ತಾಳಿಸಿದ ಕರಿ ಹಾಗಲಕಾಯಿ ಪಲ್ಯ

– ಮಾರಿಸನ್ ಮನೋಹರ್.

hagalakayi, bitter gourd, ಹಾಗಲಕಾಯಿ ಪಲ್ಯ

ಹಾಗಲಕಾಯಿ ಕಹಿ ಮೈಯ್ಯೊಳಿತಿಗೆ ತುಂಬ ಒಳ್ಳೆಯದು. ಇದರ ಪಲ್ಯ ಕರ‍್ನಾಟಕದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ತರಹ ಮಾಡುತ್ತಾರೆ, ಇದರ ಹುಳಿ ಕೂಡ ಮಾಡುತ್ತಾರೆ‌. ಈಗ ಹೇಳುತ್ತಿರುವುದು ತಾಳಿಸಿದ ಕರಿಹಾಗಲ ಪಲ್ಯ. ಬಿಳಿ ಹಾಗಲ ಕಾಯಿಗೂ ಕರಿ ಹಾಗಲ‌ ಕಾಯಿಗೂ ಅಂತಹ ಬೇರ‍್ಮೆ ಏನೂ ಇಲ್ಲ.

ಬೇಕಾಗುವ ಸಾಮಾನುಗಳು

  • ಹಾಗಲಕಾಯಿ ½ ಕಿಲೋ
  • ಈರುಳ್ಳಿ – ½
  • ಎಣ್ಣೆ – 100 ಗ್ರಾಂ
  • ಎಸಳು – 5 ಬೆಳ್ಳುಳ್ಳಿ
  • ಶುಂಟಿ-ಬೆಳ್ಳುಳ್ಳಿ ಪೇಸ್ಟ್ – ½ ಟೀಸ್ಪೂನ್
  • ಅರಿಶಿಣ ಪುಡಿ – ¼ ಟೀಸ್ಪೂನ್
  • ಹಸಿ ಮೆಣಸಿನಕಾಯಿ – 4 (ಮೀಡಿಯಂ ಕಾರದ್ದು)
  • ಸಕ್ಕರೆ – ½ ಟೀಸ್ಪೂನ್
  • ಉಪ್ಪು – ರುಚಿಗೆ ತಕ್ಕಶ್ಟು

ಬೇಕಾದರೆ ಕರಿಬೇವು, ಕೊತ್ತಂಬರಿ, ಗರಂ ಮಸಾಲೆ ಪುಡಿ, ಒಣಕೊಬ್ಬರಿ ಪುಡಿ ಇಲ್ಲವೇ ಹುರಿದ ಎಳ್ಳಿನ ಪುಡಿ ಇಲ್ಲವೇ ಹುರಿದ ಶೇಂಗಾ ಪುಡಿ ಬಳಸಿಕೊಳ್ಳಬಹುದು.

ಮಾಡುವ ಬಗೆ

ಹಿಂದಿನ ದಿನ ಇರುಳು ಹಾಗಲಕಾಯಿಯನ್ನು ಗಾಲಿ ಗಾಲಿಗಳಾಗಿ ಈಳಿಗೆಮಣೆಯಿಂದ ಇಲ್ಲವೇ ಚಾಕುವಿನಿಂದ ಕತ್ತರಿಸಿ ಒಂದು ಬೋಗುಣಿಯಲ್ಲಿ ಹಾಕಿಕೊಳ್ಳಬೇಕು.ನಡುವೆ ಬೀಜ ಇರುತ್ತವೆ ಅದನ್ನು ತೆಗೆಯುವುದನ್ನು ಮರೆಯಬೇಡಿ. ಬೋಗುಣಿಯಲ್ಲಿ ಹಾಗಲಕಾಯಿ ಮುಳುಗುವಶ್ಟು ನೀರು ಮತ್ತು ಒಂದು ಹಿಡಿ ಉಪ್ಪನ್ನು ಹಾಕಿ ಕಲಕಿ ಇರುಳೆಲ್ಲಾ ಇಡಬೇಕು. ಇದರಿಂದ ಹಾಗಲಕಾಯಿ ಕಹಿಯು ಕಡಿಮೆಯಾಗುತ್ತದೆ. ಕಹಿ ಇರಲಿ ಅನ್ನುವವರು ಇದನ್ನೆಲ್ಲಾ ಮಾಡಬೇಕಾಗಿಲ್ಲ.

ಮುಂಜಾನೆ ಉಪ್ಪಿನ ನೀರನ್ನು ಬಸಿದು ಹಾಗಲಕಾಯಿಗಳನ್ನು ತೆಗೆದಿಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಉಪ್ಪು ಒರಳಲ್ಲಿ ಹಾಕಿ ಕುಟ್ಟಿ ಇಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಸಾಸಿವೆ ಜೀರಿಗೆ ಸಿಡಿಸಿ. ಆಮೇಲೆ ಕೊಯ್ದ ಈರುಳ್ಳಿ ಒಗ್ಗರಣೆಗೆ ಹಾಕಿ. ಈರುಳ್ಳಿ ಬಂಗಾರ ಕಂದು ಬಣ್ಣ ಬಂದ ಮೇಲೆ ಕುಟ್ಟಿದ ಹಸಿ ಕಾರ ಹಾಕಬೇಕು.ಇದರಿಂದ ಗಮ್ ಅಂತ ಸುವಾಸನೆ ಬರುತ್ತದೆ ಇದನ್ನು ಎಣ್ಣೆಯಲ್ಲಿ ಎರಡು ಮೂರು ನಿಮಿಶ ಬಾಡಿಸಬೇಕು. ಈಗ ಉಪ್ಪು ನೀರು ಬಸಿದು ಇಟ್ಟುಕೊಂಡ ಹಾಗಲಕಾಯಿಯನ್ನು ಎಣ್ಣೆಗೆ ಹಾಕಬೇಕು. ಗ್ಯಾಸಿನ ಉರಿಯು ಹೆಚ್ಚಿಗೆ ಇಟ್ಟುಕೊಂಡು. ಗ್ಯಾಸಿನ ಉರಿ ಕಡಿಮೆ ಇದ್ದರೆ ಹಾಗಲಕಾಯಿ ಕರಿಯುವುದಿಲ್ಲ. ಬೇಯುತ್ತವೆ ಮತ್ತು ಮೆತ್ತಗೆ ಆಗಿಬಿಡುತ್ತವೆ. ಎಣ್ಣೆಯಲ್ಲಿಯೇ ಹತ್ತು ನಿಮಿಶ ತಾಳಿಸಬೇಕು, ಹೀಗೆ ಮಾಡುವಾಗ ಹಾಗಲಕಾಯಿ ಚಿಪ್ಸ್ ತರಹ ಹುರಿಯುತ್ತದೆ.

ಈ ಕೊನೆ ಹಂತದಲ್ಲಿ ಉಪ್ಪು, ಅರಿಶಿಣ, ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸಕ್ಕರೆ ಸೇರಿಸಿ ಇನ್ನೆರಡು ನಿಮಿಶ ತಾಳಿಸಿ. ಸಕ್ಕರೆಯು ಬಾಣಲೆಯ ಬಿಸಿಗೆ ಕರಗುತ್ತದೆ ಮತ್ತು ಹಾಗಲಕಾಯಿಗೆ ಒಳ್ಳೇ ರುಚಿ ಕೊಡುತ್ತದೆ. ಕೊನೆಗೆ ಬೇಕಾದರೆ ಕೊತ್ತಂಬರಿ, ಕರಿಬೇವು, ಒಣ ಕೊಬ್ಬರಿ ಪುಡಿ ಕೂಡ ಮೇಲಿಂದ ಹಾಕಿಕೊಳ್ಳಬಹುದು. ಗರಂ ಮಸಾಲೆ ಕೂಡ ಹಾಕಬಹದು. ಈ ತಾಳಿಸಿದ ಸಿಹಿ ಕಹಿ ಹಾಗಲಕಾಯಿ ಪಲ್ಯ ರೊಟ್ಟಿ , ಚಪಾತಿ ಜೊತೆ ತುಂಬಾ ಚೆನ್ನಾಗಿರುತ್ತದೆ.

(ವಿ.ಸೂ: ಯಾವ ಹಂತದಲ್ಲೂ ನೀರು ಹಾಕಬಾರದು. ಉಪ್ಪನ್ನು ಕೊನೆಯ ಹಂತದಲ್ಲಿ ಹಾಕಬೇಕು. ಮೊದಲೇ ಉಪ್ಪು ಹಾಕಿದರೆ ಹಾಗಲಕಾಯಿ ನೀರು ಬಿಟ್ಟು ಬೇಯುತ್ತವೆ ಮತ್ತು ಪ್ರೈ ತರಹ ಆಗುವದಿಲ್ಲ. ಅಲ್ಲದೇ ಹಾಗಲಕಾಯಿ ತುಂಡು ತುಂಡಾಗುತ್ತವೆ, ಗಾಲಿ ಗಾಲಿಗಳ ಆಕಾರದಲ್ಲಿ ಇರುವುದಿಲ್ಲ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: