ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 13ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಹರಿವ ಹಾವಿಂಗಂಜೆ
ಉರಿಯ ನಾಲಗೆಗಂಜೆ
ಸುರಗಿಯ ಮೊನೆಗಂಜೆ
ಒಂದಕ್ಕಂಜುವೆ ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ
ಜೂಬಿಂಗಂಜುವೆ. ( 447-43 )

ಹರಿ=ಕಚ್ಚು/ಕಡಿ; ಹಾವಿಂಗೆ+ಅಂಜೆ; ಹಾವಿಂಗೆ=ಹಾವಿಗೆ; ಅಂಜು=ಹೆದರು/ಪುಕ್ಕಲುಗೊಳ್ಳು; ಅಂಜೆ=ಹೆದರುವುದಿಲ್ಲ; ಹರಿವ ಹಾವಿಂಗಂಜೆ=ಕಚ್ಚಿದಾಗ ನಂಜನ್ನು ಕಾರುವ ಹಾವಿಗೆ ಹೆದರುವುದಿಲ್ಲ;

ಉರಿ=ಬೆಂಕಿ/ಬೆಂಕಿಯ ಜ್ವಾಲೆ; ನಾಲಿಗೆಗೆ+ಅಂಜೆ; ಉರಿಯ ನಾಲಗೆ=ಬೆಂಕಿಯು ದಗದಗನೆ ಹತ್ತಿ ಉರಿಯುತ್ತಿರುವಾಗ ಸುತ್ತಮುತ್ತ ಹಬ್ಬುವ ಜ್ವಾಲೆ; ಉರಿಯ ನಾಲಿಗೆಗಂಜೆ=ಸುಟ್ಟುಬೂದಿ ಮಾಡುವ ಬೆಂಕಿಗೆ ಹೆದರುವುದಿಲ್ಲ;

ಸುರಗಿ=ಚೂರಿ/ಸಣ್ಣ ಕತ್ತಿ/ಒಂದು ಬಗೆಯ ಹತಾರ; ಮೊನೆಗೆ+ಅಂಜೆ; ಮೊನೆ=ಚೂಪಾದ ತುದಿ/ಹರಿತವಾದ ಕೊನೆ; ಸುರಗಿಯ ಮೊನೆಗಂಜೆ=ತಿವಿತಕ್ಕೆ ಒಳಗಾದಾಗ ಗಳಿಗೆ ಮಾತ್ರದಲ್ಲಿ ಸಾವಿಗೆ ದೂಡುವ ಚೂರಿಯ ಮೊನೆಗೆ ಅಂಜುವುದಿಲ್ಲ;

ಒಂದಕ್ಕೆ+ಅಂಜುವೆ; ಅಂಜುವೆ=ಹೆದರುತ್ತೇನೆ/ಪುಕ್ಕಲುಗೊಳ್ಳುತ್ತೇನೆ/ಹಿಂಜರಿಯುತ್ತೇನೆ; ಒಂದಕ್ಕಂಜುವೆ=ಒಂದು ಕೆಲಸವನ್ನು ಮಾಡಲು ಹೆದರುತ್ತೇನೆ;

ಒಂದಕ್ಕೆ+ಅಳುಕುವೆ; ಅಳುಕು=ಹೆದರು/ನಡುಗು/ತತ್ತರಿಸು; ಅಳುಕುವೆ=ಹೆದರಿಕೆಯಿಂದ ತತ್ತರಿಸುತ್ತ ನಡುಗುತ್ತೇನೆ; ಒಂದಕ್ಕಳುಕುವೆ=ಒಂದು ಕೆಲಸವನ್ನು ಮಾಡಲು ನಡುಗುತ್ತೇನೆ;

ಪರ=ಅನ್ಯ/ಬೇರೆಯ; ಸ್ತ್ರೀ=ಹೆಣ್ಣು/ಹೆಂಗಸು/ವನಿತೆ; ಪರಸ್ತ್ರೀ=ಬೇರೆಯವನ ಮಡದಿ/ಹೆಂಡತಿ/ಪತ್ನಿ/ಬೇರೆಯ ಹೆಂಗಸು; ಪರಧನ+ಎಂಬ+ಈ; ಧನ=ಸಂಪತ್ತು/ಆಸ್ತಿಪಾಸ್ತಿ/ಒಡವೆ ವಸ್ತು/ಹಣಕಾಸು; ಪರಧನ=ಬೇರೆಯವರಿಗೆ ಸೇರಿದ ಸಂಪತ್ತು;

ಜೂಬಿಂಗೆ+ಅಂಜುವೆ; ಜೂಬು=ದೆವ್ವ/ಪಿಶಾಚಿ/ವಯಸ್ಸು ತುಂಬುವುದಕ್ಕೆ ಮುಂಚೆ ರೋಗರುಜಿನಗಳಿಂದ/ಅವಗಡಗಳಿಂದ ಸತ್ತವರು ದೆವ್ವಗಳಾಗುತ್ತಾರೆ ಎಂಬ ಕಲ್ಪನೆಯು ಜನಮನದಲ್ಲಿದೆ. ವಾಸ್ತವದಲ್ಲಿ ದೆವ್ವ ಎಂಬುದು ಇಲ್ಲ; ಜೂಬಿಂಗೆ=ಪಿಶಾಚಿಗೆ/ದೆವ್ವಕ್ಕೆ;

ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ=ಬೇರೆಯವರ ಮಡದಿ ಮತ್ತು ಬೇರೆಯವರ ಸಂಪತ್ತನ್ನು ದೆವ್ವವೆಂದು ಕರೆಯಲಾಗಿದೆ. ದೆವ್ವವನ್ನು ಕೇಡಿಗೆ/ದುರಂತಕ್ಕೆ/ಹಾನಿಗೆ ಒಂದು ರೂಪಕವಾಗಿ ಬಳಸಲಾಗಿದೆ. ದೆವ್ವ ತಾನು ಮೆಟ್ಟಿಕೊಂಡವರನ್ನು ಬಲಿ ತೆಗೆದುಕೊಳ್ಳುವಂತೆಯೇ ಬೇರೆಯವರ ಮಡದಿ ಮತ್ತು ಸಂಪತ್ತಿಗೆ ಹಂಬಲಿಸಿದವನು ಸಾವು ನೋವುಗಳಿಗೆ ಗುರಿಯಾಗುತ್ತಾನೆ. ಆದ್ದರಿಂದ ಇಂತಹ ನೀಚ ಕೆಲಸಗಳನ್ನು ತಾನು ಮಾಡುವುದಿಲ್ಲವೆಂದು ವ್ಯಕ್ತಿಯು ತೀರ‍್ಮಾನಿಸಿದ್ದಾನೆ.

ಹುತ್ತದ ಮೇಲಣ ರಜ್ಜು ಮುಟ್ಟಿದಡೆ
ಸಾವರು ಶಂಕಿತರಾದವರು
ಸರ್ಪದಷ್ಟವಾದಡೆಯೂ
ಸಾಯರು ನಿಶ್ಶಂಕಿತರಾದವರು. ( 772-70 )

ಹುತ್ತ=ಗೆದ್ದಲು/ಗೆಜ್ಜಲು ಹುಳುಗಳು ಕಟ್ಟುವ ಕೊಳವೆಗಳಿಂದ/ಬಿಲಗಳಿಂದ ಕೂಡಿದ ಮಣ್ಣಿನ ಗೂಡು. ಇದನ್ನು ಹಾವು ತನ್ನ ವಾಸದ ನೆಲೆಯನ್ನಾಗಿ ಮಾಡಿಕೊಂಡಿರುತ್ತದೆ; ಮೇಲಣ=ಮೇಲುಗಡೆಯಿರುವ; ರಜ್ಜು=ಹಗ್ಗ/ಹುರಿ/ಮಿಣಿ/ಪಾಶ; ಮುಟ್ಟು=ಸೋಕು/ತಗುಲು; ಮುಟ್ಟಿದಡೆ=ತಗುಲಿದರೆ/ಸೋಕಿದರೆ; ಸಾವು=ಜೀವ ಹೋಗುವುದು/ಪ್ರಾಣ ಹೋಗುವುದು/ಉಸಿರು ನಿಲ್ಲುವುದು; ಸಾವರು=ಸಾಯುತ್ತಾರೆ; ಶಂಕಿತರ್+ಆದವರು; ಶಂಕೆ=ಅಂಜಿಕೆ/ಹೆದರಿಕೆ/ಹಿಂಜರಿಕೆ/ಅಳುಕು; ಶಂಕಿತ=ಅಂಜಿಕೆಯುಳ್ಳವನು/ಪುಕ್ಕಲುತನದವನು/ಹೆದರಿಕೆಯುಳ್ಳವನು; ಶಂಕಿತರಾದವರು=ಅಂಜಿಕೆಯುಳ್ಳವರು;

ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು=ಎಲ್ಲದಕ್ಕೂ ಹೆದರುವ ಗುಣವುಳ್ಳ ವ್ಯಕ್ತಿಗಳು ಹುತ್ತದ ಮೇಲಿರುವ ಹಗ್ಗವನ್ನೇ ಹಾವೆಂದು ತಿಳಿದು, ಹೆದರಿ ಹೆಪ್ಪಳಿಸಿಹೋಗಿ ಎದೆ ನಡುಗಿ ಸಾವನ್ನಪ್ಪುತ್ತಾರೆ. ಅವರ ಪುಕ್ಕಲುತನವೇ ಅವರ ಪಾಲಿಗೆ ಸಾವನ್ನು ತರುತ್ತದೆ;

ಸರ್ಪ+ದಷ್ಟ+ಆದಡೆಯೂ; ಸರ್ಪ=ಹಾವು/ಉರಗ; ದಷ್ಟ=ಕಚ್ಚುವುದು/ಕಡಿಯುವುದು; ಸರ್ಪದಷ್ಟ=ಹಾವು ಕಡಿಯುವುದು/ಹಾವಿನಿಂದ ಕಚ್ಚಿಸಿಕೊಂಡಿರುವುದು; ಆದಡೆಯೂ=ಆಗಿದ್ದರೂ;

ಸರ್ಪದಷ್ಟವಾದಡೆಯೂ=ಹಾವು ಕಚ್ಚಿದ್ದರೂ/ಹಾವಿನ ಕಡಿತಕ್ಕೆ ಒಳಗಾಗಿದ್ದರೂ;

ಸಾಯರು=ಸಾಯುವುದಿಲ್ಲ; ನಿಶ್ಶಂಕಿತರ್+ಆದವರು;

ನಿಶ್ಶಂಕೆ=ಹೆದರಿಕೆಯಿಲ್ಲದಿರುವುದು/ಅಂಜಿಕೆಯಿಲ್ಲದಿರುವುದು; ಆದವರು=ಆಗಿರುವವರು;

ಸರ್ಪದಷ್ಟವಾದಡೆಯೂ ಸಾಯರು ನಿಶ್ಶಂಕಿತರಾದವರು=ಹಾವು ಕಚ್ಚಿದ್ದರೂ ಹೆದರಿಕೆಯಿಲ್ಲದ ವ್ಯಕ್ತಿಗಳು ಮಾನಸಿಕವಾಗಿ ಕುಗ್ಗದೆ ಸಾವನ್ನು ಎದುರಿಸುತ್ತಾರೆ. ದೇಹದ ಎಲ್ಲೆಡೆಗೂ ನಂಜು ಹರಡದಂತೆ ಮಾಡುವ ಮತ್ತು ನಂಜನ್ನು ಹೊರತೆಗೆಯಲು ಇತರರು ಮಾಡುವ ಆರಯಿಕೆಗೆ/ಉಪಚಾರಕ್ಕೆ ಸಹಕರಿಸುತ್ತಾ, ಸಾವಿನಿಂದ ಪಾರಾಗುತ್ತಾರೆ. ಅವರು ಹೊಂದಿರುವ ಮಾನಸಿಕ ಗಟ್ಟಿತನ ಮತ್ತು ಕೆಚ್ಚೆದೆಯ ಒಳಮಿಡಿತವೇ ಅಂಜಿಕೆಯಿಲ್ಲದ ವ್ಯಕ್ತಿಗಳಿಗೆ ಬದುಕಿ ಉಳಿಯುವ ಕಸುವನ್ನು/ಶಕ್ತಿಯನ್ನು ನೀಡುತ್ತದೆ.

ಹೂಸಿ ಏನು ಫಲ
ಮನದಲ್ಲಿ ಲೇಸಿಲ್ಲದನ್ನಕ್ಕ
ಒಂದನಾಡಹೋಗಿ
ಒಂಬತ್ತನಾಡುವ
ಡಂಬಕರ ಮೆಚ್ಚ ಕೂಡಲಸಂಗಯ್ಯ. (114-20 )

ಪೂಸು > ಹೂಸು; ಹೂಸು=ಬಳಿದುಕೊಳ್ಳುವುದು/ಲೇಪಿಸಿಕೊಳ್ಳುವುದು/ತೊಡೆದುಕೊಳ್ಳುವುದು; ಹೂಸಿ=ವಿಬೂತಿಯನ್ನು ಇಲ್ಲವೇ ಗಂದದ ಕೊರಡನ್ನು ನೀರಿನಿಂದ ತೇಯ್ದಾಗ ಬರುವ ಹಸಿಯನ್ನು ಹಣೆ/ತೋಳು/ಹೊಟ್ಟೆಯ ಮೇಲೆ ಬಳಿದುಕೊಳ್ಳುವುದು; ಏನು=ಯಾವುದು; ಫಲ=ಪ್ರಯೋಜನ/ಪರಿಣಾಮ;

ಮನ=ಮನಸ್ಸು/ಚಿತ್ತ; ಮನದಲ್ಲಿ=ಮನಸ್ಸಿನಲ್ಲಿ/ಮನದೊಳಗೆ; ಲೇಸು+ಇಲ್ಲದ+ಅನ್ನಕ್ಕ; ಲೇಸು=ಒಳ್ಳೆಯದು/ಹಿತಕರವಾದುದು/ಮಂಗಳಕರವಾದುದು; ಅನ್ನಕ್ಕ=ವರೆಗೆ/ತನಕ; ಇಲ್ಲದನ್ನಕ್ಕ=ಇಲ್ಲದಿರುವ ತನಕ;

ಹೂಸಿ ಏನು ಫಲ ಮನದಲ್ಲಿ ಲೇಸಿಲ್ಲದನ್ನಕ್ಕ=ವ್ಯಕ್ತಿಯ ಮನದಲ್ಲಿ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಿತವನ್ನುಂಟುಮಾಡಬೇಕೆಂಬ ಒಳ್ಳೆಯ ಉದ್ದೇಶ/ಚಿಂತನೆ/ಆಲೋಚನೆಗಳಿರಬೇಕು. ಮನದಲ್ಲಿ ಒಳ್ಳೆಯ ಒಳಮಿಡಿತಗಳನ್ನು ಹೊಂದಿರದೆ, ಬಹಿರಂಗದಲ್ಲಿ ಮಯ್ಯ ಮೇಲೆ ವಿಬೂತಿಯನ್ನು ಬಳಿದುಕೊಂಡು ನಾಲ್ಕು ಜನರ ಮುಂದೆ ಶಿವಶರಣನಂತೆ ತೋರಿಸಿಕೊಳ್ಳುವುದರಿಂದ ಬಂದ ಪ್ರಯೋಜನವೇನು/ಏನನ್ನು ಪಡೆದಂತಾಗುತ್ತದೆ;

ಒಂದನ್+ಆಡ+ಹೋಗಿ; ಆಡು=ಹೇಳು/ನುಡಿ; ಒಂದನಾಡಹೋಗಿ=ಒಂದು ಸತ್ಯದ/ದಿಟದ/ವಾಸ್ತವದ ಒಂದು ಸಂಗತಿಯನ್ನು ಹೇಳುವ ಬದಲು/ಹೇಳುವುದನ್ನು ಬಿಟ್ಟು; ಒಂಬತ್ತನ್+ಆಡುವ; ಒಂಬತ್ತು=ವಸ್ತು/ವ್ಯಕ್ತಿಗಳನ್ನು ಸೂಚಿಸುವ ಒಂದು ಸಂಕೆ/ಹತ್ತರಿಂದ ಒಂದನ್ನು ಕಳೆದಾಗ ಬರುವ ಸಂಕೆ; ಒಂಬತ್ತನ್ನು ಆಡುವ=ಇಲ್ಲಸಲ್ಲದ/ ಸುಳ್ಳಿನ/ಸಟೆಯ/ವಾಸ್ತವವಲ್ಲದ ಹಲವು ಬಗೆಯ ನುಡಿಗಳನ್ನು ಆಡಲು ತೊಡಗುವ; ಡಂಬ=ಮೋಸ/ವಂಚನೆ/ಕಪಟತನ; ಡಂಬಕ=ಮೋಸಗಾರ/ವಂಚಕ/ಕಪಟಿ;

ಮೆಚ್ಚು=ಒಪ್ಪು/ಸಮ್ಮತಿಸು/ಒಲಿ/ಪ್ರೀತಿಸು; ಮೆಚ್ಚ=ಮೆಚ್ಚುವುದಿಲ್ಲ/ಒಪ್ಪುವುದಿಲ್ಲ; ಕೂಡಲಸಂಗಯ್ಯ=ಈಶ್ವರ/ಶಿವ/ದೇವರು;

ಒಂದಾನಾಡ ಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ ಕೂಡಲಸಂಗಯ್ಯ=ನಿಜದ/ವಾಸ್ತವದ ಸಂಗತಿಯನ್ನು ಹೇಳುವ ಬದಲು, ಹಲವು ಬಗೆಯ ಸುಳ್ಳುಗಳನ್ನು ಹೇಳಿ ಜನರನ್ನು ಮರಳು ಮಾಡುವ ವಂಚಕರನ್ನು ದೇವರು ಮೆಚ್ಚುವುದಿಲ್ಲ. ದೇವರು ಮೆಚ್ಚುವುದು ವ್ಯಕ್ತಿಯ ಒಳ್ಳೆಯ ನಡೆನುಡಿಗಳನ್ನು ಮಾತ್ರ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ಅಬ್ಬಾ ಅಬ್ಬಬ್ಬಾ…ಇಷ್ಟೂ ವರ್ಷ ನಾನು ಹುಡುಕಿದ್ದ ವಸ್ತು ಈಗ ಸಿಕ್ಕಿದಂತಾಯಿತು.

    ವಚನಗಳ ಪದ ಪದಕ್ಕೂ ಈಗಿನ ಕನ್ನಡದಲ್ಲಿ ಅರ್ಥ ತಿಳಿಸಿ ಕೊಟ್ಟು ಪುಣ್ಯ ಕಟ್ಟಿಕೊಂಡಿದ್ದೀರಿ.

    ನಾವು ಭಾವಾರ್ಥ ಕೂಡ ಇದರಿಂದ ಅರಿತೆವು. ಮತ್ತಷ್ಟೂ ಬರಲಿ. ಬರುತ್ತಲೇ ಇರಲಿ ಗೆಳೆಯರೇ.

  2. C.P.Nagaraja says:

    ನಿಮ್ಮ ಉತ್ತೇಜನದ ನುಡಿಗಳಿಗೆ ವಂದನೆಗಳು. ಸಿ ಪಿ ನಾಗರಾಜ

  3. ರಾಜೀವ್ says:

    ವಚನ ಸಾಹಿತ್ಯದ ಮೇರು ಪರ್ವತದಂತಹ ಈ ವಚನಗಳು ನಮ್ಮ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿವೆ ನಮ್ಮ ಜೀವನವನ್ನು ರೂಪಿಸಿವೆ ವಚನಗಳೆಂದರೆ ಜೀವನದ ಪಾಠಗಳು… ತುಸು ಪದಗಳಲ್ಲಿ ಹಿರಿದಾದ ಜ್ಞಾನವನ್ನು ನೀಡುವ ಗ್ರಂಥ ಭಂಡಾರಗಳು….. ಆ ಮಹಾನ್ ಶರಣರ ಭಾವನೆಯನ್ನು…ಜೀವನದ ಅದ್ಭುತಕ್ಕೆ ತಲೆಬಾಗೋಣ 🙏🙏🙏

  4. C.P.Nagaraja says:

    ನಿಮ್ಮ ಉತ್ತೇಜನದ ನುಡಿಗಳಿಗೆ ವಂದನೆಗಳು. ಸಿ ಪಿ ನಾಗರಾಜ

ಅನಿಸಿಕೆ ಬರೆಯಿರಿ: