ಹೊನಲುವಿಗೆ 7 ವರುಶ ತುಂಬಿದ ನಲಿವು

ಬರೆಯುವ  ಕೈಗಳಿಗೊಂದು ಚೆಂದದ ಆನ್‌ಲೈನ್ ವೇದಿಕೆಯನ್ನು ಒದಗಿಸಬೇಕು, ಕರ‍್ನಾಟಕದ ಹಳ್ಳಿ ಹಳ್ಳಿಯಿಂದ ಹಿಡಿದು ಜಗತ್ತಿನ ಯಾವುದೇ ಮೂಲೆಯೆಲ್ಲಿರುವ ಕನ್ನಡಿಗರೂ ಇಲ್ಲಿಗೆ ಬರೆಯುವಂತಿರಬೇಕು, ಹಾಗೆಯೇ ಕನ್ನಡ ಓದುವ ಹಸಿವಿರುವ ಮನಸುಗಳಿಗೆ ಹೊಟ್ಟೆತುಂಬವಶ್ಟು ಬರಹಗಳ ಹಬ್ಬದೂಟವನ್ನೇ ಬಡಿಸಬೇಕು,  ಒಟ್ಟಾರೆಯಾಗಿ ಒಂದು ಕನ್ನಡ ಬರವಣಿಗೆಯ, ಬರಹಗಾರರ ಪರಿಸರವನ್ನು ಹುಟ್ಟುಹಾಕುವ ಗುರಿಯಿಂದ 2013ರಲ್ಲಿ ಮೊಳಕೆಯೊಡದಿದ್ದೇ ಹೊನಲು.

7 ವರುಶಗಳ ಮೈಲುಗಲ್ಲು!

2013ರಿಂದ ಎಡೆಬಿಡದೆ ಹರಿಯುತ್ತಿರುವ ಹೊನಲು ಈಗ ಏಳು ವರುಶಗಳನ್ನು ಪೂರೈಸಿರುವುದು ಹೊನಲು ಓದುಗರು, ಬರಹಗಾರರು ಹಾಗು ನಡೆಸುಗರಲ್ಲಿ ಹೊಸ ಹಿಗ್ಗನ್ನು ಮೂಡಿಸಿದೆ. ಒಂದು ದಿನವೂ ತಪ್ಪದೇ ಬರಹ ಮೂಡಿ ಬರುತ್ತಿರುವುದು, ನುರಿತ ಬರಹಗಾರರ ಜೊತೆಗೆ ಹೊಸ ಬರಹಗಾರರಿಗೂ ಅವಕಾಶಗಳನ್ನು ನೀಡುತ್ತಿರುವುದು, ಯಾವುದೇ ಒಂದು ಬಗೆಯ ಬರಹಗಳಿಗೆ ಜೋತುಬೀಳದೇ ಬಗೆಬಗೆಯ ಬರಹಗಳ ಮೂಲಕ ಹಲತನವನ್ನು ಕಾಯ್ದುಕೊಂಡು ಬರುತ್ತಿರುವುದು ಹೊನಲಿನ ವಿಶೇಶಗಳಲ್ಲಿ ಕೆಲವು.  ಪ್ರತಿ ವರುಶದ ಮೈಲುಗಲ್ಲನ್ನು ದಾಟುತ್ತಿದ್ದಂತೆ ಹೊನಲಿನ ಬರಹಗಾರರ, ಓದುಗರ ಎಣಿಕೆ ಹೆಚ್ಚುತ್ತಲೇ ಇದೆ. ಅಂತೆಯೇ ನಡೆಸುಗರ ಜವಾಬ್ದಾರಿಯೂ ಕೂಡ ಹೆಚ್ಚುತ್ತಲೇ ಇದೆ!

3000 ಕ್ಕೂ ಹೆಚ್ಚಿನ ಬರಹಗಳ ಕಣಜ!

ಎಲ್ಲರೂ ಬರೆಯುವಂತಾಗಬೇಕು, ಎಲ್ಲಾ ಬಗೆಯ ಬರಹಗಳಿಗೂ ಇಲ್ಲಿ ಅವಕಾಶವಿರಬೇಕು, ಆಟೋಟ, ಅಡುಗೆ, ಕತೆ, ಕವಿತೆ, ಸಿನೆಮಾ, ಹಬ್ಬಗಳು, ಆಚರಣೆಗಳು, ಅನುಬವಗಳು, ಸುತ್ತಾಟ, ಸ್ವಂತ ಅನಿಸಿಕೆಗೆಳು, ತನ್ನೇಳಿಗೆ, ಅರಿಮೆ, ಇತಿಹಾಸ, ನಗೆಬರಹ, ಮಕ್ಕಳ ಬರಹ, ಕಾರುಗಳು, ಆರೋಗ್ಯ, ವ್ಯಕ್ತಿ ಪರಿಚಯ ಹೀಗೆ ಆಡುಮುಟ್ಟದ ಸೊಪ್ಪಿಲ್ಲ ಹೊನಲಿನಲ್ಲಿ ಮೂಡಿಬರದ ಬರಹದ ಬಗೆಯಿಲ್ಲ ಎಂಬಂತೆ ಹಲವಾರು ಬಗೆಯ ಬರಹಗಳು ಇಲ್ಲಿ ಮೂಡಿಬಂದು ಅಪ್ಪಟ ಕನ್ನಡ ಆನ್‌ಲೈನ್ ಮ್ಯಾಗಜೀನ್ ಆಗಿ ರೂಪುಗೊಂಡಿದೆ. ಹೌದು, ಇಶ್ಟೆಲ್ಲಾ ಹಲತನ ಸಾದ್ಯವಾಗಿದ್ದು ಹೊನಲಿಗೆ ಬರೆಯುವ ಬರಹಗಾರರಿಂದ. ಯಾವುದೇ ಒಂದು ವರ‍್ಗಕ್ಕೆ ಮೀಸಲಾಗಿರದೆ, ಕಲಿಸುಗರು, ಗ್ರುಹಿಣಿಯರು, ಡಾಕ್ಟರ‍್‌ಗಳು, ಓದುತ್ತಿರುವವರು, ಸಾಪ್ಟ್‌ವೇರ್ ಇಂಜಿನಿಯರುಗಳು, ವಕೀಲರರು ಹೀಗೆ ಅವರಿವರೆನ್ನದೇ ಎಲ್ಲರೂ ಹೊನಲಿನ ಬರಹಗಳ ಕಡಲಿಗೆ ಹನಿಗೂಡಿಸಿದ್ದಾರೆ.

300 ಕ್ಕೂ ಹೆಚ್ಚಿನ ಬರಹಗಾರರು!

ಹೌದು 7 ವರುಶಗಳಲ್ಲಿ ಹೊನಲಿಗೆ ಬರೆದವರು ಮುನ್ನೂರಕ್ಕೂ ಹೆಚ್ಚು ಮಂದಿ. ಮೊದಲೇ ತಿಳಿಸಿದಂತೆ ಈ ಬರಹಗಾರರ ಗುಂಪಿನಲ್ಲಿ ನುರಿತವರು, ಹೊಸಬರು ಎಲ್ಲರೂ ಇದ್ದಾರೆ.  ತಮ್ಮ ಬರಹಗಳ ಬಗ್ಗೆ  ಓದುಗರ ಅನಿಸಿಕೆಗಳನ್ನು ಪಡೆಯುವುದು, ನಡೆಸುಗರ ಜೊತೆ ಚರ‍್ಚೆ ಮಾಡುವುದು, ತಮ್ಮ ಹಿಂದಿನ ಬರಹಕ್ಕಿಂತ ಮುಂದಿನ ಬರಹವನ್ನು ಇನ್ನೂ ಚೆನ್ನಾಗಿ ಬರೆಯಬೇಕು ಎಂಬುದು ಹೊನಲು ಬರಹಗಾರರ ಮನಸ್ತಿತಿ. ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದಲೂ ಹೊನಲಿಗೆ ಬರಹ ಮಾಡಿದವರು ಇರುವುದಲ್ಲದೇ, ಬೇರೆ ರಾಜ್ಯಗಳಾದ ಮಹಾರಾಶ್ಟ್ರ, ತಮಿಳುನಾಡು, ಉತ್ತರಪ್ರದೇಶಗಳಲ್ಲೂ ಹೊನಲಿನ ಬರಹಗಾರರಿದ್ದಾರೆ. ಅಶ್ಟೇ ಅಲ್ಲದೇ ದೂರದ ಅಮೇರಿಕಾ, ಓಮನ್, ದುಬೈ ನಿಂದಲೂ ಹೊನಲಿಗೆ ಬರಹ ಮಾಡುತ್ತಿರುವ ಬರಹಗಾರರೂ ಇದ್ದಾರೆ. ಹೊನಲಿನಲ್ಲಿ ಬಗೆ ಬಗೆಯ ವಿಶಯಗಳ ಬಗ್ಗೆ ಮಾಹಿತಿ ದಕ್ಕುತ್ತಿರುವುದು ಈ ಬರಹಗಾರರಿಂದಲೇ!

ಲಕ್ಶ ಲಕ್ಶ ಓದುಗರು!

ಹೊನಲಿನ ಬರಹಗಳು Honalu.net ವೆಬ್ ಪುಟ ಹಾಗೂ honalu ಬಳಕದ (app) ಬಗೆಯಲ್ಲಿ ಓದಲು ಸಿಗುತ್ತವೆ. 7 ವರುಶಗಳಲ್ಲಿ, ಸುಮಾರು 100 ಕ್ಕೂ ಹೆಚ್ಚು ದೇಶಗಳಿಂದ ಲಕ್ಶ ಲಕ್ಶ ಸಂಕ್ಯೆಯಲ್ಲಿ ಓದುಗರ ನೋಟ ಹೊನಲಿಗೆ ಹರಿದುಬಂದಿವೆ. ಪ್ರತಿದಿನವೂ ಹೊನಲಿಗೆ ಬೇಟಿ ನೀಡುವ ಓದುಗರು, ಅವರಿಗೆ ಮೆಚ್ಚುಗೆಯಾಗುವ ಬರಹಗಳನ್ನು ಓದಿ, ಹಂಚಿಕೊಂಡು, ಅನಿಸಿಕೆಗಳನ್ನೂ ತಿಳಿಸಿ ಬರಹಗಾರರ ಬೆನ್ನುತಟ್ಟುತ್ತಾ ಬಂದಿದ್ದಾರೆ. ಹೊನಲಿನ ಬರಹಗಳನ್ನು ಹೆಚ್ಚು ಮಂದಿಗೆ ತಲುಪಿಸುವಲ್ಲಿ ಓದುಗರ ಪಾತ್ರ ದೊಡ್ಡದಿದೆ.
ನಿಮ್ಮ ಬೆಂಬಲ ಹೀಗೆಯೇ ಮುಂದುವರೆಯುತ್ತಿರಲಿ
ಆನ್‌ಲೈನ್ ಮ್ಯಾಗಜೀನ್ ಒಂದು ಇಂತಹ ದೊಡ್ಡ ಮೈಲುಗಲ್ಲನ್ನು ತಲುಪಲು ಹೊನಲಿನ ಬರಹಗಾರರು, ಓದುಗರು ಮತ್ತು ಬೆಂಬಲಿಗರೇ ಕಾರಣ. ಬರಹಗಾರರ ಹುಮ್ಮಸ್ಸು, ಓದುಗರ ಹುರಿದುಂಬಿಕೆ ಹೊನಲಿನ ಬೆನ್ನೆಲುಬು. ಹೊನಲಿಗೆ, ಹೊನಲಿನ ಬರಹಗಾರರಿಗೆ ಮೆಚ್ಚುಗೆ ಮತ್ತು ಬೆಂಬಲ ನೀಡುತ್ತಿರುವ ಎಲ್ಲರಿಗೂ ಮನದಾಳದ ನನ್ನಿ. ಹೊನಲಿಗೆ ಮತ್ತು ಬರಹಗಾರರಿಗೆ ನಿಮ್ಮ ಈ ಪ್ರೋತ್ಸಾಹ ಹೀಗೆ ಮುಂದುವರೆಯುತ್ತಿರಲಿ 🙂
ಹೊನಲು ಪೇಸ್‌ಬುಕ್‌ ಪುಟ : https://www.facebook.com/honalu.mimbagilu
ಹೊನಲು ಟ್ವಿಟರ್ ಗೂಡು : https://twitter.com/honalunet
ಇನ್ಸ್ಟಾಗ್ರಾಂನಲ್ಲಿ ಹೊನಲು : https://www.instagram.com/honalunet/

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: