“ಮಾತೇ ಮುತ್ತು, ಮಾತೇ ಮ್ರುತ್ಯು”

ಅಶೋಕ ಪ. ಹೊನಕೇರಿ.

ಮಾತು, speech

“ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ನೀವೆಲ್ಲ ಕೇಳಿದ್ದೀರಿ. ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು‌. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು ಕೆಲವರ ಮನಸ್ಸಿಗೆ ನೋವು ತರಬಹುದು. ಕೆಲವರಿಗೆ ಕಿರಿಕಿರಿ ಉಂಟುಮಾಡಬಹುದು‌. ನಾವಾಡುವ ಮಾತು ಎದುರಿಗಿರುವ ವ್ಯಕ್ತಿಗೆ ಕೋಪ ತರಿಸಿ ಅತ ನಮ್ಮ ಮೇಲೆ ದಾಳಿಗೆ ಇಳಿಯಬಹುದು. ಕೆಲವೊಮ್ಮೆ ಸಿಟ್ಟು ಅತಿರೇಕಕ್ಕೆ ಹೋಗಿ ಹಿಡಿತ ತಪ್ಪಿದರೆ ಇಬ್ಬರ ಮಾರಾಮಾರಿಯಲ್ಲಿ ಸಾವು ಕೂಡ ಸಂಬವಿಸಬಹುದು! ಆದ್ದರಿಂದ ನಾವಾಡುವ ಮಾತಿನ ಮೇಲೆ ನಮಗೆ ನಿಗಾ ಇರುವುದು ಒಳ್ಳೆಯದು.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ಎಂಬ ಶರಣರ ವಚನದಲ್ಲಿ ದಿವ್ಯ ಸಂದೇಶ ಅಡಗಿದೆ. ನಮ್ಮ ನುಡಿಗಳು ಸುಂದರವಾಗಿ, ಸರಳವಾಗಿದ್ದು ಮತ್ತೊಬ್ಬರ ಮನನೋಯಿಸದಂತಿರಬೇಕು.

ಚುನಾವಣೆ ಬಂತೆಂದರೆ ಸಾಕು, ರಾಜಕೀಯ ಮುಕಂಡರ ಪ್ರಚಾರ ಬಾಶಣ ಶುರುವಾಗುವುದು. ಆ ಪಕ್ಶದ ಹುಳುಕನ್ನು ಇವರು ತೆರೆದಿಡುವುದು, ಈ ಪಕ್ಶದ ಹುಳುಕನ್ನು ಅವರು ಎತ್ತಾಡುವುದು – ಹೀಗೆ ವೈಯುಕ್ತಿಕ ಟೀಕೆಗಳಿಗಿಳಿದ ರಾಜಕೀಯ ನಾಯಕರು ಜನಸಾಮಾನ್ಯರಿಗೆ ರೇಜಿಗೆ ಹಿಡಿಸುವಂತೆ ಮಾಡುವರು. ಹೆಚ್ಚಿನ ಸನ್ನಿವೇಶಗಳಲ್ಲಿ, ಅವರಾಡುವ ಮಾತುಗಳಲ್ಲಿ ಯಾವುದೇ ಮೌಲ್ಯಗಳಾಗಲಿ, ಸತ್ವವಾಗಲಿ ಇಲ್ಲದಿರುವುದು ಎದ್ದುಕಾಣುವುದು. ಪ್ರಜೆಗಳನ್ನು ಪ್ರತಿನಿದಿಸುವ ಕೆಲವು ನಾಯಕರಿಗೆ ತಮ್ಮ ಮಾತಿನ ಮೇಲೆ ನಿಗಾ ಇಲ್ಲದಾದರೆ, ಅವರು ದೇಶ ಕಟ್ಟುವ ಕೆಲಸ ಹೇಗೆ ಮಾಡಿಯಾರು?

ಕೆಲವು ರಾಜಕೀಯ ನಾಯಕರ ಬಾಶಣಗಳು ಈಗಲೂ ಪ್ರಸ್ತುತ. ಅವರ ಬಾಶಣಗಳಲ್ಲಿ ಮೌಲ್ಯವಿರುತ್ತಿತ್ತು, ಬಾಶೆಯ ಮೇಲೆ ಹಿಡಿತ ಇರುತ್ತಿತ್ತು, ಮಾತುಗಳು ವಸ್ತುನಿಶ್ಟವಾಗಿರುತ್ತಿದ್ದವು, ಅವರ ಬಾಶಣ ಶೈಲಿ ಅವರು ಮಾತನಾಡುವ ರೀತಿ ಕೇಳುಗರಿಗೆ ಚಂದವೆನಿಸಿ ಮತ್ತೆ ಮತ್ತೆ ಕೇಳಬೇಕು ಎನಿಸುತ್ತಿರುತ್ತದೆ.

ಏನೇ ಆಗಲಿ ಮನುಶ್ಯ ಮನುಶ್ಯರನ್ನು ಬೆಸೆಯುವ ಕೊಂಡಿಯೇ ಸಂವಹನ ಕ್ರಿಯೆ. ನಮ್ಮ ಬೆಸುಗೆಗಳು ನಂಬಿಕೆಯಿಂದ ನೂರಾರು ವರುಶ ಉಳಿಯಬೇಕಾದರೆ ನಮ್ಮ ಮಾತುಗಳ ಮೇಲೆ ಹಿಡಿತವಿಟ್ಟುಕೊಂಡು ಅಳೆದು ತೂಗಿ ಮಾತನಾಡುವುದು ಒಳಿತು. ಏಕೆಂದರೆ “ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು”. ಹಾಗಾಗಿ ಮಾತು ಸುಂದರವಾಗಿರಲಿ, ಕೇಳುವವರ ಕಿವಿಗೆ ಇಂಪಾಗಿರಲಿ, ಆಡುವ ಪ್ರತಿಯೊಂದು ಮಾತು ಮೌಲ್ಯಯುತವಾಗಿರಲಿ. ಆಗ ಮನುಶ್ಯರ ನಡುವಿನ ನಂಟು ಹೆಚ್ಚು ಕಾಲ ಗಟ್ಟಿಯಾಗಿ, ಮದುರವಾಗಿ ಇರುತ್ತದೆ.

( ಚಿತ್ರ ಸೆಲೆ : littletechgirl.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: