ಹಾಲ್ಗಟ್ಟಿ (ಚೀಸ್) – ಒಂದು ಕಿರುಪರಿಚಯ

 

– ಮಾರಿಸನ್ ಮನೋಹರ್.

ಮೊಟ್ಟ ಮೊದಲ ಬಾರಿಗೆ ಮನೆಯಲ್ಲಿ ಪಾಲಕ ಪನೀರ ಮಾಡಿದ್ದರು. ಚಪಾತಿಯೊಂದಿಗೆ ಅದನ್ನು ತಿನ್ನಲು ಹೋದೆವು. ದಟ್ಟ ಹಾಲಿನ ವಾಸನೆಯ ಪನೀರನ್ನು ನಮಗೆ ತಾಳಲೂ ಆಗಲಿಲ್ಲ ತಿನ್ನಲೂ ಆಗಲಿಲ್ಲ. ಪನೀರ್ ತುಂಡುಗಳನ್ನು ಬದಿಗೆ ಸರಿಸಿ ಪಾಲಕ್ ಗ್ರೇವಿಯನ್ನು ಹಚ್ಚಿಕೊಂಡು ತಿಂದೆವು. ಮನೆಯಲ್ಲಿ ಯಾರಿಗೂ ಪನೀರಿನಿಂದ ಮಾಡಿದ ಅಡುಗೆ ತಿಂದು ಗೊತ್ತಿರಲಿಲ್ಲ. ಹಾಲಿನ ವಾಸನೆಯಿಂದಲೇ ದೂರ ಸರಿಯುತ್ತಿದ್ದ ಅಣ್ಣನಂತೂ ಪಾಲಕ ಪನೀರ್ ಪ್ಲೇಟನ್ನು ಮುಟ್ಟಲೂ ಇಲ್ಲ. ಪನೀರ್ ತೆಂಕಣ ಇಂಡಿಯಾದಲ್ಲಿ ಪ್ರಸಿದ್ದ ತಿಂಡಿಯಲ್ಲ. ತೆಂಕಣ ಇಂಡಿಯಾದ ಯಾವ ಅಡುಗೆಯನ್ನೂ ಹಾಲು ಇಲ್ಲವೇ ಪನೀರ್ ಬಳಸಿ ಮಾಡುವುದಿಲ್ಲ. ಆದರೆ ಪನೀರು ಬಡಗಣ ಇಂಡಿಯಾದಲ್ಲಿ ಮಾಡಲ್ಪಡುತ್ತದೆ ಮತ್ತು ಅಡುಗೆ ಬಳಕೆಯಲ್ಲಿ ಇದೆ. ಪನೀರ್ ಹಾಲ್ಗಟ್ಟಿನ (ಚೀಸಿನ) ಕಚ್ಚಾ ರೂಪ. ಪೋಟೋ ಕ್ಲಿಕ್ಕಿಸುವಾಗ ನಗಿಸಲು ಹೇಳುವ “ಚೀಸ್….” ಇದೇ ಹಾಲ್ಗಟ್ಟಿ!

ಹಾಲು ಜಗತ್ತಿನ ಎಲ್ಲ ನಾಡು ಅರಿಮೆ ನಡವಳಿಕೆಗಳಲ್ಲಿ ಹಾಸು ಹೊಕ್ಕಿದೆ. “ಕಾಯದ ಹಾಲ ಕೆನೆ ಬೇಡಿ…”, “ಸುಲಿದ ಬಾಳೆಯ ಹಣ್ಣಿನಂದದಿ ಉಶ್ಣ ಅಳಿದ ಹಾಲಿನಂದದಿ…” “ತನ್ನ ಮಗನಿಗೆ ಹಾಲು ಅಕ್ಕನ ಮಗನಿಗೆ ಮಜ್ಜಿಗೆ”, ಹೀಗೆ ಜನಪದರ ಮತ್ತು ಕವಿಗಳ ಹೊಗಳಿಕೆಯಲ್ಲಿ ಹಾಲು ಕಾಣಸಿಗುತ್ತದೆ. ಹಾಲಿನಿಂದ ಮೊಸರು ಮೊಸರಿನಿಂದ ಬೆಣ್ಣೆ ಮತ್ತು ಮಜ್ಜಿಗೆ ಬೆಣ್ಣೆಯಿಂದ ತುಪ್ಪ ಇದು ತೆಂಕಣ ಇಂಡಿಯಾದವರಿಗೆ ಗೊತ್ತಿರುವ ಹಾಲು ಸಾಗುವ ಹಾದಿ. ಹಾಲಿಗೆ ಹುಳಿ ಹಾಕಿ ಅದನ್ನು ಒಡೆದು ಅದರಲ್ಲಿನ ನೀರು ಮತ್ತು ಗಟ್ಟಿ (milk solids) ಬೇರೆ ಬೇರೆ ಮಾಡಿ ಗಟ್ಟಿಯನ್ನು ಬಟ್ಟೆಯಲ್ಲಿ ಸೋಸಿದರೆ ಆಗ ಉಳಿಯುವುದೇ ‘ಹಾಲ್ಗಟ್ಟಿ’ (ಚೀಸ್). ಇದು ಬಡಗಣ ಇಂಡಿಯಾದ ಕಡೆ ‘ಪನೀರ್’ ಎಂದು ಪ್ರಸಿದ್ದವಾಗಿದೆ. ಮಾವಿನ ಕಾಯಿಗಳನ್ನು ತುಂಬಾ ಕಾಲ ಕೆಡದೆ ಇರಲು ಅದಕ್ಕೆ ಉಪ್ಪು ಸಾಸಿವೆ ಹಾಕಿ ಉಳಿಸಿಕೊಳ್ಳುವುದು ಗೊತ್ತೇ ಇದೆ. ಅದೇ ತರಹ ಹಾಲನ್ನು ತುಂಬಾ ಹೊತ್ತಿನವರೆಗೆ ಉಳಿಸಿಕೊಳ್ಳುವ ಆಸೆಯಿಂದ ಈ ಹಾಲ್ಗಟ್ಟಿ ಮಾಡುವುದು ಹುಟ್ಟಿಕೊಂಡಿತು.

ಇಂಡಿಯಾದಲ್ಲಿ ಹಾಲ್ಗಟ್ಟಿ ಅಂದರೆ ಅದು ಬಡಗಣ ಇಂಡಿಯಾದ ಪನೀರ್ ಆಗಿರುತ್ತದೆ. ಇಂಡಿಯಾದಲ್ಲಿ ಪನೀರ್ ಬಿಟ್ಟು ಬೇರೆ ಹಾಲ್ಗಟ್ಟಿನ ಬಗೆಯು ಕಾಣ ಸಿಗುವುದಿಲ್ಲ. ತೆಂಕಣ ಇಂಡಿಯಾದ ನಾಡುಗಳಾದ ಕರ‍್ನಾಟಕ, ತಮಿಳುನಾಡು, ಆಂದ್ರ, ಮರವಟ್ಟಿ (ಮಹಾರಾಶ್ಟ್ರ), ತೆಲಂಗಾಣ, ಕೇರಳಗಳಲ್ಲಿ ಸಿಹಿ ತಿನಿಸುಗಳನ್ನು ಬಿಟ್ಟರೆ ಬೇರೆ ಅಡುಗೆಗಳಲ್ಲಿ ಹಾಲು ಇಲ್ಲವೇ ಹಾಲ್ಗಟ್ಟಿ ಬಳಸುವುದಿಲ್ಲ! ಆದರೆ ಅಮೆರಿಕ ರಾಜ್ಯಗಳು, ಇಂಗ್ಲೆಂಡು ಯುರೋಪಿನ ನಾಡುಗಳಲ್ಲಿ ಹಾಲ್ಗಟ್ಟಿ ತುಂಬಾ ಪ್ರಸಿದ್ದವಾಗಿದೆ ಮತ್ತು ನಿಚ್ಚ ಬಳಕೆಯಲ್ಲಿದೆ. ಈ ನಾಡುಗಳಲ್ಲಿ ಹಾಲ್ಗಟ್ಟಿನ ಬೇರೆ ಬೇರೆ ಬಗೆಗಳು ಇವೆ. ನಮ್ಮಲ್ಲಿ ಉಪ್ಪಿನಕಾಯಿಗಳಲ್ಲಿ ನೂರಾರು ಬಗೆಗಳು ಇರುವಂತೆ; ಮಾವಿನಕಾಯಿ, ಅಪ್ಪೆಮಿಡಿ, ನೆಲ್ಲಿಕಾಯಿ, ಅಮಟೆಕಾಯಿ, ಮೆಣಸಿನಕಾಯಿ, ನಿಂಬೆ ಕಾಯಿ, ಚಳ್ಳೆಕಾಯಿ ಹೀಗೆ. ಇದೇ ತರಹ ಅಮೆರಿಕ ಯುರೋಪು ಇಂಗ್ಲೆಂಡುಗಳಲ್ಲಿ ಬಗೆ ಬಗೆಯ ಹಾಲ್ಗಟ್ಟಿಗಳು ಇವೆ; ಪಾರ‍್ಮೆಸಾನ, ಚೆಡ್ಡರ್, ಮೊಜ್ಜರೆಲ್ಲಾ, ಸ್ವಿಸ್, ನೀಲಿ ಹಾಲ್ಗಟ್ಟಿ, ಹೌಡಾ ಹೀಗೆ. ಈ ಹಾಲ್ಗಟ್ಟಿಗಳನ್ನು ಹಸು, ಆಡು, ಕುರಿಗಳ ಹಾಲಿನಿಂದ ಮಾಡುತ್ತಾರೆ. ಎಲ್ಲಾ ಹಾಲ್ಗಟ್ಟಿಗಳು ಹಾಲಿನಿಂದ ಮಾಡಿದ್ದರೂ ರುಚಿ ಬಣ್ಣ ಮತ್ತು ಗಟ್ಟಿತನದಲ್ಲಿ ಬೇರೆ ಬೇರೆ ಆಗಿರುತ್ತವೆ.

ಯುರೋಪಿನ ನಾಡುಗಳಾದ ನೆದರಲ್ಯಾಂಡ್ಸ್ (ಹಾಲೆಂಡ್), ಸ್ವಿಟ್ಜರಲ್ಯಾಂಡ್,ಪ್ರಾನ್ಸ್ ,ಇಟಲಿ ನಾಡುಗಳಲ್ಲಿ ಮಾಡುವ ಹಾಲ್ಗಟ್ಟಿಗಳು ಪ್ರಸಿದ್ದವಾಗಿವೆ ಮತ್ತು ಹೆಚ್ಚು ಬೆಲೆಯುಳ್ಳವುಗಳೂ ಆಗಿವೆ. ನೆದರಲ್ಯಾಂಡ್ಸ್ ಮತ್ತು ಸ್ವಿಟ್ಜರಲ್ಯಾಂಡುಗಳ ಬೆಟ್ಟದ ಪ್ರದೇಶಗಳಲ್ಲಿ ಹುಲ್ಲು ಗಾವಲುಗಳನ್ನು ಮಾಡುತ್ತಾರೆ. ಆ ಹುಲ್ಲುಗಾವಲುಗಳಲ್ಲಿ ತಮ್ಮ‌ ದನಗಳನ್ನು ಮೇಯಲು ಬಿಡುತ್ತಾರೆ. ಅಲ್ಲಿ ಬೆಳೆಯುವ ಹುಲ್ಲು ನೀರು ಮತ್ತು ಮಣ್ಣಿನಲ್ಲಿರುವ ಪೋಶಕಾಂಶಗಳು ಹಾಲಿಗೆ ತಮ್ಮದೇ ರುಚಿ ಕೊಡುತ್ತವೆ. ಅಂತಹ ಹುಲ್ಲನ್ನು ತಿಂದ ದನಗಳಿಂದ ಹಾಲು ಕರೆಯಲಾಗುತ್ತದೆ. ಆ ಹಾಲನ್ನು ದೊಡ್ಡ ಬೋಗುಣಿಗಳಲ್ಲಿ ಒಂದು ಕಾವಿನ ಮಟ್ಟಕ್ಕೆ ಕಾಯಿಸುತ್ತಾರೆ. ಈ ಹಾಲಿನಲ್ಲಿ ರೆನ್ನೆಟ ಎಂಬ ಎನ್ಜಾಯಿಂ (enzyme) ಸೇರಿಸುತ್ತಾರೆ. ರೆನ್ನೆಟ ಹಾಲಿಗೆ ಹಾಕದಿದ್ದರೆ ಹಾಲಿನಲ್ಲಿನ ಗಟ್ಟಿ ಒಂದಕ್ಕೊಂದು ಸೇರುವುದಿಲ್ಲ ಮತ್ತು ಹಾಲು-ನೀರು ಬೇರೆ ಬೇರೆ ಆಗದು.

ರೆನ್ನೆಟ ಎಂಜೈಮಿನಿಂದ ಒಡೆದ ಹಾಲನ್ನು ತಂತಿ ಬಾಕುವಿನಿಂದ ಕೊಯ್ಯುತ್ತಾರೆ. ಆಮೇಲೆ ಕೈಯಿಂದ ಒತ್ತುತ್ತಾ ಗಟ್ಟಿಯನ್ನು ನೀರನ್ನು ಬೇರೆ ಬೇರೆ ಮಾಡುತ್ತಾರೆ. ಒಂದು ಬಟ್ಟೆಯ ಜೋಳಿಗೆಯಲ್ಲಿ ಈ ಒಡೆದ ಹಾಲನ್ನು ಹಾಲನ್ನು ಹಾಕಿ ನೀರನ್ನು ಬಸಿಯುತ್ತಾರೆ. ಈ ಬಸಿದ ನೀರಿಗೆ ‘ವೇ’ ಎಂದು ಕರೆಯುತ್ತಾರೆ. ನಾವು ಇದನ್ನು ‘ಹಾಲ್ಕಟ್ಟು’ ಎಂದು ಕರೆದರೆ ಸಾಕು. ಕಡಲೆ ಬೇಳೆ ಕುದಿಸಿ ಅದರಿಂದ ಬಸಿದ ನೀರನ್ನು ‘ಕಟ್ಟು’ ಎಂದು ಕರೆಯುತ್ತೇವಲ್ಲಾ ಹಾಗೆ! ಇಂತಹ ಬಟ್ಟೆಯನ್ನು ‘ಹಾಲ್ಗಟ್ಟಿನ ಬಟ್ಟೆ’ (ಚೀಸ್ ಕ್ಲಾತ್) ಎನ್ನುತ್ತಾರೆ. ಈ ಬಟ್ಟೆ ತೆಳುವಾಗಿದ್ದರೂ ತುಂಬಾ ಗಟ್ಟಿಯಾಗಿ ಇರುತ್ತದೆ, 15-20 ಕಿಲೋ ಹಾಲ್ಗಟ್ಟಿನ ತೂಕ ತಾಳಬಲ್ಲದು! ಹಾಲ್ಗಟ್ಟಿನ ಬಟ್ಟೆಯಿಂದ ಗಟ್ಟಿಯನ್ನು ತೆಗೆದುಕೊಂಡು ಹಾಲ್ಗಟ್ಟಿನ ದುಂಡನೆಯ ಗಾಲಿಗಳ ಆಕಾರದ ಅಚ್ಚಿನಲ್ಲಿ ಹಾಕುತ್ತಾರೆ. ಅವುಗಳ ಮೇಲೆ ಬಾರವಾದ ಉಕ್ಕಿನ ವಸ್ತುಗಳನ್ನು ಇಟ್ಟು ಅಳಿದುಳಿದ ನೀರನ್ನು ಒತ್ತಿಸಿ ಹೊರಗೆ ತೆಗೆಯುತ್ತಾರೆ.

ಈ ಹಾಲ್ಗಟ್ಟಿ ಮಾಡುವವನನ್ನು, ಹಾಲ್ಗಟ್ಟಿನ ಗಾಲಿಗಳನ್ನು ಜೋಪಾನವಾಗಿ ಇಡುವವನ್ನು ಮತ್ತು ಮಾರುವವನನ್ನು ಹಾಲ್ಗಟ್ಟಿ ಮಾಸ್ಟರ್ (ಚೀಸ್ ಮಾಸ್ಟರ್) ಎನ್ನುತ್ತಾರೆ. ಹಾಲ್ಗಟ್ಟಿನಲ್ಲಿ ಬಸಿದ ಮೇಲೂ ಉಳಿಯುವ ನೀರಿನ ಅಂಶದ ಮೇಲೆ ಅದರ ತಾಳಿಕೆ-ಬಾಳಿಕೆ ನಿಂತುಕೊಂಡಿದೆ. ಹಾಲ್ಗಟ್ಟಿನಲ್ಲಿ ನೀರಿನ ಅಂಶ ಹೆಚ್ಚಿದ್ದರೆ ಅದು ಕಡಿಮೆ ಕಾಲ ಚೆನ್ನಾಗಿರುತ್ತದೆ ನೀರಿನ ಅಂಶ ತುಂಬಾ ಕಡಿಮೆ ಇದ್ದರೆ ಒಂದು ವರ‍್ಶಗಳೇ ಅಲ್ಲ ಎರಡು ಮೂರು ವರ‍್ಶಗಳೂ ಕೆಡದೆ ಚೆನ್ನಾಗಿರುತ್ತದೆ. ಈ ಹಾಲ್ಗಟ್ಟಿನ ಗಾಲಿಗಳನ್ನು ಕಟ್ಟಳೆಯ ಕಾವುಮನೆ (controlled temperature room)ಗಳ ಅಟ್ಟಣಿಗೆಗಳಲ್ಲಿ ಇಡುತ್ತಾರೆ. ಇಲ್ಲಿ ಕಾವಿನ ಮಟ್ಟ ಏರುಪೇರು ಆಗದಂತೆ ಜೋಪಾನ ಮಾಡುತ್ತಾರೆ. ಕಾವು ಹೆಚ್ಚು-ಕಡಿಮೆ ಆಗಿಬಿಟ್ಟರೆ ಹಾಲ್ಗಟ್ಟಿನ ಗಾಲಿಯ ಮೇಲ್ಪದರದ ಮೇಲೆ ಬೂಸ್ಟು ಬೆಳೆಯುತ್ತದೆ. ಹಾಗಂತ ಹಾಲ್ಗಟ್ಟಿ ಹಾಳಾಯಿತು ಅಂತ ಅಲ್ಲ. ಅದರ ರುಚಿಯಲ್ಲಿ ಸ್ವಲ್ಪ ಮೇಲೆ-ಕೆಳಗೆ ಆಗುತ್ತದೆ.

ಹಾಲ್ಗಟ್ಟಿ ಬಳಕೆಯಲ್ಲಿರುವ ನಾಡುಗಳಲ್ಲಿ ಪ್ರಸಿದ್ದವಾಗಿರುವವು:

1. ಮೊಜ್ಜರೆಲ್ಲಾ ಹಾಲ್ಗಟ್ಟಿ

ಇದು ಇಟಲಿಯಲ್ಲಿ ಹುಟ್ಟಿದ್ದು ತುಂಬಾ ಮೆತ್ತಗೆ ಇರುತ್ತದೆ ಮತ್ತು ಇದರಲ್ಲಿ ನೀರಿ ಅಂಶ ಹೆಚ್ಚು. ಇದನ್ನು ಎಮ್ಮೆಯ ಹಾಲಿನಿಂದ ಮಾಡುತ್ತಾರೆ. ತಿನ್ನಲು ತುಂಬಾ ರುಚಿಕರ ವಾಗಿರುತ್ತದೆ. ಮೊಜ್ಜರೆಲ್ಲಾ ಅಂದ ಒಡನೆ ಪಿಜ್ಜಾ ನೆನಪಿಗೆ ಬರುತ್ತದೆ ಅಲ್ಲವೇ?! ಹಾಂ ಅದೇ ಪಿಜ್ಜಾಗಳ ಮೇಲೆ ಮೊಜ್ಜರೆಲ್ಲಾ ಹಾಲ್ಗಟ್ಟಿ ಹಾಕುತ್ತಾರೆ.

2. ಚೆಡ್ಡರ್ ಹಾಲ್ಗಟ್ಟಿ

ಇದಕ್ಕೆ ಸಿಹಿಗುಂಬಳದ ಅರಿಶಿಣ ಬಣ್ಣವಿದೆ. ತುಂಬಾ ಗಟ್ಟಿಯಾದ ಹಾಲ್ಗಟ್ಟಿಯಿದು ಮತ್ತು ಕೊಯ್ಯುವಾಗ ಉದುರುತ್ತದೆ. ಅಂದರೆ ಇದರಲ್ಲಿ ನೀರಿನ ಅಂಶ ತುಂಬಾ ಕಡಿಮೆ. ಹಾಲ್ಗಟ್ಟಿಗಳನ್ನು ಮಾರುವುದಕ್ಕಿಂತ ಮೊದಲು ಅವುಗಳನ್ನು ಮಾಗಿಸುತ್ತಾರೆ (ಏಜಿಂಗ್). ಹೀಗೆ ಮಾಗಿಸುವುದು 6 ತಿಂಗಳಿಂದ ಹಿಡಿದು 3 ವರ‍್ಶಗಳವರೆಗೂ ನಡೆಯುತ್ತದೆ. ಹೆಚ್ಚು ಮಾಗಿದ ಹಾಲ್ಗಟ್ಟಿ ಬಿರುಸಾಗಿ ಗಟ್ಟಿಯಾಗಿ ಮತ್ತು ಗಾಟು ರುಚಿಯದ್ದಾಗಿ ಇರುತ್ತದೆ. ಅಂತಹ ಹಾಲ್ಗಟ್ಟಿಗಳಲ್ಲಿ ಈ ಚೆಡ್ಡರ್ ಹಾಲ್ಗಟ್ಟಿ ತುಂಬಾ ಪೇಮಸ್ಸು! ಇದು ಬರ‍್ಗರಗಳ ನಡುವೆ ತುರಿದು ಹಾಕುತ್ತಾರೆ. ಟಿವಿ ಮತ್ತು ಅಡುಗೆ ಶೋಗಳಲ್ಲಿ ತುರಿಮಣೆಯಿಂದ ತುರಿದು ಹಾಕುವ ಹಾಲ್ಗಟ್ಟಿ ಬಹುತೇಕ ಚೆಡ್ಡರ್ ಹಾಲ್ಗಟ್ಟಿಯೇ ಆಗಿರುತ್ತದೆ.

3. ಪಾರ‍್ಮೆಸಾನ ಹಾಲ್ಗಟ್ಟಿ

ಇದು ಕೂಡ ಮಾಗಿಸಲಾದ ಗಟ್ಟಿಯಾದ ಹಾಲ್ಗಟ್ಟಿ ಆಗಿದೆ. ಇದನ್ನು ಇಟಲಿಯನ್ನರು ಮಾಡುವ ಪಾಸ್ತಾಗಳ ಮೇಲೆ ತುರಿದು ಹಾಕುತ್ತಾರೆ.

4. ಹವ್ದಾ/ಹವ್ಡಾ ಹಾಲ್ಗಟ್ಟಿ

ನೆದರಲ್ಯಾಂಡ್ಸ್‌ಗಳಲ್ಲಿ ಮಾಡಲ್ಪಡುವ ಈ ಹವ್ದಾ ಹಾಲ್ಗಟ್ಟಿ ಆಟೋದ ಗಾಲಿಗಿಂತಲೂ ದೊಡ್ಡದಾಗಿ ಇರುತ್ತದೆ! ಇದು ಗಟ್ಟಿಯಾದ ಹಾಲ್ಗಟ್ಟಿಯಾಗಿದ್ದು ಆ ದೇಶದಲ್ಲಿ ಬಿಯರ್ ನೊಂದಿಗೆ ತಿನ್ನುತ್ತಾರೆ

5. ಸ್ವಿಸ್ ಹಾಲ್ಗಟ್ಟಿ

ಟಾಮ್ ಎಂಡ್ ಜೆರ‍್ರಿ ಕಾರ‍್ಟೂನು ಎಲ್ಲರೂ ನೋಡಿದ್ದೀರಿ. ಅದರಲ್ಲಿ ಟಾಮ್ ಬೆಕ್ಕು ಜೆರ‍್ರಿ ಇಲಿಯನ್ನು ಹಿಡಿಯಲು ಬೋನಿನ ಮೊಳೆಗೆ ತೂತು ಇರುವ ಒಂದು ಹಾಲ್ಗಟ್ಟಿನ ತುಂಡನ್ನು ಸಿಕ್ಕಿಸುತ್ತದೆ, ಅದೇ ಸ್ವಿಸ್ ಹಾಲ್ಗಟ್ಟಿ! ಅರೆ ಗಟ್ಟಿಯಾದ ಈ ಹಾಲ್ಗಟ್ಟಿನಲ್ಲಿ ಒಳಗೆ ತೂತುಗಳು ಇರುತ್ತವೆ. ಅಮೆರಿಕದಲ್ಲಿ ತುಂಬಾ ಪೇಮಸ್ ಆಗಿರುವಂತಹ ಹಾಲ್ಗಟ್ಟಿಯಿದು. ಹಾಲ್ಗಟ್ಟಿಯನ್ನು ಮಾಗಿಸುವಾಗ ಅದರ ಒಳಗೆ ಇಂಗಾಲದ ಡೈಆಕ್ಸೈಡ್ ಹುಟ್ಟಿ ಅದರ ಗುಳ್ಳೆಗಳು ಇಂತಹ ತೂತುಗಳನ್ನು ಮಾಡುತ್ತವೆ. ಇದು ಪೇಲವ ಅರಿಶಿಣ ಬಣ್ಣದ್ದು ಆಗಿದೆ, ಹೆಚ್ಚಾಗಿ ಸ್ಯಾಂಡವಿಚ್ಚು ಆಮ್ಲೆಟುಗಳಲ್ಲಿ ಬಳಸುತ್ತಾರೆ.

ಹಾಲ್ಗಟ್ಟಿನ ಬಗ್ಗೆ ಹೇಳುವಾಗ ‘ಹಾಲೊಗ್ಗದಿಕೆ’ ಅತವಾ ‘ಹಾಲಿನ ಅಲರ‍್ಜಿ’ (ಲ್ಯಾಕ್ಟೋಸ್ ಇನಟಾಲರೆನ್ಸ್) ಬಗ್ಗೆ ಹೇಳಲೇಬೇಕು. ನಾವು ದೊಡ್ಡವರಾಗುತ್ತಾ ಹೋದಂತೆ ನಮ್ಮ ಹೊಟ್ಟೆಯು ಲ್ಯಾಕ್ಟೇಸ್ ಎಂಜೈಮ ಉಂಟುಮಾಡುವುದು ನಿಲ್ಲಿಸುತ್ತಾ ಹೋಗುತ್ತದೆ. ನಾವು ಹಾಲು, ಹಾಲ್ಗಟ್ಟಿ ಇಲ್ಲವೇ ಹಾಲಿನಿಂದ ಮಾಡಿದ ಪದಾರ‍್ತಗಳನ್ನು ಅರಗಿಸಿಕೊಳ್ಳಲು ಈ ಲ್ಯಾಕ್ಟೇಸ್ ಎಂಜೈಮ ಬೇಕು. ಚಿಕ್ಕ ಮಕ್ಕಳ ಹೊಟ್ಟೆ ಈ ಎಂಜೈಮು ಉಂಟು ಮಾಡುತ್ತದೆ ಅದಕ್ಕೆ ಚಿಕ್ಕ ಮಕ್ಕಳು ಹಾಲನ್ನು ಸುಲಬವಾಗಿ ಅರಗಿಸಿಕೊಳ್ಳುತ್ತಾರೆ ಆದರೆ ದೊಡ್ಡವರಾಗುತ್ತಾ ಹೋದ ಹಾಗೆ ಇದು ಕಡಿಮೆ ಆಗುತ್ತದೆ. ಆಗ ಹಾಲೊಗ್ಗದಿಕೆ ಅತವಾ ಹಾಲಿನ ಅಲರ‍್ಜಿ ಉಂಟಾಗುತ್ತದೆ. ಹಾಲೊಗ್ಗದಿಕೆಯ ಮುಕ್ಯ ಲಕ್ಶಣಗಳು; ಹೊಟ್ಟೆ ಹಿಡಿದುಕೊಂಡ ಹಾಗೆ ಆಗುವುದು ಹೊಟ್ಟೆ ನೋವು, ವಾಕರಿಕೆ ಬಂದ ಹಾಗೆ ಆಗುವುದು, ಡಾಯರಿಯಾ, ಹೊಟ್ಟೆ ಉಬ್ಬಿದಂತೆ ಆಗುವುದು, ಗ್ಯಾಸ ಟ್ರಬಲ್ ಮತ್ತು ಹುಳಿತೇಗು/ಆ್ಯಸಿಡಿಟಿ. ಸರಳವಾಗಿ ಹೇಳುವುದಾದರೆ ನಿಮಗೆ ಹಾಲು ಸೇರದಿದ್ದರೆ ಹಾಲು ಕುಡಿಯದೇ ಇರುವುದು ಒಳ್ಳೆಯದು. ಕೆಲವು ಜನರಿಗೆ ಹಾಲು ಮತ್ತು ಹಾಲ್ಗಟ್ಟಿನಿಂದ ಅಲರ‍್ಜಿ ಆಗುತ್ತದೆ. ಅವರಿಗಾಗಿಯೇ ಸೋಯಾ (soy milk) ಹಾಲಿನಿಂದ ಮಾಡಿದ ಹಾಲ್ಗಟ್ಟಿಗಳೂ ಇವೆ!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *