ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – ಮೊದಲನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamprabhu

ಬರಹಗಾರರ ಮಾತು:  ಶಿವಶರಣರ ವಚನಗಳಿಂದ ಕೆಲ ಸಾಲುಗಳನ್ನು ಆಯ್ಕೆ ಮಾಡಿ ಅವುಗಳ ಹುರುಳು ತಿಳಿಸುವ ಪ್ರಯತ್ನವಿದು. ಸಾಲುಗಳ ಕೊನೆಯಲ್ಲಿ ಕೊಟ್ಟಿರುವ ಅಂಕಿಗಳು ಎಂ.ಎಂ.ಕಲಬುರ‍್ಗಿ ಅವರು ಸಂಪಾದಿಸಿರುವ ಬಸವಣ್ಣನವರ ವಚನ ಸಂಪುಟದ ವಚನದ ಅಂಕಿ ಮತ್ತು ಪುಟದ ಅಂಕಿಯನ್ನು ತಿಳಿಸುತ್ತವೆ. ಹೊತ್ತಿಗೆಯಲ್ಲಿರುವ ಅಲ್ಲಮನ ವಚನಗಳಿಂದ ಈ ಸಾಲುಗಳನ್ನು ಆಯ್ದುಕೊಳ್ಳಲಾಗಿದೆ.

ಬಸವಯುಗದ ವಚನ ಮಹಾ ಸಂಪುಟ: ಒಂದು

ಕರ‍್ನಾಟಕ ಸರ‍್ಕಾರ, ಕನ್ನಡ ಪುಸ್ತಕ ಪ್ರಾದಿಕಾರ, ಬೆಂಗಳೂರು. ತ್ರುತೀಯ ಆವ್ರುತ್ತಿ ( ಬೈಬಲ್ ಮುದ್ರಣ ಮಾದರಿ ) 2016 ]

ಅರಿವು ಅರಿವು ಎನುತಿಪ್ಪಿರಿ
ಅರಿವು ಸಾಮಾನ್ಯವೆ
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು. (475-175)

ಅರಿ=ತಿಳಿ/ಕಲಿ; ಅರಿವು=ತಿಳುವಳಿಕೆ/ವಿವೇಕ/ಯಾವುದು ಸರಿ-ಯಾವುದು ತಪ್ಪು/ಯಾವುದು ನಿಸರ‍್ಗ ಸಹಜವಾದುದು-ಯಾವುದು ಮಾನವ ನಿರ‍್ಮಿತ ಎಂಬ ತಿಳುವಳಿಕೆ; ಎನುತ್ತ+ಇಪ್ಪಿರಿ; ಎನ್ನುತ್ತ=ಎಂದು ಹೇಳುತ್ತ; ಇಪ್ಪಿರಿ=ಇರುವಿರಿ/ಇದ್ದೀರಿ; ಸಾಮಾನ್ಯ=ಎಲ್ಲಾ ಕಡೆ/ಎಲ್ಲಾ ಕಾಲದಲ್ಲಿ ಇರುವಂತಹುದು; ಸಾಮಾನ್ಯವೇ=ಸಾಮಾನ್ಯವಾದುದಲ್ಲ ಅಂದರೆ ಹೆಚ್ಚಿನದು ಏನನ್ನೋ ಒಳಗೊಂಡಿರುವುದು;

ಅರಿವು ಅರಿವು ಎನುತಿಪ್ಪಿರಿ ಅರಿವು ಸಾಮಾನ್ಯವೆ=ಅರಿವನ್ನು ಪಡೆಯುವುದಾಗಲಿ ಇಲ್ಲವೇ ಅರಿವು ಯಾವುದು ಎಂಬುದನ್ನು ಸರಿಯಾಗಿ ತಿಳಿಯುವುದಾಗಲಿ ಸಾಮಾನ್ಯವಾದ ಕೆಲಸವಲ್ಲ.

ಉದಾಹರಣೆ: ಜಗತ್ತಿನಲ್ಲಿರುವ ಮಾನವ ಸಮುದಾಯವನ್ನು ವಿಂಗಡಿಸಿರುವ ಬೇರೆ ಬೇರೆ ಹೆಸರಿನ ಮತಗಳು ಮತ್ತು ನೂರೆಂಟು ಬಗೆಯ ಜಾತಿಗಳು ನಿಸರ‍್ಗ ಸಹಜವಲ್ಲ. ಇವು ಮಾನವರು ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳು ಎಂಬ ವಾಸ್ತವವನ್ನು ಅರಿಯಬೇಕಾದರೆ ಜನ ಸಮುದಾಯಗಳ ಸಾಮಾಜಿಕ ಚರಿತ್ರೆಯನ್ನು ತಿಳಿಯಬೇಕಾಗುತ್ತದೆ. ಜಾತಿ, ಮತ, ದೇವರುಗಳು ಜನ ಸಮುದಾಯಗಳನ್ನು ಒಂದುಗೂಡಿಸುವುದರ ಬದಲು ಪರಸ್ಪರ ಅನುಮಾನ, ಅಪನಂಬಿಕೆ, ಅಸೂಯೆ ಮತ್ತು ಹಗೆತನದ ನಡೆನುಡಿಗಳಿಗೆ ಪ್ರೇರಣೆಯಾಗಿವೆ ಎಂಬ ವಾಸ್ತವವನ್ನು ಮನದಟ್ಟು ಮಾಡಿಕೊಳ್ಳಬೇಕಾದರೆ, ನಿಸರ‍್ಗ ಮತ್ತು ಮಾನವ ಕೇಂದ್ರಿತ ನೆಲೆಯಲ್ಲಿ ವ್ಯಕ್ತಿಯು ತನ್ನ ಮತ್ತು ಇತರರ ಬದುಕನ್ನು ನೋಡಬೇಕು.

ಹಿಂದಣ=ಹಿಂಬದಿಯಲ್ಲಿರುವ/ಹಿಂದುಗಡೆಯಲ್ಲಿರುವ; ಹೆಜ್ಜೆ=ನಡೆದಾಗ ಪಾದವನ್ನು ಊರಿದ/ಇಟ್ಟ ಜಾಗದ ಗುರುತು; ನೋಡು=ಕಾಣು/ತಿಳಿ/ಅರಿ; ಕಂಡ+ಅಲ್ಲದೆ;

ನೋಡಿ ಕಂಡಲ್ಲದೆ=ಚೆನ್ನಾಗಿ ನೋಡಿ ಸರಿಯಾಗಿ ತಿಳಿದುಕೊಳ್ಳದ ಹೊರತು; ನಿಂದ=ಈಗ ನಿಂತಿರುವ; ಹೆಜ್ಜೆ+ಅನ್+ಅರಿಯಬಾರದು; ಅನ್=ಅನ್ನು; ಅರಿಯಬಾರದು=ತಿಳಿದುಕೊಳ್ಳಲಾಗುವುದಿಲ್ಲ/ಅರಿತುಕೊಳ್ಳಲು ಆಗುವುದಿಲ್ಲ;

ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು=ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ. ಈಗ ನಾವು ಬಾಳುತ್ತಿರುವ ಸಮಾಜದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವ ಬಗೆಯ ನಡೆನುಡಿಗಳು ಜನರಿಗೆ ಒಳಿತನ್ನು ಉಂಟುಮಾಡುತ್ತವೆ/ಕೇಡನ್ನು ಬಗೆಯುತ್ತವೆ ಎಂಬುದನ್ನು ವ್ಯಕ್ತಿಯು ಮೊದಲು ತಿಳಿದುಕೊಳ್ಳಬೇಕು. ಈ ಬಗೆಯ ಅರಿವನ್ನು ಪಡೆದಾಗ ಮಾತ್ರ ಒಟ್ಟು ಜನಸಮುದಾಯದ ನೆಮ್ಮದಿಯ ಬದುಕಿಗೆ ಹಾನಿಯನ್ನುಂಟುಮಾಡುವ ಸಂಪ್ರದಾಯಗಳನ್ನು ಮತ್ತು ಆಚರಣೆಗಳನ್ನು ತ್ಯಜಿಸಿ , ಒಳ್ಳೆಯ ನಡೆನುಡಿಗಳನ್ನು ಅಳವಡಿಸಿಕೊಂಡು ಬಾಳಬೇಕು ಎಂಬುದು ಮನದಟ್ಟಾಗುತ್ತದೆ.

ಎಲ್ಲವನೂ ಸಾಧಿಸ ಹೋದಡೆ
ಏನೂ ಇಲ್ಲದಂತಾಯಿತ್ತು. (456-173)

ಎಲ್ಲ=ಸಕಲ/ಸರ‍್ವ/ಸಂಪೂರ‍್ಣ/ಸಮಗ್ರ; ಎಲ್ಲವನೂ=ಯಾವುದೊಂದನ್ನು ಬಿಡದಂತೆ ಸಕಲವನ್ನು; ಸಾಧಿಸು=ಪಡೆ/ಹೊಂದು/ದೊರಕಿಸಿಕೊಳ್ಳುವುದು/ವಶಪಡಿಸಿಕೊಳ್ಳುವುದು; ಹೋದಡೆ=ಹೋದರೆ; ಸಾಧಿಸ ಹೋದಡೆ=ಪಡೆದುಕೊಳ್ಳಲು ಪ್ರಯತ್ನಿಸಿದರೆ/ತನ್ನದನ್ನಾಗಿಸಿಕೊಳ್ಳಲು ಮುನ್ನುಗ್ಗಿದ್ದರೆ/ಹಂಬಲಿಸಿದರೆ; ಏನು=ಯಾವುದು; ಇಲ್ಲದ+ಅಂತೆ+ಆಯಿತ್ತು; ಅಂತೆ=ಹಾಗೆ/ಆ ಬಗೆ/ಆ ರೀತಿ;

ಏನೂ ಇಲ್ಲದಂತಾಯಿತು=ಒಂದಾದರೂ ದೊರಕದಂತಾಯಿತು/ಯಾವುದು ದಕ್ಕಲಿಲ್ಲ/ಸಿಗಲಿಲ್ಲ;

ವ್ಯಕ್ತಿಯು ಯಾವುದೇ ಒಂದು ಕೆಲಸವನ್ನು ಕಯ್ಗೊಂಡಾಗ, ಮೊದಲು ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ನಂತರ ಮತ್ತೊಂದನ್ನು ಕಯ್ಗೊಳ್ಳಬೇಕು. ಒಂದೇ ಬಾರಿಗೆ ದೊಡ್ಡ ಸಂಪತ್ತನ್ನು/ಹೆಸರನ್ನು ಪಡೆದುಕೊಳ್ಳಬೇಕೆಂಬ ಹಂಬಲದಿಂದ ಅನೇಕ ಕೆಲಸಗಳಲ್ಲಿ ತೊಡಗಿದರೆ, ಯಾವೊಂದು ಕೆಲಸವನ್ನು ಗಮನವಿಟ್ಟು ಮಾಡಲಾಗದೆ ಮತ್ತು ಕಯ್ಗೊಂಡಿದ್ದನ್ನು ಪರಿಪೂರ‍್ಣವಾಗಿ ಮಾಡಿ ಗುರಿ ಮುಟ್ಟಲಾಗದೆ, ತನ್ನ ದುಡಿಮೆಯ ಶ್ರಮ, ಕಾಲ ಮತ್ತು ತನ್ನಲ್ಲಿದ್ದ ಒಡವೆ ವಸ್ತುಗಳೆಲ್ಲವನ್ನೂ ಕಳೆದುಕೊಳ್ಳುತ್ತಾನೆ ಎಂಬ ಎಚ್ಚರಿಕೆಯನ್ನು ಈ ನುಡಿಗಳು ಸೂಚಿಸುತ್ತಿವೆ.

ಏನೆಂದರಿಯರು
ಎಂತೆಂದರಿಯರು
ಅರಿವನರಿದೆವೆಂಬರು.(345-165)

ಏನ್+ಎಂದು+ಅರಿಯರು; ಏನು=ಯಾವುದೇ ಒಂದು ವಸ್ತು/ಜೀವಿ/ಸಂಗತಿಯ ಬಗೆಗಿನ ವಾಸ್ತವ/ದಿಟ/ಸತ್ಯ ಯಾವುದು ಎಂಬುದನ್ನು; ಅರಿಯರು=ತಿಳಿಯರು; ಎಂತು+ಎಂದು+ಅರಿಯರು;

ಎಂತು=ಯಾವ ರೀತಿ/ಬಗೆ/ಕ್ರಮ;

ಅರಿವು+ಅನ್+ಅರಿದೆವು+ಎಂಬರು; ಅರಿವನ್=ತಿಳುವಳಿಕೆಯನ್ನು/ವಿವೇಕವನ್ನು; ಅರಿದೆವು=ತಿಳಿದುಕೊಂಡಿದ್ದೇವೆ; ಎಂಬರು=ಎಂದು ಹೇಳಿಕೊಳ್ಳುತ್ತಾರೆ; ಅರಿವನರಿದೆವೆಂಬರು=ನಮಗೆ ಎಲ್ಲವೂ ಚೆನ್ನಾಗಿ ತಿಳಿದಿದೆ ಎನ್ನುತ್ತಾರೆ;

ಅರಿವನ್ನು ಪಡೆಯಬೇಕಾದರೆ ಯಾವುದೇ ಒಂದು ಸಂಗತಿಯನ್ನು ಕಾರ‍್ಯ ಕಾರಣಗಳ ನೆಲೆಯಲ್ಲಿ ಒರೆಹಚ್ಚಿ ನೋಡಬೇಕು. ಮಾನವರ ಬದುಕಿನಲ್ಲಿ ನಡೆಯುವಂತಹ ಎಲ್ಲಾ ಸಂಗತಿಗಳಿಗೂ ನಿಸರ‍್ಗದಲ್ಲಿ ನಡೆಯುವ ಕ್ರಿಯೆಗಳು ಮತ್ತು ಮಾನವರ ನಡೆನುಡಿಗಳಿಂದ ಉಂಟಾಗುವ ಪರಿಣಾಮಗಳು ಕಾರಣವಾಗಿರುತ್ತವೆ.

ಆದ್ದರಿಂದ ಯಾವುದೇ ಒಂದು ಸಂಗತಿಯ ವಾಸ್ತವವನ್ನು ಅರಿತುಕೊಳ್ಳುವಾಗ “ ಅದು ಏನು? ಅದು ಯಾವ ರೀತಿ ಉಂಟಾಯಿತು? “ ಎಂಬುದನ್ನು ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಅದು ಹಿಂದಿನಿಂದಲೂ ಆಚರಣೆಯಲ್ಲಿ ಬಂದಿರುವ ಸಂಪ್ರದಾಯದ ಕುರುಡು ನಂಬಿಕೆಯಾಗುತ್ತದೆಯೇ ಹೊರತು ಅರಿವು ಎನಿಸಿಕೊಳ್ಳುವುದಿಲ್ಲ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

 1. ಯೋಗೀಶ್ says:

  ಆದಷ್ಟು ಹೆಚ್ಚು ವಚನಗಳನ್ನು ಸೇರಿಸಿ….. ಒಳ್ಳೆಯ ಕೆಲಸ ಧನ್ಯವಾದಗಳು ಸರ್….

 2. C.P.Nagaraja says:

  ನಿಮ್ಮಂತಹ ಓದುಗರ ಉತ್ತೇಜನದ ನುಡಿಗಳು ವಚನಗಳ ಓದು ಬರಹಕ್ಕೆ ಕಾರಣವಾಗಿವೆ.ವಂದನೆಗಳು. ಸಿ.ಪಿ.ನಾಗರಾಜ

 3. Sathish Kumar says:

  tumBaa uttama kaarya…

 4. C.P.Nagaraja says:

  ಈ ರೀತಿ ಬರೆದುದನ್ನು ಪ್ರಕಟಿಸುತ್ತಿರುವ ಹೊನಲು ಪತ್ರಿಕೆ ಮತ್ತು ಅದನ್ನು ಓದಿ ಒಳ್ಳೆಯ ಮಾತುಗಳಿಂದ ನನ್ನ ಓದು ಬರಹಕ್ಕೆ ಉತ್ತೇಜನ ನೀಡುತ್ತಿರುವ ಹೊನಲು ಓದುಗರ ಬಳಗಕ್ಕೆ ಮತ್ತೊಮ್ಮೆ ವಂದನೆಗಳನ್ನು ಸಲ್ಲಿಸುತ್ತೇನೆ.

ಅನಿಸಿಕೆ ಬರೆಯಿರಿ: