ಅವರೆಕಾಳು ಸಾಂಬಾರು
– ಸವಿತಾ.
ಬೇಕಾಗುವ ಸಾಮಾನುಗಳು
- ಅವರೆ ಕಾಳು – 1 ಬಟ್ಟಲು
- ಕೊತ್ತಂಬರಿ ಕಾಳು – 1/2 ಚಮಚ
- ಜೀರಿಗೆ – 1/2 ಚಮಚ
- ಉದ್ದಿನಬೇಳೆ – 1/4 ಚಮಚ
- ಕಡಲೆಬೇಳೆ – 1/2 ಚಮಚ
- ಮೆಂತೆ ಕಾಳು – 1/4 ಚಮಚ
- ಚಕ್ಕೆ – 1/4 ಚಮಚ
- ಇಂಗು – 1/4 ಚಮಚ
- ಲವಂಗ – 1
- ಹಸಿ ಶುಂಟಿ – 1/4 ಇಂಚು
- ಬೆಳ್ಳುಳ್ಳಿ – 2 ಎಸಳು
- ಒಣ ಮೆಣಸಿನ ಕಾಯಿ – 3
- ತೆಂಗಿನಕಾಯಿ ತುರಿ – 1/4 ಬಟ್ಟಲು
- ಈರುಳ್ಳಿ – 1
- ಕರಿಬೇವು ಎಲೆ – 5-6
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಹುಣಸೆ ರಸ – 1/2 ಚಮಚ
- ಬೆಲ್ಲ – 1 ಚಮಚ (ಬೇಕಾದರೆ)
ಮಾಡುವ ಬಗೆ
ಸಿಪ್ಪೆ ತೆಗೆದು ಸುಲಿದ ಅವರೆಕಾಳು ಇದ್ದರೆ ಒಳ್ಳೆಯದು. ಇಲ್ಲವಾದರೆ ಸ್ವಲ್ಪ ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಕುದಿಸಿ ಇಳಿಸಿ ಅತವಾ ಕುಕ್ಕರ್ ನಲ್ಲಿ ಆದರೆ ಒಂದು ಕೂಗು ಕುದಿಸಿ ಇಳಿಸಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಸಣ್ಣ ಉರಿ ಇಟ್ಟು, ಕೊತ್ತಂಬರಿ ಬೀಜ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಮೆಂತೆ ಕಾಳು, ಚಕ್ಕೆ, ಲವಂಗ, ಇಂಗು, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ನಂತರ ತೆಗೆದು ಆರಲು ಬಿಡಿ.
ಅದೇ ಬಾಣಲೆಗೆ ಅರ್ದ ಚಮಚ ಎಣ್ಣೆ ಹಾಕಿ, ಬಿಸಿ ಮಾಡಲು ಇಟ್ಟು, ಬೆಳ್ಳುಳ್ಳಿ ಎಸಳು, ಹಸಿ ಶುಂಟಿ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು ತೆಗೆಯಿರಿ. ಇದಕ್ಕೆ ಹಸಿ ಕೊಬ್ಬರಿ ತುರಿ ಸೇರಿಸಿ, ಅರ್ದ ಬಟ್ಟಲು ನೀರು ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಅವರೆಕಾಳು ಇನ್ನೊಮ್ಮೆ ಕುದಿಯಲು ಇಟ್ಟು, ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕುದಿಸಿ. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಉಪ್ಪು ಮತ್ತು ಅರಿಶಿಣ ಹಾಕಿ ಒಗ್ಗರಣೆ ಕೊಡಿ. ಇದನ್ನು ಕುದಿಯುವ ಸಾರಿಗೆ ಹಾಕಿ ಚೆನ್ನಾಗಿ ತಿರುಗಿಸಿ.
ಹುಣಸೆ ರಸ ಹಾಕಿ ಮತ್ತು ಸ್ವಲ್ಪ ಬೆಲ್ಲ ಹಾಕಿ. ಅಲಂಕಾರಕ್ಕೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ. ಈಗ ಅವರೆಕಾಳು ಸಾಂಬಾರು ಸವಿಯಲು ಸಿದ್ದ. ಅನ್ನ ದ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು