ತಾನೆ. ಒಡಲೊಳಗೆ ಹಸಿವಿನ ಜ್ವಾಲಾಗ್ನಿಯೊಂದಿಗೆ ಅರಮನೆಯ ಸೌಂದರ್ಯ ಸವಿಯುತ್ತಾ ಒಳ ಪ್ರವೇಶಿಸಿ ರಾಜ ಸೆಲಿತ್ ಗೆ ಜೈಕಾರ ಕೂಗುತ್ತಾನೆ.
ರಾಜನ ಬಳಿ ಪ್ರಸ್ತುತ ಇರುವ ಜನರ ಜೀವನದ ಸ್ತಿತಿಗತಿಗಳ ಬಗ್ಗೆ ವಿವರಿಸಿ ಸಹಾಯಕ್ಕಾಗಿ ಅಂಗಲಾಚಿಕೊಳ್ಳುತ್ತಾನೆ. “ಯುದ್ದದಲ್ಲಿ ನನ್ನ ಮಗ ರಾಬರ್ಟ್ ವೀರಾವೇಶದಿಂದ ಹೋರಾಡಿ ವೀರಮರಣವನ್ನಪ್ಪಿದ್ದಾನೆ. ಈಗ ಮನೆಯಲ್ಲಿ ದುಡಿಯುವ ಕೈಗಳಿಲ್ಲ. ಸೊಸೆ ಈಗ ತುಂಬು ಗರ್ಬಿಣಿ. ಮೊಮ್ಮಗಳು ಆಟವಾಡುವ ಕಂದಮ್ಮ. ಬರದೊಳಗೆ ಸಿಕ್ಕಿ ನರಳುತ್ತಿದ್ದಾಳೆ. ನನಗಂತೂ ವಯಸ್ಸಾಯ್ತು. ಕೆಲಸ ಮಾಡಲು ರಟ್ಟೆಯಲ್ಲಿ ಶಕ್ತಿಯಿಲ್ಲ. ನನ್ನಂತೆ ಹಲವಾರು ಜನರು ಬರದಿಂದ ನರಳುತ್ತಿದ್ದಾರೆ. ದಯವಿಟ್ಟು ಕಾಪಾಡಿ ಮಹಾಪ್ರಬು” ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಆಗ ರಾಜ ಸೆಲಿತ್ ತನ್ನ ಮಾತಿನಿಂದ ಹೀಯಾಳಿಸುತ್ತಾ, “ಇದು ದರ್ಮಚತ್ರವಲ್ಲ. ಬರ ನನಗೂ ಇದೆ. ಅರಮನೆಯ ಕರ್ಚು ತುಂಬಾ ಇದೆ. ನಿಮ್ಮ ಕಶ್ಟ ನಿಮಗೆ, ನಮ್ಮ ಕಶ್ಟ ನಮಗೆ. ಹೋಗು ಹೊರಗೆ” ಎಂದು ಹೊರದೂಡುತ್ತಾನೆ. ತಾತ ಅಳುತ್ತಲೇ ಹೊರ ಬಂದು ತನ್ನ ಜನರಿಗೆ ರಾಜನ ಮಾತುಗಳನ್ನು ಪುನರುಚ್ಚರಿಸುತ್ತಾನೆ. ಎಲ್ಲರೂ ನಿರಾಸೆಯಿಂದ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ.
“ಅಮ್ಮಾ… ತಾತ ಬರ್ತಾ ಇದ್ದಾರೆ” ಎನ್ನುತ್ತಾ ಮರಿಯಾ ತನ್ನ ತಾಯಿಯನ್ನು ಕರೆಯುತ್ತಾಳೆ. ತಾಯಿ ಮತ್ತು ಮಗಳಲ್ಲಿ ಯಾವುದೋ ಒಂದು ಆಶಾಬಾವ, ಮಂದಹಾಸ ಮುಕದಲ್ಲಿ ಕಂಡುಬರುತ್ತದೆ. ಮಗು ಮರಿಯಾ ಅರೆಹೊಟ್ಟೆಯಲಿ ತಾತ ಬರುವುದನ್ನು ಕುಣಿಯುತ್ತಾ ಸಂಬ್ರಮಿಸುತ್ತಾಳೆ. ತಾತ ಹತ್ತಿರ ಬರುತ್ತಿದ್ದಂತೆ ಆ ಸಂಬ್ರಮ ಕರಗುತ್ತದೆ. ತಾತ ಪಾವೆಲ್ ಎಲ್ಲವನ್ನೂ ವಿವರಿಸುತ್ತಾನೆ. “ರಾಜನಿಗೆ ನಮ್ಮ ಕಶ್ಟ ಕಾಣುತ್ತಿಲ್ಲ. ನಮ್ಮ ಕಶ್ಟವನ್ನು ಕೇಳುವಂತಹ ರಾಜನನ್ನು ಹುಡುಕಬೇಕಾಗಿದೆ.” ಎನ್ನುತ್ತಾ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾನೆ. ಸೂರ್ಯ ತನ್ನ ತಾಯೊಡಲನ್ನು ಸೇರುವ ಸಮಯ . ತುಂಬು ಗರ್ಬಿಣಿ ಮೌಸಿನ್ ತನ್ನ ಗಂಡ ಉಡುಗೊರೆಯಾಗಿ ಕೊಟ್ಟಿದ್ದ ಕುದುರೆಯನ್ನು ಏರಿ ಮಗಳು ಮರಿಯಾಳನ್ನು ಕರೆದಾಗ ಮರಿಯಾ, “ಅಮ್ಮಾ, ನಾನು ನಡೆದುಕೊಂಡು ಬರುತ್ತೇನೆ. ನಿನ್ನ ಹೊಟ್ಟೆಯಲ್ಲಿರುವ ನನ್ನ ತಮ್ಮ ಸವಾರಿ ಮಾಡಲಿ” ಎಂದು ಅಮ್ಮನ ಹೊಟ್ಟೆಯನ್ನು ಮುಟ್ಟಿ ಹೇಳುತ್ತಾಳೆ. ಹೊಸ ರಾಜನನ್ನು ಹುಡುಕಿ ಹೊರಟ ಆ ಕುಟುಂಬ ಸೂರ್ಯನೊಂದಿಗೆ ದಿಗಂತದಲ್ಲಿ ಮರೆಯಾಯಿತು.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು