ಉಮ್ಲಾಂಗಾ – ಸ್ವಾಜೀಲ್ಯಾಂಡಿನ ಸಾಂಪ್ರದಾಯಿಕ ಕುಣಿತ

– ಕೆ.ವಿ. ಶಶಿದರ.

 

umlonga4

 

ಸ್ವಾಜೀಲ್ಯಾಂಡ್ (ಉಂಬುಸೊ ವೆ ಸ್ವಾಟಿನಿ) ದೇಶದ ಲುಡ್ಜಿಡ್ಜಿನಿ ರಾಯಲ್ ವಿಲೇಜ್‌ನಲ್ಲಿ ನಡೆಯುವ ಉಮ್ಲಾಂಗಾ (ಜೊಂಡಿನ ಕುಣಿತ) ವಾರ‍್ಶಿಕ ನ್ರುತ್ಯದ ಉತ್ಸವದಲ್ಲಿ ಬಾಗವಹಿಸಲು ಸಾವಿರಾರು ಯುವತಿಯರು ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದು ಸೇರುತ್ತಾರೆ.

ಸ್ವಾಜೀಲ್ಯಾಂಡ್ ಸಾಮ್ರಾಜ್ಯವು 1.1 ಮಿಲಿಯನ್ ಜನಸಂಕ್ಯೆಯುಳ್ಳ ಆಪ್ರಿಕಾದ ದಕ್ಶಿಣದಲ್ಲಿರುವ ಒಂದು ಪುಟ್ಟ ದೇಶ. ಈ ದೇಶದಲ್ಲಿ ಉಮ್ಲಾಂಗಾ ಎಂಬ ಸಾಂಪ್ರದಾಯಿಕ ನ್ರುತ್ಯ ಪ್ರಕಾರವನ್ನು ಪ್ರತಿ ವರ‍್ಶವೂ ನಡೆಸಲಾಗುತ್ತದೆ. ಎಂಟಾನೆಂಟು ದಿನ ನಡೆಯುವ ಕಾರ‍್ಯಕ್ರಮ ಇದು.

ಬಾಗವಹಿಸುವ ಯುವತಿಯರು ಬಿಸಿಲಿನ ಬೇಗೆಯಲ್ಲಿ ಬೆಂದು ಬಸವಳಿಯದಿರಲಿ ಎಂಬ ಕಾರಣಕ್ಕಾಗಿ ತಂಪು ವಾತಾವರಣದ ಕಾಲದಲ್ಲಿ ಉಮ್ಲಾಂಗಾ ಉತ್ಸವವನ್ನು ಆಯೋಜಿಸಲಾಗುತ್ತದೆ. ತಾಪಮಾನ ತಂಪಾಗಿರುವುದರ ಜೊತೆಗೆ ನ್ರುತ್ಯಕ್ಕೆ ಅವಶ್ಯವಿರುವ ಬಲಿತ ಜೊಂಡೂ ಸಹ ಹೇರಳವಾಗಿ ದೊರೆಯುವ ಕಾಲವಾದ್ದರಿಂದ ಆಗಸ್ಟ್-ಸೆಪ್ಟೆಂಬರ್ ಸಮಯ ಇದಕ್ಕೆ ಬಹಳ ಸೂಕ್ತ.

ಉಮ್ಲಾಂಗಾ ಉತ್ಸವದ ಆಯೋಜನೆಯ ಹಿಂದಿರುವ ಮಹತ್ವದ ಬಗ್ಗೆ ಅನ್ವೇಶಿಸುತ್ತಾ ಹೋದಲ್ಲಿ ವಿದವಿದದ ವಿಚಾರಗಳು ಎಡತಾಕುತ್ತವೆ.

ಉಮ್ಲಾಂಗಾ ಉತ್ಸವದ ಹಿನ್ನೆಲೆ

ಹೆಣ್ಣುಮಕ್ಕಳು ವಿವಾಹದವರೆವಿಗೂ ಕನ್ಯತ್ವವನ್ನು ಕಾಪಾಡಿಕೊಳ್ಳಲಿ ಎಂಬುದೊಂದು ವಿಶಯ ಪ್ರಮುಕವಾದರೆ ಮತ್ತೊಂದು, ವಿವಾಹಕ್ಕೆ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ತಯಾರು ಮಾಡುವ ಕ್ರಿಯೆಯಾಗಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ ಎಂಬ ವಿಶಯ ಅಡಗಿದೆ.

ಈ ಉತ್ಸವದಲ್ಲಿ ಬಾಗವಹಿಸಲು ಬರುವ ಯುವತಿಯರನ್ನು ನ್ರುತ್ಯ ಪ್ರಾರಂಬಕ್ಕೂ ಮುನ್ನಾದಿನ ಹಲವು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತೆ. ಒಂದೊಂದು ಗುಂಪಿಗೂ ಒಂದೊಂದು ತೆರೆನಾದ ಕೆಲಸವನ್ನು ಹಂಚಲಾಗುತ್ತದೆ. ಇದರಲ್ಲಿ ಸಂವಹನಾ ಚಾತುರ‍್ಯಕ್ಕೆ ಹೆಚ್ಚು ಒಲವು. ವೈವಾಹಿಕ ಜೀವನವು ಸುಂದರವಾಗಿರಲು ಹಾಗೂ ನಿರಂತರವಾಗಿ ಮುಂದುವರೆಯಲು ಸಂವಹನೆ ಬಹು ಮುಕ್ಯ ಎಂಬುದು ಅವರ ನಂಬಿಕೆ.

ಹಿರಿಯ ಮಹಿಳೆಯರು ನೆರೆದ ಯುವತಿಯರೊಂದಿಗೆ ವಿವಾಹ ಸಂಬಂದ ವಿಚಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಅವರ ಮನದಲ್ಲಿನ ಸಂಶಯಗಳನ್ನು ನಿವಾರಿಸಲು ಈ ಸಂದರ‍್ಬವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ.

ಉತ್ಸವಕ್ಕಾಗಿ ನಡೆಸುವ ತಯಾರಿ

ನಿಗದಿ ಪಡಿಸಿದ ದಿನ ಯುವತಿಯರ ಮೊದಲನೇ ಕಾರ‍್ಯ ಚಟುವಟಿಕೆ ಪ್ರಾರಂಬ. ಇರುಳೂಟದ ನಂತರ ಕಾಲ್ನಡಿಗೆಯಲ್ಲಿ ಜೊಂಡು ಬೆಳೆಯುವ ದೂರದ ಪ್ರದೇಶಕ್ಕೆ ಹೋಗಿ ಬಲಿತ ಜೊಂಡನ್ನು ಸಂಗ್ರಹಿಸಿ ತರುವುದು. ಎಶ್ಟು ದೂರ ನಡೆಯಬೇಕೆಂದರೆ ಯುವತಿಯರು ಇಡೀ ರಾತ್ರಿ ನಡೆದು ಸವೆಸುವಶ್ಟು. ಪ್ರತಿ ಯುವತಿಯೂ ಕನಿಶ್ಟ ಹತ್ತು ಜೊಂಡನ್ನು ಸಂಗ್ರಹಿಸಿ ತರಬೇಕು. 

ಮುಂದಿನ ದಿನ ಉಪಹಾರದ ನಂತರ ಯುವತಿಯರು ಸಾಂಪ್ರದಾಯಿಕ ಉಡುಪು ಮತ್ತು ಒಡವೆಗಳನ್ನು ದರಿಸಬೇಕು. ಲಿಗ್ಸೆಬೆಶಾ ಎಂಬ ಸ್ವಾಜಿ ರಾಜ್ಯದ ಬಾವುಟದಲ್ಲಿನ ಬಣ್ಣ ಬಣ್ಣದ ಮಣಿಗಳಿಂದ ಆವ್ರುತವಾದ ನೆಕ್ಲೇಸ್, ಉಮ್ಗಾಕೊ ಎಂಬ ಎಡ ಬುಜದಿಂದ ಬಲ ಸೊಂಟದವರೆಗೆ ಹೊದೆಯುವಂತಹ ಬಣ್ಣ ಬಣ್ಣದ ಮಣಿಗಳಿಂದ ಮಾಡಿರುವ ಅಡ್ಡ ಪಟ್ಟಿ, ಇಂಡ್ಲಾಮು ಎಂಬ ಮಣಿಗಳಿಂದ ತಯಾರಾದ ಚಿಕ್ಕ ಸ್ಕರ‍್ಟ್, ಎಮಪ್ಲಾವನೆ ಎಂಬ ಕಂದು ವರ‍್ಣದ ನೂಪುರ, ಉಮ್ಕಾವಾಶೊ ಎಂಬ ತಲೆ ಪಟ್ಟಿ ಎಲ್ಲಾ ಸಾಂಪ್ರದಾಯಿಕ ಉಡುಪುಗಳಲ್ಲಿ ಸೇರಿವೆ.

ಉಮ್ಕಾವಾಶೊ ಎಂಬ ತಲೆಗೆ ದರಿಸುವ ಪಟ್ಟಿಯಲ್ಲಿ ಹಲವು ವಿದಗಳಿವೆ. ಮಕ್ಕಳಿಗಾದರೆ ನೀಲೀ ವರ‍್ಣದ ಪಟ್ಟಿ, ಹದಿಹರೆಯದವರಿಗೆ ಹಳದಿ ಮತ್ತು ಕೆಂಪು ವರ‍್ಣದ ಪಟ್ಟಿ ಪ್ರೌಡಾವಸ್ತೆ ತಲುಪಿರುವ ಹೆಣ್ಣು ಮಕ್ಕಳಿಗೆ ಮೀಸಲು.

ಸಾಂಪ್ರದಾಯಿಕ ವಸ್ತ್ರ ಮತ್ತು ಒಡವೆಗಳಿಂದ ಅಲಂಕ್ರುತರಾದ ಯುವತಿಯರು ತಾವು ಸಂಗ್ರಹಿಸಿದ ಜೊಂಡಿನ ಜೊತೆ ಹೊರಟು ಸೇರುವುದು ರಾಯಲ್ ವಿಲೇಜ್‌ಗೆ.

ಉಮ್ಲಾಂಗಾ ಆಚರಣೆಯ ಪರಿ

ರಾಜಮಾತೆಯ ಮನೆಯ ಮುಂದೆ ಯುವತಿಯರು ತಂದಿರುವ ಜೊಂಡನ್ನು ಕ್ರಮ ಬದ್ದವಾಗಿ ಜೋಡಿಸಿ ಗಾಳಿತಡೆ ಮಾಡಲಾಗುತ್ತೆ. ಈ ಎಲ್ಲಾ ಕಾರ‍್ಯಕ್ರಮಗಳು ಸಂಪೂರ‍್ಣವಾಗಲು ತಗಲುವ ಕಾಲಾವಕಾಶ ಮೂರು ದಿನಗಳು. ಈ ದಿನಗಳಲ್ಲಿ ಪ್ರವಾಸಿಗರ ಮತ್ತು ಸ್ತಳೀಯರ ಮನರಂಜನರಗಾಗಿ ಅಲ್ಲಿನ ಮೈದಾನದಲ್ಲಿ ನ್ರುತ್ಯ ಕಾರ‍್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರಾಜ ಮನೆತನದವರು ಸೇರಿದಂತೆ ಬಹಳಶ್ಟು ವೀಕ್ಶಕರು ಅಲ್ಲಿ ನೆರೆಯುತ್ತಾರೆ. ರಾಜ ನೆರೆದಿರುವವರನ್ನು ಉದ್ದೇಶಿಸಿ ನಾಲ್ಕು ಹಿತವಚನಗಳನ್ನು ಆಡುವುದು ಇಲ್ಲಿನ ಸಂಪ್ರದಾಯ.

ಸಾಂಪ್ರದಾಯಿಕ ಉಡುಗೆಯಲ್ಲಿನ ಯುವತಿಯರು ನ್ರುತ್ಯ ಮಾಡುವಾಗ ವೀಕ್ಶಕರೂ ಅವರೊಡನೆ ಹೆಜ್ಜೆ ಹಾಕುವುದಕ್ಕೆ ಇಲ್ಲಿ ಯಾವುದೇ ನಿರ‍್ಬಂದವಿಲ್ಲ. ತಮ್ಮ ಸಂತೋಶವನ್ನು ವ್ಯಕ್ತಪಡಿಸಲು ನ್ರುತ್ಯಗಾರ‍್ತಿಯರ ಕಾಲ ಬಳಿ ಹಣ ಎಸೆಯುವ ಜನರಿಗೇನು ಇಲ್ಲಿ ಕಡಿಮೆಯಿಲ್ಲ. ಇದೇ ಸಂದರ‍್ಬದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿನ ಯುವತಿಯರಲ್ಲಿ ರಾಜ ಯಾರನ್ನಾದರೂ ತನ್ನ ಪತ್ನಿಯಾಗಿ ಸ್ವೀಕರಿಸಬಹುದು. ರಾಜ್ಯದ ರಾಣಿಯಾಗುವ ಸದಾವಕಾಶ ಎಲ್ಲಾ ಯುವತಿಯರಿಗೂ ಇದೆ.

ನ್ರುತ್ಯ ಕಾರ‍್ಯಕ್ರಮದಲ್ಲಿ ಬಾಗವಹಿಸುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಬಲವಂತ ಪಡಿಸುವಂತಿಲ್ಲ. ಬಾಗವಹಿಸದಿರುವ ಯುವತಿಯರು ಪರಿಹಾರ ನೀಡಬೇಕು. ಸ್ತಳೀಯ ಬುಡಕಟ್ಟು ಜನಾಂಗದ ಕಾನೂನಿನಂತೆ ಅದರ ನಾಯಕ ತನಗಿರುವ ಪರಮಾದಿಕಾರವನ್ನು ಉಪಯೋಗಿಸಿ ಅಂತಹವರಿಗೆ ದಂಡ ವಿದಿಸಬಹುದು. ದಂಡದ ಸಾಮಾನ್ಯ ರೂಪ ಒಂದು ಹಸು ಮಾತ್ರ.

ಉಮ್ಲಾಂಗಾ ಸಾಂಪ್ರಾದಾಯಿಕ ನ್ರುತ್ಯ ಕೇವಲ ಸ್ವಾಜೀಲ್ಯಾಂಡ್‌ಗೆ ಮಾತ್ರ ಸೀಮಿತವಾಗಿಲ್ಲ. ದಕ್ಶಿಣ ಆಪ್ರಿಕಾದ ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲೂ ಪ್ರತಿ ವರ‍್ಶವೂ ಇದೇ ರೀತಿಯ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲಿನ ರಾಜನ ನಾನ್ಗೋಮದ ಎನ್ಯೋಕೆನಿ ಅರಮನೆಯ ಸನಿಹದ ಮೈದಾನವೇ ಇಲ್ಲಿನ ಉಮ್ಲಾಂಗಾ ಉತ್ಸವದ ತಾಣ. ಯುವತಿಯರು ಕನ್ಯತ್ವ ಪರೀಕ್ಶೆಯಲ್ಲಿ ಉತ್ತೀರ‍್ಣರಾದರೆ ಮಾತ್ರ ಇದರಲ್ಲಿ ಬಾಗವಹಿಸಬಹುದು! ಎಂತಹ ಕ್ರೂರ ಪದ್ದತಿಯಲ್ಲವೆ?

 

(ಮಾಹಿತಿ ಮತ್ತು ಚಿತ್ರಸೆಲೆ: thenomadicvegan.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: