ಸೆಲಿಬ್ರಿಟಿಯ ಅಂತರಾಳ
ಇಡೀ ನಗರದಲ್ಲಿ ಈಕೆ ಪ್ರಸಿದ್ದಿಯ ಹಿಂದಿನ ಕಾರಣ ಅವನಿಗೆ ಅರಿವಾಗಿತ್ತು. ಆಕೆಯ ಚೇಂಬರ್ ನಲ್ಲಿ ಕೂರುವ ಮುನ್ನ ಹಲವು ಮೆಹಂದಿಯ ಚಿತ್ರಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿದ. ಕೆಲವು ಮಾತ್ರ ಬೇಲೂರಿನ ಶಿಲ್ಪ ಕಲೆಯನ್ನು ಮೀರಿಸುವಂತೆ ಅವನಿಗೆ ಕಂಡಿತು. ‘ಎಲ್ಲಿಂದ ಶುರು ಮಾಡಲಿ ತಾವೇ ಹೇಳಿ ಸಾರ‍್’ ಎಂದು ಆಕೆ ಹಣ್ಣಿನ ರಸ ಸೇವಿಸುತ್ತಾ ಅವನನ್ನು ಕೇಳಿದಾಗ ಅವನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ತಡವರಿಸುತ್ತಾ ‘ಮೊದ್ಲಿಂದ, ಎಲ್ಲಾ ಪೂರಾ, ಹೇಳಿ’ ಎನ್ನುತ್ತಾ, ತನ್ನ ಜೊತೆಯಲ್ಲಿ ರೆಕಾರ‍್ಡ್ ಮಾಡಲು ತಂದಿದ್ದ ಮೊಬೈಲ್ ಆನ್ ಮಾಡಿದ. ಆಕೆ “ನಾನು ಹಳ್ಳಿಯಿಂದ ಬಂದವಳು. ಹಳ್ಳಿಯಲ್ಲಿ ಮದರಂಗಿ ಸೊಪ್ಪನ್ನು ಕಿತ್ತು ತರುವ ಕೆಲಸವನ್ನ ನನ್ನ ತಂದೆ, ತಾತನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದರು. ಒಮ್ಮೆ ನಾನು ನನ್ನ ಗೆಳತಿಗೆ ಮದುವೆಯ ಸಮಯದಲ್ಲಿ ಆಗತಾನೆ ಕಿತ್ತು ತಂದಿದ್ದ ಮೆಹಂದಿ ಸೊಪ್ಪಿನಿಂದ ಅವಳ ಕೈಮೇಲೆ ಚಿತ್ತಾರ ಬಿಡಿಸಿದೆ. ಅದೇ ನೋಡಿ ನನ್ನ ಜೀವನದ ಪರಿವರ‍್ತನೆಯ ಕಾಲ. ಆಕೆಯ ಮದುವೆಗೆ ಬಂದಿದ್ದವರೆಲ್ಲಾ ಅದನ್ನು ಹೊಗಳಿದ್ದೇ ಹೊಗಳಿದ್ದು. ನನ್ನ ಗೆಳತಿಯ ಅಶ್ಟೂ ಜನ ಗೆಳತಿಯರು, ಅವರ ಗೆಳತಿಯರು ಹೀಗೆ ಅದರ ಸರಪಳಿ ಬೆಳೆಯುತ್ತಾ ಹೋಯಿತು. ನನ್ನೊಬ್ಬಳಿಂದ ಕೆಲಸ ನಿರ‍್ವಹಿಸಲು ಅಸಾದ್ಯವಾದಾಗ, ಸಹಾಯಕ್ಕಾಗಿ ಒಬ್ಬರನ್ನು ನೇಮಿಸಿಕೊಂಡೆ. ವ್ಯವಹಾರ ದಿನದಿಂದ ಬೆಳೆಯುತ್ತಾ ಹೋಯಿತು. ಕೇವಲ ಕೇವಲ ಐದು ವರ‍್ಶದಲ್ಲಿ ಈ ಮಟ್ಟ ತಲುಪಿದೆ” ಎನ್ನುತ್ತಾ ಜೋರಾದ ನಿಟ್ಟುಸಿರು ಬಿಟ್ಟಳು.
ಅವಳ ಆ ನಿಟ್ಟುಸಿರಿನಲ್ಲಿ ಜೀವನದಲ್ಲಿ ಗೆದ್ದ ಬಾವ ಕಾಣಲಿಲ್ಲ. ತಕ್ಶಣ ಆವನಿಗೆ ಹೊಳೆಯಿತು. ಆಕೆಯ ಮನದಲ್ಲಿ ಯಾವುದೋ ಅವ್ಯಕ್ತ ಬಾವನೆ ಕೊರೆಯುತ್ತಿದೆ. ಇಶ್ಟೆಲ್ಲಾ ಅನುಕೂಲಗಳಿದ್ದರೂ ಸಹ ಅವಳಿಗೆ ನೆಮ್ಮದಿ ಮರೀಚಿಕೆಯಾಗಿದೆ ಎಂದು. ಆಕೆಯತ್ತ ಗಮನಿಸಿದ. ಆಕೆ ಅಲ್ಲೇ ಇದ್ದ ನೀರನ್ನು ಸಾವಕಾಶವಾಗಿ ಗುಟುಕಿಸುತ್ತಿದ್ದಳು. ‘ಮೇಡಂ, ನಿಮ್ಮ ಜೀವನದ ಒಂದು ಮುಕ ಮಾತ್ರ ನಮ್ಮ ಮುಂದೆ ಇಟ್ಟಿದ್ದೀರಿ. ಇನ್ನೊಂದು ಮುಕದ ಚಾಯೆ ಕಾಣುತ್ತಿದೆ. ಅದನ್ನು ಸಂಕ್ಶಿಪ್ತವಾಗಿ ಹೇಳಿ. ಅದರ ಪ್ರಕಟಣೆ ಬೇಡ ಎಂದರೆ ಅದನ್ನು ದಾಕಲಿಸುವುದಿಲ್ಲ” ಎನ್ನುತ್ತಾ ಆಕೆಯನ್ನೇ ದಿಟ್ಟಿಸಿದ.
ದೀರ‍್ಗವಾಗಿ ಉಸಿರು ತೆಗೆದುಕೊಂಡ ಆಕೆ ತಲೆಯಾಡಿಸುತ್ತಾ ”ಈ ನಗರಕ್ಕೆ ಬಂದ ಒಂದು ವರ‍್ಶದಲ್ಲೇ ಅವನ ಪರಿಚಯವಾಯ್ತು. ಹಳ್ಳಿಯಿಂದ ಬಂದಿದ್ದು. ಆತ ನನ್ನನ್ನು ಬಹಳ ಬೇಗ ಮರುಳು ಮಾಡಿದ. ಸಿಟಿಯಲ್ಲಿ ಬಹಳ ಜನಕ್ಕೆ ಆ ಚಾಳಿ, ಚಾತಿ ಇದೆ. ಅವನು ಹಾಕಿದ ಜಾಲದಲ್ಲಿ ಹಳ್ಳಿಯವಳಾದ ನಾನು ಬಿದ್ದೆ. ಅಲ್ಲಿಂದ ನನ್ನ ಹೋರಾಟದ ಜೀವನದ ಪ್ರಾರಂಬವಾಯ್ತು. ನಂಬಿಸಿದ ಆತ ಕೈಕೊಟ್ಟ. ನನ್ನಂತ ಎಶ್ಟೋ ಹಳ್ಳಿಯ ಮುಗ್ದ ಹೆಣ್ಣು ಮಕ್ಕಳನ್ನು ಮರುಳು ಮಾಡಿದ್ದನೋ ತಿಳಿಯೆ. ಅವನ ಬಲಿಪಶುಗಳಲ್ಲಿ ನಾನೊಬ್ಬಳಾದೆ. ನಂತರ ನಾನೇ ಈ ಕೆಲಸವನ್ನ ಮುಂದುವರೆಸಿ, ನೂರಾರು ಸಾವಿರಾರು ಹೆಣ್ಣು ಮಕ್ಕಳ ಕೈಗೆ ಮೆಹಂದಿ ಹಾಕಿ ಅವರ ದಾಂಪತ್ಯದ ಬಾಳು ಹಸನಾಗಿರಲಿ ಎಂದು ಹಾರೈಸಿದೆ. ನನಗೆ ಮಾತ್ರ ಆ ಬಾಗ್ಯ ಸಿಗಲಿಲ್ಲ. ನನ್ನ ಕೈಗೆ ಮೆಹಂದಿ ಹಾಕಲು ಯಾರೂ ಬರಲೇ ಇಲ್ಲ. ಮೆಹಂದಿ ಹಾಕುವಾಗ ಬಳೆಗಳು ಅಡ್ಡ ಬರದಿರಲಿ ಎಂದು ತೆಗೆದಿಟ್ಟಿದ್ದು, ಶಾಶ್ವತವಾಗಿ ನನ್ನ ಕೈಯಿಂದ ದೂರವೇ ಉಳಿಯಿತು.”
ಇನ್ನೂ ಏನೇನೋ ಅವಳ ಮನದಲ್ಲಿ ಹುದುಗಿತ್ತು. ಹೇಳಲು ಗಂಟಲು ಕಟ್ಟಿತ್ತು. ಕಣ್ಣಿಂದ ಹನಿ ನೀರು ಕೆನ್ನೆಯ ಮೇಲೆ ಜಾರಿತು. ದ್ರುಶ್ಟಿ ಶೂನ್ಯದತ್ತ ನೆಟ್ಟಿತ್ತು. ಐಶಾರಾಮಿ ಬದುಕಿನ ಹಿಂದೆ ಅಡಗಿರುವ ನೋವಿನ ಪರದೆ ಕಳಚಿತ್ತು. ಅವಳಲ್ಲಿ ಮಡುಗಟ್ಟಿದ್ದ ಯಾತನೆ ಕರಗಿ ಕಣ್ಣೀರಾಗಿ ಹರಿದಿತ್ತು. ಬಹಳ ವರ‍್ಶಗಳ ಹಿಂದೆ ಅವನ ಗೆಳೆಯ ಹೇಳಿದ ಕತೆ ನೆನೆಪಾಯಿತು. ಗೆಳೆಯನ ಬಗ್ಗೆ ಅಸಹ್ಯ ಮೂಡಿತು. ಸಂದರ‍್ಶನ ಅಲ್ಲಿಗೆ ಮೊಟಕುಮಾಡಿದ, ಬಾರವಾದ ಹ್ರುದಯದಿಂದ ದನ್ಯವಾದ ಅರ‍್ಪಿಸಿ ಹೊರಬಿದ್ದ.
(ಚಿತ್ರಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು