ಗೆಳೆಯನೊಂದಿಗಿನ ಪಟ್ಟಾಂಗ

– ಯಶವಂತ. ಚ.

Friends, ಗೆಳೆಯರುನನ್ನ ಹತ್ತಿರದ ಗೆಳೆಯ ಬಾಬ “ಲೋ, ಈಗ ಆಗಿರೋ ಡೆವಲಪ್ಮೆಂಟು ನಲ್ವತ್ತಯ್ದು ವರ‍್ಶುದ್ ಹಿಂದೆ ಆಗಿದ್ದಿದ್ರೆ ಹೆಂಗ್ ಇರ‍್ತಿತ್ತು?” ಅಂದ. ಇದೇನು ನನಗೆ ಹೊಸತಲ್ಲ; ಇಬ್ಬರಿಗೂ ಏನೂ ಕೆಲಸವಿಲ್ಲದಾಗ ಈ ರೀತಿ ಹರಟುತ್ತಾ ಏನೇನೋ ಸಂಗತಿಗಳನ್ನು ಕೆದಕುತ್ತಿರುತ್ತೇವೆ. ಈ ತರಹ ಹೆಚ್ಚು ಸ್ರುಜನಾತ್ಮಕ, ಪ್ರಯೋಗಾತ್ಮಕ ಸಂಗತಿಗಳನ್ನ ಹೇಳುವುದು ಎನ್ನುವುದಕ್ಕಿಂತ ಚರ‍್ಚಿಸುವುದು ಅವನೇ. ನಾನು ಮತ್ತು ಅವನು ಸುಮಾರು 6 ವರುಶಗಳಿಂದ ಒಟ್ಟಿಗೇ ಕಲಿಯುತ್ತಿದ್ದೇವೆ ಈ ವೇಳೆಯಲ್ಲಿ ಏನೇನೋ ಹುಚ್ಚು ಹೊಳಹುಗಳನ್ನು ತಂದು ನನ್ನ ಮೇಲೆ ಸುರಿದು, ತಲೆ ಕೆಡಿಸದಿದ್ದರೆ ಅವನಿಗೆ ಸಮಾದಾನವಿಲ್ಲ.ಆದರೂ ಅವನು ನಾ ಕಂಡಿರುವಂತ ಸ್ರುಜನಾತ್ಮಕ ಉಸುರಿ.

ಈಗ ಚರ‍್ಚೆಗೆ ಬರೋಣ, ಮೊದಲ ಮುನ್ನುಡಿ ಅವನದೇ “ಹಂಗೇ ಯೋಚ್ಸು, ಈಗೆಲ್ಲಾ ಪರಿಸರ ಹಾಳಾಗ್ತಿದೆ ಅಂತ ಹೇಳ್ತಾವ್ರೆ ಆದ್ರೂ ಕಾಡ್ ಕಡ್ದು ಮನೆ ಕಟ್ತಾರೆ. ಹಿಂದೆ ಎಲ್ಲಾ ಒಬ್ಬೊಬ್ರಿಗೆ ಒದೊಂದು ಮನೆ ಇರ‍್ತಿತ್ತು ಜನ ಜಾಸ್ತಿ ಆದಂಗೆ ಅಪಾರ‍್ಟ್ಮೆಂಟು ಎಲ್ಲಾ ಬಂತು. ಈ ಅಪಾರ‍್ಟ್ಮೆಂಟು ಐಡಿಯಾ ಮೊದ್ಲೇ ಇದ್ದಿದ್ರೆ ಎಶ್ಟೋ ಕಾಡ್ ಉಳಿತಿತ್ತು ಅಲ್ವಾ?. ಆಮೇಲೆ ನೋಡು ಇತ್ತೀಚೆಗೆಲ್ಲಾ ಟೆಕ್ನಾಲಜಿ ಬೆಳೆದು ಕೊಳೆಯೋ ಪ್ಲಾಸ್ಟಿಕ್‌ ಬಂದಿದ್ಯಂತೆ. ಒಂದು ಹನ್ನೆರೆಡು ತರುದ್ ಇದ್ಯಂತೆ. ಆದ್ರೆ ಅವೆಲ್ಲ ತುಟ್ಟಿ ಅಂತ ಯಾರು ಬಳಸ್ತಿಲ್ಲ ಅಶ್ಟೆ. ಪ್ಲಾಸ್ಟಿಕ್ ಬ್ಯಾನ್ ಮಾಡಿರೋ ದೇಶಗಳಶ್ಟೆ ಬಳುಸ್ತಿರದು. ನೋಡು ಇದು ಮೊದ್ಲೇ ಬಂದಿದ್ರೆ? ಮೊನ್ನೆ ಅದ್ಯಾವ್ದೊ ವೀಡಿಯೋ ನೋಡ್ತಿದ್ದೆ ಪೆಸಿಪಿಕ್ ಸಮುದ್ರದಲ್ಲಿ ಇಡೀ ಕೆನಡಾನ ಮುಚ್ ಹಾಕೋವಶ್ಟು ಪ್ಲಾಸ್ಟಿಕ್ಕು ಬಿದ್ದು ತೇಲಾಡ್ತಿದ್ಯಂತೆ” ಅಂದ.

” ಅಲ್ಲಾ, ಬಾಬ ಸಮುದ್ರುಕ್ ಹಾಕಿದ್ದೆಲ್ಲಾ ವಾಪಸ್ ದಡುಕ್ ಬರುತ್ತೆ ಅಂತಾರಲ್ಲಾ? ” ಅಂತ ಅಂದೆ.

“ಹೂಂ, ಅದು ಸರಿನೇ, ಆದ್ರೆ ಈ ಪೆಸಿಪಿಕ್ ಓಶನ್ ಇದ್ಯಲ್ಲ ಇದು ತುಂಬಾ ದೊಡ್ದು ಆಸ್ಟ್ರೇಲಿಯಾ ಇಂದ ಕೆನಡ ತನ್ಕ ಇದೆ. ಅದ್ರಲ್ಲಿ ಈ ವಾಟರ್ ಕರೆಂಟ್ಸು ದಡುದ್ದಿಂದ ಬಂದಿದ್ದುನ್ನ ತನ್ ಜೊತೆನೇ ತಿರ‍್ಗಾಡುಸ್ತಿರುತ್ತೆ ಅದ್ ಒಂತರ ಸರ‍್ಕಲ್ ಕಣೋ ಅದಿಕ್ಕೆ ಅದು ಆ ಕಸ ಸಮುದ್ರುದಲ್ಲೆ ಇದೆ ದಡುಕ್ ಬಂದಿಲ್ಲ. ಅದ್ ತಗ್ಯಕ್ಕೂ ಆಗಂಗಿಲ್ಲ” ಅಂದ. ಮುಂದುವರೆದು, “ಈಗ ತಗುದ್ರು ಅನ್ಕೋ, ಅಶ್ಟೊಂದ್ ಕಸ ಎಲ್ಲಿಗ್ ಹಾಕದು? ಅಕ್ಕಪಕ್ಕದಲ್ಲಿರೋ ದೇಶಗಳು ಇದು ನಮ್ಗ್ ಬೇಡ, ಇದು ನಮ್ದಲ್ಲ ಅಂತ ಕುತ್ಕೊಂಡವೆ. ನೋಡು ಈ ಕೊಳೆಯೊ ಪ್ಲಾಸ್ಟಿಕ್ ಮೊದ್ಲೇ ಬಂದಿದ್ರೆ ಇಶ್ಟೆಲ್ಲ ಆಗ್ತಿತ್ತಾ” ಅಂದ. ನನಗೂ ಆಗ “ಹೌದಲ್ವ” ಅಂತ ಅನಿಸಿತು, ಮರುಮಾತಾಡದೆ ತಲೆತೂಗಿಸಿ ಎದ್ದು ಊಟಕ್ಕೆ ಹೋದೆ.

“ಹೌದೋಲೆ, ಮೊನ್ನೆ ಹೇಳ್ತಿದ್ನಲ್ಲಾ ನೋಡು ಆ ‘ಎಲ್ ಇ ಡಿ’ ಬಲ್ಪು ಒಂದ್ ಹತ್ ವರ‍್ಶುದ್ ಹಿಂದೆ ಬಂದಿದ್ರೆ ಎಶ್ಟ್ ಎನರ‍್ಜಿ ಉಳಿತಾಯ ಆಗ್ತಿತ್ ಅಲ್ವ” ಎಂದು ನಮ್ಮ ಕಾಲೇಜಿನ ಮುಂದಿನ ರಾಶ್ಟ್ರೀಯ ಹೆದ್ದಾರಿ-66 ಕ್ಕೆ ಅಳವಡಿಸಲಾದ ದೀಪಗಳನ್ನ ನೋಡಿ ನನಗೆ ಪ್ರಶ್ನಿಸಿದ. ಅದಕ್ಕೆ ನಾನೀಗ ಏನಾದರೂ ಒಕ್ಕಣಿಸಲೇ ಬೇಕಿತ್ತು. ಇಲ್ಲವಾದರೆ ಅವನು, ಹತ್ತು ವರುಶ ಕಳೆದರೂ ನನ್ನನ್ನು ಬೆಂಬಿಡದೆ ಅದೇ ಪ್ರಶ್ನೆ ಹಿಡಿದು ಕಾಡುತ್ತಿದ್ದುದಂತೂ ನಿಜ.

“ಬಾಬ, ಮನುಶ್ಯ ಅನ್ನೋನಿಗೆ ತಪ್ಪು ಮಾಡಿ ಅದನ್ನು ಕಂಡುಹಿಡಿದು ತಿದ್ದಿಕೊಳ್ಳೋದು ಒಗ್ಗಿಕೊಂಡು ಬಂದ್ಬಿಟ್ಟಿದೆ. ಎಲ್ಲಾದುಕ್ಕೂ ‘ಎಪಿಶಿಯನ್ಸಿ’ ಮ್ಯಾಟ್ರಾಗುತ್ತೆ. ಈಗ ನೋಡು ಹಿಂದೆಲ್ಲಾ ವಸ್ತುಗಳನ್ನು ಕೈಯಲ್ಲಿ ಎತ್ಕೊಂಡ್ ಹೋಗ್ತಿದ್ದೋನು. ಸರಕು-ಸಾಮಾನುಗಳು ಜಾಸ್ತಿಯಾದಂಗೆ  ಎತ್ತಿನ್ ಗಾಡಿಗೆ ಕಟ್ದ. ನಡಿಯೋದ್ ಕಶ್ಟ ಅಂತ ಸಯ್ಕಲ್ ಹಿಡ್ದ. ತುಳಿಯೊದ್ ಕಶ್ಟ ಅಂತ ಬಯ್ಕ್ ಬಂತು. ಅದುನ್ನೆ ಗಾಡಿಗೂ ಹಾಕಿ ಕಾರು, ಲಾರಿ, ಬಸ್ಸು ಅಗತ್ಯ ಬಿದ್ದಂಗೆ ಬಂತು. ಆಮೇಲೆ ಇದ್ರಲ್ಲೆಲ್ಲಾ ಹೀಟಿಂಗ್ ಪ್ರಾಬ್ಲಮ್ಮು ಅಂತ ಅದುಕ್ಕೆ ಮುಲಾಮ್ ಹಚ್ತಾ ಹೋದ. ಗೊತ್ತಿಲ್ದೋ, ಗೊತ್ತಿದ್ದೋ ಏನೋ ಒಂದ್ ತಪ್ ಮಾಡಿರ‍್ತನೆ ಎಲ್ಲಾದ್ರಲ್ಲೂ. ಮನುಶ್ರು ಬರ‍್ತ ಬರ‍್ತ ಸೋಂಬೇರಿಗುಳ್ ಆಗಿದಾರೆ, ಅದುನ್ನೆ ಈಗ ಬಂಡ್ವಾಳ ಮಾಡ್ಕೊಂಡು ಮುಂದುಕ್ ಡೆವ್ಲಪ್ ಮಾಡ್ತಿದಾನೆ. ಯಾವಗ್ ಈ ಎಪಿಶಿಯನ್ಸಿ ಅನ್ನೋದುಕ್ಕೆ ಬೇಡಿಕೆ ಬಂತೋ ಆ ಟೈಮ್ ಅಲ್ಲಿ ಪರಿಸರದ ಹಾನಿ ಸುರುವಾಯ್ತು. ಉತ್ರ ಹುಡ್ಕಕ್ ಹೋಗಿ ಇನ್ನೊಂದ್ ಪ್ರಶ್ನೆ ಮಾಡ್ತಿದ್ದ. ಈ ಪ್ರಶ್ನೆ ಜೊತೆಗೆ ಹುಟ್ಟಿದ್ದೆ ಈ ಪರಿಸರ ಹಾನಿ. ಎಶ್ಟೊಂದ್ ಜನ ಇದ್ರು ಬಗ್ಗೆ ಬಾಯ್ಬಡ್ಕೊಳಕ್ ಶುರು ಮಾಡುದ್ರು. ಅದಿಕ್ಕೆ ಆ ಚೌಕಟ್ಟಲ್ಲೇ ಎಪಿಶಿಯನ್ಸಿ ಜಾಸ್ತಿ ಮಾಡ್ತಿದಾನೆ ಈಗೀಗ. ಏನು ಮಾಡಕ್ಕಾಗಲ್ಲ ಇವುಕ್ಕೆಲ್ಲ, ಎಲ್ಲರ ಜೊತೆ ನಾವು ಬೆಳಿಬೇಕು, ಇರೋದುನ್ನ ಒಪ್ಕೋಬೇಕು ಅಶ್ಟೆ. ಎಲ್ಲಾ ಕಾಲಿಯಾಗ್ತಿದೆ ಇಲ್ಲಾ ಕಣ್ಮರೆಯಾಗ್ತಿದೆ ಅನ್ನೊ ಹೊತ್ತಿಗೆ ಅಲ್ವೇ ನಮ್ಮೋರಿಗೆ ಅದ್ರು ಮೇಲೆ ಒಲವು ಉಕ್ಕಿ ಬರೋದು, ಇರೋತಂಕ ಬಡಿದು ಬಾಯ್ಗಾಕಳದು. ಇಲ್ದಿದ್ ಮೇಲೆ ಹುಡ್ಕದು ಇಲ್ಲ ಬಾಯ್ ಬಡ್ಕಳದು. ಇದೇ ತಾನೆ ನಾವ್ ಇಶ್ಟ್ ದಿನ ಮಾಡ್ಕಂಡ್ ಬಂದಿರದು” ಅಂತ ಒಂದ್ ಉದ್ದವಾದ ಉತ್ತರ ಕೊಟ್ಟೆ. ಅಶ್ಟರಲ್ಲಿ ನಾವು ಹೋಗಬೇಕಾದ ಬಜ್ಜಿ ಅಂಗಡಿ ಬಂದಿತ್ತು.

“ಅದು ಸರಿನೇ ಕಣೊ, ನಾನು ಹಂಗೆ ಲೆಕ್ಕ ಹಾಕ್ದೆ, ನಾವು ಹಿಂಗೆ ಬೇಕಾಬಿಟ್ಟಿ ಪ್ರಕ್ರುತಿಯನ್ನ ಬಳಸಿಕೊಳ್ತಾ ಇದ್ರೆ, ಆದಶ್ಟು ಬೇಗ ಪ್ರಳಯ ಆಗಿ ಎಲ್ಲಾ ಮುಳುಗಿ ಹೋಗುತ್ತೆ. ಅದುಕ್ಕೆ ನಿನ್ ಮಕ್ಳಿಗೇನು ಆಸ್ತಿ ಮಾಡೊಕ್ ಹೋಗ್ಬೇಡ ಇರೋವಶ್ಟ್ ದಿನ ಎಂಜಾಯ್‌ ಮಾಡ್ಕಂಡು ಇದ್ಬಿಡು, ಇದು ನಂದು ಪ್ಲಾನು ನಿನಗೂ ಹೇಳ್ತಿದೀನಿ ಕೇಳು” ಅಂದ. ಆಗ ಅಂಗಡಿಯವನ ಜೊತೆ ಎಲ್ಲರೂ ನಕ್ಕು, ಬಜ್ಜಿಗೆ ಬಾಯ್ ಹಾಕೋಕೆ ಇಬ್ಬರೂ ಅಣಿಯಾದೆವು.

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: