ಈ ‘ಟೈಮ್’ ಯಾವ ಅಂಗಡಿಯಲ್ಲಿ ಸಿಗುತ್ತದೆ!?
– ವೆಂಕಟೇಶ ಚಾಗಿ.
“ಟೈಮ್ ಇಲ್ಲ, ಟೈಮ್ ಇಲ್ಲ, ಟೈಮ್ ಇಲ್ಲ” ಎಲ್ಲರ ಬಾಯಿಂದ ಈ ಪದ ಒಮ್ಮೆಯಾದರೂ ಬರಲೇಬೇಕು. ಟೈಮ್ ಎಲ್ಲರಿಗೂ ಅಶ್ಟೇ ಮುಕ್ಯ. ಹಾಗೇನೆ ಎಲ್ಲರಿಗೂ ಒಂದು ದಿನಕ್ಕೆ ನೀಡಲಾದ ಟೈಮ್ ಅಂದ್ರೆ ಇಪ್ಪತ್ನಾಲ್ಕು ಗಂಟೆಗಳು ಅಶ್ಟೇ. ಈ ಇಪ್ಪತ್ನಾಲ್ಕು ಗಂಟೆಗಳೂ ನಮಗೆ ಸಾಲುವುದಿಲ್ಲ. ಯಾವುದಾದರು ಕೆಲಸವನ್ನು ಮರೆತಿರುತ್ತೇವೆ ಅತವಾ ಏನಾದರೂ ಎಡವಟ್ಟು ಮಾಡಿಕೊಂಡಿರುತ್ತೇವೆ. ಕೊನೆಗೆ “ಈ ಟೈಮ್ ಅಂದ್ರೆ ಪಕ್ಕಾ ಪೋರ್ ಟ್ವೆಂಟಿ ಕಣ್ರಿ” ಎಂದು ಅಂದು ಬಿಡುತ್ತೇವೆ. ಟೈಮ್ ಬೇಕು ಅಂದ್ರೆ ಎಲ್ಲಿ ಹುಡುಕಿದರೂ ಈ ಟೈಮ್ ಮಾರುವಂತಹ ಅಂಗಡಿ ಸಿಗುವುದೇ ಇಲ್ಲ. ಆದರೂ ನಮ್ಮ ಕೆಲಸಗಳು ಏನೇ ಇದ್ದರೂ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮುಗಿಸಿಕೊಳ್ಳಬೇಕು. ಶ್ರೀಮಂತ ಆಗಬೇಕಾದರೂ, ಉನ್ನತ ಸ್ತಾನದ ವ್ಯಕ್ತಿಯೇ ಆಗಬೇಕಾದರೂ, ಏನಾದರೂ ಸಾದನೆ ಮಾಡಬೇಕಾದರೆ ಇದೆ ಟೈಮಿನಲ್ಲಿ ಮಾಡಬೇಕಾಗುತ್ತದೆ. ಸಪ್ಲಿಮೆಂಟರಿ ತರ ಎಲ್ಲೂ ಕೂಡ ನಮಗೆ ಟೈಮ್ ಸಿಗುವುದೇ ಇಲ್ಲ.
ಈ ಟೈಮ್ ಯಾಕೆ ಅಶ್ಟು ಅಮೂಲ್ಯ?
ಎಲ್ಲರ ಬದುಕಿನಲ್ಲಿ ಟೈಮ್ ಹಲವಾರು ಅವಕಾಶಗಳನ್ನು ನೀಡುತ್ತದೆ. ನಮಗಿರುವ ಟೈಮ್ನಲ್ಲಿ ಎಲ್ಲಾ ಕೆಲಸಗಳನ್ನು, ಬಯಕೆಗಳನ್ನು, ಆಸೆಗಳನ್ನು, ಗುರಿಗಳನ್ನು ಮುಗಿಸಬೇಕು. ಇಲ್ಲವಾದಲ್ಲಿ ಎಲ್ಲವೂ ಅರ‍್ದಂಬರ‍್ದವೇ. ಬೇರೆಯವರಿಂದ ಸಾಲ ಪಡೆದುಕೊಂಡು ಅತವಾ ದಾನ ಪಡೆದು ಕೆಲಸಗಳನ್ನು ಮುಗಿಸೋಣ ಎಂದರೆ ಅದೂ ಸಾದ್ಯವಿಲ್ಲ. ಕೊನೆಗೆ ನಿರಾಸೆಗಳ ಕಟ್ಟಿಟ್ಟಬುತ್ತಿ. ಆದರೂ ಕೆಲವರು ತಮಗೆ ದೊರೆತಿರುವ ಟೈಮ್ನಲ್ಲಿ ದೊಡ್ಡ ದೊಡ್ಡ ಸಾದನೆಗಳನ್ನು ಮಾಡಿರುವುದು ನಮ್ಮ ಕಣ್ಣಮುಂದಿದೆ. ಅವರಿಗೆ ಇರುವ ಟೈಮ್ ಕೂಡ ಇಪ್ಪತ್ನಾಲ್ಕು ಗಂಟೆ. ನಮಗೂ ಅಶ್ಟೇ. ಆದರೆ ಅವರಿಗೆ ಸಾದಿಸಬಹುದಾದದ್ದು ನಮಗೇಕೆ ಸಾದ್ಯವಾಗಲಿಲ್ಲ ಎಂಬ ಪ್ರಶ್ನೆ ಕಂಡಿತ ಮೂಡುತ್ತದೆ. ಅದಕ್ಕೆ ಉತ್ತರ ಬೇರಾವುದೇ ಅಲ್ಲ ಅದು ಕೂಡ ಈ ಟೈಮೇ.
ಟೈಮ್ ಸಾಲದಿದ್ದರೆ ಏನಾಗುತ್ತದೆ?
ಟೈಮ್ ಅನ್ನೋದು ಎಲ್ಲರಿಗೂ ಅವಶ್ಯಕವೇ. ಇದರ ಸರಿಯಾದ ಬಳಕೆ ಇಲ್ಲದಿದ್ದರೆ, ಅಂದುಕೊಂಡ ಅತವಾ ಆಗಬೇಕಾದ ಕೆಲಸಗಳು ಪೂರ‍್ಣವಾಗುವುದೇ ಇಲ್ಲ. ಆಗ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುವುದು. ಒತ್ತಡ, ಕಿನ್ನತೆ, ನಿದ್ರಾಹೀನತೆ, ದುಗುಡ ಮುಂತಾದ ಪರಿಣಾಮಗಳಿಂದಾಗಿ ಮಾನಸಿಕವಾಗಿ ಹಿಂಸೆ ಅನುಬವಿಸಬೇಕಾಗುತ್ತದೆ. ಅಲ್ಲದೆ ಅನೇಕ ಅವಕಾಶಗಳನ್ನು ವಿನಾಕಾರಣ ಕೈ ಚೆಲ್ಲಬೇಕಾಗುತ್ತದೆ. ಮಾನಸಿಕ ಒತ್ತಡದ ಪರಿಣಾಮ ಬದುಕಿನ ದೋಣಿ ಡೋಲಾಯಮಾನವಾಗುವುದರಲ್ಲಿ ಸಂಶಯವಿಲ್ಲ. ಕಶ್ಟನಶ್ಟಗಳು ಒಂದೊಂದಾಗಿ ನಮ್ಮನ್ನು ಪ್ರೀತಿಸ ತೊಡಗುತ್ತವೆ.
ಹಾಗಾದ್ರೆ ಟೈಮ್ ಮ್ಯಾನೇಜ್ ಮಾಡುವುದು ಹೇಗೆ?
- ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಾಗ ಅದಕ್ಕೆ ತಗಲುವ ಸಮಯದ ಬಗ್ಗೆ ಸ್ಪಶ್ಟತೆ ನಮಗೆ ಇರಬೇಕಾಗುತ್ತದೆ. ಹಾಗೂ ಆ ಕೆಲಸವನ್ನು ಅದೇ ಸಮಯದೊಳಗೆ ಪೂರ‍್ಣಗೊಳಿಸುವ ಮನಸ್ತಿತಿಯನ್ನು ನಾವು ಬೆಳೆಸಿಕೊಳ್ಳುವುದೂ ಅತೀ ಅವಶ್ಯಕ.
- ಪ್ರತಿದಿನ ಕೆಲವು ಕೆಲಸಕಾರ‍್ಯಗಳು ರಿಪೀಟ್ ಆಗುತ್ತಿದ್ದರೆ ಸರಿಯಾದ ಟೈಮ್ ಟೇಬಲ್ ರೂಪಿಸಿಕೊಳ್ಳುವುದು ಉತ್ತಮ. ಹಾಗೂ ಅದೇ ಸಮಯಕ್ಕೆ ಸರಿಯಾಗಿ ಆ ಕಾರ‍್ಯವನ್ನು ನಿರ‍್ವಹಿಸಿದಲ್ಲಿ ಒತ್ತಡವಿಲ್ಲದೆ ನೆಮ್ಮದಿಯಿಂದ ಮುಂದಿನ ಕೆಲಸಗಳನ್ನು ನಿರ‍್ವಹಿಸಲು ಸಾದ್ಯವಾಗುತ್ತದೆ.
- ಸಮಯ ಉಳಿತಾಯವಾದಾಗ ಮುಂದಿನ ಕೆಲಸಕಾರ‍್ಯಗಳಿಗೆ ಅನುಕೂಲವಾಗುವಂತಹ ಸಿದ್ದತೆಗಳನ್ನು ಮಾಡಿಕೊಳ್ಳುವುದು ಜಾಣತನ. ಇದರಿಂದಾಗಿ ಕೆಲಸದ ಒತ್ತಡವೂ ಕಡಿಮೆಯಾಗುವುದು.
- ಯಾವುದೇ ಒಂದು ಕೆಲಸ ಅತವಾ ಕಾರ‍್ಯ ಪೂರ‍್ಣಗೊಳ್ಳುವವರೆಗೂ ಬೇರೆ ಕಾರ‍್ಯಗಳಿಗೆ ಗಮನಹರಿಸಿದರೆ ಸಮಯ ನಿರ‍್ವಹಣೆಯಲ್ಲಿ ಕಂಡಿತ ಎಡವುದು ಕಚಿತ.
- ಕೆಲಸದಲ್ಲಿನ ಆಸಕ್ತಿ ಹಾಗೂ ನಂಬಿಕೆಗಳು ಸಹ ಸಮಯದ ನಿರ‍್ವಹಣೆಯಲ್ಲಿ ಪ್ರಮುಕ ಪಾತ್ರವನ್ನು ವಹಿಸುತ್ತವೆ.
ಕಂಡಿತವಾಗಿ ಒಂದು ವಿಶಯವಂತೂ ನೆನಪಿಟ್ಟುಕೊಳ್ಳಬೇಕು. ಟೈಮ್ ಯಾವ ಅಂಗಡಿಯಲ್ಲಿಯೂ ದೊರೆಯುವುದಿಲ್ಲ ಹಾಗೂ ಎಲ್ಲರಿಗೂ ಟೈಮ್ ಎನ್ನುವುದು ಒಂದೇ. ಸಮರ‍್ಪಕವಾಗಿ ಬಳಸಿಕೊಂಡಾಗ ಮಾತ್ರ ಜೀವನದ ಸುಕ–ಸಂತೋಶಗಳು ನಮ್ಮದಾಗುತ್ತವೆ. ಇಂದಿನ ಆದುನಿಕ ಜೀವನಶೈಲಿಯಲ್ಲಿ ಸಮಯದ ನಿರ‍್ವಹಣೆಯ ಅತಿ ಮುಕ್ಯವಾದದ್ದು ಎಂಬುದನ್ನು ಅರಿತು ಬದುಕಬೇಕಾಗುತ್ತದೆ. ಇಲ್ಲದಿದ್ದರೆ “ಟೈಮ್ ಇಲ್ಲ” ಎನ್ನುವ ಮಾತನ್ನು ಪದೇಪದೇ ಹೇಳಬೇಕಾಗುತ್ತದೆ ಅಲ್ಲವೇ?
(ಚಿತ್ರ ಸೆಲೆ: pixabay)
ಇತ್ತೀಚಿನ ಅನಿಸಿಕೆಗಳು