ಕವಿತೆ: ನಡೆ ಮನವೇ

– ಅಶೋಕ ಪ. ಹೊನಕೇರಿ.

ಮನಸು, Mind

ಮನವೊಪ್ಪುವ ಬದುಕು
ನಿಡುಸುಯ್ವ ತಂಗಾಳಿಯ
ನವಿರಾದ ಒನಪು
ನೈತಿಕತೆಯ ನೇರ ಹೆಜ್ಜೆ
ಹಸಿರಾದ ಮೈದಾನದಲಿ
ಹಗುರಾಗಿ ತೇಲುವ ಅಜ್ಜಿಯ
ಕೂದಲಂತೆ ಮನವೆಲ್ಲ
ಕಚಗುಳಿಯ ತನನನ

ಬಿಸಿಸುಯ್ವ ಬೇಗೆಯ
ಗಾಳಿಗೆ ಹಿತವಾದ ನೆಳಲಾಗಿ
ದಾರಿಹೋಕರ ಕಾಯ್ದ ನೆತ್ತಿಗೆ
ಬೀಸಣಿಕೆಯಾಗಿ ಅವರಿಂದ
ನಿತ್ಯ ನೆನವರಿಕೆಯ
ಸಮ್ಮಾನದಂತೆ ನಿನ್ನೀ‌
ತಾತ ನೆಟ್ಟು ಬೆಳೆಸಿದ ಮರ
ಆಗು ನೀ ಪರೋಪಕಾರಿ

ಬದುಕೆನ್ನುವುದು ಸಾವಿರ
ವರುಶದ ಪಯಣವೇ…?
ನಡೆ ನೀನು ತಾತನ ಹೆಜ್ಜೆಯಲಿ
ಹೆಜ್ಜೆಯಾಗಿ
ಪಡೆ ನಿತ್ಯ ಪರರ ನೆನವರಿಕೆಯ
ಸಮ್ಮಾನ ನಿನ್ನ ತಾತನ
ನಿಶ್ಕಾಮ ಕರ‍್ಮದಂತೆ

ನೀನಾಗು ಜನಹಿತಕಾರಿ
ಏಕೆಂದರೆ ಗೋರಿಗೆ
ಲಗೋರಿಯ ಚೆಂಡಿನಶ್ಟೆ ದೂರ
ನಾಳೆ ಎಂಬುದು ನನ್ನದಲ್ಲ
ಇಂದು ಎಂಬುದು ನಮ್ಮದೇ ಎಲ್ಲ
ಪರರ ಬದುಕಿನಲಿ ನಗೆ
ತರಲು ನೀನಿಡುವ
ಹೆಜ್ಜೆ ನೂಪುರದ ಸದ್ದಿಲ್ಲದೆ

ಬರಿಗಾಲ ನಿರ‍್ಮಲ ನಿಶ್ಶಬ್ದ
ಹೆಜ್ಜೆಯಾಗಲಿ ನೀನಿಟ್ಟ
ಬಲಗಾಲ ಹೆಜ್ಜೆ ಎಡಗಾಲ
ಪಾದಕ್ಕೆ ಅರಿಯದಿರಲಿ…!?
ನಡೆ ಮನವೇ, ನಡೆ ಮನವೇ..
ಸಮಯ ಎಂಬುದು ಸಣ್ಣದಿದೆ
ಸವೆಸಬೇಕಾದ ದೂರ ಬಹಳವಿದೆ

ನಿತ್ಯ ನೊಂದವರ ಹುಡುಕಿ
ಕಣ್ಣೀರ ಒರೆಸಿ ಅವರ ಹ್ರುದಯದಲಿ
ಹಸಿರಾಗಿ ಬೆಳೆದು ನಡೆಯುತ್ತಿರು
ಮುಂದೆ… ಏಕೆಂದರೇ ಮುಗಿವ
ಬದುಕಿಗೆ, ಗೋರಿಯೆಡೆಗಿನ ದೂರ
ಲಗೋರಿಯ ಚೆಂಡಿನಶ್ಟೆ ದೂರ
ನಿಲ್ಲದ ನಡೆಗೆ ನೆನೆವರಿಕೆಯಿರಲಿ
ಪರೋಪಕಾರಂ ಇದಂ ಶರೀರಂ
ಪರೋಪಕಾರಂ ಇದಂ ಶರೀರಂ

( ಚಿತ್ರಸೆಲೆ  : innovationleadershipforum.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kiran G says:

    ವ್ಹಾ ವ್ಹಾ ತುಂಬಾ ಚೆನ್ನಾಗಿದೆ ಕವನ

ಅನಿಸಿಕೆ ಬರೆಯಿರಿ:

Enable Notifications OK No thanks